Monday, November 25, 2019

ಪಾಮನಕಲ್ಲೂರು: ಗ್ರಾಮದ ಸಮಸ್ಯೆ ಪರಿಹಾರಕ್ಕೆ 'ಕರವೇ'ಯಿಂದ ಮನವಿ

ಪಾಮನಕಲ್ಲೂರು (ನ.25): ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿನ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ ಶೆಟ್ಟಿ ಬಣ) ಕಾರ್ಯಕರ್ತರು ಸೋಮವಾರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವನ್ನು ಮರು ಪ್ರಾರಂಭ ಮಾಡುವುದು, ಊರಲ್ಲಿ ಪ್ರತಿದಿನ ನೀರು ಬಿಡಲು ಕ್ರಮಕೈಗೊಳ್ಳುವುದು, ಊರಿನ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಪ್ಲಾಗಿಂಗ್ ಮಾಡುವುದು, ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾದ ಅಂಗನವಾಡಿ ಕೇಂದ್ರ (ಎಸ್ಸಿ ವಾರ್ಡ್) ಕ್ಕೆ ಕೈಪಂಪ್ ಅಳವಡಿಸುವುದು.
ಊರಿನ ರಸ್ತೆಯ ತಗ್ಗು ಗುಂಡಿಗಳನ್ನು ಮುಚ್ಚುವುದು, ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಒದಗಿಸುವುದು, ಗ್ರಾಮದಲ್ಲಿನ ಎಲ್ಲಾ ವಿದ್ಯುತ್ ಕಂಬಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸುವುದು, ಗ್ರಾಮಸ್ಥರಿಗೆ ಉದ್ಯೋಗ ಖಾರ್ತಿ ಕೆಲಸ ನೀಡುವುದು, ಗ್ರಾಮದ ಕಾನ್ಯಾಳ್ ಭಾಗಕ್ಕೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವುದು  ಸೇರಿದಂತೆ ಗ್ರಾಮದ ವಿವಿಧ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವಂತೆ ಕರವೇ ಮುಖಂಡರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಮರೇಶಪ್ಪರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಶಿವಾನಂದ ಹೂಗಾರ, ರಮೇಶ್ ಗಂಟ್ಲಿ, ಲಕ್ಷ್ಮಣ ಚೌಡ್ಲಿ, ಮಲ್ಲಪ್ಪ ಹಿರೇಮನೆ, ಯಲ್ಲಪ್ಪ, ನಾಗಪ್ಪ ಹಡಪದ, ಗುಡದಯ್ಯ ಗಡ್ಡಿಮನೆ, ಶಿವಪ್ಪ, ಬಸವರಾಜ್ ಪಲ್ಲೇದ್ ಸೇರಿದಂತೆ ಅನೇಕರಿದ್ದರು. 
ಪಾಮನಕಲ್ಲೂರು ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ಕೃಷ್ಣ ಎಂಬುವವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿದ್ದಾಗ ಕೂಡ ಕರವೇ ಮುಖಂಡರು, ಗ್ರಾಮಸ್ಥರು ಅನೇಕ ಬಾರಿ ಗ್ರಾಮದ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದ್ದರು. ಈಗ ಕೃಷ್ಣ ಎಂಬುವವರು ವರ್ಗಾವಣೆಯಾಗಿ ಆ ಸ್ಥಾನಕ್ಕೆ ಅಮರೇಶಪ್ಪ ಎಂಬುವವರು ಬಂದಿದ್ದಾರೆ. ಕೃಷ್ಣ ಸರ್ ಇದ್ದಾಗ ನಾವು ಅನೇಕ ಸಾರಿ ಮನವಿ ಪತ್ರ ಸಲ್ಲಿಸಿದ್ವಿ ಆದ್ರೆ ನಮ್ಮೂರಿನ ಸಮಸ್ಯೆಗಳು ಮಾತ್ರ ಪರಿಹಾರವಾಗಲಿಲ್ಲ. ಈಗ ಅಮರೇಶಪ್ಪ ಎಂಬುವವರು ಬಂದಿದ್ದಾರೆ ಅವರಾದ್ರು ನಮ್ಮೂರಿನ ಸಮಸ್ಯೆಗಳನ್ನು ಪರಿಹಾರ ಮಾಡ್ತಾರೋ ಇಲ್ವೋ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸವೆನ್ನಬಹುದಾಗಿದೆ.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Saturday, November 23, 2019

ಪಾಮನಕಲ್ಲೂರು: ಕುಷ್ಠ, ಕ್ಷಯರೋಗದ ಕುರಿತು ಜಾಗೃತಿ ಅಭಿಯಾನ

ಪಾಮನಕಲ್ಲೂರು ನ.23: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಶನಿವಾರ 'ಕುಷ್ಠ ರೋಗ ಹಾಗೂ ಕ್ಷಯರೋಗ'ದ ಕುರಿತು ಜಾಗೃತಿ ಅಭಿಯಾನ ನಡೆಯಿತು.
ಗ್ರಾಮದ ಮಾರೆಮ್ಮನಗುಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು & ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ವಿವಿಧ ಬೀದಿಗಳ ಮೂಲಕ ಸಂಚರಿಸಿ ಗ್ರಾಮಸ್ಥರಿಗೆ 'ಕುಷ್ಠ ರೋಗ ಹಾಗೂ ಕ್ಷಯರೋಗ' ತಡೆಯ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಗಣಪತಿ ನಾಯ್ಕ, ಶಿಕ್ಷಕಿಯರಾದ ಪರಿನಾಭಿ, ಈರಮ್ಮ, ರೇಣುಕಾ, ಕಿರಿಯ ಆರೋಗ್ಯ ಸಹಾಯಕಿ ಶಶಿಕಲಾ, ಕಿರಿಯ ಆರೋಗ್ಯ ಸಹಾಯಕ ಸಂಶುದ್ಧಿನ್, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು ಇದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Friday, November 15, 2019

ಪಾಮನಕಲ್ಲೂರು: ಕನಕದಾಸರ ನಾಮಫಲಕ ಅನಾವರಣ

ಪಾಮನಕಲ್ಲೂರು (ನ.15): ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ದಾಸಶ್ರೇಷ್ಟ ಕನಕದಾಸ ಜಯಂತೋತ್ಸವದ ಅಂಗವಾಗಿ ಕನಕದಾಸರ ನೂತನ ನಾಮಫಲಕ ಅನಾವರಣಗೊಳಿಸಲಾಯಿತು. ಗ್ರಾಮದೇವತೆ ದುರ್ಗಾದೇವಿ ದೇವಸ್ಥಾನದ ಆವರಣದಿಂದ ಆರಂಭವಾದ ಕನಕದಾಸರ ಭಾವಚಿತ್ರ ಮೆರವಣಿಗೆ ಬಸ್ಟಾಂಡ್ ಸರ್ಕಲ್ ವರೆಗೂ ನಡೆಯಿತು. ಈ ವೇಳೆ ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕನಕದಾಸರ ನೂತನ ನಾಮಫಲಕ (ಬೋರ್ಡ್) ಅನಾವರಣ ಕಾರ್ಯಕ್ರಮದಲ್ಲಿ ವಿವಿಧ ಜಾತಿ, ಜನಾಂಗ, ವಿವಿಧ ಧರ್ಮದ ನೂರಾರು ಜನರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ತಂದರು. ಅಲ್ಲದೇ ಗ್ರಾಮದಲ್ಲಿರುವ ಅಂಬೇಡ್ಕರ್, ವಾಲ್ಮೀಕಿ, ಅಂಬಿಗರ ಚೌಡಯ್ಯ, ಒಳಬಳ್ಳಾರಿ ಚನ್ನಬಸವೇಶ್ವರ ತಾತ ಸೇರಿದಂತೆ ವಿವಿಧ ನಾಮಫಲಕಗಳಿಗೂ ಪೂಜೆ ಸಲ್ಲಿಸಿದ್ದು‌ ವಿಶೇಷವಾಗಿತ್ತು. ಗ್ರಾಮದಲ್ಲಿ ನಡೆಯುವ ಪ್ರತಿಯೊಂದು ಜಯಂತೋತ್ಸವ ಸಂದರ್ಭದಲ್ಲಿ ಇದೇ ರೀತಿ ಎಲ್ಲಾ ನಾಮಫಲಕಗಳಿಗೂ ಪೂಜೆ ಸಲ್ಲಿಸಲಾಗುತ್ತಿದ್ದು, ಇದು ಭಾವೈಕ್ಯತೆಯ ಸಂಕೇತವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಕಾರ್ಯಕ್ರಮದಲ್ಲಿ ಆದಯ್ಯ, ನಿಂಗಪ್ಪ ಮಾಸ್ತರ, ಗ್ರಾಮ ಪಂಚಾಯ್ತಿ ಸದಸ್ಯ ಅಯ್ಯಣ್ಣ, ಅಯ್ಯಪ್ಪ ಅಮರಪ್ಪ, ದುರುಗಪ್ಪ, ಬಸವರಾಜ ರೋಡಲಬಂಡಾ, ಬಸವರಾಜ, ಬಸಣ್ಣ, ಶಿವು ವಾಟರ್ ಮ್ಯಾನ್, ಮಾಳಪ್ಪ, ಮಾಂಕಾಳೆಪ್ಪ, ಮಲ್ಲಿಕಾರ್ಜುನ ನಾಲ್ವಾರಕರ್, ಅಮರಯ್ಯ ಸ್ವಾಮಿ ಸೇರಿದಂತೆ ಹಾಲುಮತ ಕುರುಬ ಸಮುದಾಯದ ಮುಖಂಡರು, ವಿವಿಧ ಜಾತಿ, ಧರ್ಮದ ಮುಖಂಡರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Tuesday, November 12, 2019

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರ: ವಿವಿಧ ಮುಖಂಡರೊಂದಿಗೆ ಚರ್ಚೆ

ದೊರೆ ನ್ಯೂಸ್ ಕನ್ನಡ: ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ  ರಚಿಸಲಾದ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗವನ್ನು  ಪರಿಶಿಷ್ಟ ಪಂಗಡ ಜನಾಂಗದ ತಜ್ಞರ ತಂಡ   ಭೇಟಿಯಾಗಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿತು. 
ನಿಯೋಗದ ಕಛೇರಿಗೆ ಭೇಟಿ ನೀಡಿದ ತಜ್ಞರು, ಸ್ವಾತಂತ್ರ್ಯ ಪೂರ್ವದಲ್ಲಿ ಬುಡಕಟ್ಟುಗಳ ಬೆಳವಣಿಗೆ, ಈ ಸಮುದಾಯದ ಮೀಸಲಾತಿ ಸಂಬಂಧ ಕೇಂದ್ರ ರಾಜ್ಯ ಸರ್ಕಾರದ ಆದೇಶಗಳು, ತಾರತಮ್ಯಗಳ ಕುರಿತು ಅತ್ಯಮೂಲ್ಯವಾದ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದರು. ನಿಯೋಗದ ಪ್ರತಿನಿಧಿಗಳ ವಿಚಾರ ಮಂಡನೆ ಅದ್ಬುತವಾಗಿತ್ತು. ಮತ್ತೆರಡು ಸಲ ಆಯೋಗದ ಎದುರು ದಾಖಲೆಗಳನ್ನು ಸಲ್ಲಿಸಲು ಈ ನಿಯೋಗಕ್ಕೆ ಅವಕಾಶ ಸಿಗಲಿದ್ದು, ಈ ನಿಯೋಗದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಿವಪ್ಪ, ನಿವೃತ್ತ ಕೆಎಎಸ್ ಅಧಿಕಾರಿ ಮೃತ್ಯುಂಜಯ, ನಿವೃತ್ತ ನ್ಯಾಯಾಧೀಶ ವೆಂಕಟಪ್ಪ ನಾಯಕ, ಮಲ್ಲೇಶಪ್ಪ ನಾಯಕ ಇತರರು ಇದ್ದರು. 
ಈ ಸಂದರ್ಭದಲ್ಲಿ ಆಯೋಗದ ಕಾರ್ಯದರ್ಶಿ ಮುಲ್ಲಾ ಸಾಹೇಬ್, ವಕೀಲರಾದ ಅನಂತನಾಯಕ, ಡಾ ಟಿ.ಆರ್ ಚಂದ್ರಶೇಖರ, ರಾಜಶೇಖರ, ವಾಲ್ಮೀಕಿ ನಿಗಮದ ಎಂಡಿ ಹನುಮ ನರಸಯ್ಯ ಸೇರಿದಂತೆ ಅನೇಕರು ಇದ್ದರು.