Monday, May 20, 2024

ಪಾಮನಕಲ್ಲೂರು: ಗ್ರಾ.ಪಂ ಆವರಣದಲ್ಲಿ ನಡೆದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ

ಪಾಮನಕಲ್ಲೂರು: ಗ್ರಾ.ಪಂ ಆವರಣದಲ್ಲಿ ನಡೆದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ

ರಾಯಚೂರು (ಮೇ.20): ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿ ಆವರಣದಲ್ಲಿ ಇತ್ತೀಚೆಗೆ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ನಡೆಯಿತು.

ಈ ಸಭೆಯಲ್ಲಿ 2022-23ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಕುರಿತು 2023-24ನೇ ಸಾಲಿನ ಸಾಮಾಜಿಕ ಪರಿಶೋಧನೆ ನಡೆಸಲಾಯಿತು.

ಸಭೆಯ ಅಧ್ಯಕ್ಷೆತಯನ್ನು ಮಾನ್ವಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹಾಲಿಂಗ ಹೆಚ್ ಇಂಗಳದಾಳರವರು ವಹಿಸಿದ್ದರು. ಲೆಕ್ಕ ಪರಿಶೋಧನೆ ಮಾಹಿತಿಯನ್ನು ಲಿಂಗಸುಗೂರು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ  ಚಂದ್ರು ಪವ್ಹಾರ್ ಹಂಚಿಕೊಂಡರು. 

ಈ ಸಂದರ್ಭದಲ್ಲಿ ಮಸ್ಕಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶೇಖ್ ಹುಸೇನ್ ಶರೀಫ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ಹೆಚ್ ಹುನಗುಂದ, ಗ್ರಾಮ ಪಂಚಾಯತಿ ಸದಸ್ಯರು, ಸಾಮಾಜಿಕ ಪರಿಶೋಧನೆ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮೀದೇವಿ, ಹುಸೇನಪ್ಪ, ವಿವಿಧ ಸಂಘಟನೆಗಳ ಮುಖಂಡರಾದ ಲಕ್ಷ್ಮಣ ಚೌಡ್ಲಿ, ಶಾಂಭವಿ, ಸುಂಡೆಪ್ಪ ಆನಂದಗಲ್, ರಮೇಶ್ ಚಿಲ್ಕರಾಗಿ, ಅಮರೇಶ್ ಡಿ ಪೂಜಾರಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಶರಣಪ್ಪ ಕೊಂಡಾಲ್ ಸೇರಿದಂತೆ ಅನೇಕರಿದ್ದರು.

Saturday, May 11, 2024

ಪಾಮನಕಲ್ಲೂರು: ಅದ್ಧೂರಿಯಾಗಿ ನಡೆದ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ

ಪಾಮನಕಲ್ಲೂರು: ಅದ್ಧೂರಿಯಾಗಿ ನಡೆದ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ

ರಾಯಚೂರು (ಮೇ.11): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿರುವ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಶುಕ್ರವಾರ ಸಡಗರ ಸಂಭ್ರಮದಿಂದ ಅದ್ಧೂರಯಾಗಿ ನಡೆಯಿತು.

ಪ್ರತಿ ವರ್ಷ ಬಸವ ಜಯಂತಿಯಂದು ನಡೆಯುವಂತೆ ಈ ವರ್ಷವೂ ಬಸವ ಜಯಂತಿ ದಿನವಾದ ಶುಕ್ರವಾರ ಬೆಳಗ್ಗೆಯಿಂದ ಆರಂಭವಾದ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಸಂಜೆ ರಥೋತ್ಸವ ಮತ್ತು ಉಚ್ಚಯ್ಯಗಳೊಂದಿಗೆ ಮುಕ್ತಾಯವಾಯಿತು.

ಆದಿ ಬಸವೇಶ್ವರನ ಸನ್ನಿಧಿಯಲ್ಲಿ ನವಜೀವನಕ್ಕೆ ಕಾಲಿಟ್ಟ ನವಜೋಡಿಗಳು:

ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಿದವು. ಅನೇಕ ಜನ ನವಜೋಡಿಗಳು ಆದಿ ಬಸವೇಶ್ವರ ದೇವರ ಸನ್ನಿಧಿಯಲ್ಲಿ ಮಲದಗುಡ್ಡದ ಶ್ರೀಗಳು, ಮುಡಲಗುಂಡದ ಶ್ರೀಗಳ ಆಶೀರ್ವಾದದೊಂದಿಗೆ ನವಜೀವನಕ್ಕೆ ಕಾಲಿಟ್ಟರು. 

ಪ್ರಸಾದ ವ್ಯವಸ್ಥೆ:

ಜಾತ್ರೆಗೆ ಆಗಮಿಸುವ ಭಕ್ತರಿಗೆ ಪ್ರತಿ ವರ್ಷವೂ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅದರಂತೆಯೇ ಈ ವರ್ಷವೂ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. 

ರಥ, ಉಚ್ಚಯ್ಯ ಎಳೆದು ಭಕ್ತಿ ಸಮರ್ಪಿಸಿದ ಭಕ್ತರು:

ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ರಥೋತ್ಸವ ಮತ್ತು ಉಚ್ಚಯ್ಯ ಕಾರ್ಯಕ್ರಮದಲ್ಲಿ ಜಾತ್ರೆಗೆ ಆಮಿಸಿದ ಭಕ್ತರು ರಥ ಮತ್ತು ಉಚ್ಚಯ್ಯ ಎಳೆದು ಭಕ್ತಿ ಸಮರ್ಪಿಸಿದರು. ಇನ್ನೂ ಈ ವರ್ಷ ಆದಿ ಬಸವೇಶ್ವರ ರಥಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿ ರಥೋತ್ಸವ ಕಾರ್ಯಕ್ರಮಕ್ಕೆ ಯುವ ಸಮುದಾಯ ಮೆರುಗ ತಂದಿತ್ತು.

ಸಂಜೆಯಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು:

ಆದಿ ಬಸವೇಶ್ವರ ಜಾತ್ರೆಯೂ ಗ್ರಾಮದಲ್ಲಿ ನಡೆಯುವ ಜಾತ್ರೆಗಳಲ್ಲಿ ವಿಶೇಷ ಜಾತ್ರೆಯಾಗಿದ್ದು, ಸಂಜೆಯಾಗುತ್ತಿದ್ದಂತೆ ರಥೋತ್ಸವ ಕಾರ್ಯಕ್ರಮದ ಸಮಯಕ್ಕೆ ಪಾಮನಕಲ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ರಥೋತ್ಸವ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಈ ಸಂದರ್ಭದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಪೂಜ್ಯರು, ಗಣ್ಯರು, ದೇವಸ್ಥಾನದ ಆಡಳಿತ ಮಂಡಳಿಯವರು, ಗ್ರಾಮದ ಯುವಕರು, ಪಾಮನಕಲ್ಲೂರು, ಚಿಕ್ಕ ಹೆಸರೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಮಿಸಿದ್ದ ಭಕ್ತರು ಸೇರಿದಂತೆ ಅನೇಕರಿದ್ದರು.