Wednesday, August 19, 2026

ಕಾರ್ ಮೆಕ್ಯಾನಿಕ್ ಒಬ್ಬ ಕ್ಯಾಮರಾಮ್ಯಾನ್ ಆದದ್ದು ಹೇಗೆ!? ಲೆನ್ಸ್ ಹಿಂದಿನ ಕಾಯಕ ಯೋಗಿ ರಮೇಶ್ ಚಾಂಬಾಳೆರವರ ಸಕ್ಸೆಸ್ ಸ್ಟೋರಿ..

ರಮೇಶ್ ಕಮಠಾಣಾ
ರಮೇಶ್ ಕಮಠಾಣಾ Ramesh Kamathana

ಕಾರ್ ಮೆಕ್ಯಾನಿಕ್ ಒಬ್ಬ ಕ್ಯಾಮರಾಮ್ಯಾನ್ ಆದದ್ದು ಹೇಗೆ!?

ಲೆನ್ಸ್ ಹಿಂದಿನ ಕಾಯಕ ಯೋಗಿ: ರಮೇಶ್ ಚಾಂಬಾಳೆ

(ವಿಶ್ವ ಛಾಯಾಗ್ರಾಹಣ ದಿನಕ್ಕಾಗಿ ವಿಶೇಷ ಲೇಖನ)
ಲೇಖಕರು: ಅಯ್ಯಣ್ಣ ನಾಯಕ ಪಾಮನಕಲ್ಲೂರು

ಕಮಠಾಣಾದ ರಮೇಶ್ ರವರ ಸೆಕೆಂಡ್ ಹ್ಯಾಂಡ್ ಕ್ಯಾಮರಾ ಖರೀದಿಯಿಂದ ಸ್ಟೂಡಿಯೋ ಆರಂಭದವರೆಗಿನ ಜರ್ನಿ ಹೇಗಿತ್ತು ತಿಳಿಯೋಣ ಬನ್ನಿ..
"ಒಂದು ಕ್ಯಾಮೆರಾ ಕೇವಲ ಕ್ಷಣಗಳನ್ನು ಸೆರೆಹಿಡಿಯುವುದಿಲ್ಲ; ಸರಿಯಾದವರ ಕೈಯಲ್ಲಿದ್ದರೆ ಅದು ಮನುಷ್ಯನ ಬದುಕನ್ನೇ ಬದಲಾಯಿಸಿ ಹೊಸ ಭವಿಷ್ಯವನ್ನು ರೂಪಿಸುತ್ತದೆ ಎಂಬುದಕ್ಕೆ ರಮೇಶ್ ರವರು ಒಳ್ಳೆಯ ಉದಾಹರಣೆಯಾಗಿದ್ದಾರೆ.
ಜಗತ್ತು ಬದಲಾಗುತ್ತಿದೆ, ಕ್ಷಣಗಳು ಮಾಸಿ ಹೋಗುತ್ತಿವೆ. ಆದರೆ ಆ ಕ್ಷಣಗಳನ್ನು ಕಾಲದ ಪುಟಗಳಲ್ಲಿ ಶಾಶ್ವತವಾಗಿ ಜೀವಂತವಾಗಿರಿಸುವ ಶಕ್ತಿ ಇರುವುದು ಒಬ್ಬ ಛಾಯಾಗ್ರಾಹಕನಿಗೆ (Photographer) ಮಾತ್ರ. ವಿಶ್ವ ಛಾಯಾಗ್ರಹಣ ದಿನದ (World Photography Day) ಈ ಶುಭ ಸಂದರ್ಭದಲ್ಲಿ, ಶೂನ್ಯದಿಂದ ಆರಂಭಿಸಿ ಇಂದು ನೂರಾರು ಜನರ ಸಂಭ್ರಮಗಳನ್ನು ಸೆರೆಹಿಡಿಯುತ್ತಾ ತನ್ನದೇ ಬದುಕನ್ನು ಬಂಗಾರವಾಗಿಸಿಕೊಂಡ ನಮ್ಮ ಗಡಿನಾಡು, ಕರ್ನಾಟಕದ ಕಿರೀಟ ಬೀದರ್ ಮಣ್ಣಿನ ಅಪ್ಪಟ ಪ್ರತಿಭೆ ರಮೇಶ್ ಚಾಂಬಾಳೆ ಅವರ ೧೬ ವರ್ಷಗಳ ಶ್ರಮದ ಕಥೆ ಪ್ರತಿಯೊಬ್ಬ ಯುವಕನಿಗೂ ಸ್ಫೂರ್ತಿ ನೀಡುತ್ತದೆ.
ಕಷ್ಟಗಳ ನಡುವೆ ಶುರುವಾದ ಬದುಕಿನ ಹುಡುಕಾಟ
ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಕಮಠಾಣಾ ಗ್ರಾಮದ ರಮೇಶ್ ಚಾಂಬಾಳೆ ಅವರಿಗೆ ಬದುಕು ಆರಂಭದಲ್ಲೇ ಹೂವಿನ ಹಾಸಿಗೆಯಾಗಿರಲಿಲ್ಲ. ಹತ್ತನೇ ತರಗತಿ ಮುಗಿದ ನಂತರ ಕುಟುಂಬಕ್ಕೆ ಆಸರೆಯಾಗಲು ಅವರು ಆರಿಸಿಕೊಂಡಿದ್ದು ಕಾರ್ ಮೆಕ್ಯಾನಿಕ್ ಕಾಯಕವನ್ನು. ಗ್ಯಾರೇಜ್‌ನಲ್ಲಿ ಗ್ರೀಸ್ ಮತ್ತು ಇಂಜಿನ್‌ಗಳ ನಡುವೆ ಕೆಲಸ ಮಾಡುತ್ತಿದ್ದ ರಮೇಶ್ ಅವರಿಗೆ, ಬದುಕು ಮತ್ತೊಂದು ಮಹತ್ವದ ತಿರುವನ್ನು ಕಾದಿರಿಸಿತ್ತು.
ಆಕಸ್ಮಿಕವಾಗಿ ಪರಿಚಯವಾದ ಫೋಟೋ ಶಾಪ್ ಮಾಲೀಕರೊಬ್ಬರ ಒಡನಾಟದಿಂದ ರಮೇಶ್ ಅವರ ಆಸಕ್ತಿ ಕ್ಯಾಮೆರಾ ಮತ್ತು ಫೋಟೋಗ್ರಫಿ ಪ್ರಪಂಚದತ್ತ ಹರಿಯಿತು.
ಕಲಿಕೆಯ ಮೆಟ್ಟಿಲು ಮತ್ತು ಅಸಿಸ್ಟೆಂಟ್ ಆಗಿ ಪಟ್ಟ ಶ್ರಮ
ಹೊಸ ಕನಸನ್ನು ಹೊತ್ತು ಬೀದರ್ ನಗರಕ್ಕೆ ಬಂದ ರಮೇಶ್, ಅಲ್ಲಿನ ಸ್ಟೂಡಿಯೋವೊಂದರಲ್ಲಿ ಸತತವಾಗಿ ಮೂರು - ನಾಲ್ಕು ವರ್ಷಗಳ ಕಾಲ ಕ್ಯಾಮೆರಾಮ್ಯಾನ್ ಅಸಿಸ್ಟೆಂಟ್ ಆಗಿ ಕೆಲಸ ಕಲಿತರು. ಹಿರಿಯ ಫೋಟೋಗ್ರಾಫರ್‌ಗಳ ಬಳಿ ಅಸಿಸ್ಟೆಂಟ್ ಆಗಿ, ಬಿಸಿಲು-ಮಳೆ ಎನ್ನದೆ ಹೆಗಲ ಮೇಲೆ ಕ್ಯಾಮೆರಾ ಬ್ಯಾಗ್ ಹೊತ್ತು ನೈಜ ಫೋಟೋಗ್ರಫಿಯ ಸೂಕ್ಷ್ಮತೆಗಳನ್ನು, ಬೆಳಕು ಮತ್ತು ನೆರಳಿನ ಆಟವನ್ನು ಹಗಲಿರುಳು ಪರಿಶ್ರಮದಿಂದ ಮೈಗೂಡಿಸಿಕೊಂಡರು. ಬಳಿಕ ನಾನೇ ಏನನ್ನಾದರೂ ಮಾಡಬೇಕು ಎಂಬ ಛಲದೊಂದಿಗೆ ಮುನ್ನುಗ್ಗಿ ಸ್ವಂತ ಸ್ಟೂಡಿಯೋ ಮಾಡಿದರು.
ಹೈದರಾಬಾದ್‌ನ ಸೆಕೆಂಡ್ ಹ್ಯಾಂಡ್ ಕ್ಯಾಮೆರಾದಿಂದ 'ಆರ್.ಕೆ ಸ್ಟೂಡಿಯೋ'ದವರೆಗೆ!
ಸ್ವಂತ ಕಾಲ ಮೇಲೆ ನಿಲ್ಲಲೇಬೇಕೆಂಬ ಅದಮ್ಯ ಛಲವಿದ್ದ ರಮೇಶ್, ತಮ್ಮಲ್ಲಿದ್ದ ಅಲ್ಪಸ್ವಲ್ಪ ಉಳಿತಾಯದ ಹಣವನ್ನು ಹಿಡಿದು ಹೈದರಾಬಾದ್‌ಗೆ ತೆರಳಿ, ಒಂದು ಸೆಕೆಂಡ್ ಹ್ಯಾಂಡ್ (D90) ಕ್ಯಾಮೆರಾ ಖರೀದಿಸಿದರು. ಆ ಒಂದೇ ಒಂದು ಸೆಕೆಂಡ್ ಹ್ಯಾಂಡ್ ಕ್ಯಾಮೆರಾ ಅವರ ಸ್ವತಂತ್ರ ಫೋಟೋಗ್ರಫಿ ಜರ್ನಿಯ ಮೊದಲ ಹೆಜ್ಜೆಯಾಯಿತು.
ಅಲ್ಲಿಂದ ಮುಂದೆ ರಮೇಶ್ ಹಿಂತಿರುಗಿ ನೋಡಲೇ ಇಲ್ಲ. ಪ್ರಾಮಾಣಿಕ ಸೇವೆ, ಗುಣಮಟ್ಟದ ಕೆಲಸ ಮತ್ತು ಜನರ ಮೇಲಿನ ಪ್ರೀತಿಯಿಂದಾಗಿ ಇಂದು ತಮ್ಮ ಸ್ವಗ್ರಾಮ ಕಮಠಾಣಾದಲ್ಲಿ ಸುಸಜ್ಜಿತವಾದ "ಆರ್.ಕೆ ಸ್ಟೂಡಿಯೋ" (RK Studio Kamthana) ಸ್ಥಾಪಿಸಿ ಬೀದರ್ ಭಾಗದಲ್ಲಿ ಅತ್ಯಂತ ಜನಪ್ರಿಯ ಫೋಟೋಗ್ರಾಫರ್ ಆಗಿ ಬೆಳೆದು ನಿಂತಿದ್ದಾರೆ.
'ನನ್ನ ಬದುಕಿಗೆ ನೆರಳಾದ ಫೋಟೋಗ್ರಫಿ'
ಇಂದು ಅತ್ಯಾಧುನಿಕ ಫೋಟೋ ಮತ್ತು ಸಿನಿಮಾಟಿಕ್ ವಿಡಿಯೋ ಕ್ಯಾಮೆರಾಗಳೊಂದಿಗೆ ಅದ್ಭುತ ಕಲಾತ್ಮಕ ಕೆಲಸ ನೀಡುತ್ತಿರುವ ರಮೇಶ್ ಚಾಂಬಾಳೆ, ತಾವಷ್ಟೇ ಬೆಳೆಯದೆ ತಮ್ಮೊಂದಿಗೆ ಹಲವಾರು ಯುವಕರಿಗೆ ಕೆಲಸ ನೀಡಿ ಆಸರೆಯಾಗಿದ್ದಾರೆ. ಪೋಟೋಗ್ರಫಿ ನನ್ನ ಬದುಕಿಗೆ ನೆರಳಾಗಿದೆ. ಇದ್ದದರಲ್ಲೇ ನನ್ನ ಬದುಕು ಉತ್ತಮವಾಗಿ ಸಾಗುತ್ತಿದೆ. ಪೋಟೋಗ್ರಫಿಯೇ ನನ್ನ ಬದುಕಿಗೆ ಆಸರೆಯಾಗಿದೆ ಎನ್ನುತ್ತಿದ್ದಾರೆ ರಮೇಶ್ ಚಾಂಬಾಳೆ.
"ಏನೂ ಇಲ್ಲದ ಸಾಮಾನ್ಯ ಹುಡುಗನಾಗಿದ್ದ ನನ್ನನ್ನು ಈ ಫೋಟೋಗ್ರಫಿ ಕಾಯಕ ಇಂದು ಸಮಾಜದಲ್ಲಿ ಗೌರವಾನ್ವಿತ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಇದು ನನ್ನ ಬದುಕಿಗೆ ಕೇವಲ ವೃತ್ತಿಯಲ್ಲ, ದೈವಿಕ ನೆರಳು. ಒಬ್ಬ ಉತ್ತಮ ವ್ಯಕ್ತಿಯಾಗಿ, ಸಮಾಜಮುಖಿಯಾಗಿ ಬದುಕಲು ನನಗೆ ಶಕ್ತಿ ತುಂಬಿದ್ದೇ ಈ ಕ್ಯಾಮೆರಾ," ಎಂದು ರಮೇಶ್ ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
ನಾಡಿನ ಎಲ್ಲಾ ಛಾಯಾಗ್ರಾಹಕರಿಗೆ ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು!
ಕಾರ್ ಮೆಕ್ಯಾನಿಕ್ ಆಗಿದ್ದ ಕೈಗಳು ಇಂದು ಸಾವಿರಾರು ಕುಟುಂಬಗಳ ಮದುವೆ, ಮುಂಜಿ, ಸಂಭ್ರಮಗಳನ್ನು ಅದ್ಭುತ ನೆನಪುಗಳನ್ನಾಗಿ ಕಟ್ಟಿಡುವ 'ಕಲಾತ್ಮಕ ಕೈಗಳಾಗಿ' ಬದಲಾಗಿವೆ.
ಕಾಯಕವೇ ಕೈಲಾಸ ಎಂದು ನಂಬಿ, ೧೬ ವರ್ಷಗಳ ಕಾಲ ನಿರಂತರ ಶ್ರಮವಹಿಸಿ ಯಶಸ್ಸು ಕಂಡ ನಮ್ಮ ಹೆಮ್ಮೆಯ ಸ್ನೇಹಿತ ರಮೇಶ್ ಚಾಂಬಾಳೆ (ಆರ್.ಕೆ ಸ್ಟೂಡಿಯೋ ಕಮಠಾಣಾ) ಅವರಿಗೆ ಮತ್ತು ನಾಡಿನ ಎಲ್ಲಾ ಛಾಯಾಗ್ರಾಹಕರಿಗೆ ವಿಶ್ವ ಛಾಯಾಗ್ರಹಣ ದಿನದ (World Photography Day) ಶುಭಾಶಯಗಳು.
ನಿಮ್ಮೆಲ್ಲರ ಕಲಾ ಪಯಣ ಹೀಗೇ ನಿರಂತರವಾಗಿ ಸಾಗಲಿ, ನಿಮ್ಮ ಸಂಸ್ಥೆಗಳು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಈ ಲೇಖನದ ಮೂಲಕ ನಾಡಿನ ಎಲ್ಲಾ ಛಾಯಾಗ್ರಾಹಕರಿಗೆ ಶುಭ ಕೋರುವೆ.
ಇಂದ:-
ಅಯ್ಯಣ್ಣ ನಾಯಕ ಪಾಮನಕಲ್ಲೂರು
(ವಕೀಲರು ಮತ್ತು ಬರಹಗಾರರು)
#ಅಯ್ಯಣ್ಣ_ನಾಯಕ_ಪಾಮನಕಲ್ಲೂರು #ರಮೇಶ್_ಕಮಠಾಣಾ #Ayyanna_Nayaka_Pamanakallur #Ramesh_Kamathana #RKStudio #Bidar #BidarNews #PhotoStudio #Studio

No comments:

Post a Comment