Monday, December 16, 2019

ಮುಖ್ಯಮಂತ್ರಿ ಬಿಎಸ್ವೈ ಹೇಳಿಕೆ ಖಂಡನಾರ್ಹ: ಡಿಎಸ್ಪಿ ನಾಯಕ

ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅನೇಕ ಜಾತಿಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ)ಗೆ ಸೇರಿಸುವ ಭರವಸೆ ಕೊಡುತ್ತಿದ್ದಾರೆ. ಈಗಾಗಲೇ ಪರಿವಾರ, ತಳವಾರಗಳನ್ನು ಎಸ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬಿಎಸ್ವೈ ಕೂಡ ಮೀನುಗಾರರನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿದ್ದಾರೆ. ಅಲ್ಲದೇ ಅನೇಕ ಜಾತಿಗಳನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿದ್ದಾರೆ ಇದು ಖಂಡನಾರ್ಹ ಕ್ರಮವಾಗಿದೆ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಯುವಪಡೆಯ ಮಸ್ಕಿ ತಾಲೂಕು ಅಧ್ಯಕ್ಷ  ಡಿಎಸ್ಪಿ (ದುರುಗೇಶ್) ನಾಯಕ ಆರೋಪಿಸಿದ್ದಾರೆ.
ಈ ವಿಚಾರವಾಗಿ ಪತ್ರಿಕಾ ಪ್ರಕಟಣೆ ನೀಡಿದ ಅವರು, ಬಿಎಸ್ ಯಡಿಯೂರಪ್ಪ ಈ ಹಿಂದೆ ಲಿಂಗಸುಗೂರಿನಲ್ಲಿ ನಡೆದಿದ್ದ ವಾಲ್ಮೀಕಿ ನಾಯಕ ಸಮಾವೇಶದಲ್ಲಿ ಮಾತನಾಡಿ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ  ಇಪ್ಪತ್ತನಾಲ್ಕು ತಾಸುಗಳಲ್ಲೇ ಎಸ್ಟಿ ಮೀಸಲಾತಿ ಹೆಚ್ಚಿಸುತ್ತೇನೆ, ವಾಲ್ಮೀಕಿ ನಾಯಕ ಸಮುದಾಯದ ನಾಯಕ ಶ್ರೀರಾಮುಲುರನ್ನು ಡಿಸಿಎಂ ಮಾಡುತ್ತೇನೆ ಎಂಬ ಭರವಸೆ ನೀಡಿದ್ದರು. ಈಗಾಗಲೇ ಸರ್ಕಾರ ಅಧಿಕಾರಕ್ಕೆ ಬಂದು ಅನೇಕ ತಿಂಗಳು ಕಳೆದರು ಮೀಸಲಾತಿ ಹೆಚ್ಚಿಸಿಲ್ಲ. ಬದಲಾಗಿ ಬುಡಕಟ್ಟು ಹಿನ್ನೆಲೆ ಇಲ್ಲದ ಜಾತಿಗಳನ್ನು ಎಸ್ಟಿಗೆ ಸೇರಿಸಲು ಮುಂದಾಗಿರುವುದು ಸಿಎಂ ಬಿಎಸ್ವೈ ವಾಲ್ಮೀಕಿ ನಾಯಕ ಸಮುದಾಯಕ್ಕೆ ಮಾಡುತ್ತಿರುವ ದ್ರೋಹವಾಗಿದೆ. 
ಬಿಎಸ್ವೈ ತಾವು ಕೊಟ್ಟ ಮಾತಿನಂತೆ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಬೇಕು, ಅಲ್ಲದೇ ಎಸ್ಟಿಗೆ ಬೇರೆ ಬೇರೆ ಜಾತಿಗಳನ್ನು ಸೇರಿಸುವ ಮೊದಲು ಕುಲಶಾಸ್ತ್ರ ಅಧ್ಯಯನ ಮಾಡಿಸಬೇಕು, ಬುಡಕಟ್ಟು ಹಿನ್ನೆಲೆಯನ್ನು ಖಚಿತ ಪಡಿಸಿಕೊಳ್ಳಬೇಕು, ಬೇರೆ ಬೇರೆ ಜಾತಿಗಳನ್ನು ಎಸ್ಟಿಗೆ ಸೇರಿಸುವುದಾದರೆ ಆ ಜಾತಿಗಳೊಟ್ಟಿಗೆ ಅವುಗಳ ಮೀಸಲಾತಿಯನ್ನು ಎಸ್ಟಿಗೆ ಸೇರಿಸಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಮತ್ತು ಬಿಎಸ್ವೈಗೆ ವಾಲ್ಮೀಕಿ ನಾಯಕ ಸಮುದಾಯ ತಕ್ಕಪಾಠ ಕಲಿಸಲಿದೆ ಎಂದು ಡಿಎಸ್ಪಿ (ದುರುಗೇಶ್) ನಾಯಕ ಎಚ್ಚರಿಕೆ ನೀಡಿದ್ದಾರೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

No comments:

Post a Comment