Wednesday, December 8, 2021

ಸೇನಾ ಹೆಲಿಕಾಪ್ಟರ್ ಪತನದ ಸುದ್ದಿ ಕೇಳಿ ದುಃಖವಾಗುತ್ತಿದೆ: ಶಾಸಕ ಬಂಡೆಪ್ಪ ಖಾಶೆಂಪುರ್










ದೊರೆ ನ್ಯೂಸ್ ಕನ್ನಡ Dore News Kannada

ಬೀದರ್ (ಡಿ.08): ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ರವರು ಮತ್ತು ಅವರ ಪತ್ನಿ ಹಾಗೂ ಹನ್ನೆರಡು ಜನ ಸೈನಿಕರು ಕೊಯಮತ್ತೂರಿನ ಸೇನಾ ಕಾರ್ಯಕ್ರಮಕ್ಕೆ ಸೇನಾ ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡು ಸಿಡಿಎಸ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮತ್ತು ಸೈನಿಕರು ಹುತಾತ್ಮರಾಗಿರುವ ಸುದ್ದಿ ಕೇಳಿ ದುಃಖವಾಗುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದ್ದಾರೆ.

ಸೇನಾ ಹೆಲಿಕಾಪ್ಟರ್ ದುರಂತದ ಬಳಿಕ ಬುಧವಾರ ಸಂಜೆ ವೇಳೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್, ಇನ್ಸ್ಟಾಗ್ರಾಮ್ ಗಳ ಮೂಲಕ ದುಃಖ ವ್ಯಕ್ತಪಡಿಸಿದ ಶಾಸಕರು, ಹಿಂದಿನಿಂದಲೂ ರಾವತ್ ರವರ ಕುಟುಂಬ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿತ್ತು. ಬಿಪಿನ್ ರಾವತ್ ರವರು ಕೂಡ ಸೇನೆಗೆ ಸೇರಿದಾಗಿನಿಂದ ನಿವೃತ್ತಿಯವರೆಗೂ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದರು. ಅವರನ್ನು ಸೇನಾಪಡೆಗಳ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಸಿಡಿಎಸ್ ಆಗಿದ್ದ ಅವರು, ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿರುವುದು ತುಂಬಾ ದುಃಖದ ಸುದ್ದಿಯಾಗಿದೆ. 

ಘಟನೆಯಲ್ಲಿ ರಾವತ್ ರವರ ಪತ್ನಿ ಮಧುಲಿಕಾರವರು ಕೂಡ ಕೊನೆಯುಸಿರೆಳೆದಿದ್ದು, ವೀರ ಯೋಧರು ಹುತಾತ್ಮರಾಗಿದ್ದಾರೆ. ದುರಂತದಲ್ಲಿ ಪ್ರಾಣಬಿಟ್ಟ ಸಿಡಿಎಸ್ ಬಿಪಿನ್ ರಾವತ್, ಪತ್ನಿ ಮಧುಲಿಕಾ ಹಾಗೂ ಹುತಾತ್ಮ ಯೋಧರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಂತಾಪ ವ್ಯಕ್ತಪಡಿಸಿದ್ದಾರೆ.

No comments:

Post a Comment