ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಹಾಗೂ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿಗೆ ಸಂಪರ್ಕ ಕಲ್ಪಸುವ ರಸ್ತೆ ಪಾಮನಕಲ್ಲೂರು - ಗೆಜ್ಜಲಗಟ್ಟಾ ಹಾಗೂ ವೀರಾಪೂರು - ಹಟ್ಟಿ ನಡುವೆ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಮಾರ್ಗದಲ್ಲಿ ದಿನನಿತ್ಯ ಬೈಕ್, ಕಾರು, ಜೀಪ್, ಬಸ್ ಸೇರಿದಂತೆ ನೂರಾರು ವಾಹನಗಳು ಸಂಚಾರಿಸುತ್ತವೆ. ಹಟ್ಟಿ ಚಿನ್ನದಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರತಿನಿತ್ಯ ಹಗಲು - ರಾತ್ರಿ ಲೆಕ್ಕಿಸದೆ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಹದಗೆಟ್ಟ ರಸ್ತೆಯಿಂದ ಈಗಾಗಲೇ ಅನೇಕ ಅಪಘಾತಗಳು ಈ ಮಾರ್ಗದಲ್ಲಿ ನಡೆದಿವೆ. ದಿನನಿತ್ಯ ನೂರಾರು ಜನ ಸುತ್ತಾಡುವ ರಸ್ತೆಯ ದುರಸ್ತಿಗೆ ಸಂಬಂಧಿಸಿದ ಜನ ಪ್ರತಿನಿಧಿಗಳು ಕ್ರಮ ಕೈಗೊಳ್ಳದಿರುವುದು ಈ ಭಾಗದ ಜನರ ಹಿಡಿ ಶಾಪಕ್ಕೆ ಕಾರಣವಾಗಿದೆ.
ರಸ್ತೆಯಲ್ಲಿ ತಗ್ಗು ಗುಂಡಿಗಳು ಇವೆಯೋ..? ತಗ್ಗು ಗುಂಡಿಗಳಲ್ಲಿ ರಸ್ತೆ ಇದೆಯೋ..? ಎಂಬುದು ವಾಹನ ಸವಾರರ ಹಾಗೂ ಈ ಭಾಗದ ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನೂ ಈ ರಸ್ತೆ ಮಸ್ಕಿ ಕ್ಷೇತ್ರ ಹಾಗೂ ಲಿಂಗಸುಗೂರು ಕ್ಷೇತ್ರದ ವ್ಯಾಪ್ತಿಯನ್ನು ಒಳಗೊಂಡಿದ್ದು ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್ ಹೂಲಗೇರಿ ಹಾಗೂ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ರ ವಿರುದ್ಧ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ಅನೇಕ ಅಪಘಾತಗಳಿಗೆ ಕಾರಣವಾದ ರಸ್ತೆ ದುರಸ್ತಿ ಮಾಡದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದು, ಈಗಲೇ ರಸ್ತೆ ದುರಸ್ತಿ ಮಾಡಿಸುವ ಮೂಲಕ ಮುಂದೆ ಉಂಟಾಗುವ ಅನಾಹುತಗಳನ್ನು ತಪ್ಪಿಸುವ ಕೆಲಸ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕಾಗಿದೆ ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಈ ಭಾಗದ ಜನ ಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಮುಂದಾಗುವ ದುರಂತಗಳನ್ನು ತಪ್ಪಿಸಲಿ.
No comments:
Post a Comment