Wednesday, April 8, 2020

ಮಸ್ಕಿ: ವರುಣನ ಆರ್ಭಟಕ್ಕೆ ಭತ್ತದ ಬೆಳೆ ನಾಶ, ಸಂಕಷ್ಟದಲ್ಲಿ ಅನ್ನದಾತರು

ರಾಯಚೂರು: ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯ ಮಸ್ಕಿ ತಾಲೂಕಿನ ಉಸ್ಕಿಹಾಳ ಗ್ರಾಮದಲ್ಲಿ ರೈತರು ಬೆಳೆದಿದ್ದ ಭತ್ತ ನೆಲಕ್ಕುರುಳಿದೆ. ಕಟಾವಿಗೆ ಬಂದ ಭತ್ತ ನೆಲಸಮವಾಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಕಣ್ಣೀರಿಡುತ್ತಿದ್ದಾರೆ. 
ಗ್ರಾಮದ ರೈತ ರಂಗನಗೌಡ ತಂದೆ ಹನುಮನಗೌಡ ಎಂಬುವವರು 6 ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಿದ್ದರು, ಭತ್ತದ ನಾಟಿಗೆ ಅವರು 2 ಲಕ್ಷ ರೂ.ಗಳಿಗೂ ಅಧಿಕ ಹಣ ಖರ್ಚು ಮಾಡಿದ್ದರು. ಎಕರೆಗೆ 40 ಚೀಲ ಇಳುವರಿಯ ನಿರೀಕ್ಷೆಯಲ್ಲಿ ರಂಗನಗೌಡ ಇದ್ದರು, ಆದ್ರೆ ವರುಣನ ಆರ್ಭಟಕ್ಕೆ ಸಿಲುಕಿದ ಭತ್ತ ಸಂಪೂರ್ಣವಾಗಿ ನಾಶವಾಗಿದ್ದು ರೈತ ಕಣ್ಣಿರಿಟ್ಟಿದ್ದಾರೆ. ಇದೇ ಗ್ರಾಮದ ರೈತರಾದ ತಿಮ್ಮನಗೌಡ ತಂದೆ ಹನುಮನಗೌಡ 2.5 ಎಕರೆ, ಮಲ್ಲನಗೌಡ ತಂದೆ ಭೀಮನಗೌಡ 4 ಎಕರೆ, ಈರಪ್ಪ ಅಡವಿಬಾವಿ ಎಂಬ ರೈತರ ಭತ್ತ ನಾಶವಾಗಿದ್ದು, ಅನ್ನದಾತರು ಕಣ್ಣೀರಿಟ್ಟಿದ್ದಾರೆ.
ಅಲ್ಲದೇ ತಾಲೂಕಿನ ಪಾಮನಕಲ್ಲೂರು ಹೋಬಳಿಯ ಪಾಮನಕಲ್ಲೂರು, ಕೋಟೆಕಲ್, ಆನಂದಗಲ್, ಹರ್ವಾಪುರ, ತುಪ್ಪದೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು ಬೋರ್ ವೆಲ್ ನೀರಿನಿಂದ ಬೆಳೆದಿದ್ದ ಸಜ್ಜೆ  ನೆಲಕ್ಕುರುಳಿದ್ದು ಈ ಭಾಗದ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಪ್ರಸ್ತುತ ಕೊರೊನಾ ಎಂಬ ಮಹಾಮಾರಿ ಜಗತ್ತನೇ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಭಾಗದ ರೈತರು ತಮ್ಮ ಕುಟುಂಬದ ಕೆಲ ಸದಸ್ಯರನ್ನು ಬೆಂಗಳೂರು, ಮುಂಬೈ, ಪುಣೆ, ಪಣಜಿ ಸೇರಿದಂತೆ ಮಹಾನಗರಗಳಿಗೆ ದುಡಿಯಲು ಕಳುಹಿಸಿ, ಕುಟುಂಬದಲ್ಲಿ ಕೆಲವರು ಕೃಷಿಯಲ್ಲಿ ತೊಡಗಿಕೊಂಡಿರುತ್ತಿದ್ದರು. ಕೃಷಿಯಲ್ಲಿ ಸಂಕಷ್ಟ ಎದುರಾದಾಗ ಮಹಾನಗರದಲ್ಲಿ ಕುಟುಂಬಸ್ಥರು ದುಡಿದು ತರುತ್ತಿದ್ದ ಹಣವನ್ನೇ ಅನ್ನದಾತರು ತಮ್ಮ ಕೃಷಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದರು.
ಆದರೆ ಈಗ ಮಹಾನಗರಗಳಲ್ಲಿರೋ ಅನ್ನದಾತರ ಕುಟುಂಬಸ್ಥರು ಕೊರೊನಾ ಮಹಾಮಾರಿಗೆ ಎದುರಿ, ಕೆಲಸ ಸಿಗದೇ ಊರು ಸೇರಿಕೊಂಡಿದ್ದು ಕೃಷಿಯನ್ನೇ ನಂಬಿಕೊಂಡು ಕುಳಿತಿರುವ ಅನ್ನದಾತರಿಗೆ ಬೇರೆ ದಾರಿ ಕಾಣದಾಗಿದೆ. 
ಬೆಳೆಯೇ ಬದುಕು ಎಂದು ನಂಬಿಕೊಂಡು ಕುಳಿತಿದ್ದ ಅನ್ನದಾತರು ಬೆಳೆ ಕಳೆದುಕೊಂಡಿದ್ದಾರೆ. ಮುಂದಿನ ಬದುಕು ಹೇಗೆ ಎಂದು ತಿಳಿಯದ   ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೇ ಸಂಕಷ್ಟಕ್ಕೆ ಸಿಲುಕಿದ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು ಎಂದು ಅನೇಕ ರೈತರು ಆಗ್ರಹಿಸಿದ್ದಾರೆ. ಈ ಭಾಗದ ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಲಿ ಎಂಬುದೇ ಈ ವರದಿಯ ಆಶಯವಾಗಿದೆ.

No comments:

Post a Comment