Monday, February 14, 2022

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡುತ್ತಿರುವುದು

 

ಬೀದರ್ (ಫೆ.14): ಇತ್ತೀಚೆಗೆ ನಿಧನರಾದ ಗಣ್ಯರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಬಂಡೆಪ್ಪ ಖಾಶೆಂಪುರ್ ರವರು ಸಂತಾಪ ವ್ಯಕ್ತಪಡಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಮೊದಲ ದಿನದ ಕಲಾಪದಲ್ಲಿ ಪಾಲ್ಗೊಂಡು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಂಡಿಸಿದ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದ ಅವರು, ಮಾಜಿ ಸಚಿವ ಡಾ. ಜೆ ಅಲೆಕ್ಸಾಂಡರ್, ಮಾಜಿ ಸ್ಪೀಕರ್ ಎಮ್.ಎನ್ ಸಜ್ಜನ್, ಮಾಜಿ ಶಾಸಕ ಹೆಚ್.ಬಿ ಪಾಟೀಲ್, ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್, ಸಾಹಿತಿ ಚಂದ್ರಶೇಖರ್ ಪಾಟೀಲ್ (ಚಂಪಾ), ಸಂತ ಇಬ್ರಾಹಿಂ ಸುತಾರ್, ನ್ಯಾಯಮೂರ್ತಿ ಕೆ.ಎಲ್ ಮಂಜುನಾಥ ರವರು ಇತ್ತಿಚ್ಛೆಗೆ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬ ವರ್ಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ಕರುಣಿಸಲಿ ಎಂದರು.

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಮಾಜಿ ಸಚಿವ ಅಲೆಕ್ಸಾಂಡರ್ ರವರು ಅಧಿಕಾರಿಯಾಗಿದ್ದಾಗಲೂ ಮತ್ತು  ರಾಜಕಾರಣಿಯಾಗಿ ಕೂಡ ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಮಾಜಿ ಶಾಸಕ ಎಮ್.ಎನ್ ಸಜ್ಜನ್ ರವರು ಶಾಸಕರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದರು. ಅವರ ಹೆಸರಿನಂತೆಯೇ ಅವರು ಬಹಳಷ್ಟು ಸರಳ ಸಜ್ಜನ ವ್ಯಕ್ತಿಯಾಗಿದ್ದರು. ಮಾಜಿ ಸಚಿವ ಹೆಚ್.ಬಿ ಪಾಟೀಲ್ ರವರು ಕೂಡ ಬಹಳಷ್ಟು ಉತ್ತಮ ವ್ಯಕ್ತಿಯಾಗಿದ್ದರು.

ದೊರೆ ನ್ಯೂಸ್ ಕನ್ನಡ ಫೇಸ್ಬುಕ್ ನಲ್ಲೂ ಸುದ್ದಿ ನೋಡಿ

ಲತಾ ಮಂಗೇಶ್ಕರ್ ರವರ ಬಗ್ಗೆ ಎಷ್ಟು ಹೇಳಿದರು ಕೂಡ ಕಡಿಮೆ. ಗಾನಕೋಗಿಲೆ ಎನ್ನಿಸಿಕೊಂಡ ಅವರು ತಮ್ಮ 13ನೇ ವಯಸ್ಸಿನಲ್ಲಿಯೇ ಗಾಯನ ಸೇವೆ ಪ್ರಾರಂಭಿಸಿದ್ದರು. ಅವರು ನಮ್ಮ ರಾಷ್ಟ್ರದ ಹೆಮ್ಮೆಯ ಗಾಯಕಿಯಾಗಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಅಭಿಮಾನಿಗಳನ್ನು ಹೊಂದಿರುವ ಗಾಯಕಿ ಲತಾ ಮಂಗೇಶ್ಕರ್ ರವರಿಗೆ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರತಿವೆ. ಭಾರತ ರತ್ನದಂತಹ ಶ್ರೇಷ್ಠ ಪ್ರಶಸ್ತಿ ಕೂಡ ಅವರಿಗೆ ಲಭಿಸಿದೆ. ಅವರು ಪ್ರತಿಯೊಂದು ಹಾಡುಗಳನ್ನು ಬಹಳಷ್ಟು ಶ್ರದ್ಧೆಯಿಂದ ಹಾಡಿದ್ದಾರೆ. ಅವರ ಹಾಡುಗಳು ಬಹಳಷ್ಟು ಅರ್ಥಪೂರ್ಣವಾಗಿವೆ. ಕನ್ನಡದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ಅವರು ಎರಡು ಹಾಡುಗಳನ್ನು ಹಾಡಿದ್ದಾರೆ.

ಚಂದ್ರ ಶೇಖರ್ ಪಾಟೀಲ್ ರವರು ಚಂಪಾ ಎಂದೇ ಪ್ರಸಿದ್ದಿ ಗಳಿಸಿದ್ದರು. ಸಂಕ್ರಮಣ ಎಂಬ ಪತ್ರಿಕೆಯ ಮೂಲಕ ಬರವಣಿಗೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಅವರು ಮಾಡಿದ್ದರು. ರಾಜ್ಯ, ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಶ್ರೇಷ್ಠ ಸಂತ ಇಬ್ರಾಹಿಂ ಸುತಾರರು ತಮ್ಮಲ್ಲಿನ ವಿಭಿನ್ನ ಕಲೆ, ಸಾಹಿತ್ಯದ ಮೂಲಕ ಸಮಾನತೆಗಾಗಿ ಹೋರಾಡಿದ್ದರು. ನ್ಯಾಯಮೂರ್ತಿ ಮಂಜುನಾಥ ರವರು ಹತ್ತು ಸಾವಿರಕ್ಕೂ ಹೆಚ್ಚಿನ ತಿರ್ಪುಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದ್ದರು. ತಮ್ಮ ತಮ್ಮ ಕ್ಷೇತ್ರದಲ್ಲಿ ಅನೇಕ ಮಹತ್ವದ ಕಾರ್ಯಗಳನ್ನು ಮಾಡಿದ್ದ ಗಣ್ಯರ ನಿಧನದಿಂದ ರಾಜ್ಯ, ರಾಷ್ಟ್ರಕ್ಕೆ ದೊಡ್ಡಮಟ್ಟದ ನಷ್ಟವಾದಂತಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಂತಾಪ ಸೂಚನೆಯಲ್ಲಿ ತಿಳಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದರು.

No comments:

Post a Comment