ಪಾಮನಕಲ್ಲೂರು: ಅದ್ಧೂರಿಯಾಗಿ ನಡೆದ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ
ರಾಯಚೂರು (ಮೇ.11): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿರುವ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಶುಕ್ರವಾರ ಸಡಗರ ಸಂಭ್ರಮದಿಂದ ಅದ್ಧೂರಯಾಗಿ ನಡೆಯಿತು.
ಪ್ರತಿ ವರ್ಷ ಬಸವ ಜಯಂತಿಯಂದು ನಡೆಯುವಂತೆ ಈ ವರ್ಷವೂ ಬಸವ ಜಯಂತಿ ದಿನವಾದ ಶುಕ್ರವಾರ ಬೆಳಗ್ಗೆಯಿಂದ ಆರಂಭವಾದ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಸಂಜೆ ರಥೋತ್ಸವ ಮತ್ತು ಉಚ್ಚಯ್ಯಗಳೊಂದಿಗೆ ಮುಕ್ತಾಯವಾಯಿತು.
ಆದಿ ಬಸವೇಶ್ವರನ ಸನ್ನಿಧಿಯಲ್ಲಿ ನವಜೀವನಕ್ಕೆ ಕಾಲಿಟ್ಟ ನವಜೋಡಿಗಳು:
ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಿದವು. ಅನೇಕ ಜನ ನವಜೋಡಿಗಳು ಆದಿ ಬಸವೇಶ್ವರ ದೇವರ ಸನ್ನಿಧಿಯಲ್ಲಿ ಮಲದಗುಡ್ಡದ ಶ್ರೀಗಳು, ಮುಡಲಗುಂಡದ ಶ್ರೀಗಳ ಆಶೀರ್ವಾದದೊಂದಿಗೆ ನವಜೀವನಕ್ಕೆ ಕಾಲಿಟ್ಟರು.
ಪ್ರಸಾದ ವ್ಯವಸ್ಥೆ:
ಜಾತ್ರೆಗೆ ಆಗಮಿಸುವ ಭಕ್ತರಿಗೆ ಪ್ರತಿ ವರ್ಷವೂ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅದರಂತೆಯೇ ಈ ವರ್ಷವೂ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಥ, ಉಚ್ಚಯ್ಯ ಎಳೆದು ಭಕ್ತಿ ಸಮರ್ಪಿಸಿದ ಭಕ್ತರು:
ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ರಥೋತ್ಸವ ಮತ್ತು ಉಚ್ಚಯ್ಯ ಕಾರ್ಯಕ್ರಮದಲ್ಲಿ ಜಾತ್ರೆಗೆ ಆಮಿಸಿದ ಭಕ್ತರು ರಥ ಮತ್ತು ಉಚ್ಚಯ್ಯ ಎಳೆದು ಭಕ್ತಿ ಸಮರ್ಪಿಸಿದರು. ಇನ್ನೂ ಈ ವರ್ಷ ಆದಿ ಬಸವೇಶ್ವರ ರಥಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿ ರಥೋತ್ಸವ ಕಾರ್ಯಕ್ರಮಕ್ಕೆ ಯುವ ಸಮುದಾಯ ಮೆರುಗ ತಂದಿತ್ತು.
ಸಂಜೆಯಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು:
ಆದಿ ಬಸವೇಶ್ವರ ಜಾತ್ರೆಯೂ ಗ್ರಾಮದಲ್ಲಿ ನಡೆಯುವ ಜಾತ್ರೆಗಳಲ್ಲಿ ವಿಶೇಷ ಜಾತ್ರೆಯಾಗಿದ್ದು, ಸಂಜೆಯಾಗುತ್ತಿದ್ದಂತೆ ರಥೋತ್ಸವ ಕಾರ್ಯಕ್ರಮದ ಸಮಯಕ್ಕೆ ಪಾಮನಕಲ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ರಥೋತ್ಸವ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಪೂಜ್ಯರು, ಗಣ್ಯರು, ದೇವಸ್ಥಾನದ ಆಡಳಿತ ಮಂಡಳಿಯವರು, ಗ್ರಾಮದ ಯುವಕರು, ಪಾಮನಕಲ್ಲೂರು, ಚಿಕ್ಕ ಹೆಸರೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಮಿಸಿದ್ದ ಭಕ್ತರು ಸೇರಿದಂತೆ ಅನೇಕರಿದ್ದರು.
No comments:
Post a Comment