Sunday, May 4, 2025

ಪಾಮನಕಲ್ಲೂರು: ಅದ್ಧೂರಿಯಾಗಿ ನಡೆದ ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ

ಪಾಮನಕಲ್ಲೂರು: ಅದ್ಧೂರಿಯಾಗಿ ನಡೆದ ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ

ವಧು – ವರರಿಗೆ ಸಸಿ ನೀಡಿ ಶುಭ ಹಾರೈಸಿದ ಶ್ರೀಗಳು

ನವ ಜೀವನಕ್ಕೆ ಕಾಲಿಟ್ಟ 19 ಜೋಡಿಗಳು


ರಾಯಚೂರು (ಮೇ.02): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿ ರಾಯಚೂರು – ಲಿಂಗಸುಗೂರು ಮುಖ್ಯ ರಸ್ತೆಯ ಪಕ್ಕದಲ್ಲಿರುವ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಬುಧವಾರ ಸಡಗರ ಸಂಭ್ರಮದಿಂದ ಅದ್ಧೂರಯಾಗಿ ನಡೆಯಿತು.

ಪ್ರತಿ ವರ್ಷ ಬಸವ ಜಯಂತಿಯಂದು ನಡೆಯುವಂತೆ ಈ ವರ್ಷವೂ ಬಸವ ಜಯಂತಿ ದಿನವಾದ ಬುಧವಾರ ಬೆಳಗ್ಗೆಯಿಂದ ಆರಂಭವಾದ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಸಂಜೆ ರಥೋತ್ಸವದೊಂದಿಗೆ ಸಂಪನ್ನಗೊಂಡಿತು. ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಗಳು, ಗಣ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನವಜೀವನಕ್ಕೆ ಕಾಲಿಟ್ಟ 19 ನವಜೋಡಿಗಳು:

ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ  ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 19 ನವಜೋಡಿಗಳು ವಿವಿಧ ಮಠಗಳ ಶ್ರೀಗಳ ಆಶೀರ್ವಾದದೊಂದಿಗೆ ನವಜೀವನಕ್ಕೆ ಕಾಲಿಟ್ಟರು. ಶ್ರೀಗಳು ವರರಿಗೆ ತಾಳಿ ನೀಡಿ ವಧು - ವರರಿಗೆ ಶುಭ ಹಾರೈಸಿ, ಮಾಂಗಲ್ಯ ಕಾರ್ಯ ನೆರವೇರಿಸಿದರು. 

ಸಸಿ ನೀಡಿ ಶುಭ ಹಾರೈಸಿದ ಶ್ರೀಗಳು, ಗಣ್ಯರು:

ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನವಜೀವನಕ್ಕೆ ಕಾಲಿಟ್ಟ ನವ ಜೋಡಿಗಳಿಗೆ ವಿವಿಧ ಮಠದ ಶ್ರೀಗಳು, ರಾಜಕೀಯ ನಾಯಕರು, ದೇವಸ್ಥಾನ ಸಮಿತಿಯ ಮುಖಂಡರು ಸಸಿಗಳನ್ನು ನೀಡಿ ಶುಭ ಹಾರೈಸಿದರು.

ಪ್ರಸಾದ ವ್ಯವಸ್ಥೆ:

ಜಾತ್ರೆಗೆ ಆಗಮಿಸುವ ಭಕ್ತರಿಗೆ ಪ್ರತಿ ವರ್ಷವೂ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಏರ್ಪಾಡು ಮಾಡಲಾಗುತ್ತದೆ. ಅದರಂತೆಯೇ ಈ ವರ್ಷವೂ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಗೋದಿ ಹುಗ್ಗಿ, ಬದನೇಕಾಯಿ ಪಲ್ಯ, ಅನ್ನ, ಸಾಂಬಾರ್ ಸವಿದರು.

ರಥ ಎಳೆದು ಭಕ್ತಿ ಸಮರ್ಪಿಸಿದ ಭಕ್ತರು:

ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ಜಾತ್ರೆಗೆ ಆಮಿಸಿದ ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ಇನ್ನೂ ಈ ವರ್ಷ ಶ್ರೀ ಆದಿ ಬಸವೇಶ್ವರ ರಥಕ್ಕೆ ಹಾಗೂ ಉಚ್ಚಯ್ಯಕ್ಕೆ ಮಾಡಲಾಗಿದ್ದ ಹೂವಿನ ಅಲಂಕಾರ ರಥೋತ್ಸವ ಕಾರ್ಯಕ್ರಮದ ಮೆರಗು ಹೆಚ್ಚಿಸಿದರೆ, ದೇವಸ್ಥಾನಕ್ಕೆ ಮಾಡಲಾಗಿದ್ದ ಲೈಟಿಂಗ್ ವ್ಯವಸ್ಥೆ ಜಾತ್ರಾ ಮಹೋತ್ಸವದ ಮೆರಗು ಹೆಚ್ಚಿಸಿತ್ತು.

ಸಂಜೆಯಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು:

ಶ್ರೀ ಆದಿ ಬಸವೇಶ್ವರ ಜಾತ್ರೆಯೂ ಗ್ರಾಮದಲ್ಲಿ ನಡೆಯುವ ಜಾತ್ರೆಗಳಲ್ಲಿ ವಿಶೇಷ ಜಾತ್ರೆಯಾಗಿದ್ದು, ಸಂಜೆಯಾಗುತ್ತಿದ್ದಂತೆ ರಥೋತ್ಸವ ಕಾರ್ಯಕ್ರಮದ ಸಮಯಕ್ಕೆ ಪಾಮನಕಲ್ಲೂರು, ಚಿಕ್ಕಹೆಸರೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ರಥೋತ್ಸವ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಸುವರ್ಣಗಿರಿ ವಿರಕ್ತಮಠ ಯದ್ದಲದೊಡ್ಡಿ, ಪಾಮನಕಲ್ಲೂರು, ಕೊನಕೊಂಡ್ಲದ  ಶ್ರೀ ಮ.ನಿ.ಪ್ರ ಮಹಾಲಿಂಗ ಮಹಾಸ್ವಾಮಿಗಳು, ಮಲ್ಲದಗುಡ್ಡದ ಶ್ರೀ ಮ.ನಿ.ಪ್ರ ಆರೂಢ ಅಯ್ಯಪ್ಪ ತಾತನವರು, ಶಕ್ತಿಪೀಠ ಇರಕಲ್ ಮಠದ ಶ್ರೀ ಪರಮಪೂಜ್ಯ ಬಸವ ಪ್ರಸಾದ ಶರಣರು, ಹುನಕುಂಟಿಯ ಶ್ರೀ ಪರಮಪೂಜ್ಯ ಶರಣಯ್ಯ ತಾತನವರು, ಪಾಮನಕಲ್ಲೂರು ಗ್ರಾಮದ ಒಳಬಳ್ಳಾರಿ ಚನ್ನಬಸವೇಶ್ವರ ಮಠದ ಶ್ರೀ ಮಲ್ಲಯ್ಯ ಸ್ವಾಮಿಯವರು ಸೇರಿದಂತೆ ಅನೇಕ ಜನ ಶ್ರೀಗಳು ವಹಿಸಿದ್ದರು.

ವೇದಿಕೆ ಕಾರ್ಯಕ್ರಮದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ತುರವಿಹಾಳ, ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರ ಪುತ್ರ ಪ್ರಸನ್ನ ಪಾಟೀಲ್, ತಾ.ಪಂ ಸದಸ್ಯ ಸಂತೋಷ ರಾಜಗುರು, ಗ್ರಾಮದ ಪ್ರಮುಖರಾದ ರವಿ ಜಹಗೀರದಾರ, ಪಾಮನಕಲ್ಲೂರು ಗ್ರಾ.ಪಂ ಪಿಡಿಒ ಕೃಷ್ಣ ಹುನಗುಂದ, ಗ್ರಾ.ಪಂ ಅಧ್ಯಕ್ಷೆಯ ಪತಿ ಹುಲುಗಪ್ಪ ಚಿಲ್ಕರಾಗಿ, ಗ್ರಾ.ಪಂ ಉಪಾಧ್ಯಕ್ಷ ಲಕ್ಷ್ಮಣ ನಾಯಕ ತುಪ್ಪದ್ದೂರು, ದೇವಸ್ಥಾನ ಸಮಿತಿಯ ಅಧ್ಯಕ್ಷ ಹನುಮಂತ ಶೇಳ್ಳಗಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಾಂತಮ್ಮ, ಪ್ರಮುಖರಾದ ಶ್ರೀಶೈಲಪ್ಪ ಪತ್ತಾರ ಸೇರಿದಂತೆ ದೇವಸ್ಥಾನ ಸಮತಿಯ ಸದಸ್ಯರು, ಗ್ರಾ.ಪಂ ಸದಸ್ಯರು, ಗ್ರಾಮದ ಯುವಕರು, ಪಾಮನಕಲ್ಲೂರು, ಚಿಕ್ಕ ಹೆಸರೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಮಿಸಿದ್ದ ಭಕ್ತರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಅನೇಕರಿದ್ದರು.

#Pamanakallur #ShreeAdiBasaveshwaraTemple #PamanakallurNews #Jatre #Nammura Jatre

Friday, August 2, 2024

ಲಾಹೋಟಿ ಲಾ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ಶ್ರೀನಿವಾಸ ಸರಡಗಿಯಲ್ಲಿ ಶಿಬಿರ

ಲಾಹೋಟಿ ಲಾ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ಶ್ರೀನಿವಾಸ ಸರಡಗಿಯಲ್ಲಿ ಶಿಬಿರ

ಕಲಬುರಗಿ (ಆ.02): ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಕಲಬುರಗಿ ನಗರದಲ್ಲಿರುವ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶೇಠ ಶಂಕರಲಾಲ ಲಾಹೋಟಿ ಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕದ ವಿದ್ಯಾರ್ಥಿಗಳು ಶುಕ್ರವಾರ ಶಿಬಿರ ನಡೆಸಿದರು.
ಲಾಹೋಟಿ ಲಾ ಕಾಲೇಜಿನ ಎನ್.ಎಸ್.ಎಸ್ ಘಟಕದ ಅಧಿಕಾರಿಯಾಗಿರುವ ಉಪನ್ಯಾಸಕಿ ಡಾ. ಜ್ಯೋತಿ ಕಡಾದಿ, ವಿದ್ಯಾರ್ಥಿ ಸಂಯೋಜಕಿ, ಉಪನ್ಯಾಸಕಿ ಕರುಣಾ ಪಾಟೀಲ್ ರವರ ನೇತೃತ್ವದಲ್ಲಿ ಶ್ರೀನಿವಾಸ ಸರಡಗಿ ಗ್ರಾಮಕ್ಕೆ ಆಗಮಿಸಿದ ಎನ್ಎಸ್ಎಸ್ ವಿದ್ಯಾರ್ಥಿಗಳು ಗ್ರಾಮದಲ್ಲಿ  ಬೆಳಗ್ಗೆಯಿಂದ ಸಂಜೆಯವರೆಗೂ ಸ್ವಚ್ಚತಾ ಕಾರ್ಯಕ್ರಮ ನಡೆಸಿ, ಸಸಿ ನಾಟಿ ಮಾಡುವ ಮೂಲಕ ಶ್ರಮದಾನ ಮಾಡಿದರು. ಇದೇ ವೇಳೆ ಅವರು, ಗ್ರಾಮದಲ್ಲಿನ ಮನೆಗಳಿಗೆ ತೆರಳಿ ಸರ್ವೆ ಕಾರ್ಯ ನಡೆಸಿ, ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಿದರು.
ಬಳಿಕ ಸಂಜೆಯ ವೇಳೆ ಶ್ರೀನಿವಾಸ ಸರಡಗಿಯ ಶ್ರೀ ಚಿನ್ನದ ಕಂತಿ ಚಿಕ್ಕ ವೀರೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಷ.ಬ್ರ ಡಾ.ರೇವಣಸಿದ್ದ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ, ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದ ಪರಮ ಪೂಜ್ಯ ಶ್ರೀ ಷ.ಬ್ರ ಡಾ.ರೇವಣಸಿದ್ದ ಶಿವಾಚಾರ್ಯರು, ಎನ್.ಎಸ್.ಎಸ್ ಶಿಬಿರದಿಂದ ಏನೆಲ್ಲಾ ಲಾಭಗಳು ಇವೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಕಾನೂನು ವಿದ್ಯಾರ್ಥಿಗಳ ಮೇಲೆ ಬಹಳಷ್ಟು ದೊಡ್ಡಮಟ್ಟದ ಜವಾಬ್ದಾರಿ ಇರುತ್ತದೆ. ಕಾನೂನು ವಿದ್ಯಾರ್ಥಿಗಳಿಂದ ಬಹಳಷ್ಟು ಜನರು ಒಳಿತನ್ನು ನಿರೀಕ್ಷೆ ಮಾಡ್ತಿರುತ್ತಾರೆ. ಇಂತಹ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಡುವುದರಲಿಂದ ಸಾಕಷ್ಟು ಅನುಕೂಲಗಳಾಗುತ್ತವೆ.
ಗ್ರಾಮೀಣ ಭಾಗದ ಜನರಿಗೆ ಪರಿಸರದ, ಕಾನೂನಿನ ಅರಿವು ಮೂಡಿಸುವುದು ಬಹಳ ಮುಖ್ಯವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ಮಾಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸಗಳನ್ನು ಕಾನೂನು ವಿದ್ಯಾರ್ಥಿಗಳು ಮಾಡಬೇಕು ಎಂದು ಡಾ.ರೇವಣಸಿದ್ದ ಶಿವಾಚಾರ್ಯರು ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ಎನ್.ಎಸ್.ಎಸ್ ಅಧಿಕಾರಿ ಡಾ. ಜ್ಯೋತಿ ಕಡಾದಿ, ಎನ್.ಎಸ್.ಎಸ್ ಸೇರುವ ವಿದ್ಯಾರ್ಥಿಗಳು ಸೇವಾ ಮನೋಭಾವಕ್ಕೆ ತಯಾರಾಗಿರುತ್ತಾರೆ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ. ಅವರು ಸರಡಗಿ ಗ್ರಾಮದಲ್ಲಿ ಸ್ವಚ್ಚತೆ ನಡೆಸಿ, ತಗ್ಗು ತೆಗೆದು ಸಸಿ ನಾಟಿ ಮಾಡಿದ್ದಾರೆ. ಕಾನೂನು ವಿದ್ಯಾರ್ಥಿಗಳು ಸಮಾಜ ಸೇವೆಗೂ ತಯಾರಾಗಿರುತ್ತೇವೆ ಎಂದು ನಮ್ಮ ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಗೀತಾಶ್ರೀ ಪ್ರಾರ್ಥಿಸಿದರೆ, ಭಾಗ್ಯಶ್ರೀ ಸ್ವಾಗತಿಸಿದರು. ವಿದ್ಯಾರ್ಥಿ ಅಮರೇಶ್ ನಿರೂಪಿಸಿದರೆ, ಆಶೀಸ್ ಕುಮಾರ್ ವಂದಿಸಿದರು. ಗ್ರಾಮದ ಹಿರಿಯರಾದ ಸಂಗಯ್ಯಸ್ವಾಮಿ ಹಿರೇಮಠ, ಶರಣಗೌಡ ಬಿರಾದಾರ, ಎನ್.ಎಸ್.ಎಸ್ ಕ್ಯಾಂಪ್ ಅಧಿಕಾರಿ ಜ್ಯೋತಿ ಕಡಾದಿ, ಕರುಣಾ ಪಾಟೀಲ್ ಸೇರಿದಂತೆ ಎನ್.ಎಸ್.ಎಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
#ssl_law_college #Kalaburagi #News #Karnataka #Kannada #Law #College


Monday, May 20, 2024

ಪಾಮನಕಲ್ಲೂರು: ಗ್ರಾ.ಪಂ ಆವರಣದಲ್ಲಿ ನಡೆದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ

ಪಾಮನಕಲ್ಲೂರು: ಗ್ರಾ.ಪಂ ಆವರಣದಲ್ಲಿ ನಡೆದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ

ರಾಯಚೂರು (ಮೇ.20): ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿ ಆವರಣದಲ್ಲಿ ಇತ್ತೀಚೆಗೆ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ನಡೆಯಿತು.

ಈ ಸಭೆಯಲ್ಲಿ 2022-23ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಕುರಿತು 2023-24ನೇ ಸಾಲಿನ ಸಾಮಾಜಿಕ ಪರಿಶೋಧನೆ ನಡೆಸಲಾಯಿತು.

ಸಭೆಯ ಅಧ್ಯಕ್ಷೆತಯನ್ನು ಮಾನ್ವಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹಾಲಿಂಗ ಹೆಚ್ ಇಂಗಳದಾಳರವರು ವಹಿಸಿದ್ದರು. ಲೆಕ್ಕ ಪರಿಶೋಧನೆ ಮಾಹಿತಿಯನ್ನು ಲಿಂಗಸುಗೂರು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ  ಚಂದ್ರು ಪವ್ಹಾರ್ ಹಂಚಿಕೊಂಡರು. 

ಈ ಸಂದರ್ಭದಲ್ಲಿ ಮಸ್ಕಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶೇಖ್ ಹುಸೇನ್ ಶರೀಫ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ಹೆಚ್ ಹುನಗುಂದ, ಗ್ರಾಮ ಪಂಚಾಯತಿ ಸದಸ್ಯರು, ಸಾಮಾಜಿಕ ಪರಿಶೋಧನೆ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮೀದೇವಿ, ಹುಸೇನಪ್ಪ, ವಿವಿಧ ಸಂಘಟನೆಗಳ ಮುಖಂಡರಾದ ಲಕ್ಷ್ಮಣ ಚೌಡ್ಲಿ, ಶಾಂಭವಿ, ಸುಂಡೆಪ್ಪ ಆನಂದಗಲ್, ರಮೇಶ್ ಚಿಲ್ಕರಾಗಿ, ಅಮರೇಶ್ ಡಿ ಪೂಜಾರಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಶರಣಪ್ಪ ಕೊಂಡಾಲ್ ಸೇರಿದಂತೆ ಅನೇಕರಿದ್ದರು.

Saturday, May 11, 2024

ಪಾಮನಕಲ್ಲೂರು: ಅದ್ಧೂರಿಯಾಗಿ ನಡೆದ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ

ಪಾಮನಕಲ್ಲೂರು: ಅದ್ಧೂರಿಯಾಗಿ ನಡೆದ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ

ರಾಯಚೂರು (ಮೇ.11): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿರುವ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಶುಕ್ರವಾರ ಸಡಗರ ಸಂಭ್ರಮದಿಂದ ಅದ್ಧೂರಯಾಗಿ ನಡೆಯಿತು.

ಪ್ರತಿ ವರ್ಷ ಬಸವ ಜಯಂತಿಯಂದು ನಡೆಯುವಂತೆ ಈ ವರ್ಷವೂ ಬಸವ ಜಯಂತಿ ದಿನವಾದ ಶುಕ್ರವಾರ ಬೆಳಗ್ಗೆಯಿಂದ ಆರಂಭವಾದ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಸಂಜೆ ರಥೋತ್ಸವ ಮತ್ತು ಉಚ್ಚಯ್ಯಗಳೊಂದಿಗೆ ಮುಕ್ತಾಯವಾಯಿತು.

ಆದಿ ಬಸವೇಶ್ವರನ ಸನ್ನಿಧಿಯಲ್ಲಿ ನವಜೀವನಕ್ಕೆ ಕಾಲಿಟ್ಟ ನವಜೋಡಿಗಳು:

ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಿದವು. ಅನೇಕ ಜನ ನವಜೋಡಿಗಳು ಆದಿ ಬಸವೇಶ್ವರ ದೇವರ ಸನ್ನಿಧಿಯಲ್ಲಿ ಮಲದಗುಡ್ಡದ ಶ್ರೀಗಳು, ಮುಡಲಗುಂಡದ ಶ್ರೀಗಳ ಆಶೀರ್ವಾದದೊಂದಿಗೆ ನವಜೀವನಕ್ಕೆ ಕಾಲಿಟ್ಟರು. 

ಪ್ರಸಾದ ವ್ಯವಸ್ಥೆ:

ಜಾತ್ರೆಗೆ ಆಗಮಿಸುವ ಭಕ್ತರಿಗೆ ಪ್ರತಿ ವರ್ಷವೂ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅದರಂತೆಯೇ ಈ ವರ್ಷವೂ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. 

ರಥ, ಉಚ್ಚಯ್ಯ ಎಳೆದು ಭಕ್ತಿ ಸಮರ್ಪಿಸಿದ ಭಕ್ತರು:

ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ರಥೋತ್ಸವ ಮತ್ತು ಉಚ್ಚಯ್ಯ ಕಾರ್ಯಕ್ರಮದಲ್ಲಿ ಜಾತ್ರೆಗೆ ಆಮಿಸಿದ ಭಕ್ತರು ರಥ ಮತ್ತು ಉಚ್ಚಯ್ಯ ಎಳೆದು ಭಕ್ತಿ ಸಮರ್ಪಿಸಿದರು. ಇನ್ನೂ ಈ ವರ್ಷ ಆದಿ ಬಸವೇಶ್ವರ ರಥಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿ ರಥೋತ್ಸವ ಕಾರ್ಯಕ್ರಮಕ್ಕೆ ಯುವ ಸಮುದಾಯ ಮೆರುಗ ತಂದಿತ್ತು.

ಸಂಜೆಯಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು:

ಆದಿ ಬಸವೇಶ್ವರ ಜಾತ್ರೆಯೂ ಗ್ರಾಮದಲ್ಲಿ ನಡೆಯುವ ಜಾತ್ರೆಗಳಲ್ಲಿ ವಿಶೇಷ ಜಾತ್ರೆಯಾಗಿದ್ದು, ಸಂಜೆಯಾಗುತ್ತಿದ್ದಂತೆ ರಥೋತ್ಸವ ಕಾರ್ಯಕ್ರಮದ ಸಮಯಕ್ಕೆ ಪಾಮನಕಲ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ರಥೋತ್ಸವ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಈ ಸಂದರ್ಭದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಪೂಜ್ಯರು, ಗಣ್ಯರು, ದೇವಸ್ಥಾನದ ಆಡಳಿತ ಮಂಡಳಿಯವರು, ಗ್ರಾಮದ ಯುವಕರು, ಪಾಮನಕಲ್ಲೂರು, ಚಿಕ್ಕ ಹೆಸರೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಮಿಸಿದ್ದ ಭಕ್ತರು ಸೇರಿದಂತೆ ಅನೇಕರಿದ್ದರು.

Monday, April 29, 2024

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ ಖೂಬಾ, ಖಾಶೆಂಪುರ್, ಬೆಲ್ದಾಳೆ

 ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ ಖೂಬಾ, ಖಾಶೆಂಪುರ್, ಬೆಲ್ದಾಳೆ

ಬೀದರ್ (ಏ.28): ಬೀದರ್ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವರಾದ ಭಗವಂತ ಖೂಬಾರವರು, ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆರವರು ಭಾನುವಾರ ದಿನವಿಡೀ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದರು.

ಮೊದಲಿಗೆ ಶ್ರೀಕ್ಷೇತ್ರ ಹೊನ್ನಿಕೇರಿಯ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ, ಗ್ರಾಮದಿಂದ ಮತಯಾಚನೆ ಆರಂಭಿಸಿದ ಅವರು, ಬಳಿಕ ಕಪಲಾಪೂರ, ಕೋಳಾರ (ಕೆ), ಅಮಲಾಪೂರ, ಯಾಕಾತಪೂರ, ಬರೂರು ಸೇರಿದಂತೆ ವಿವಿಧೆಡೆ ಮತಯಾಚಿಸಿದರು.

ಈ ವೇಳೆ ಮಾತನಾಡಿದ ಅಭ್ಯರ್ಥಿ ಭಗವಂತ ಖೂಬಾರವರು, ನಾನು ಎರಡು ಬಾರಿ ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಭಾರತೀಯ ಜನತ ಪಕ್ಷ ಮೂರನೇ ಬಾರಿಗೆ ನನ್ನನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ನಮಗೆ ಈ ಬಾರಿ ಜೆಡಿಎಸ್ ಕೂಡ ಕೈ ಜೋಡಿಸಿದೆ. ಈ ಬಾರಿ ಕೂಡ ನನ್ನನ್ನು ಗೆಲ್ಲಿಸಿ ಕಳಿಸಿದರೆ ನಾನು ಇನ್ನಷ್ಟು ಯೋಜನೆಗಳನ್ನು ಬೀದರ್ ಲೋಕಸಭಾ ಕ್ಷೇತ್ರಕ್ಕೆ ತರುತ್ತೇನೆ ಎಂದರು.

ಯಾವ ಪರಿವಾರ ಭಾಲ್ಕಿಯನ್ನು ಅಭಿವೃದ್ಧಿ ಮಾಡಿಲ್ಲವೋ ಆ ಪರಿವಾರ ಜಿಲ್ಲೆಯನ್ನು ಹೇಗೆ ಅಭಿವೃದ್ಧಿ ಮಾಡುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈಶ್ವರ್ ಖಂಡ್ರೆರವರ ಅಸಹಕಾರದ ನಡುವೆಯೇ ನಾನು ಹತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಜಿಲ್ಲೆಯಲ್ಲಿ ಮಾಡಿದ್ದೇನೆ.

ಖಂಡ್ರೆಯವರಿಗೆ ಅಭಿವೃದ್ಧಿಯ ಪರಿಕಲ್ಪನೆಯೇ ಇಲ್ಲ. ಅವರು ಪ್ರತಿನಿಧಿಸುವ ಕ್ಷೇತ್ರದಲ್ಲೇ ಒಂದೇ ಒಂದು ಸ್ಟೇಡಿಯಂ ಇಲ್ಲ. ಇನ್ನೂ ಅವರು ಜಿಲ್ಲೆಯನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಭಗವಂತ ಖೂಬಾರವರು ಪ್ರಶ್ನಿಸಿದರು.

ನಾನು ಸಂಸದನಾದ ಬಳಿಕ ನನ್ನ ಕ್ಷೇತ್ರದಲ್ಲಿ ಶಕ್ತಿ ಮೀರಿ ಒಡಾಟ ಮಾಡಿದ್ದೇನೆ. ಜನರಿಗೆ ಸ್ಪಂದಿಸುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಸಚಿವನಾಗಿಯೂ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ತಾವು ನನ್ನನ್ನು ಮೂರನೇ ಅವಧಿಗೆ ಸಂಸದರನ್ನಾಗಿ ಆಯ್ಕೆ ಮಾಡಿ ಕಳುಹಿಸಿ ಎಂದು ಕ್ಷೇತ್ರದ ಜನರಿಗೆ ಕೇಂದ್ರ ಸಚಿವ ಭಗವಂತ ಖೂಬಾರವರು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು, ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಮಾನತೆಯಿಂದ ಕೆಲಸ ಮಾಡಿ ಎನ್‌ಡಿಎ ಅಭ್ಯರ್ಥಿಗೆ ಹೆಚ್ಚಿನ ಲೀಡ್ ಕೊಡಬೇಕು. ಇದು ನರೇಂದ್ರ ಮೋದಿ - ರಾಹುಲ್ ಗಾಂಧಿಯವರ ಎಲೆಕ್ಷನ್ ಆಗಿದೆ ಎಂದರು.

ಕಾಂಗ್ರೆಸ್ ನವ್ರು ಬರಿ ಸುಳ್ಳು ಹೇಳ್ತಾರೆ. ಚುನಾವಣೆಗೆ ಮುನ್ನ ಇವ್ರು ಹತ್ತು ಕೆ.ಜಿ ಅಕ್ಕಿ ಕೊಡ್ತಿವಿ ಅಂದಿದ್ರು. ಈಗ ಕಾಂಗ್ರೆಸ್ ನವ್ರು ನಿಮ್ಮ ಊರಿಗೆ ಬಂದ್ರೆ ಹತ್ತು ಕೆ.ಜಿ ಅಕ್ಕಿ ಕೇಳ್ರಿ. ಮೊದ್ಲು ಹತ್ತು ಕೆ.ಜಿ ಅಕ್ಕಿ ಕೊಟ್ಟು ವೋಟ್ ಕೇಳ್ರಿ ಎಂದು ಹೇಳಿ. ಕಾಂಗ್ರೆಸ್ ನವರ ಗ್ಯಾರಂಟಿಗಳು ಲೆಕ್ಕಕ್ಕೆ ಇಲ್ಲದಾಗಿವೆ.

ಸ್ವಾತಂತ್ರ ಭಾರತದಲ್ಲಿ ಬೀದರ್ ನಿಂದ ಯಾರೂ ಕೂಡ ಕೇಂದ್ರ ಸಚಿವರು ಆಗಿರಲಿಲ್ಲ. ಮೊದಲ ಬಾರಿಗೆ ಭಗವಂತ ಖೂಬಾರವರು ಕೇಂದ್ರ ಸಚಿವರಾಗಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಖೂಬಾರವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಬೀದರ್ ನಿಂದ ದೆಹಲಿಯವರೆಗೂ ಟ್ರಾಕ್ ಕ್ಲೇರ್ ಇರಬೇಕು ಅಂದ್ರೆ ಖೂಬಾರವರ ಗೆಲುವು ಅಗತ್ಯವಾಗಿದೆ. ಆಗಾಗಿ ಕ್ಷೇತ್ರದ ಜನರು ಖೂಬಾರವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆರವರು ಮಾತನಾಡಿ, ಬಿಜೆಪಿ, ಜೆಡಿಎಸ್ ಎರಡು ಸೇರಿ ಅತಿ ಹೆಚ್ಚಿನ ಮತ ತೆಗೆದುಕೊಳ್ಳಬೇಕು. ನಾವು ನಮ್ಮ ಮಕ್ಕಳು ಸುರಕ್ಷಿತವಾಗಿ ಇರಬೇಕು ಎನ್ನುವುದಾರರೇ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಬೀದರ್ ಇನ್ನಷ್ಟು ಅಭಿವೃದ್ಧಿ ಆಗಬೇಕು ಎಂದ್ರೆ ಖೂಬಾ ಮತ್ತೊಮ್ಮೆ ಸಂಸದರಾಗಿಬೇಕು ಎಂದರು.

ಕಾಂಗ್ರೆಸ್ ನವ್ರು ತೋರಿಸಿದ ಚೆಂಬು ಅಕ್ಷಯ ಪಾತ್ರೆಯಾಗಿದೆ. ಮೋದಿಯವರು ಅಕ್ಷಯ ಪಾತ್ರೆ ನೀಡುವ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನವ್ರು ಖಾಲಿ ಚೆಂಬು ಎನ್ನುತ್ತಿದ್ದಾರೆ. ಮೋದಿಯವರು, ಖೂಬಾರವರು ಕೊಟ್ಟ ಕೊಡುಗೆಯಿಂದ ಸಾಕಷ್ಟು ರಸ್ತೆಗಳಾಗಿವೆ. ಬಿಜೆಪಿ, ಜೆಡಿಎಸ್ ಎರಡು ಪಕ್ಷ ಒಂದಾಗಿ ಖೂಬಾರವರನ್ನು ಗೆಲ್ಲಿಸಿಕೊಂಡು ಬರುವ ಕೆಲಸ ಮಾಡಬೇಕು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆರವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಜು ಕಡ್ಯಾಳ, ದೇವೇಂದ್ರ ಸೋನಿ, ರಾಜಶೇಖರ ಜವಳೆ, ಪರಶುರಾಮ, ಸಂಜುಕುಮಾರ್ ಮಾಶೆಟ್ಟಿ, ಜೈಸಿಂಗ್ ರಾಠೋಡ್, ರಾಜರೆಡ್ಡಿ, ಹಣಮಂತರಾವ್ ಮೈಲಾರಿ, ಶಿವರಾಜ ಶೆಮಶೆಟ್ಟಿ, ಪರಶುರಾಮ, ನಾಗಭೂಷಣ ಕಮಠಾಣೆ ಸೇರಿದಂತೆ ಅನೇಕರಿದ್ದರು.

ಖೂಬಾರವರ ಗೆಲುವಿಗಾಗಿ ನಾವು ಒಂದಾಗಿದ್ದೇವೆ: ಬಂಡೆಪ್ಪ ಖಾಶೆಂಪುರ್

 ಖೂಬಾರವರ ಗೆಲುವಿಗಾಗಿ ನಾವು ಒಂದಾಗಿದ್ದೇವೆ: ಬಂಡೆಪ್ಪ ಖಾಶೆಂಪುರ್

 

ಬೀದರ್ (ಏ.29): ಕೇಂದ್ರ ಸಚಿವರು, ಬೀದರ್ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿರುವ ಭಗವಂತ ಖೂಬಾರವರ ಗೆಲುವಿಗಾಗಿ ನಾವು, ಬೆಲ್ದಾಳೆಯವರು ಒಂದಾಗಿದ್ದೇವೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಬೀದರ್ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವರಾದ ಭಗವಂತ ಖೂಬಾರವರ ಪರವಾಗಿ ಭಾನುವಾರ ಬೀದರ್ ದಕ್ಷಿಣ ಕ್ಷೇತ್ರದ ಚಾಂಗಲೇರಾ, ಮುತ್ತಂಗಿ, ಉಡಬಾಳ, ಮಂಗಲಗಿ, ಖೇಳಿ ರಂಜೋಳ, ಔರಾದ (ಎಸ್), ಸಿರ್ಸಿ (ಎ), ಕಾಡವಾದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆಯವರೊಟ್ಟಿಗೆ ಜಂಟಿಯಾಗಿ ಮತಯಾಚನೆ ನಡೆಸಿ ಅವರು ಮಾತನಾಡಿದರು.

ದೇಶದ ಒಳಿತಿಗಾಗಿ ಮೋದಿಯವರು, ದೇವೇಗೌಡರು ಒಂದಾಗಿದ್ದಾರೆ. ಅದರಂತೆಯೇ ಕ್ಷೇತ್ರದ ಒಳಿತಿಗಾಗಿ ನಾವು ಒಂದಾಗಿದ್ದೇವೆ. ಕರ್ನಾಟಕದ ಹೊಸಪೇಟೆಯಲ್ಲಿ ಮೋದಿಯವರು, ಕುಮಾರಸ್ವಾಮಿರವರು ಜೊತೆಯಾಗಿ ಮತಯಾಚನೆ ನಡೆಸಿದ್ದಾರೆ. ಬೀದರ್ ನಲ್ಲಿ ನಾನು, ಬೆಲ್ದಾಳೆಯವರು ಜೊತೆಯಾಗಿ ಮತಯಾಚನೆ ಮಾಡುತ್ತಿದ್ದೇವೆ ಎಂದರು.

ಇವತ್ತು ದೇಶ ಯಾರು ಮುನ್ನಡೆಸಬೇಕು ಎಂಬುದು ಮುಖ್ಯವಾಗಿದೆ. ದೇವೇಗೌಡರಂತಹ ಮುತ್ಸದ್ದಿ ರಾಜಕಾರಣಿ ಮೋದಿಯವರ ಆಡಳಿತವನ್ನು ಮೆಚ್ಚಿದ್ದಾರೆ. ಭಾರತ ಸುರಕ್ಷಿತವಾಗಿ ಇರಬೇಕಾದರೆ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದಿದ್ದಾರೆ. ನಾವು ದೇವೇಗೌಡರ ಹಾದಿಯಲ್ಲಿ ಸಾಗಬೇಕಾಗಿದೆ. ದೇವೇಗೌಡರು ಒಂದು ವರ್ಷದ ಹಿಂದೆಯೇ ಮೈತ್ರಿ ಮಾಡಿಕೊಂಡಿದ್ದರೆ ಕಾಂಗ್ರೆಸ್ ಸರ್ಕಾರ ಇರುತ್ತಿರಲಿಲ್ಲ. ನಾವೇ ಅಧಿಕಾರದಲ್ಲಿ ಇರುತ್ತಿದ್ದೇವು ಎಂದು ಬಂಡೆಪ್ಪ ಖಾಶೆಂಪುರ್ ರವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ನವ್ರಿಗೆ  ಗ್ಯಾರಂಟಿಗಳ ಮೇಲೆ ವಿಶ್ವಾಸ ಹೋಗಿದೆ:

ಕಾಂಗ್ರೆಸ್ ನವರಿಗೆ ತಾವು ಜಾರಿಗೆ ತಂದ ಗ್ಯಾರಂಟಿಗಳ ಮೇಲೆ ವಿಶ್ವಾಸ ಹೋಗಿದೆ. ಈಗ ಅವರು ಚೊಂಬು ಹಿಡಿದುಕೊಂಡಿದ್ದಾರೆ. ಗ್ಯಾರಂಟಿ ಮರೆತುಬಿಟ್ಟಿದ್ದಾರೆ. ಚೊಂಬಿನ ಮೇಲೆ ಮತ ಕೇಳಲು ಮುಂದಾಗಿದ್ದಾರೆ. ಜನ ಅವರಿಗೆ ಪಾಠ ಕಲಿಸಬೇಕು. ಬೀದರ್ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಭಗವಂತ ಖೂಬಾರವನ್ನು ಗೆಲ್ಲಿಸಬೇಕು ಎಂದು ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆರವರು, ಭಗವಂತ ಖೂಬಾರವರು ಬೀದರ್  ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಕೂಡ ಉತ್ತಮವಾದ ಕೆಲಸ ಮಾಡಿದ್ದಾರೆ ಎಂದರು.

ಖೂಬಾರವರು ಬೀದರ್ ಜಿಲ್ಲೆಗೆ ರೈಲ್ವೆ, ರೋಡ್ ಸೇರಿದಂತೆ ಅನೇಕ ಯೋಜನೆಗಳನ್ನು ತಂದಿದ್ದಾರೆ. ನಾವು ಅವರನ್ನು ಮತ್ತೊಮ್ಮೆ ಲೋಕಸಭೆಗೆ ಕಳುಹಿಸಿದರೆ ಇನ್ನಷ್ಟು ಅಭಿವೃದ್ಧಿ ಕೆಲಸಗಳಾಗಲಿವೆ. ಆಗಾಗಿ ಬೀದರ್ ಲೋಕಸಭಾ ಕ್ಷೇತ್ರದ ಜನರು ಖೂಬಾರವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಬೇಕು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆರವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಂಜುರೆಡ್ಡಿ ನಿರ್ಣಾ, ಐಲಿಂಜಾನ್ ಮಠಪತಿ, ರಾಜು ಕಡ್ಯಾಳ, ದೇವೇಂದ್ರ ಸೋನಿ, ರಾಜಶೇಖರ ಜವಳೆ, ಸೂರ್ಯಕಾಂತ್ ದಂಡಿ, ರಾಜರೆಡ್ಡಿ ಶಹಬಾದ್, ಚಂದ್ರಯ್ಯ ಸ್ವಾಮಿ, ಸುರೇಶ್ ಮಾಶೆಟ್ಟಿ, ರವಿಸ್ವಾಮಿ, ಬೊಮ್ಮಗೊಂಡ ಚಿಟ್ಟವಾಡಿ, ಭಜರಂಗ ಖಾಶೆಂಪುರ್, ದತ್ತು ಕಾಡವಾದ, ಬಸವರಾಜ ಶಾಪೂರ  ಸೇರಿದಂತೆ ಅನೇಕರಿದ್ದರು.

Saturday, April 6, 2024

ಜೆಡಿಎಸ್ - ಬಿಜೆಪಿ ಮೈತ್ರಿ ರಾಜ್ಯದಲ್ಲಿ ಸಂಚಲನ ಮೂಡಿಸಿದೆ: ಬಂಡೆಪ್ಪ ಖಾಶೆಂಪುರ್

ಜೆಡಿಎಸ್ - ಬಿಜೆಪಿ ಮೈತ್ರಿ ರಾಜ್ಯದಲ್ಲಿ ಸಂಚಲನ ಮೂಡಿಸಿದೆ: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಬೀದರ್ (ಏ.06): ಜೆಡಿಎಸ್ - ಬಿಜೆಪಿ ಒಂದಾಗಿರುವುದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ನೋಡಿ ಬೇರೆ ಪಕ್ಷದವರು ಆಶ್ಚರ್ಯ ಪಡುವಂತಾಗಿದೆ. ಆ ರೀತಿಯ ಜನ ಬೆಂಬಲ ನಮ್ಮ ಮೈತ್ರಿಗೆ ಸಿಕ್ಕಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ನಗರದಲ್ಲಿರುವ ಕೇಂದ್ರ ಸಚಿವ ಭಗವಂತ ಖೂಬಾರವರ ನಿವಾಸದಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ - ಜೆಡಿಎಸ್ ಪಕ್ಷಗಳ ಮುಖಂಡರ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡು ಪಕ್ಷಗಳ ನಾಯಕರನ್ನು ಒಂದುಕಡೆ ಸೇರಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ‌. ಇದು ನಮಗೆ ದೊಡ್ಡ ಶಕ್ತಿಯೊಂದಿಗೆ ದೊಡ್ಡಮಟ್ಟದ ಸಂದೇಶವನ್ನು ನೀಡುತ್ತದೆ ಎಂದರು.
ನಾವು ಈ ಮೈತ್ರಿಯನ್ನು ವಿಧಾನಸಭಾ ಚುನಾವಣೆಯ ಮೊದಲೇ ಮಾಡಿಕೊಂಡಿದ್ದರೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಅನೇಕ ಜನ ನಾಯಕರು ಈಗಾಗಲೇ ಅನೇಕ ಭಾಷಣಗಳಲ್ಲಿ ಹೇಳಿದ್ದಾರೆ. ಅದೇ ರೀತಿಯಲ್ಲಿ ನಮ್ಮ ಭಾಗದಲ್ಲಿ ನಾವು ಪಣ ತೋಡಬೇಕಾಗಿದೆ.
ನಮ್ಮ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಭಗವಂತ ಖೂಬಾರವರನ್ನು ಗೆಲ್ಲಿಸುವಂತ ಕೆಲಸವನ್ನು ನಾವೆಲ್ಲರೂ ಸೇರಿ ಮಾಡುತ್ತೇವೆ. ನಾವು ಈಗಾಗಲೇ ಮೂರನೇ ಬಾರಿಗೆ ಸಭೆ ಸೇರಿದ್ದೇವೆ. ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಸಭೆಗಳನ್ನು ನಡೆಸುತ್ತೇವೆ ಎಂದು ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ಬಿಜೆಪಿ ಜೊತೆಗಿನ ಮೈತ್ರಿ ನ್ಯಾಚುರಲ್ ಅಲೈಯನ್ಸ್ ಇದ್ದಂತಿದೆ:
ನಾನು ಬಿಜೆಪಿ ಜೊತೆಗಿನ ಮೈತ್ರಿ ಹಾಗೂ ಕಾಂಗ್ರೆಸ್ ಜೊತೆಗಿನ ಮೈತ್ರಿ ಎರಡು ಸಂದರ್ಭಗಳಲ್ಲಿ ಕೂಡ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಮಗೆ ಬಿಜೆಪಿ ಜೊತೆಗಿನ ಮೈತ್ರಿಯ ಸಂದರ್ಭದಲ್ಲಿ ರಾಜ್ಯದಲ್ಲಿ ಉತ್ತಮ ಪ್ರೋತ್ಸಾಹ, ಬೆಂಬಲ ಸಿಕ್ಕಿದೆ. ಬಿಜೆಪಿ ಜೊತೆಗಿನ ಮೈತ್ರಿ ನ್ಯಾಚುರಲ್ ಅಲೈಯನ್ಸ್ ಇದ್ದಂತಿದೆ. ಈ ಮೈತ್ರಿಗೆ ನಮ್ಮ ಪಕ್ಷದ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಾವು ನಮ್ಮ ಜೆಡಿಎಸ್ ಪಕ್ಷದಿಂದ ಬೂತ್ ಮಟ್ಟದಿಂದ ನಮ್ಮ ಮತಗಳನ್ನು ಬಿಜೆಪಿಗೆ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ದೇವೇಗೌಡರ ಸೂಚನೆ ಪಾಲಿಸೋಣ:
ಮೋದಿಯವರ ನೇತೃತ್ವದಲ್ಲಿ ಮತ್ತೆ ಭಾರತ ಮುನ್ನಡೆಸಬೇಕಾಗಿದೆ. ಭಾರತ ಮತ್ತಷ್ಟು ಬಲಿಷ್ಠವಾಗಬೇಕಾಗಿದೆ. ವಿಶ್ವಕ್ಕೆ ಮಾದರಿಯಾಗಿ ಸಾಗಬೇಕಾಗಿದೆ. ಆ ನಿಟ್ಟಿನಲ್ಲಿ ಭಾರತಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ನಾವೆಲ್ಲರೂ ಮೋದಿಯವರಿಗೆ ಬೆಂಬಲ ಕೊಡಬೇಕು ಎಂದು ಈಗಾಗಲೇ ಹೆಚ್.ಡಿ ದೇವೇಗೌಡರು ಜೆಡಿಎಸ್ ಪಕ್ಷದ ಶಾಸಕರಿಗೆ, ಮಾಜಿ ಶಾಸಕರಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಅದರಂತೆಯೇ ನಾವು ಬೀದರ್ ನಿಂದ ಚಾಮರಾಜನಗರದವರೆಗೂ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಬೇಕಾಗಿದೆ. ಆ ನಿಟ್ಟಿನಲ್ಲಿ ನಾವು ಬೀದರ್ ನಲ್ಲಿ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಹಂತಹಂತವಾಗಿ ಸಭೆ ಸೇರಿ ನಮ್ಮ ಮೈತ್ರಿ ಅಭ್ಯರ್ಥಿಯಾಗಿರುವ ಭಗವಂತ ಖೂಬಾರವರನ್ನು ಗೆಲ್ಲಿಸಿಕೊಂಡು ಬರುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡುತ್ತೇವೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಪಕ್ಷ (ಪ್ರತಿಪಕ್ಷ) ನಾಯಕರಾದ ಆರ್ ಅಶೋಕ್, ಕೇಂದ್ರ ಸಚಿವರು, ಬೀದರ್ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಭಗವಂತ ಖೂಬಾ, ಜಿಲ್ಲೆಯ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ‌ ರಘುನಾಥರಾವ್ ಮಲ್ಕಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ್ ಪಾಟೀಲ್, ಮಲ್ಲಿಕಾರ್ಜುನ ಖೂಬಾ, ಮಹೇಶ್ವರಿ ವಾಲಿ, ಸಜ್ಜದ್ ಸಾಹೇಬ್, ಎಂ.ಜಿ ಮೂಳೆರವರು ಸೇರಿದಂತೆ ಬೀದರ್ ಲೋಕಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಇದ್ದರು.
#BandeppaKhashempur #Bandeppa #Khashempur #ಬಂಡೆಪ್ಪಖಾಶೆಂಪುರ್ #ಬಂಡೆಪ್ಪ #ಖಾಶೆಂಪುರ್ #ಆರ್_ಅಶೋಕ್ #RAshoka #BhagwantKhubha #Mallikarjunkhubha