Thursday, December 26, 2019

ಅಬಕಾರಿ ಇನ್ಸ್‌ಪೆಕ್ಟರ್ ಯಲಗಟ್ಟಾದ ತಿರುಪತಿ ವಿ ಪಾಟೀಲ್ ಈಗ ತಹಶಿಲ್ದಾರ

ನೂತನ ತಹಶಿಲ್ದಾರ ತಿರುಪತಿ ವಿ ಪಾಟೀಲ್ ರಿಗೆ ದಕ್ಷ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ರಿಂದ ಸನ್ಮಾನ. (ಸಂಗ್ರಹ ಚಿತ್ರ)

ಸಾಧಿಸುವ ಛಲವಿದ್ದವರು ಏನನ್ನಾದರೂ ಸಾಧಿಸುತ್ತಾರೆ ಎಂಬ ಮಾತನ್ನು ಅನೇಕರು ದೃಢಪಡಿಸಿದ್ದಾರೆ. ಬಡತನ, ಹಣಕಾಸಿನ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದರು ಅವುಗಳನ್ನು ಮೆಟ್ಟಿನಿಂತು ಸಾಧಿಸಿದವರು ಅನೇಕರಿದ್ದಾರೆ. ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡವರು ಜೀವನದಲ್ಲಿ ಒಂದಲ್ಲಾ ಒಂದು ದೊಡ್ಡ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. 
ಅಂಥವರ ಸಾಲಿನಲ್ಲಿ ಹಿಂದುಳಿದ ಜಿಲ್ಲೆ, ಬಿಸಿಲನಾಡು, ಬರದನಾಡು ಅನ್ನೋ ಹಣೆಪಟ್ಟಿ ಹೊಂದಿರುವ ರಾಯಚೂರು ಜಿಲ್ಲೆಯವರು ಅನೇಕರಿದ್ದಾರೆ. ಈ ಜಿಲ್ಲೆಯ ಅದೆಷ್ಟೋ ಜನರು ವಿವಿಧ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. 
ತಿರುಪತಿ ವಿ ಪಾಟೀಲ್
ಹೌದು, ಆ ಸಾಲಿಗೆ ಇದೀಗ ಚಿನ್ನದ ನಾಡು ಲಿಂಗಸುಗೂರು ತಾಲೂಕಿನ ಯಲಗಟ್ಟಾ ಗ್ರಾಮದ ವಡಿಕೆಪ್ಪ - ದೇವಮ್ಮ ದಂಪತಿಗಳ ಹಿರಿಯ ಪುತ್ರ ತಿರುಪತಿ ವಿ ಪಾಟೀಲ್ ಸೇರಿದ್ದಾರೆ. ಅಂದ ಹಾಗೆ ವಡಿಕೆಪ್ಪ - ದೇವಮ್ಮ ದಂಪತಿಗಳಿಗೆ ಸ್ವಂತ ಜಮೀನು ಇಲ್ಲ. ಇವರು ಸ್ವಗ್ರಾಮ ಯಲಗಟ್ಟಾದಲ್ಲೇ ಬೇರೆಯವರ ಜಮೀನುಗಳಲ್ಲಿ ಕೂಲಿ - ನಾಲಿ ಮಾಡುತ್ತಾ ಕಷ್ಟಪಟ್ಟು ಮಕ್ಕಳನ್ನು ಬೆಳಸಿದ್ದಾರೆ. ತಂದೆ - ತಾಯಿ ಹಾಗೂ ಕುಟುಂಬದ ಕಷ್ಟಗಳನ್ನು ಕಣ್ಣಾರೇ ಕಂಡ ಮಕ್ಕಳು ಜೀವನದಲ್ಲಿ ಏನನ್ನಾದರು ಸಾಧಿಸಬೇಕೆಂಬ ಛಲದೊಂದಿಗೆ ಮುನ್ನುಗುತ್ತಿದ್ದಾರೆ. 
ವಡಿಕೆಪ್ಪ - ದೇವಮ್ಮ ದಂಪತಿಗಳಿಗೆ ನಾಲ್ವರು ಮಕ್ಕಳಿದ್ದು, ತಿರುಪತಿ ವಿ ಪಾಟೀಲ್ ಹಿರಿಯ ಮಗ, ತಂದೆ - ತಾಯಿ ಮತ್ತು ಹಿತೈಷಿಗಳ ಆಸೆಯಂತೆ ಇದೀಗ ತಹಶಿಲ್ದಾರ ಆಗಿದ್ದಾರೆ. ಇನ್ನೂ ನಿಂಗಪ್ಪ ಎರಡನೇಯ ಮಗ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂರನೇಯ ಮಗ ಬಸವರಾಜ, ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಒಬ್ಬ ಮಗಳಿದ್ದಾಳೆ.


ತಿರುಪತಿ ವಿ ಪಾಟೀಲ್ ಬೆಳೆದುಬಂದ ಹಾದಿ: 
ತಿರುಪತಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರು ಯಲಗಟ್ಟಾದ ಸರಕಾರಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳಲ್ಲಿ ಮುಗಿಸಿದ್ದಾರೆ. ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಲಿಂಗಸುಗೂರಿನಲ್ಲಿ ಮುಗಿಸಿದ್ದು, ಡಿ.ಎಡ್ ಶಿಕ್ಷಣವನ್ನು ಡೆಕ್ಕನ್ ಶಿಕ್ಷಣ ಸಂಸ್ಥೆ ಕಲಬುರಗಿಯಲ್ಲಿ ಪೂರ್ಣಗೊಳಿಸಿದ್ದಾರೆ. ಪದವಿ ಶಿಕ್ಷಣವನ್ನು  ಎಸ್ಎಮ್ಎಲ್ಬಿ ಕಲಾ ಮಹಾವಿದ್ಯಾಲಯ ಲಿಂಗಸುಗೂರಿನಲ್ಲಿ ಮುಗಿಸಿದ್ದಾರೆ. ಇನ್ನೂ ಎಮ್ಎ ಅರ್ಥಶಾಸ್ತ್ರ ಪದವಿಯನ್ನು ದೂರ ಶಿಕ್ಷಣದ ಮೂಲಕ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಮುಂದುವರಿಸಿದ್ದಾರೆ. 
ಮೂರು ವರ್ಷದ ಪದವಿ ಶಿಕ್ಷಣವನ್ನು ಲಿಂಗಸುಗೂರಿನ  ಡಾ.ಬಿ.ಆರ್ ಅಂಬೇಡ್ಕರ್ ವಸತಿ ನಿಲಯದಲ್ಲಿ ಇದ್ದುಕೊಂಡು ಮುಗಿಸಿದ ಇವರಿಗೆ ಆ ದಿನಗಳಲ್ಲೇ ವಸತಿ ನಿಲಯದ ಮೇಲ್ವಿಚಾರಕರು, ಎಸ್ಎಮ್ಎಲ್ಬಿ ಕಲಾ ಮಹಾವಿದ್ಯಾಲಯದ ಆಡಳಿತ ಅಧಿಕಾರಿಗಳು, ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಕೆಎಎಸ್ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದ್ದರಂತೆ. ಹೀಗೆ ಅನೇಕರ ಸಲಹೆ, ಸಹಕಾರ,  ಪ್ರೋತ್ಸಾಹದಿಂದ ಕೆಎಎಸ್ ಪರೀಕ್ಷೆ ಬರೆದು ತಹಶಿಲ್ದಾರ ಆಗಲು ಸಾಧ್ಯವಾಯಿತು ಎಂದಿದ್ದಾರೆ ನೂತನ ತಹಶಿಲ್ದಾರ ತಿರುಪತಿ ವಿ ಪಾಟೀಲ್.


ಇದುವರೆಗೂ ದೊರೆತ ಸರ್ಕಾರಿ ಹುದ್ದೆಗಳು: 
ತಿರುಪತಿ ಸತತವಾಗಿ ಶ್ರಮಪಟ್ಟು ಓದುವ ಮೂಲಕ ಮೊದಲಿಗೆ ಎಸ್ಡಿಎ ಹುದ್ದೆ ಗಿಟ್ಟಿಸಿಕೊಂಡಿದ್ದರು. ನಂತರ ಎಫ್‌ಡಿಎ, ಕಂದಾಯ ನಿರೀಕ್ಷಕ, ಚೀಪ್ ಆಫೀಸರ್ ಗ್ರೇಡ್ - 2, ಮಾರ್ಕೆಟಿಂಗ್ ಅಸಿಸ್ಟೆಂಟ್, ಅಬಕಾರಿ ನಿರೀಕ್ಷಕ, ವಸತಿ ಶಾಲೆಯ ಶಿಕ್ಷಕ ಹುದ್ದೆಗಳಿಗೂ ಇವರು ಆಯ್ಕೆಯಾಗಿದ್ದರು.
ನಂತರ ಎರಡು ವರ್ಷಗಳ ಕಾಲ ಧಾರವಾಡದ ಹಲವಾರು ಪ್ರತಿಷ್ಠಿತ  ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನಲ್ಲಿ ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ತಿರುಪತಿಗೆ ಎರಡನೆಯ ಪ್ರಯತ್ನದ ಕೆಎಎಸ್ ಪರೀಕ್ಷೆಯಲ್ಲಿ ತಹಶಿಲ್ದಾರ ಹುದ್ದೆ ಒಲಿದು ಬಂದಿದೆ.
2015ರಲ್ಲಿ ಕೆಪಿಎಸ್ಸಿಯಿಂದ ನಡೆದಿದ್ದ ಪರೀಕ್ಷೆಯಲ್ಲಿ ತಿರುಪತಿ 1083 ಅಂಕಗಳನ್ನು ಪಡೆಯುವ ಮೂಲಕ   43ನೇ ರ್ಯಾಂಕ್ ಪಡೆದುಕೊಂಡು ತಹಶಿಲ್ದಾರ ಹುದ್ದೆ ಗಿಟ್ಟಿಸಿಕೊಳ್ಳುವ ಮೂಲಕ ಸಹೋದರ ಶರಣು ಬಾಗೂರು, ಗೆಳೆಯ ಸಿ.ಪಿ ರೆಡ್ಡಿ ಸೇರಿದಂತೆ ಕುಟುಂಬ ವರ್ಗ, ತಾಲೂಕು, ಜಿಲ್ಲೆ, ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಸಾಧನೆ ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಲಿ ಎಂಬುದೇ ನಮ್ಮ ಆಶಯವಾಗಿದೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

No comments:

Post a Comment