Thursday, December 26, 2019

ಅಬಕಾರಿ ಇನ್ಸ್‌ಪೆಕ್ಟರ್ ಯಲಗಟ್ಟಾದ ತಿರುಪತಿ ವಿ ಪಾಟೀಲ್ ಈಗ ತಹಶಿಲ್ದಾರ

ನೂತನ ತಹಶಿಲ್ದಾರ ತಿರುಪತಿ ವಿ ಪಾಟೀಲ್ ರಿಗೆ ದಕ್ಷ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ರಿಂದ ಸನ್ಮಾನ. (ಸಂಗ್ರಹ ಚಿತ್ರ)

ಸಾಧಿಸುವ ಛಲವಿದ್ದವರು ಏನನ್ನಾದರೂ ಸಾಧಿಸುತ್ತಾರೆ ಎಂಬ ಮಾತನ್ನು ಅನೇಕರು ದೃಢಪಡಿಸಿದ್ದಾರೆ. ಬಡತನ, ಹಣಕಾಸಿನ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದರು ಅವುಗಳನ್ನು ಮೆಟ್ಟಿನಿಂತು ಸಾಧಿಸಿದವರು ಅನೇಕರಿದ್ದಾರೆ. ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡವರು ಜೀವನದಲ್ಲಿ ಒಂದಲ್ಲಾ ಒಂದು ದೊಡ್ಡ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. 
ಅಂಥವರ ಸಾಲಿನಲ್ಲಿ ಹಿಂದುಳಿದ ಜಿಲ್ಲೆ, ಬಿಸಿಲನಾಡು, ಬರದನಾಡು ಅನ್ನೋ ಹಣೆಪಟ್ಟಿ ಹೊಂದಿರುವ ರಾಯಚೂರು ಜಿಲ್ಲೆಯವರು ಅನೇಕರಿದ್ದಾರೆ. ಈ ಜಿಲ್ಲೆಯ ಅದೆಷ್ಟೋ ಜನರು ವಿವಿಧ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. 
ತಿರುಪತಿ ವಿ ಪಾಟೀಲ್
ಹೌದು, ಆ ಸಾಲಿಗೆ ಇದೀಗ ಚಿನ್ನದ ನಾಡು ಲಿಂಗಸುಗೂರು ತಾಲೂಕಿನ ಯಲಗಟ್ಟಾ ಗ್ರಾಮದ ವಡಿಕೆಪ್ಪ - ದೇವಮ್ಮ ದಂಪತಿಗಳ ಹಿರಿಯ ಪುತ್ರ ತಿರುಪತಿ ವಿ ಪಾಟೀಲ್ ಸೇರಿದ್ದಾರೆ. ಅಂದ ಹಾಗೆ ವಡಿಕೆಪ್ಪ - ದೇವಮ್ಮ ದಂಪತಿಗಳಿಗೆ ಸ್ವಂತ ಜಮೀನು ಇಲ್ಲ. ಇವರು ಸ್ವಗ್ರಾಮ ಯಲಗಟ್ಟಾದಲ್ಲೇ ಬೇರೆಯವರ ಜಮೀನುಗಳಲ್ಲಿ ಕೂಲಿ - ನಾಲಿ ಮಾಡುತ್ತಾ ಕಷ್ಟಪಟ್ಟು ಮಕ್ಕಳನ್ನು ಬೆಳಸಿದ್ದಾರೆ. ತಂದೆ - ತಾಯಿ ಹಾಗೂ ಕುಟುಂಬದ ಕಷ್ಟಗಳನ್ನು ಕಣ್ಣಾರೇ ಕಂಡ ಮಕ್ಕಳು ಜೀವನದಲ್ಲಿ ಏನನ್ನಾದರು ಸಾಧಿಸಬೇಕೆಂಬ ಛಲದೊಂದಿಗೆ ಮುನ್ನುಗುತ್ತಿದ್ದಾರೆ. 
ವಡಿಕೆಪ್ಪ - ದೇವಮ್ಮ ದಂಪತಿಗಳಿಗೆ ನಾಲ್ವರು ಮಕ್ಕಳಿದ್ದು, ತಿರುಪತಿ ವಿ ಪಾಟೀಲ್ ಹಿರಿಯ ಮಗ, ತಂದೆ - ತಾಯಿ ಮತ್ತು ಹಿತೈಷಿಗಳ ಆಸೆಯಂತೆ ಇದೀಗ ತಹಶಿಲ್ದಾರ ಆಗಿದ್ದಾರೆ. ಇನ್ನೂ ನಿಂಗಪ್ಪ ಎರಡನೇಯ ಮಗ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂರನೇಯ ಮಗ ಬಸವರಾಜ, ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಒಬ್ಬ ಮಗಳಿದ್ದಾಳೆ.


ತಿರುಪತಿ ವಿ ಪಾಟೀಲ್ ಬೆಳೆದುಬಂದ ಹಾದಿ: 
ತಿರುಪತಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರು ಯಲಗಟ್ಟಾದ ಸರಕಾರಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳಲ್ಲಿ ಮುಗಿಸಿದ್ದಾರೆ. ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಲಿಂಗಸುಗೂರಿನಲ್ಲಿ ಮುಗಿಸಿದ್ದು, ಡಿ.ಎಡ್ ಶಿಕ್ಷಣವನ್ನು ಡೆಕ್ಕನ್ ಶಿಕ್ಷಣ ಸಂಸ್ಥೆ ಕಲಬುರಗಿಯಲ್ಲಿ ಪೂರ್ಣಗೊಳಿಸಿದ್ದಾರೆ. ಪದವಿ ಶಿಕ್ಷಣವನ್ನು  ಎಸ್ಎಮ್ಎಲ್ಬಿ ಕಲಾ ಮಹಾವಿದ್ಯಾಲಯ ಲಿಂಗಸುಗೂರಿನಲ್ಲಿ ಮುಗಿಸಿದ್ದಾರೆ. ಇನ್ನೂ ಎಮ್ಎ ಅರ್ಥಶಾಸ್ತ್ರ ಪದವಿಯನ್ನು ದೂರ ಶಿಕ್ಷಣದ ಮೂಲಕ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಮುಂದುವರಿಸಿದ್ದಾರೆ. 
ಮೂರು ವರ್ಷದ ಪದವಿ ಶಿಕ್ಷಣವನ್ನು ಲಿಂಗಸುಗೂರಿನ  ಡಾ.ಬಿ.ಆರ್ ಅಂಬೇಡ್ಕರ್ ವಸತಿ ನಿಲಯದಲ್ಲಿ ಇದ್ದುಕೊಂಡು ಮುಗಿಸಿದ ಇವರಿಗೆ ಆ ದಿನಗಳಲ್ಲೇ ವಸತಿ ನಿಲಯದ ಮೇಲ್ವಿಚಾರಕರು, ಎಸ್ಎಮ್ಎಲ್ಬಿ ಕಲಾ ಮಹಾವಿದ್ಯಾಲಯದ ಆಡಳಿತ ಅಧಿಕಾರಿಗಳು, ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಕೆಎಎಸ್ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದ್ದರಂತೆ. ಹೀಗೆ ಅನೇಕರ ಸಲಹೆ, ಸಹಕಾರ,  ಪ್ರೋತ್ಸಾಹದಿಂದ ಕೆಎಎಸ್ ಪರೀಕ್ಷೆ ಬರೆದು ತಹಶಿಲ್ದಾರ ಆಗಲು ಸಾಧ್ಯವಾಯಿತು ಎಂದಿದ್ದಾರೆ ನೂತನ ತಹಶಿಲ್ದಾರ ತಿರುಪತಿ ವಿ ಪಾಟೀಲ್.


ಇದುವರೆಗೂ ದೊರೆತ ಸರ್ಕಾರಿ ಹುದ್ದೆಗಳು: 
ತಿರುಪತಿ ಸತತವಾಗಿ ಶ್ರಮಪಟ್ಟು ಓದುವ ಮೂಲಕ ಮೊದಲಿಗೆ ಎಸ್ಡಿಎ ಹುದ್ದೆ ಗಿಟ್ಟಿಸಿಕೊಂಡಿದ್ದರು. ನಂತರ ಎಫ್‌ಡಿಎ, ಕಂದಾಯ ನಿರೀಕ್ಷಕ, ಚೀಪ್ ಆಫೀಸರ್ ಗ್ರೇಡ್ - 2, ಮಾರ್ಕೆಟಿಂಗ್ ಅಸಿಸ್ಟೆಂಟ್, ಅಬಕಾರಿ ನಿರೀಕ್ಷಕ, ವಸತಿ ಶಾಲೆಯ ಶಿಕ್ಷಕ ಹುದ್ದೆಗಳಿಗೂ ಇವರು ಆಯ್ಕೆಯಾಗಿದ್ದರು.
ನಂತರ ಎರಡು ವರ್ಷಗಳ ಕಾಲ ಧಾರವಾಡದ ಹಲವಾರು ಪ್ರತಿಷ್ಠಿತ  ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನಲ್ಲಿ ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ತಿರುಪತಿಗೆ ಎರಡನೆಯ ಪ್ರಯತ್ನದ ಕೆಎಎಸ್ ಪರೀಕ್ಷೆಯಲ್ಲಿ ತಹಶಿಲ್ದಾರ ಹುದ್ದೆ ಒಲಿದು ಬಂದಿದೆ.
2015ರಲ್ಲಿ ಕೆಪಿಎಸ್ಸಿಯಿಂದ ನಡೆದಿದ್ದ ಪರೀಕ್ಷೆಯಲ್ಲಿ ತಿರುಪತಿ 1083 ಅಂಕಗಳನ್ನು ಪಡೆಯುವ ಮೂಲಕ   43ನೇ ರ್ಯಾಂಕ್ ಪಡೆದುಕೊಂಡು ತಹಶಿಲ್ದಾರ ಹುದ್ದೆ ಗಿಟ್ಟಿಸಿಕೊಳ್ಳುವ ಮೂಲಕ ಸಹೋದರ ಶರಣು ಬಾಗೂರು, ಗೆಳೆಯ ಸಿ.ಪಿ ರೆಡ್ಡಿ ಸೇರಿದಂತೆ ಕುಟುಂಬ ವರ್ಗ, ತಾಲೂಕು, ಜಿಲ್ಲೆ, ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಸಾಧನೆ ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಲಿ ಎಂಬುದೇ ನಮ್ಮ ಆಶಯವಾಗಿದೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Tuesday, December 24, 2019

ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ: ಲಿಂಗಸುಗೂರು, ದೇವದುರ್ಗದಲ್ಲಿ ಪೂರ್ವಭಾವಿ ಸಭೆ

ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ವಾಲ್ಮೀಕಿ ನಾಯಕರು.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ  2020ನೇ ಸಾಲಿನಲ್ಲಿ  ನಡೆಯಲಿರುವ‌ ಎರಡನೆಯ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಗುರುಗಳಾದ ಪ್ರಸನ್ನಾನಂದಪುರಿ ಶ್ರೀಗಳ‌ ನೇತೃತ್ವದಲ್ಲಿ ‌ಈಗಾಗಲೇ ರಾಜ್ಯದ ಅನೇಕ ತಾಲೂಕುಗಳಲ್ಲಿ ಸಭೆ ನಡೆಸಲಾಗಿದ್ದು, ಇಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕುಗಳಲ್ಲಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆ ನಡೆಸಲಾಯಿತು.
ಲಿಂಗಸುಗೂರು: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಇಂದು ನಡೆದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಎರಡನೆಯ ವರ್ಷದ ಮಹರ್ಷಿ ವಾಲ್ಮೀಕಿ  ಜಾತ್ರಾ ಮಹೋತ್ಸವ ಸಮಿತಿಯ ತಾಲೂಕು ಅಧ್ಯಕ್ಷರನ್ನಾಗಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗುಂಡಪ್ಪ ನಾಯಕ ಸರ್ಜಾಪುರ ಅವರನ್ನು ಆಯ್ಕೆ ಮಾಡಲಾಯಿತು.
ಗುಂಡಪ್ಪ ನಾಯಕ ಸರ್ಜಾಪುರರವರಿಗೆ ವಾಲ್ಮೀಕಿ ಶ್ರೀಗಳಿಂದ ಸನ್ಮಾನ.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ಡಿ.ಜಿ ಗುರಿಕಾರ್, ನಂದೇಶ್ ನಾಯಕ,  ಭೀಮಣ್ಣ ನಾಯಕ, ಪಿಡ್ಡನಗೌಡ, ಗಂಗಮ್ಮ, ಹುಲುಗಪ್ಪ ನಾಯಕ ಸೇರಿದಂತೆ ಅನೇಕರಿದ್ದರು.
ದೇವದುರ್ಗದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರಸನ್ನಾನಂದಪುರಿ ಶ್ರೀಗಳೊಂದಿಗೆ ರಾಚಣ್ಣ ನಾಯಕ.
ದೇವದುರ್ಗ: ಇಂದು ಪಟ್ಟಣದ ಐಬಿಯಲ್ಲಿ‌‌ ಎರಡನೆಯ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಸಲಾಯಿತು. ವಾಲ್ಮೀಕಿ ಗುರುಪೀಠದ ಗುರುಗಳಾದ ಪ್ರಸನ್ನಾನಂದಪುರಿ ಶ್ರೀಗಳು ನೇತೃತ್ವ ವಹಿಸಿಕೊಂಡಿದ್ದರು. 

ಸಭೆಯಲ್ಲಿ 2020ನೇ ಸಾಲಿನ ಜಾತ್ರಾ ಮಹೋತ್ಸವ ಸಮಿತಿಯ ದೇವದುರ್ಗ ತಾಲೂಕಿನ ಅಧ್ಯಕ್ಷರನ್ನಾಗಿ ನಿವೃತ್ತ ತಹಶಿಲ್ದಾರ ವೆಂಕನಗೌಡ ಪಾಟೀಲರನ್ನು ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ  2019ನೇ ಸಾಲಿನ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರು, ಮಹಿಳಾ ಸಂಘದ ಅಧ್ಯಕ್ಷರು, ನೌಕರರ ಸಂಘದ ಅಧ್ಯಕ್ಷರು ಸೇರಿದಂತೆ ವಾಲ್ಮೀಕಿ ನಾಯಕ ಸಮಾಜದ ನೂರಾರು ಜನರು ಪಾಲ್ಗೊಂಡಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

ಹಂಪಿ ಕನ್ನಡ ವಿವಿಗೆ ವಾಲ್ಮೀಕಿ ಹೆಸರಿಡಿ: ವಾಲ್ಮೀಕಿ ಶ್ರೀ


ಲಿಂಗಸುಗೂರು ಪಟ್ಟಣದಲ್ಲಿ ಪ್ರಸನ್ನಾನಂದಪುರಿ ಶ್ರೀಗಳು ಮಾತನಾಡಿದರು. ಗೋಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನಂದ ಶ್ರೀಗಳು ಇದ್ದರು.
ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಬೇಕೆಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಗುರುಗಳಾದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಮಾತನಾಡಿದ ಅವರು, ರಾಮಾಯಣದ ಕುರುಹುಗಳ ಅಭಿವೃದ್ಧಿಯ ದೃಷ್ಟಿಯಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಬೇಕು. ವಾಲ್ಮೀಕಿ ನಾಯಕ ಸಮಾಜ ಸೇರಿದಂತೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 7.5% ಕ್ಕೆ ಹೆಚ್ಚಿಸಬೇಕು. ಎಸ್ಟಿ ಹೆಸರಿನ ನಕಲಿ ಜಾತಿ ಪ್ರಮಾಣ ಪತ್ರ ತಡೆಯಬೇಕು.
ವಾಲ್ಮೀಕಿ ನಾಯಕ ಸಮಾಜ ಸೇರಿದಂತೆ ಪರಿಶಿಷ್ಟ ಪಂಗಡಕ್ಕಾಗಿ ಪ್ರತ್ಯೇಕ ಸಚಿವಾಲಯ ರಚನೆಯಾಗಬೇಕು. ರಾಮಮಂದಿರದಲ್ಲಿ ಆದಿ ಕವಿ ವಾಲ್ಮೀಕಿ ಮಂದಿರ ನಿರ್ಮಿಸಬೇಕೆಂಬ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಬೇಕೆಂದು ಪ್ರಸನ್ನಾನಂದಪುರಿ ಶ್ರೀಗಳು ಕರೆ ನೀಡಿದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Tuesday, December 17, 2019

'ಇಂದಿರಾ ಕ್ಯಾಂಟೀನ್' ಇನ್ನುಮುಂದೆ 'ಶ್ರೀ ಮಹರ್ಷಿ ವಾಲ್ಮೀಕಿ ಅನ್ನ ಕುಟೀರ'..!?


ದೊರೆ ನ್ಯೂಸ್ ಕನ್ನಡ ವಿಶೇಷ ವರದಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಚಿಸಲಾಗಿದ್ದ ಇಂದಿರಾ ಕ್ಯಾಂಟೀನ್ ಗಳು ಮೊದಲಿಗೆ ಬೆಂಗಳೂರು ಮಹಾನಗರಕ್ಕೆ ಸೀಮಿತವಾಗಿದ್ದವು. ನಂತರ ಅವುಗಳ ವಿಸ್ತರಣೆ ಮಾಡುವ ಮೂಲಕ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭ ಮಾಡಲಾಗಿತ್ತು. ನಂತರದ ದಿನಗಳಲಿ ಇಂದಿರಾ ಕ್ಯಾಂಟೀನ್ ನ ಹೆಸರು ಬದಲಾಯಿಸಲಾಗುತ್ತದೆ ಎಂಬ ಮಾತುಗಳು ಆಗಾಗ ಕೇಳಿಬಂದಿದ್ದವು ಇದೀಗ ಆ ಮಾತು ನಿಜವಾಗುವ ಲಕ್ಷಣಗಳು ಕಾಣಿಸಿಕೊಂಡಿವೆ. 
ಸಮ್ಮಿಶ್ರ ಸರ್ಕಾರದ ಪತನದ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಸರ್ಕಾರ ರಚನೆಯಾದ ನಂತರ‌ ಇಂದಿರಾ ಕ್ಯಾಂಟೀನ್ ರದ್ದು ಮಾಡ್ತಾರೆ ಅನ್ನೋ ಮಾತುಗಳು ಮೊದಮೊದಲು ಕೇಳಿಬಂದಿದ್ದವು. ಅನೇಕರು ವಿರೋಧ ವ್ಯಕ್ತಪಡಿಸಿದ ಬಳಿಕ ಇಂದಿರಾ ಕ್ಯಾಂಟೀನ್ ರದ್ದು ಮಾಡುವ ಬದಲಿಗೆ ಹೆಸರು ಬದಲು ಮಾಡಲು ಬಿಜೆಪಿ ಸರ್ಕಾರ ಮುಂದಾದಂತೆ ಕಂಡುಬಂದಿದೆ. 
ಈಗಾಗಲೇ ಬಿಜೆಪಿ ಶಾಸಕ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಸರ್ಕಾರಕ್ಕೆ ಈ ಕುರಿತು ಪತ್ರ ಬರೆದು ಮನವಿ ಮಾಡಿದ್ದಾರೆ. ಸಚಿವ ಆರ್.ಅಶೋಕ್ ರವರಿಗೆ ಬರೆದ ಪತ್ರದಲ್ಲಿ ‌ನರಸಿಂಹ ನಾಯಕ 'ಇಂದಿರಾ ಕ್ಯಾಂಟೀನ್' ಹೆಸರು ಬದಲಿಸಿ 'ಶ್ರೀ ಮಹರ್ಷಿ ವಾಲ್ಮೀಕಿ ಅನ್ನ ಕುಟೀರ' ಎಂದು ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಬೆಂಗಳೂರು ನಗರವನ್ನು ಹೊರತುಪಡಿಸಿ ಹೆಸರು ಬದಲಿಸುವಂತೆ ಶಾಸಕ ನರಸಿಂಹ ನಾಯಕ ಮನವಿ ಮಾಡಿರುವುದು ವಿವಿಧ ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ.
ಇಂದಿರಾ ಗಾಂಧಿ ಒಂದು ಪಕ್ಷಕ್ಕೆ ಸೀಮಿತವಾದವರಾಗುತ್ತಾರೆ. ಅವರ ಹೆಸರಿನ ಕ್ಯಾಂಟೀನ್ ಅನ್ನು  ಶ್ರೀ ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಅಂತ ಮಾಡುವ ಮೂಲಕ ರಾಮಾಯಣ ಬರೆದ ಮಹಾತ್ಮರ ಹೆಸರು ಇಡುವಂತೆ ನರಸಿಂಹ ನಾಯಕ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 
ಈ ಕುರಿತು ಸಚಿವ ಆರ್.ಅಶೋಕ ಕೂಡ ಪ್ರತಿಕ್ರಿಯೆ ನೀಡಿದ್ದು, ಹೆಸರು ಬದಲಾವಣೆಯ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ. ಇನ್ನೂ ಕ್ಯಾಂಟೀನ್ ಗೆ ಹೆಸರಿಡುವ ಮೊದಲು ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಎಂಬುದು ವಾಲ್ಮೀಕಿ ನಾಯಕ ಸಮಾಜದ ಬಹುತೇಕರ ವಾದವಾಗಿದೆ. ಹೆಸರು ಬದಲಾವಣೆಯ ಈ ಪ್ರಸ್ತಾವ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾಯ್ದುನೋಡಬೇಕಿದೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Monday, December 16, 2019

ಮುಖ್ಯಮಂತ್ರಿ ಬಿಎಸ್ವೈ ಹೇಳಿಕೆ ಖಂಡನಾರ್ಹ: ಡಿಎಸ್ಪಿ ನಾಯಕ

ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅನೇಕ ಜಾತಿಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ)ಗೆ ಸೇರಿಸುವ ಭರವಸೆ ಕೊಡುತ್ತಿದ್ದಾರೆ. ಈಗಾಗಲೇ ಪರಿವಾರ, ತಳವಾರಗಳನ್ನು ಎಸ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬಿಎಸ್ವೈ ಕೂಡ ಮೀನುಗಾರರನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿದ್ದಾರೆ. ಅಲ್ಲದೇ ಅನೇಕ ಜಾತಿಗಳನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿದ್ದಾರೆ ಇದು ಖಂಡನಾರ್ಹ ಕ್ರಮವಾಗಿದೆ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಯುವಪಡೆಯ ಮಸ್ಕಿ ತಾಲೂಕು ಅಧ್ಯಕ್ಷ  ಡಿಎಸ್ಪಿ (ದುರುಗೇಶ್) ನಾಯಕ ಆರೋಪಿಸಿದ್ದಾರೆ.
ಈ ವಿಚಾರವಾಗಿ ಪತ್ರಿಕಾ ಪ್ರಕಟಣೆ ನೀಡಿದ ಅವರು, ಬಿಎಸ್ ಯಡಿಯೂರಪ್ಪ ಈ ಹಿಂದೆ ಲಿಂಗಸುಗೂರಿನಲ್ಲಿ ನಡೆದಿದ್ದ ವಾಲ್ಮೀಕಿ ನಾಯಕ ಸಮಾವೇಶದಲ್ಲಿ ಮಾತನಾಡಿ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ  ಇಪ್ಪತ್ತನಾಲ್ಕು ತಾಸುಗಳಲ್ಲೇ ಎಸ್ಟಿ ಮೀಸಲಾತಿ ಹೆಚ್ಚಿಸುತ್ತೇನೆ, ವಾಲ್ಮೀಕಿ ನಾಯಕ ಸಮುದಾಯದ ನಾಯಕ ಶ್ರೀರಾಮುಲುರನ್ನು ಡಿಸಿಎಂ ಮಾಡುತ್ತೇನೆ ಎಂಬ ಭರವಸೆ ನೀಡಿದ್ದರು. ಈಗಾಗಲೇ ಸರ್ಕಾರ ಅಧಿಕಾರಕ್ಕೆ ಬಂದು ಅನೇಕ ತಿಂಗಳು ಕಳೆದರು ಮೀಸಲಾತಿ ಹೆಚ್ಚಿಸಿಲ್ಲ. ಬದಲಾಗಿ ಬುಡಕಟ್ಟು ಹಿನ್ನೆಲೆ ಇಲ್ಲದ ಜಾತಿಗಳನ್ನು ಎಸ್ಟಿಗೆ ಸೇರಿಸಲು ಮುಂದಾಗಿರುವುದು ಸಿಎಂ ಬಿಎಸ್ವೈ ವಾಲ್ಮೀಕಿ ನಾಯಕ ಸಮುದಾಯಕ್ಕೆ ಮಾಡುತ್ತಿರುವ ದ್ರೋಹವಾಗಿದೆ. 
ಬಿಎಸ್ವೈ ತಾವು ಕೊಟ್ಟ ಮಾತಿನಂತೆ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಬೇಕು, ಅಲ್ಲದೇ ಎಸ್ಟಿಗೆ ಬೇರೆ ಬೇರೆ ಜಾತಿಗಳನ್ನು ಸೇರಿಸುವ ಮೊದಲು ಕುಲಶಾಸ್ತ್ರ ಅಧ್ಯಯನ ಮಾಡಿಸಬೇಕು, ಬುಡಕಟ್ಟು ಹಿನ್ನೆಲೆಯನ್ನು ಖಚಿತ ಪಡಿಸಿಕೊಳ್ಳಬೇಕು, ಬೇರೆ ಬೇರೆ ಜಾತಿಗಳನ್ನು ಎಸ್ಟಿಗೆ ಸೇರಿಸುವುದಾದರೆ ಆ ಜಾತಿಗಳೊಟ್ಟಿಗೆ ಅವುಗಳ ಮೀಸಲಾತಿಯನ್ನು ಎಸ್ಟಿಗೆ ಸೇರಿಸಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಮತ್ತು ಬಿಎಸ್ವೈಗೆ ವಾಲ್ಮೀಕಿ ನಾಯಕ ಸಮುದಾಯ ತಕ್ಕಪಾಠ ಕಲಿಸಲಿದೆ ಎಂದು ಡಿಎಸ್ಪಿ (ದುರುಗೇಶ್) ನಾಯಕ ಎಚ್ಚರಿಕೆ ನೀಡಿದ್ದಾರೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

ಪಾಮನಕಲ್ಲೂರು: ಛಲವಾದಿ ಮಹಾಸಭಾ ಹೋಬಳಿ ಘಟಕ ರಚನೆ

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಛಲವಾದಿ ಮಹಾಸಭಾದ ಹೋಬಳಿ ಘಟಕವನ್ನು ರಚನೆ ಮಾಡಲಾಗಿದ್ದು, ಪಾಮನಕಲ್ಲೂರಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ  ಹೋಬಳಿ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಆರ್ ಅಮೀನಗಡ, ಉಪಾಧ್ಯಕ್ಷರಾಗಿ ರಾಜಕುಮಾರ ಪಾಮನಕಲ್ಲೂರು, ಸದಸ್ಯರಾಗಿ ಹುಲುಗಪ್ಪ ಚಿಲ್ಕರಾಗಿ, ಅಮರೇಶ್ ಸಿಎಂ, ಅಮರೇಶ ಎನ್.ಜಿ.ಒ, ಹುಸೇನಪ್ಪ ಇರಕಲ್, ಶಿವಪುತ್ರ ಯಕ್ಲ್ಸಪೂರ, ಹುಚ್ಚಪ್ಪ ಬಸ್ಸಾಪುರ ಆಯ್ಕೆಯಾಗಿದ್ದಾರೆ. 
ನೂತನ ಪದಾಧಿಕಾರಿಗಳನ್ನು ಛಲವಾದಿ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ನಾಗಲಿಂಗಪ್ಪ ಛಲವಾದಿ, ಮೌನೇಶ ಅಮೀನಗಡ, ಸುರೇಶ್ ಬಸ್ಸಾಪುರು, ಮಲ್ಲಪ್ಪ ಗೋನಾಳ ಸೇರಿದಂತೆ ಅನೇಕರು ಇದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Tuesday, December 10, 2019

ಸರಕಾರಿ ಪ್ರಥಮ ದರ್ಜೆ ಕಾಲೇಜಿನ 'ಪವಿತ್ರಾ' ಗುವಿಕದ ವಾಲಿಬಾಲ್ ತಂಡಕ್ಕೆ ನಾಯಕಿ

ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಿಳೆಯರ ವಾಲಿಬಾಲ್ ತಂಡಕ್ಕೆ ರಾಯಚೂರು ಜಿಲ್ಲೆ ಲಿಂಗಸುಗೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪವಿತ್ರಾ ತಂದೆ ಆದಪ್ಪ ಆಯ್ಕೆಯಾಗಿದ್ದಾಳೆ. ಈಕೆ ಸತತ ಮೂರು ವರ್ಷ ವಿಶ್ವವಿದ್ಯಾಲಯದ ತಂಡಕ್ಕೆ ಆಯ್ಕೆಯಾಗುವದರ ಜೊತೆಗೆ ಈ ವರ್ಷ ಆ ತಂಡದ ನಾಯಕಿ (ಕ್ಯಾಪ್ಟನ್)ಯಾಗಿದ್ದಾಳೆ.
ತಮಿಳುನಾಡಿನ ಚನೈನಲ್ಲಿರುವ ಎಸ್.ಆರ್.ಎಮ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ತಂಡವನ್ನು ಪವಿತ್ರಾ ಪ್ರತಿನಿಧಿಸಲಿದ್ದಾಳೆ. ಈ ವಿದ್ಯಾರ್ಥಿನಿಯು ಕಾಲೇಜಿಗೆ ಹಾಗೂ ರಾಯಚೂರು ಜಿಲ್ಲೆಗೆ ಕೀರ್ತಿತಂದಿದ್ದಾಳೆ.
ಈಕೆಯ ಸಾಧನೆಯನ್ನು  ಶಾಸಕರು ಹಾಗೂ ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಡಿ.ಎಸ್ ಹೂಲಗೇರಿ, ಪ್ರಾಚಾರ್ಯರಾದ ಡಾ.ಮಹಾಂತಗೌಡ ಪಾಟೀಲ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶಿವಾನಂದ ನರಹಟ್ಟಿ ಶ್ಲಾಘಿಸಿದ್ದಾರೆ. ಇನ್ನೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಅಭಿನಂದಿಸಿ ಅಂತರ ವಿಶ್ವವಿದ್ಯಾಲಯಗಳ ಪದ್ಯಾವಳಿಯಲ್ಲಿ ಜಯಗಳಿಸಲೆಂದು ಶುಭಹಾರೈಸಿದ್ದಾರೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )