ಪಾಮನಕಲ್ಲೂರು (ನ.25): ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿನ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ ಶೆಟ್ಟಿ ಬಣ) ಕಾರ್ಯಕರ್ತರು ಸೋಮವಾರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವನ್ನು ಮರು ಪ್ರಾರಂಭ ಮಾಡುವುದು, ಊರಲ್ಲಿ ಪ್ರತಿದಿನ ನೀರು ಬಿಡಲು ಕ್ರಮಕೈಗೊಳ್ಳುವುದು, ಊರಿನ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಪ್ಲಾಗಿಂಗ್ ಮಾಡುವುದು, ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾದ ಅಂಗನವಾಡಿ ಕೇಂದ್ರ (ಎಸ್ಸಿ ವಾರ್ಡ್) ಕ್ಕೆ ಕೈಪಂಪ್ ಅಳವಡಿಸುವುದು.
ಊರಿನ ರಸ್ತೆಯ ತಗ್ಗು ಗುಂಡಿಗಳನ್ನು ಮುಚ್ಚುವುದು, ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಒದಗಿಸುವುದು, ಗ್ರಾಮದಲ್ಲಿನ ಎಲ್ಲಾ ವಿದ್ಯುತ್ ಕಂಬಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸುವುದು, ಗ್ರಾಮಸ್ಥರಿಗೆ ಉದ್ಯೋಗ ಖಾರ್ತಿ ಕೆಲಸ ನೀಡುವುದು, ಗ್ರಾಮದ ಕಾನ್ಯಾಳ್ ಭಾಗಕ್ಕೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಗ್ರಾಮದ ವಿವಿಧ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವಂತೆ ಕರವೇ ಮುಖಂಡರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಮರೇಶಪ್ಪರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಶಿವಾನಂದ ಹೂಗಾರ, ರಮೇಶ್ ಗಂಟ್ಲಿ, ಲಕ್ಷ್ಮಣ ಚೌಡ್ಲಿ, ಮಲ್ಲಪ್ಪ ಹಿರೇಮನೆ, ಯಲ್ಲಪ್ಪ, ನಾಗಪ್ಪ ಹಡಪದ, ಗುಡದಯ್ಯ ಗಡ್ಡಿಮನೆ, ಶಿವಪ್ಪ, ಬಸವರಾಜ್ ಪಲ್ಲೇದ್ ಸೇರಿದಂತೆ ಅನೇಕರಿದ್ದರು.
ಪಾಮನಕಲ್ಲೂರು ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ಕೃಷ್ಣ ಎಂಬುವವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿದ್ದಾಗ ಕೂಡ ಕರವೇ ಮುಖಂಡರು, ಗ್ರಾಮಸ್ಥರು ಅನೇಕ ಬಾರಿ ಗ್ರಾಮದ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದ್ದರು. ಈಗ ಕೃಷ್ಣ ಎಂಬುವವರು ವರ್ಗಾವಣೆಯಾಗಿ ಆ ಸ್ಥಾನಕ್ಕೆ ಅಮರೇಶಪ್ಪ ಎಂಬುವವರು ಬಂದಿದ್ದಾರೆ. ಕೃಷ್ಣ ಸರ್ ಇದ್ದಾಗ ನಾವು ಅನೇಕ ಸಾರಿ ಮನವಿ ಪತ್ರ ಸಲ್ಲಿಸಿದ್ವಿ ಆದ್ರೆ ನಮ್ಮೂರಿನ ಸಮಸ್ಯೆಗಳು ಮಾತ್ರ ಪರಿಹಾರವಾಗಲಿಲ್ಲ. ಈಗ ಅಮರೇಶಪ್ಪ ಎಂಬುವವರು ಬಂದಿದ್ದಾರೆ ಅವರಾದ್ರು ನಮ್ಮೂರಿನ ಸಮಸ್ಯೆಗಳನ್ನು ಪರಿಹಾರ ಮಾಡ್ತಾರೋ ಇಲ್ವೋ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸವೆನ್ನಬಹುದಾಗಿದೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )
No comments:
Post a Comment