Thursday, February 4, 2021

ವಾಲ್ಮೀಕಿ ನಾಯಕ ಸಮುದಾಯಕ್ಕಾಗಿ ಪ್ರತ್ಯೇಕ ‘ರೆಜಿಮೆಂಟ್’ ಸ್ಥಾಪನೆಗೆ ಆಗ್ರಹಿಸಿ ಮಸ್ಕಿಯಿಂದ ಸುರಪುರದವರೆಗೆ ಪಾದಯಾತ್ರೆ

‘ವಾಲ್ಮೀಕಿ ರೆಜಿಮೆಂಟ್’ ಪಾದಯಾತ್ರೆಗೆ ಬೆಂಬಲಿಸಿ: ಶರಣು ಸುರಪುರಕರ್ ಮನವಿ

ವಾಲ್ಮೀಕಿ ನಾಯಕ ಸಮುದಾಯಕ್ಕಾಗಿ ಭಾರತೀಯ ಸೇನೆಯಲ್ಲಿ ಪ್ರತ್ಯೇಕ ರೆಜಿಮೆಂಟ್ ಸ್ಥಾಪನೆಗೆ ಒತ್ತಾಯಿಸಿ ಇದೇ ಫೆ.05ರಿಂದ 08ರವರೆಗೆ ಪ್ರಪ್ರಥಮವಾಗಿ ರಾಯಚೂರು ಜಿಲ್ಲೆಯ ಮಸ್ಕಿಯ ಮಹರ್ಷಿ ವಾಲ್ಮೀಕಿ ವೃತದಿಂದ ಯಾದಗಿರಿ ಜಿಲ್ಲೆಯ ಸುರಪುರದ ದರ್ಬಾರ್ ವರೆಗೂ ಪಾದಯಾತ್ರೆ ನಡೆಸುತ್ತಿದ್ದು, ಸುರಪುರ ವಿಜಯೋತ್ಸವ ದಿನದಂದು ಪಾದಯಾತ್ರೆ ಕೊನೆಗೊಳ್ಳಲಿದ್ದು, ವಾಲ್ಮೀಕಿ ನಾಯಕ ಸಮುದಾಯದ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ರೆಜಿಮೆಂಟ್ ಹೋರಾಟಕ್ಕೆ ಬೆಂಬಲಿಸಿ, ಯಶಸ್ವಿಗೊಳಿಸಬೇಕೆಂದು ವಾಲ್ಮೀಕಿ ರೆಜಿಮೆಂಟ್ ಹೋರಾಟಗಾರ ಶರಣು ಸುರಪುರಕರ್ ಮನವಿ ಮಾಡಿದ್ದಾರೆ.

ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಕಳೆದ ಅನೇಕ ವರ್ಷಗಳಿಂದ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದೇನೆ. ರೆಜಿಮೆಂಟ್ ಸ್ಥಾಪನೆಯ ವಿಷಯವಾಗಿ ಈ ಹಿಂದೆ ದೆಹಲಿಗೆ ಹೋಗಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಕ್ಷಣಾ ಸಚಿವರು ಸೇರಿದಂತೆ ಸಂಬಂಧಿಸಿದ ಇಲಾಖೆಯವರಿಗೆ ಮನವಿ ಕೊಡಲು ಪ್ರತ್ನಿಸಿದ್ದಿನಿ. ನನ್ನ ಪ್ರಯತ್ನಗಳು ಫಲಕೊಡುತ್ತಿಲ್ಲ. ಆ ಕಾರಣದಿಂದಾಗಿಯೇ ಪಾದಯಾತ್ರೆ ಮಾಡುವ ಮೂಲಕ ವಾಲ್ಮೀಕಿ ನಾಯಕ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದೇನೆ. ನನ್ನ ಹೋರಾಟ ಯಾವುದೇ ಪಕ್ಷ, ಯಾವುದೇ ಜನಪ್ರತಿನಿಧಿಗಳ ವಿರುದ್ಧವಲ್ಲ. 

ವಾಲ್ಮೀಕಿ ನಾಯಕ ಸಮುದಾಯ ಶೌರ್ಯ, ಸಾಹಸಕ್ಕೆ ಹೆಸರಾದ ಸಮುದಾಯವಾಗಿದೆ. ಭಾರತ ಸ್ವಂತಂತ್ರ್ಯಕ್ಕಾಗಿ ಹೋರಾಡಿದ ಸಮುದಾಯವಾಗಿದೆ. ಕೋಟೆ ಕೊತ್ತಲುಗಳನ್ನು ಕಟ್ಟಿ ಜನರ ರಕ್ಷಣೆಗಾಗಿ, ಉತ್ತಮ ಸಾಮ್ರಾಜ್ಯಗಳನ್ನು ಸ್ಥಾಪಿಸಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ. ಸದಕಾಲವೂ ಸರ್ವರ ಒಳಿತನ್ನು ಬಯಸಿಕೊಂಡು ಬಂದಿರುವ ಸಮುದಾಯಕ್ಕಾಗಿ ಪ್ರತ್ಯೇಕ ರೆಜಿಮೆಂಟ್ ಸ್ಥಾಪಿಸುವ ಮೂಲಕ ಭಾರತೀಯ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಸರ್ಕಾರ ಈ ಸಮುದಾಯಕ್ಕೆ ಕಲ್ಪಿಸಿಕೊಡಬೇಕಾಗಿದೆ.

ಈಗಾಗಲೇ ಸಿಖ್ ರೆಜಿಮೆಂಟ್, ಗೋರ್ಖಾ ರೆಜಿಮೆಂಟ್ ಸೇರಿದಂತೆ ಭಾರತೀಯ ಸೇನೆಯಲ್ಲಿ ವಿವಿಧ ಸಮುದಾಯಗಳಿಗಾಗಿಯೇ ಪ್ರತ್ಯೇಕ ರೆಜಿಮೆಂಟ್ ಗಳನ್ನು ಸ್ಥಾಪಿಸಲಾಗಿದೆ. ಅದರಂತೆಯೇ ವಾಲ್ಮೀಕಿ ನಾಯಕ ಸಮುದಾಯಕ್ಕಾಗಿಯೇ ವಾಲ್ಮೀಕಿ ಅಥವಾ ಬೇಡರ ರೆಜಿಮೆಂಟ್ ಹೆಸರಲ್ಲಿ ಪ್ರತ್ಯೇಕ ರೆಜಿಮೆಂಟ್ ಸ್ಥಾಪಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ರೆಜಿಮೆಂಟ್ ಹೋರಾಟಗಾರ ಶರಣು ಸುರಪುರಕರ್ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರಾದ ಗೋವಿಂದ ನಾಯಕ ವೆಂಕಟಾಪೂರ, ಮಲ್ಲಣ್ಣ ನಾಯಕ ಮಲ್ಕಾಪೂರ, ಗ್ವಾಲಪ್ಪ ನಾಯಕ ಉಸ್ಕಿಹಾಳ, ಚಂದ್ರಶೇಖರ ನಾಯಕ ಉದ್ಬಾಳ, ಹೇಮಂತ ನಾಯಕ ಜಿನ್ನಾಪೂರ, ಲಿಂಗರಾಜ ಕಾಟಗಲ್, ಅಮರೇಶ ಅಂತರಗಂಗಿ, ಶ್ರೀನಿವಾಸ ಅಂಕುಶದೊಡ್ಡಿ, ರಮೇಶ ನಾಯಕ ಕಾಟಗಲ್, ಅಯ್ಯಣ್ಣ ನಾಯಕ ಪಾಮನಕಲ್ಲೂರು ಸೇರಿದಂತೆ ಅನೇಕರಿದ್ದರು.

No comments:

Post a Comment