Friday, September 23, 2022

ಪಾಮನಕಲ್ಲೂರು: 'ಪರ್ಸೆಂಟೆಜ್' ಪಿಡಿಒ ಅಮರೇಶಪ್ಪ ಕಾಳಪೂರ ಸಸ್ಪೆಂಡ್

ಪಿಡಿಒ ಅಮರೇಶಪ್ಪ ಕಾಳಪೂರ (ಅಮರೇಶ)

ರಾಯಚೂರು (ಸೆ.24): ನಡುರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡು ರಾಜಾರೋಷವಾಗಿ ಮೊಬೈಲ್ ನಲ್ಲಿಯೇ ಪರ್ಸೆಂಟೆಜ್ ವ್ಯವಹಾರ ನಡೆಸಿದ್ದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಮತ್ತು ತೋರಣದಿನ್ನಿ (ಹೆಚ್ಚುವರಿ ಪ್ರಭಾರಿ) ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಅಮರೇಶ (ಅಮರೇಶಪ್ಪ ಕಾಳಪೂರ) ಅವರನ್ನು ಅಮಾನತು (ಸಸ್ಪೆಂಡ್) ಮಾಡಿ ರಾಯಚೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಆದೇಶ ಹೊರಡಿಸಿದ್ದಾರೆ.


ಪಿಡಿಒ ಅಮರೇಶಪ್ಪ ರವರು ಪರ್ಸೆಂಟೆಜ್ ವ್ಯವಹಾರ ನಡೆಸಿದ್ದಾರೆ ಎನ್ನಲಾಗಿದ್ದ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಪಿಡಿಒ ಅಮರೇಶಪ್ಪರನ್ನು ಅಮಾನತು ಮಾಡಬೇಕೆಂದು ಪಾಮನಕಲ್ಲೂರು, ಆನಂದಗಲ್, ಚಿಲ್ಕರಾಗಿ ಗ್ರಾಮದ ಕೆಲ ಯುವಕರು ಜಿಲ್ಲಾ ಪಂಚಾಯತಿ ಸಿಇಒರವರಿಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಮಾಧ್ಯಮಗಳಲ್ಲಿ ವರದಿಯಾಗಿ, ಪಾಮನಕಲ್ಲೂರು ಪಿಡಿಒ ಅಮರೇಶಪ್ಪರ ಬ್ರಹ್ಮಾಂಡ ಭ್ರಷ್ಟಾಚಾರದ ವಿಷಯ ನಾಡಿನೆಲ್ಲಡೆ ಸುದ್ದಿಯಾಗಿತ್ತು. ಅವರನ್ನು ಅಮಾನತು ಮಾಡಬೇಕೆಂದು ಬಹುತೇಕರು ಒತ್ತಾಯಿಸಿದ್ದರು. 


ವೈರಲ್ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ್ದ ಮೇಲಾಧಿಕಾರಿಗಳು ಘಟನೆ ಸಂಬಂಧ ತನಿಖೆ ನಡೆಸಲು ತಂಡವೊಂದನ್ನು ನೇಮಿಸಿ ಕೂಡಲೇ ವರದಿ ನೀಡುವಂತೆ ತಿಳಿಸಿದ್ದರು. ಪಾಮನಕಲ್ಲೂರು ಮತ್ತು ತೋರಣದಿನ್ನಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದ ಅಧಿಕಾರಿಗಳು ಪಿಡಿಒ ನಡೆಸಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ತಮ್ಮ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದರು. ಅಮರೇಶಪ್ಪರವರು ತಪ್ಪು ಎಸಗಿರುವುದು ಖಚಿತವಾದ ಬೆನ್ನಲ್ಲೇ, ಅವರನ್ನು ಅಮಾನತು ಮಾಡಿ ಸೆ.22ರಂದು ಜಿಲ್ಲಾ ಪಂಚಾಯತಿ ಸಿಇಒರವರು ಆದೇಶ ನೀಡಿದ್ದಾರೆ.

ಪಿಡಿಒ ಅಮರೇಶಪ್ಪ ಅಮಾನತು..!?

ಸಿಇಒ ರವರು ಹೊರಡಿಸಿದ ಆದೇಶದ ವಿವರಣೆ:

"ಅಮರೇಶ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಪಾಮನಕಲ್ಲೂರು ಹಾಗೂ ಹೆಚ್ಚುವರಿ ಪ್ರಭಾರಿ ಗ್ರಾಮ ಪಂಚಾಯತ, ತೋರಣದಿನ್ನಿ, ತಾ: ಮಸ್ಕಿ ರವರು ದಾರಿ ಮಧ್ಯದಲ್ಲಿ ನಿಂತು ಮೊಬೈಲ್ ನಲ್ಲಿ ಯಾರೊಂದಿಗೊ ಪರ್ಸೆಂಟೇಜ್ ವಿಷಯದ ಕುರಿತು ಮಾತನಾಡಿರುವ ವಿಡಿಯೋ ವಾಟ್ಸಾಪ್ ನಲ್ಲಿ, ವೈರಲ್ ಆಗಿರುವ ಬಗ್ಗೆ ತಿಳಿದು ವಿವರಣೆ ಸಲ್ಲಿಸಲು ಕಾರಣ ಕೇಳುವ ನೋಟೀಸ್ ಜಾರಿ ಮಾಡಲಾಗಿರುತ್ತದೆ. ಆದರೆ ಸದರಿಯವರು ಸ್ಪಷ್ಟಿಕರಣ ನೀಡಿರುವುದಿಲ್ಲ.

Pdo Amareshappa Kalapur suspend

ಅಲ್ಲದೆ ಸದರಿಯವರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತೋರಣದಿನ್ನಿ ಗ್ರಾಮ ಪಂಚಾಯತಿಯಲ್ಲಿ ಆಗಸ್ಟ್-2022 ರ ತಿಂಗಳಿನಲ್ಲಿ ಶೂನ್ಯ ಮಾನವ ದಿನಗಳನ್ನು ಸೃಜಿಸಿರುತ್ತಾರೆ. ಪಾಮನಕಲ್ಲೂರು ಗ್ರಾಮ ಪಂಚಾಯತಿಯಲ್ಲಿ ಹಿಂದಿನ ವರ್ಷಗಳ Wage Anticipated Report ಗಮನಿಸಲಾಗಿ, 2018-19ನೇ ಸಾಲಿನಲ್ಲಿ ರೂ.3.02 ಲಕ್ಷ ಮತ್ತು 2021-22 ನೇ ಸಾಲಿನಲ್ಲಿ ರೂ.0.28 ಲಕ್ಷ ಕೂಲಿ ಮೊತ್ತವನ್ನು ಪಾವತಿಸಲು ಕ್ರಮ ವಹಿಸಿರುವುದಿಲ್ಲ. 

ಪಾಮನಕಲ್ಲೂರು ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ಹೊಸದಾಗಿ ಶೌಚಾಲಯಗಳನ್ನು ನಮೂದಿಸಲು ಅವಕಾಶವಿದ್ದರೂ ಸಹ ಸಿಟಿಜನ್ ಆಪ್ ಮೂಲಕ ಅರ್ಹ ಫಲಾನುಭವಿಗಳ ಎಂಟ್ರಿ ಮಾಡಿರುವುದಿಲ್ಲ. ವಸತಿ ಯೋಜನೆಯಡಿ ಪಾಮನಕಲ್ಲೂರು ಗ್ರಾಮ ಪಂಚಾಯತಿಯಿಂದ-06, ತೋರಣದಿನ್ನಿ ಗ್ರಾಮ ಪಂಚಾಯತಿಯಿಂದ 12 ಮತ್ತು ದೇವರಾಜು ಅರಸು ಮತ್ತು ಬಸವ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡುವುದು ಬಾಕಿ ಉಳಿದಿರುತ್ತದೆ. ವಿಜಿಲ್ ಆಪ್ ನಲ್ಲಿ ಪಾಮನಕಲ್ಲೂರು ಗ್ರಾಮ ಪಂಚಾಯತಿಯಿಂದ ಫಲಾನುಭವಿಗಳ ದೃಢೀಕರಣ ಮಾಡಿರುವುದಿಲ್ಲ, ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಅಡ್ಹಾಕ್ ಸಮಿತಿ ಸಭೆಗಳಲ್ಲಿ ಗ್ರಾಮ ಪಂಚಾಯತಿ ಆಡಿಟ್ ವರದಿಗಳಲ್ಲಿನ 90 ಆಕ್ಷೇಪಣೆ ಕಂಡಿಕೆಗಳ ಮತ್ತು 30 ವಸೂಲಾತಿ ಕಂಡಿಕೆಗಳ ಪೈಕಿ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳ ಒಂದು ಕಂಡಿಕೆಯನ್ನು ತಿರುವಳಿಗೊಳಿಸಿದ್ದು, ಇನ್ನೂ ತಿರುವಳಿಗೊಳಿಸುವುದು ಬಹಳಷ್ಟು ಉಳಿದಿರುತ್ತದೆ. 

ಸಕಾಲ ತಂತ್ರಾಂಶದಲ್ಲಿ ಈ ಆರ್ಥಿಕ ವರ್ಷದಲ್ಲಿ ಹೆಚ್ಚು ನಮೂದುಗಳನ್ನು ಮಾಡಿರುವುದಿಲ್ಲ. ಪಂಚತಂತ್ರ 2.0 ತಂತ್ರಾಂಶದಲ್ಲಿ ಗ್ರಾಮ ಪಂಚಾಯತಿಗಳ ಆಸ್ತಿಗಳ ಬೇಡಿಕೆ, ಬಾಕಿ ವಸೂಲಾತಿ ವಿವರಗಳನ್ನು ನಮೂದಿಸುವುದು ಹಾಗೂ ಬ್ಯಾಂಕ್ ಖಾತೆಗಳ ವಿವರ ನಮೂದಿಸುವುದು ಬಾಕಿ ಉಳಿದಿರುತ್ತದೆ. ಮಾಹಿತಿ ಹಕ್ಕು ಅಧಿನಿಯಮದಡಿ ನಿಗದಿತ ಸಮಯದಲ್ಲಿ ಮಾಹಿತಿ ನೀಡದೇ ಇರುವುದರಿಂದ 5 ಮೇಲ್ಮನವಿಗಳು ಸಲ್ಲಿಕೆಯಾಗಿರುತ್ತದೆ ಎಂದು ಶ್ರೀ ಅಮರೇಶ ರವರ ವಿರುದ್ಧ ವಿವರವಾದ ವರದಿಯನ್ನು ಸಲ್ಲಿಸಿರುತ್ತಾರೆ, ಸದರಿ ವರದಿ ಆಧಾರದ ಮೇಲೆ ಉಲ್ಲೇಖ (2) ರ ಈ ಕಛೇರಿ ತಿಳುವಳಿಕೆ ನೋಟೀಸ್ ಮೂಲಕ ಆರೋಪಿತರ ವಿರುದ್ಧ ಆರೋಪಗಳ ದೋಷಾರೋಪಣ ಪಟ್ಟಿ ಅನುಬಂಧ-1 ರಿಂದ 4 ನ್ನು ಜಾರಿಗೊಳಿಸಲಾಗಿದೆ.

ಸದರಿ ದೋಷಾರೋಪಗಳಿಗೆ ಆರೋಪಿತ ನೌಕರರು ದಿನಾಂಕ:13.09.2022 ರಂದು ಲಿಖಿತ ವಿವರಣೆಯನ್ನು ಸಲ್ಲಿಸಿರುತ್ತಾರೆ, ವಿವರಣೆಯನ್ನು ಪರಿಶೀಲಿಸಿದ್ದು, ವಿವರಣೆ ಸಮಂಜಸವಾಗಿಲದಿರುವುದನ್ನು ಗಮನಿಸಿದೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿರವರು ಅವರ ಕರ್ತವ್ಯದಲ್ಲಿ ನಿರ್ಲಕ್ಷತನವನ್ನು ತೋರಿರುವುದು ದೃಢಪಟ್ಟಿರುತ್ತದೆ.

ಆರೋಪಗಳು ಗಂಭೀರವಾಗಿರುವುದರಿಂದ ಶ್ರೀ ಅಮರೇಶ, ಪಂಚಾಯತಿ ಅಭಿವೃದ್ಧಿ, ಅಧಿಕಾರಿ, ಗ್ರಾಮ ಪಂಚಾಯತ, ಪಾಮನಕಲ್ಲೂರು ಹಾಗೂ ಹೆಚ್ಚುವರಿ ಪ್ರಭಾರಿ ತೋರಣದಿನ್ನಿ ಗ್ರಾಮ ಪಂಚಾಯತಿರವರ ವಿರುದ್ಧದ ಆರೋಪಗಳ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಯಲ್ಲಿ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತ್ತುಗೊಳಿಸಲು ನಿರ್ಣಯಿಸಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿದ ಕಾರಣಗಳಿಗಾಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ ರಾಯಚೂರು ಆಗಿರುವ ಶಶಿಧರ ಕುರೇರ, ಭಾ.ಆ.ಸೇ. ಆದ ನಾನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 10 (1) (ಡಿ) ರನ್ವಯ ಶ್ರೀ ಅಮರೇಶ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ, ಪಾಮನಕಲ್ಲೂರು ಹಾಗೂ ಹೆಚ್ಚುವರಿ ಗ್ರಾಮ ಪಂಚಾಯತಿ ತೋರಣದಿನ್ನಿ ತಾ: ಮಸ್ಕಿ ಇವರ ಆರೋಪಗಳ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಯಲ್ಲಿ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದೇನೆ.

ಆಪಾದಿತರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು-1958 ರ ನಿಯಮ 58 ರನ್ವಯ ಜೀವನಾಧಾರ ಭತ್ತೆಯನ್ನು ಪಡೆಯಲು ಅರ್ಹರಿರುತ್ತಾರೆ ಹಾಗೂ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನ ಬಿಡತಕ್ಕದಲ್ಲ" ಎಂದು ಜಿಲ್ಲಾ ಪಂಚಾಯತಿ ಸಿಇಒರವರು ಹೊರಡಿಸಿದ ಆದೇಶದಲ್ಲಿ ವಿವರಣೆ ನೀಡಿದ್ದಾರೆ.

#pamanakallur #pdo #saspend #ಅಮಾನತು #ಪಿಡಿಒ #ಪಾಮನಕಲ್ಲೂರು

No comments:

Post a Comment