Wednesday, March 9, 2022

ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ಬಗ್ಗೆ ಪ್ರಶ್ನೆ ಕೇಳಿ ಸದನದ ಗಮನ ಸೆಳೆದ ಶಾಸಕ ಬಂಡೆಪ್ಪ ಖಾಶೆಂಪುರ್



ಬೀದರ್ (ಮಾ.09): ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ಘೋಷಣೆಗೆ ಸಂಬಂಧಿಸಿದಂತೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಸದನದ ಗಮನ ಸೆಳೆದರು.

ವಿಡಿಯೋಗಾಗಿ ಕ್ಲಿಕ್ ಮಾಡಿ

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ನಡೆದ ಬಜೆಟ್ ಅಧಿವೇಶನದ ನಾಲ್ಕನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಿಗೆ ಸಂಬಂಧಿಸಿದಂತೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಮಾತನಾಡಿದ ಅವರು, ಕಳೆದ ಕೆಲ ದಿನಗಳ ಹಿಂದೆ ನಾನು ಜನಸ್ಪಂದನಾ ಕಾರ್ಯಕ್ರಮದ ನಿಮಿತ್ಯವಾಗಿ ನನ್ನ ಕ್ಷೇತ್ರ ವ್ಯಾಪ್ತಿಯ ಮೀನಕೇರಾ ಗ್ರಾಮಕ್ಕೆ ಭೇಟಿ ನೀಡಿದ್ದೆ. ಆ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮವೆಂದು ಬೋರ್ಡ್ ಹಾಕಲಾಗಿತ್ತು. ವಾಸ್ತವವಾಗಿ ನೋಡಿದಾಗ ಆ ಗ್ರಾಮದಲ್ಲಿ ಕೇವಲ 30 ರಿಂದ 40 ಪ್ರತಿಶತದಷ್ಟು ಶೌಚಾಲಯಗಳನ್ನು ಮಾತ್ರ ನಿರ್ಮಾಣ ಮಾಡಲಾಗಿದೆ ಎಂದರು.

ಮೀನಕೇರಾ ಗ್ರಾಮದಲ್ಲಿನ ಶೌಚಾಲಯಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಗ್ರಾಮದಲ್ಲಿ 918 ಕುಟುಂಬಗಳ ಪೈಕಿ 858 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆಯೆಂದು ಸರ್ಕಾರದ ಉತ್ತರದಲ್ಲಿ ತಿಳಿಸಿದ್ದಾರೆ. ಆದರೇ ವಾಸ್ತವವಾಗಿ ನೋಡುವಾಗ ಅಲ್ಲಿ ಅಷ್ಟು ಶೌಚಾಲಯಗಳಿಲ್ಲ. ಅಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಇದು ಚಿಂತಿಸಬೇಕಾದ ವಿಷಯವಾಗಿದೆ. ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಬೋರ್ಡ್ ಹಾಕಲಾಗುತ್ತದೆ. ಆದರೇ ಎಷ್ಟೋ ಕಡೆಗಳಲ್ಲಿ ಶೌಚಾಲಯಗಳಿಲ್ಲ. 

ದಾಖಲಾತಿಗಾಗಿ ಶೌಚಾಲಯ ನಿರ್ಮಿಸಿ ಪೋಟೋ ತೆಗೆದುಕೊಂಡು ಹಣ ಒದಗಿಸಿಕೊಡುವ ಕೆಲಸ ಸರ್ಕಾರದಿಂದ ಮಾಡಲಾಗುತ್ತಿದೆ. ಆದರೇ ನಿರ್ಮಾಣಗೊಂಡ ಶೌಚಾಲಯಗಳು ಸದುಪಯೋಗವಾಗುತ್ತಿಲ್ಲ. ಈ ರೀತಿಯ ಸಮಸ್ಯೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿವೆ. ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಇರುತ್ತೆ. ಎಷ್ಟೊ ಕಡೆಗಳಲ್ಲಿ ಕುಡಿಯುವ ನೀರು ಕೂಡ ಸರಿಯಾಗಿ ಸಿಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶೌಚಾಲಯಗಳ ಸದ್ಬಳಕೆಯಾಗುವುದು ಕಷ್ಟವಾಗುತ್ತದೆ. ಸರ್ಕಾರವೇ ಶೌಚಾಲಯಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪರವರು, ಶಾಸಕ ಬಂಡೆಪ್ಪ ಖಾಶೆಂಪುರ್ ರವರೊಟ್ಟಿಗೆ ನಾನು ಮೀನಕೇರಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಶಾಸಕರು ಹೇಳಿರುವುದು ಸತ್ಯವಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕಠೀಣ ಕ್ರಮಕೈಗೊಳ್ಳುತ್ತೇನೆ. ಇದು ಪ್ರಧಾನಮಂತ್ರಿಗಳು ಬಹಳ ಆಸಕ್ತಿಯಿಂದ ಜಾರಿಗೆ ತಂದಿರುವ ಯೋಜನೆಯಾಗಿದೆ ಎಂದರು.

ಬಳಿಕ ಮರುಪ್ರಶ್ನೆ ಕೇಳಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದು ನಂತರ, ಕೂಡಲೇ ಬೀದರ್ ಸಿಒಇರವರಿಗೆ ಮಾತನಾಡಿ, ವರದಿ ತರಿಸಿಕೊಳ್ಳಬಹುದು. ಇದು ಮೀನಕೇರಾ ಗ್ರಾಮಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ರಾಜ್ಯದ ಬಹಳಷ್ಟು ಕಡೆಗಳಲ್ಲಿ ಇದೇ ರೀತಿಯ ಸಮಸ್ಯೆಗಳಿವೆ  ಹೆಸರಿಗಷ್ಟೆ ಒಂದು ಹಳ್ಳಿಯ ಬಗ್ಗೆ ಹೇಳಿದ್ದೇನೆಂದರು.

ಬಳಿಕ ಮಾತನಾಡಿದ ಸಚಿವರು, ರಾಜ್ಯದ ಹೆಣ್ಣು ಮಕ್ಕಳು ಸ್ವಂತ ನಮ್ಮ ಅಕ್ಕ - ತಂಗಿಯರೆಂದು ಭಾವಿಸಿ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ನಮಗೆ ಬೀದರ್ ಜಿಲ್ಲೆಯ ಮೀನಕೇರಾಕ್ಕೆ ಸಂಬಂಧಿಸಿದ ವರದಿಯನ್ನು ಸಿಒಇರವರು ನೀಡಿದ್ದಾರೆ. ನಾನು ಇವತ್ತೇ ಸಿಇಒರವರೊಂದಿಗೆ ಮಾತನಾಡಿ, ಮತ್ತೊಮ್ಮೆ ರಿಪೋರ್ಟ್ ತರಿಸಿಕೊಳ್ಳುತ್ತೇನೆಂದರು. ಈ ವೇಳೆ ಅನೇಕರು ಮಾತನಾಡಿ, ಎಲ್ಲಾ ಕಡೆಗಳಲ್ಲಿ ಕೂಡ ಇದೇ ರೀತಿಯ ಸಮಸ್ಯೆಯಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಮಾತಿಗೆ ಧ್ವನಿಗೂಡಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತನಾಡಿ, ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ, ವರದಿ ತರಿಸಿಕೊಂಡು ಕ್ರಮಕೈಗೊಳ್ಳಿ ಎಂದು ಸಚಿವರಿಗೆ ತಿಳಿಸಿದರು.

No comments:

Post a Comment