Wednesday, March 25, 2020

ರಾಯಚೂರು ಜಿಲ್ಲೆಯಲ್ಲಿ ಮೊದಲ ಕೊರೊನಾ ಹುಚ್ಚು..!?

ಕೊರೊನಾ ವೈರಸ್ ಕೋವಿಡ್ ೧೯ ಜನರಲ್ಲಿ ಎಷ್ಟರ ಮಟ್ಟಿಗೆ ಭಯ, ಆತಂಕ ಹುಟ್ಟಿಸಿದೆ ಎಂಬುದನ್ನು ಪ್ರತಿನಿತ್ಯ ಮಾಧ್ಯಮಗಳು ಜನರಿಗೆ ತಿಳುವಳಿಕೆ ನೀಡುವ ಪ್ರಾಮಾಣಿಕ ಕೆಲಸ ಮಾಡುತ್ತಿವೆ. ಕೊರೊನಾ ವೈರಸ್ ಬಗ್ಗೆ ಭಯ ಬೇಡ ಎಚ್ಚರ ಇರಲಿ ಎಂಬ ಸಂದೇಶಗಳನ್ನು ದೃಶ್ಯ, ಶ್ರವಣ, ಮುದ್ರಣ ಮಾಧ್ಯಮಗಳು ಜಗತ್ತಿಗೆ ಸಾರಿ ಸಾರಿ ಹೇಳುತ್ತಿವೆ.
ಈ ನಡುವೆ ಬರದ ನಾಡು ಚಿನ್ನದ ಬಿಡು ಎಂದು ಕರೆಯುವ ಬಿಸಿಲು ನಾಡು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ಯರಗುಡ್ಡದ ರಂಗಪ್ಪ ದಂಡಪ್ಪ ಎಂಬ ವ್ಯಕ್ತಿಯೋರ್ವ ಕೊರೊನಾ ವೈರಸ್ ಬಗ್ಗೆ ತೀವ್ರವಾಗಿ ತಲೆ ಕೆಡಸಿಕೊಂಡಿದ್ದಾನೆ.
ಪದವಿ ಪೂರ್ವದ ವರೆಗೂ ಶಿಕ್ಷಣ ಪಡೆದ ರಂಗಪ್ಪ ಕುರಿ ಕಾಯುವ ಕೆಲಸ ಮಾಡ್ತಿದ್ದು, ಕಳೆದ ಕೆಲ ದಿನಗಳಿಂದ ದೃಶ್ಯ ಮಾಧ್ಯಮಗಳಲ್ಲಿ ಬರುವ ಕೊರೊನಾ ವೈರಸ್ ಸುದ್ದಿಗಳನ್ನು ನೋಡಿ ಮಾನಸಿಕ ಕಿನತೆಗೆ ಒಳಗಾಗಿದ್ದಾನೆ ಎನ್ನಲಾಗಿದೆ.
ರಂಗಪ್ಪನಿಗೆ ಸ್ಥಳೀಯ ವೈದ್ಯ ಡಾ.ಆರ್.ಎಸ್ ಹುಲಿಮನಿ ಎಂಬುವವರು ಚಿಕಿತ್ಸೆ ನೀಡಿದ್ದು, ಅವರಿಗೆ ವೈರಸ್ ಬಗ್ಗೆ ತಿಳುವಳಿಕೆ ಮೂಡಿಸಿ ಧೈರ್ಯದಿಂದ ಇರುವಂತೆ ತಿಳಿ ಹೇಳಿದ್ದಾರೆ‌. ವೈದ್ಯರ ಸಲಹೆಯ ನಂತರ ರಂಗಪ್ಪ ಕೊರೊನಾ ವೈರಸ್ ಬಗೆಗಿನ ಭಯದಿಂದ ಸ್ವಲ್ಪ ಮಟ್ಟಿಗೆ ಹೊರ ಬಂದಿದ್ದಾರೆ ಎನ್ನಲಾಗಿದೆ. 
ಒಟ್ಟಾರೆಯಾಗಿ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಸಮಾಜದಲ್ಲಿ ಧೈರ್ಯದಿಂದ ಬಾಳಿ ಬದುಕ ಬೇಕಾಗಿರುವ ಜನರು ಕೊರೊನಾ ವೈರಸ್ ಬಗ್ಗೆ ತಲೆ ಕೆಡಸಿಕೊಂಡು ಮಾನಸಿಕ ಅಸ್ವಸ್ಥರಂತೆ ಆಗುತ್ತಿರುವುದು ದುರಂತದ ಸಂಗತಿ ಎನ್ನಬಹುದಾಗಿದೆ.

Thursday, March 19, 2020

ಪಿಡಿಒ ನಿರ್ಲಕ್ಷ್ಯ: ಪುಟ್ಟ ಮಕ್ಕಳೊಂದಿಗೆ ಚರಂಡಿ ಸ್ವಚ್ಛಗೊಳಿಸಿದ ಗ್ರಾ.ಪಂ ಸದಸ್ಯೆ

ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ  ರಂಗಾಪೂರ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರು ತನ್ನ ಪುಟ್ಟ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಚರಂಡಿ ಸ್ವಚ್ಛಗೊಳಿಸಿದ ಘಟನೆಯೊಂದು ನಡೆದಿದೆ.
ಗ್ರಾಮ ಪಂಚಾಯ್ತಿ ಸದಸ್ಯೆ ಸುನೀತಾ ಬಸವರಾಜ  ಚರಂಡಿ ಸ್ವಚ್ಛಗೊಳಿಸಿದವರಾಗಿದ್ದಾರೆ. ಸುನೀತಾ ತಮ್ಮೂರಿನ ಚರಂಡಿ ಸ್ವಚ್ಛಗೊಳಿಸಿ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವಂತೆ ಗುಡದೂರು ಪಿಡಿಒ ಸರಸ್ವತಿಯವರಿಗೆ ಅನೇಕ ಭಾರಿ ಮನವಿ ಸಲ್ಲಿಸಿದ್ದರು. ಸದಸ್ಯೆಯ ಮನವಿಗೆ ಕ್ಯಾರೇ ಅನ್ನದೇ ಪಿಡಿಒ ಸರಸ್ವತಿ ನಿರ್ಲಕ್ಷ್ಯವಹಿಸಿದ್ದರು. ಇತ್ತ ಗ್ರಾಮಸ್ಥರು ಪ್ರತಿನಿತ್ಯ ಸದಸ್ಯೆ ಸುನೀತಾ ಬಸವರಾಜರವರಿಗೆ ಚರಂಡಿ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವಂತೆ ಒತ್ತಡ ಹಾಕುತ್ತಿದ್ದರು. ಪಿಡಿಒ ನಿರ್ಲಕ್ಷ್ಯ, ಗ್ರಾಮಸ್ಥರ ಒತ್ತಡದಿಂದ ಬೇಸತ್ತ ಸದಸ್ಯೆ ಸುನೀತಾ ತನ್ನ ಪುಟ್ಟ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ತಾನೇ ಚರಂಡಿ ಸ್ವಚ್ಛಗೊಳಿಸಿದ್ದಾರೆ.
ಈ ಘಟನೆಯ ಪೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುನೀತಾ ಬಸವರಾಜ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಪಿಡಿಒ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪಿಡಿಒ ಸರಸ್ವತಿಯವರ ನಿರ್ಲಕ್ಷ್ಯ ಪ್ರವೃತ್ತಿಯಿಂದ ಅಧಿಕಾರಿ ವರ್ಗವೇ ತಲೆ ತಗ್ಗಿಸುವಂತಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
----------------------------------
ರಂಗಾಪೂರ ಗ್ರಾಮದ ಚರಂಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ನಮ್ಮ ಸಿಬ್ಬಂದಿ ಜಿಪಿಎಸ್ ಮಾಡಿಕೊಂಡು ಬಂದಿದ್ದಾರೆ. ಆದಷ್ಟೂ ಬೇಗನೆ ಸ್ವಚ್ಚಗೊಳಿಸುತ್ತೇವೆ. ಕಳೆದ ಆರು ತಿಂಗಳುಗಳ ಹಿಂದೆ ಕ್ಲೀನ್ ಮಾಡಿದ್ವಿ. ಈಗ ಮತ್ತೆ ಸ್ವಚ್ಛಗೊಳಿಸುತ್ತೇವೆ. ಅಂತಹ ಸಮಸ್ಯೆ ಏನು ಆಗಿಲ್ಲ. 
ಸರಸ್ವತಿ, ಪಿಡಿಒ, ಗುಡದೂರು ಗ್ರಾಮ ಪಂಚಾಯ್ತಿ

Wednesday, March 4, 2020

ದುರಸ್ತಿಯಾಗದ ಹಟ್ಟಿ - ಪಾಮನಕಲ್ಲೂರು ರಸ್ತೆ, ಮುಂದುವರಿದ ಪ್ರಯಾಣಿಕರ ಪರದಾಟ

ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಹಾಗೂ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿಗೆ ಸಂಪರ್ಕ ಕಲ್ಪಸುವ ರಸ್ತೆ ಪಾಮನಕಲ್ಲೂರು - ಗೆಜ್ಜಲಗಟ್ಟಾ ಹಾಗೂ ವೀರಾಪೂರು - ಹಟ್ಟಿ ನಡುವೆ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 
ಈ ಮಾರ್ಗದಲ್ಲಿ ದಿನನಿತ್ಯ ಬೈಕ್, ಕಾರು, ಜೀಪ್, ಬಸ್ ಸೇರಿದಂತೆ ನೂರಾರು ವಾಹನಗಳು ಸಂಚಾರಿಸುತ್ತವೆ. ಹಟ್ಟಿ ಚಿನ್ನದಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರತಿನಿತ್ಯ ಹಗಲು - ರಾತ್ರಿ ಲೆಕ್ಕಿಸದೆ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಹದಗೆಟ್ಟ ರಸ್ತೆಯಿಂದ ಈಗಾಗಲೇ ಅನೇಕ ಅಪಘಾತಗಳು ಈ ಮಾರ್ಗದಲ್ಲಿ ನಡೆದಿವೆ. ದಿನನಿತ್ಯ ನೂರಾರು ಜನ ಸುತ್ತಾಡುವ ರಸ್ತೆಯ ದುರಸ್ತಿಗೆ ಸಂಬಂಧಿಸಿದ ಜನ ಪ್ರತಿನಿಧಿಗಳು ಕ್ರಮ ಕೈಗೊಳ್ಳದಿರುವುದು ಈ ಭಾಗದ ಜನರ ಹಿಡಿ ಶಾಪಕ್ಕೆ ಕಾರಣವಾಗಿದೆ.
ರಸ್ತೆಯಲ್ಲಿ ತಗ್ಗು ಗುಂಡಿಗಳು ಇವೆಯೋ..? ತಗ್ಗು ಗುಂಡಿಗಳಲ್ಲಿ ರಸ್ತೆ ಇದೆಯೋ..? ಎಂಬುದು ವಾಹನ ಸವಾರರ ಹಾಗೂ ಈ ಭಾಗದ ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನೂ ಈ ರಸ್ತೆ ಮಸ್ಕಿ ಕ್ಷೇತ್ರ ಹಾಗೂ ಲಿಂಗಸುಗೂರು ಕ್ಷೇತ್ರದ ವ್ಯಾಪ್ತಿಯನ್ನು ಒಳಗೊಂಡಿದ್ದು ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್ ಹೂಲಗೇರಿ ಹಾಗೂ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ರ ವಿರುದ್ಧ ಜನರು ಹಿಡಿ ಶಾಪ ಹಾಕುತ್ತಿದ್ದಾರೆ‌. 
ಅನೇಕ ಅಪಘಾತಗಳಿಗೆ ಕಾರಣವಾದ ರಸ್ತೆ ದುರಸ್ತಿ ಮಾಡದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದು, ಈಗಲೇ ರಸ್ತೆ ದುರಸ್ತಿ ಮಾಡಿಸುವ ಮೂಲಕ ಮುಂದೆ ಉಂಟಾಗುವ ಅನಾಹುತಗಳನ್ನು ತಪ್ಪಿಸುವ ಕೆಲಸ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕಾಗಿದೆ ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ‌ಈ ಭಾಗದ ಜನ ಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಮುಂದಾಗುವ ದುರಂತಗಳನ್ನು ತಪ್ಪಿಸಲಿ.

Monday, March 2, 2020

ಪಾಮನಕಲ್ಲೂರು: ಬೆಂಬಲ ಬೆಲೆ‌ ತೊಗರಿ ಖರೀದಿ ಕೇಂದ್ರದಲ್ಲಿ ಗೊಲ್ಮಾಲ್..?


ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ‌ಗ್ರಾಮದ ಬೆಂಬಲ ಬೆಲೆ ತೊಗರಿ ಖರೀದಿ ಕೇಂದ್ರದಲ್ಲಿ ಗೊಲ್ಮಾಲ್‌ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ  ಸೋಮವಾರ ಸಂಜೆ ನಡೆದಿದೆ. 
ರೈತರ ತೊಗರಿ ಖರೀದಿಸಲು ಐದು ನೂರರಿಂದ ಎರಡು ಸಾವಿರ ಲಂಚ ಪಡೆಯುತ್ತಿದ್ದಾರೆಂದು‌ ಗ್ರೇಡರ್ (ತೊಗರಿ ಪರಿಶೀಲನೆ ಅಧಿಕಾರಿ) ಅರುಣ್ ರಾಠೋಡ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ವಿರುದ್ಧ ರೈತರು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕಛೇರಿಗೆ  ದೂರು ನೀಡಿದ್ದರು.
ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಚಿವರ ಕಛೇರಿಯಿಂದ ಮಸ್ಕಿ ತಹಶಿಲ್ದಾರರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿಗೆ ತಹಶಿಲ್ದಾರ ಬಲರಾಮ ಕಟ್ಟಿಮನಿ ಸೂಚಿಸಿದರು. ಕಂದಾಯ ನಿರೀಕ್ಷಕ ಅಬ್ದುಲ್‌ ರಹೂಪ್, ಗ್ರಾಮ ಲೆಕ್ಕಾಧಿಕಾರಿ ರವಿ ಬೆಳ್ಳೂರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಈ ವೇಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೆಕ್ರೆಟರಿ ಲಾಳೆ ಸಾಬ್, ಪರಿಶೀಲನಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪರಿಶೀಲನಾ ಅಧಿಕಾರಿಗಳ ಮುಂದೆ ರೈತರು ಅಳಲು ತೊಡಿಕೊಂಡು, ಗ್ರೇಡರ್ ಅರುಣ್ ರಾಠೋಡ್ ವಿರುದ್ಧ ದೂರುಗಳ ಸುರಿಮಳೆ ಗೈದರು. ಅರುಣ್, ಸಮಯಕ್ಕೆ ಸರಿಯಾಗಿ ಬರಲ್ಲ, ರೈತರಿಗೆ ಅನಾವಶ್ಯಕ ಕಿರಿಕಿರಿ ಮಾಡ್ತಾನೆ. ಲಂಚ ಕೊಟ್ಟವರ ತೊಗರಿ ಖರೀದಿ ಮಾಡ್ತಾನೆ, ಲಂಚ ಕೊಡದಿದ್ದರೆ ದಿನಗಟ್ಟಲೇ ಕಾಯಿಸ್ತಾನೆ.
ನಿಮ್ಮ ತೊಗರಿ ಸರಿಯಿಲ್ಲ ತೆಗೆದುಕೊಳ್ಳಲ್ಲವೆಂದು ಸತಾಯಿಸ್ತಾನೆ, ಲಂಚ ಕೊಟ್ಟರೆ ಯಾವುದೇ ಪರಿಶೀಲನೆ ಮಾಡಲ್ಲ, ನಮ್ಮೂರಿಗೆ ಕಾಯಂ ಗ್ರೇಡರ್ ಬೇಕು, ಅರುಣ್ ಕುಮಾರ್ ಭೇಡವೆಂದು ರೈತರು ಒತ್ತಾಯಿಸಿದರು. ಮಾತಾಡಿ ಸಮಸ್ಯೆ ಪರಿಹಾರ ಮಾಡ್ತಿವಿ ಎಂದು ಅಧಿಕಾರಿಗಳು ಭರವಸೆ ನೀಡಿದರು.