Wednesday, December 27, 2023

ಖಾಶೆಂಪುರ್: ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಜಾತ್ರಾ ಮಹೋತ್ಸವ ಸಂಪನ್ನ | ಪಲ್ಲಕ್ಕಿ ಉತ್ಸವ, ರಥೋತ್ಸವಕ್ಕೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರಿಂದ ಚಾಲನೆ

 ಖಾಶೆಂಪುರ್: ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಜಾತ್ರಾ ಮಹೋತ್ಸವ ಸಂಪನ್ನ

ಪಲ್ಲಕ್ಕಿ ಉತ್ಸವ, ರಥೋತ್ಸವಕ್ಕೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರಿಂದ ಚಾಲನೆ

ಡಿ. 22ರಂದು ಆರಂಭವಾಗಿದ್ದ ಜಾತ್ರಾ ಮಹೋತ್ಸವ, ನಿರಂತರವಾಗಿ ನಡೆದ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು. ಕ್ರಿಕೆಟ್, ರಂಗೋಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ. ಗಮನ ಸೆಳೆದ ಸಿಡಿಮದ್ದುಗಳು. ಮೆರಗು ಹೆಚ್ಚಿಸಿದ ನಾಟಕ ಪ್ರದರ್ಶನ, ಕುಸ್ತಿ ಪಂದ್ಯಾವಳಿಗಳು

ಬೀದರ್ (ಡಿ.26): ಡಿ. 22ರಂದು ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆರಂಭವಾಗಿದ್ದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ (ಪಾನ್) ಗ್ರಾಮದ ದತ್ತ ಮಹಾರಾಜರ ಅವತಾರ ಪುರುಷ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 7ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಮಂಗಳವಾರ ಸಂಜೆ ರಥೋತ್ಸವದೊಂದಿಗೆ ಸಂಪನ್ನವಾಯಿತು.

ಡಿ. 22ರಂದು ಖಾಶೆಂಪುರ್ ಪಿ ಗ್ರಾಮದಲ್ಲಿರುವ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಗ್ರಾಮಸ್ಥರು ಆರಂಭಿಸಿದರು. 23 ಮತ್ತು 24ರಂದು ಎರಡು ದಿನ ಸಂಗೀತ ಹಾಗೂ ಭಜನೆ ಕಾರ್ಯಕ್ರಮಗಳು ಜರುಗಿದವು.

25ರಂದು ಕಲಮೂಡದ ಸುಕ್ಷೇತ್ರ ಸೊಂತ್ ಮಠದ ಶ್ರೀ ಶ್ರೀ ಶ್ರೀ ಅಭಿನವ್ ಬಾಲಯೋಗಿ ಶರಣ ಶಂಕರಲಿಂಗ ಮಹಾರಾಜರು, ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಇಟಗಾದ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಮಠದ ಶ್ರೀ ಶರಣಯ್ಯಾ ಸ್ವಾಮೀಜಿ, ಬೀದರ್ ತಾಲೂಕಿನ ಕಮಠಾಣಾದ ಗವಿಮಠದ ಶ್ರೀ ಶ್ರೀ ಷ.ಬ್ರ 108 ಸದ್ಗುರು ರಾಚೋಟೇಶ್ವರ ಶಿವಚಾರ್ಯ ಮಹಾರಾಜರು, ಶ್ರೀ ಅರ್ಜುನಗಿರಿ ಮಹಾರಾಜರು ಸೇರಿದಂತೆ ಅನೇಕ ಶರಣರು, ಮಠಾದೀಶರು ದರ್ಶನ ನೀಡಿ, ಆಶೀರ್ವಚನ ನೀಡಿದರು. ಇದೇ ವೇಳೆ ರಾತ್ರಿ ಪಾದಪೂಜೆ ಹಾಗೂ ಭಜನೆ ಮತ್ತು 1001 ದೀಪೋತ್ಸವ ಕಾರ್ಯಕ್ರಮಗಳು ಜರುಗಿದವು.

ಇನ್ನೂ 26ರಂದು ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ ಮೂರ್ತಿಗೆ ಮಹಾರುದ್ರಾಭಿಷೇಕ ಮಾಡಿ, 101 ಜನ ಆರತಿ ಹಿಡಿದ ಮುತೈದೆಯರೊಂದಿಗೆ ಮಹಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಿತು. ಬಳಿಕ  ಗ್ರಾಮದ ಹನುಮಾನ ಮಂದಿರ ಮತ್ತು ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ ದೇವಸ್ಥಾನದ ಹತ್ತಿರ ಮೊಸರು (ಗಡಗಿ) ಒಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಶಸ್ತಿ ವಿತರಣೆ:

ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 7ನೇ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಯುವಕರು ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪ್ರಶಸ್ತಿ ವಿತರಿಸಿ ಸನ್ಮಾನಿಸಿ ಗೌರವಿಸಿದರು. ಇದೇ ಗ್ರಾಮದ ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ದೇವಸ್ಥಾನ ಸಮಿತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮದಲ್ಲಿ ನಾಟಕ ಪ್ರದರ್ಶನ:

ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 7ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಬೇನಕಿಪಳ್ಳಿಯ ಓಂ ಅಲ್ಲಮಪ್ರಭುಲಿಂಗೇಶ್ವರ ನಾಟ್ಯ ಸಂಘದಿಂದ ಭಗವಂತ ಕೊಟ್ಟ ಭಾಗ್ಯ ಎಂಬ ನಾಟಕ ಪ್ರದರ್ಶನ ನಡೆಯಿತು.

ಕುಸ್ತಿ ಪಂದ್ಯಾವಳಿ:

ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 7ನೇ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಗ್ರಾಮದ ದೇವಸ್ಥಾನದ ಆವರಣದಲ್ಲಿ ಜಂಗೀ ಕುಸ್ತಿ ಪೈಲ್ವಾನರಿಂದ ಕುಸ್ತಿ ಪಂದ್ಯಾವಳಿಗಳು ನಡೆದವು. ಮೆರಗು ಹೆಚ್ಚಿಸಿದ ಸಿಡಿಮದ್ದು (ಪಟಾಕಿ):

ಜಾತ್ರಾ ಮಹೋತ್ಸವದ ರಥೋತ್ಸವ ಕಾರ್ಯಕ್ರಮದ ಯಶಸ್ವಿಯ ಬಳಿಕ ಸಿಡಿಮದ್ದು (ಪಟಾಕಿ) ಗಳನ್ನು ದೇವಸ್ಥಾನದ ಆವರಣದಲ್ಲಿ ಸಿಡಿಸಲಾಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಸಿಡಿದ ಸಿಡಿಮದ್ಧುಗಳು ಜಾತ್ರಾ ಮಹೋತ್ಸವದ ಮೆರಗು ಹೆಚ್ಚಿಸಿದವು.

ಮಹಾಪ್ರಸಾದ ವ್ಯವಸ್ಥೆ:

ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 7ನೇ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.22 ರಿಂದ ದೇವಸ್ಥಾನದ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಆರಂಭಿಸಲಾಗಿತ್ತು. ರಥೋತ್ಸವದ ದಿನದಂದು ಮಹಾ ಪ್ರಸಾದ ವ್ಯವಸ್ಥೆ ಇತ್ತು. ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಸೇರಿದಂತೆ ಅನೇಕರು ಪ್ರಸಾದ ಸ್ವೀಕರಿಸಿದರು.

ಸಂದರ್ಭದಲ್ಲಿ ಇಟಗಾದ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಮಠದ ಶ್ರೀ ಶರಣಯ್ಯಾ ಸ್ವಾಮೀಜಿ, ಕಮಠಾಣಾದ ಗವಿಮಠದ ಶ್ರೀ ಶ್ರೀ ಷ.ಬ್ರ 108 ಸದ್ಗುರು ರಾಚೋಟೇಶ್ವರ ಶಿವಚಾರ್ಯ ಮಹಾರಾಜರು, ಶ್ರೀ ಅರ್ಜುನಗಿರಿ ಮಹಾರಾಜರು, ಖಾಶೆಂಪುರ್ ದ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ದೇವಸ್ಥಾನದ ಅರ್ಚಕರಾದ ಶ್ರೀ ಶಿವಾನಂದ ಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ನಿವೃತ ಡಿ.ಹೆಚ್.ಓ ಡಾ. ಮಾರ್ಥಾಂಡರಾವ್ ಖಾಶೆಂಪುರ್, ಶಾಂತಲಿಂಗ ಸಾವಳಗಿ, ಬಾಬುರಾವ್ ತಮಗೊಂಡ, ರಾಜು ಖಾಶೆಂಪುರ್, ಶಿವಶಂಕರ್ ಪಾಟೀಲ್, ವಿಜಯಕುಮಾರ್ ಖಾಶೆಂಪುರ್, ದತ್ತು ಕಾಡವಾದ, ವಿಶ್ವನಾಥ ಬಾಲೇಬಾಯಿ, ನರಸಣ್ಣ ಬಂಡಿ, ಶರಣಪ್ಪ ಖಾಶೆಂಪುರ್, ಭಜರಂಗ ತಮಗೊಂಡ, ಲಕ್ಷ್ಮಣ ಹೊಸಳ್ಳಿ, ರಾಜು ಪೊಲೀಸ್ ಪಾಟೀಲ್, ಶೇಖಪ್ಪ ಪೊಲೀಸ್ ಪಾಟೀಲ್, ಮಂಜುನಾಥ ಬಾಲೇಬಾಯಿ, ಶಿವಕುಮಾರ್ ಬಾಲೇಬಾಯಿ, ಮೋಹನ್ ಸಾಗರ್, ಕೃಷ್ಣ ಖಾಶೆಂಪುರ್ ಸೇರಿದಂತೆ ಅನೇಕರಿದ್ದರು.

Sunday, December 24, 2023

ಹುಮನಾಬಾದ್: ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಪ್ರಚಾರ

ಹುಮನಾಬಾದ್: ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಮತಯಾಚನೆ

ಬೀದರ್ (ಡಿ.24): ಬೀದರ್ ಜಿಲ್ಲೆಯ ಹುಮನಾಬಾದ್ ಪುರಸಭೆಯ ನಾಲ್ಕನೇ ವಾರ್ಡ್ ನ ಜೆಡಿಎಸ್ ಅಭ್ಯರ್ಥಿ ಎಂ.ಡಿ ನಜಿಮೋದ್ದಿನ್ ರವರ ಪರ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮತಯಾಚನೆ ನಡೆಸಿದರು.
ಡಿಸೆಂಬರ್ 27ರಂದು ಉಪ ಚುನಾವಣೆ ನಡೆಯಲಿರುವ ಹುಮನಾಬಾದ್ ಪಟ್ಟಣದ ವಾರ್ಡ್ ಸಂಖ್ಯೆ ನಾಲ್ಕಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಅವರು, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವಾರ್ಡ್ ಸಂಖ್ಯೆ ನಾಲ್ಕರ ಅಂಗಡಿಗಳು, ಮನೆಗಳಿಗೆ ತೆರಳಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಬಂಡೆಪ್ಪ ಖಾಶೆಂಪುರ್ ರವರು, ಜೆಡಿಎಸ್ ಪಕ್ಷ ಬಡವರ, ಶ್ರಮಿಕರ, ರೈತರ ಪಕ್ಷವಾಗಿದೆ. ಪಕ್ಷ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ನಿರಂತರವಾಗಿ ಬಡ ಜನರ ಪರವಾಗಿ ಕೆಲಸ ಮಾಡುವ ಪಕ್ಷ ಜೆಡಿಎಸ್ ಪಕ್ಷವಾಗಿದೆ. ಹುಮನಾಬಾದ್ ಪುರಸಭೆಯ ನಾಲ್ಕನೇ ವಾರ್ಡ್ ನ ಮತದಾರರು ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ಎಂ.ಡಿ ನಜಿಮೋದ್ದಿನ್ ರವರನ್ನು ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಡಿ ನಜಿಮೋದ್ದಿನ್, ಪಕ್ಷದ ಪ್ರಮುಖರಾದ ಗೌತಮ್ ಸಾಗರ್, ಶಿವಪುತ್ರ ಮಾಳ್ಗೆ, ಸುರೇಶ್ ಸಿಗಿ, ಶಿವರಾಜ್ ಹುಲಿ, ಬೋಮಗೊಂಡ ಚಿಟ್ಟಾವಾಡಿ, ಯಾಶೀನ್, ಮುಜೀಬ್ ಬಾಬಾ, ಸಲ್ಮಾನ್ ತನ್ವಿರ್, ವಾಜೀದ್ ನವಾಬ್, ಸಚಿನ್ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.
#BandeppaKashempur #Bandeppa #Khashempur #bidarnews #bidarupdates #BidarSouth #bidar_south #ಬಂಡೆಪ್ಪ #ಖಾಶೆಂಪುರ್

ಸಾಹಿತ್ಯವನ್ನು ಉಳಿಸಿಕೊಂಡು, ಬೆಳಸಿಕೊಂಡು ಸಾಗುವುದು ಅತ್ಯಗತ್ಯ: ಬಂಡೆಪ್ಪ ಖಾಶೆಂಪುರ್

ಸಾಹಿತ್ಯವನ್ನು ಉಳಿಸಿಕೊಂಡು, ಬೆಳಸಿಕೊಂಡು ಸಾಗುವುದು ಅತ್ಯಗತ್ಯ: ಬಂಡೆಪ್ಪ ಖಾಶೆಂಪುರ್

ಬೀದರ್ (ಡಿ.24): ಸಾಮಾಜಿಕ ಜಾಲತಾಣಗಳ ಪ್ರಭಾವದ ನಡುವೆಯೂ ಸಾಹಿತ್ಯವನ್ನು ನಶಿಸಿ ಹೋಗದಂತೆ ಕಾಪಾಡಿಕೊಂಡು ಉಳಿಸಿಕೊಂಡು, ಬೆಳಸಿಕೊಂಡು ಸಾಗುವುದು ಅತ್ಯಗತ್ಯವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ಪ್ರಥಮ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಂ. ಅಮರವಾಡಿ, ಅವರಿಗೆ ಶ್ರೀ ಕನಕ ಕನ್ನಡ ಸಾಂಸ್ಕೃತಿಕ ಸಂಘದ ವತಿಯಿಂದ ಬೀದರ್ ನಗರದ ಗಾಂಧಿ ಗಂಜ್ ನ ಕನಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದಾಸ ಸಾಹಿತ್ಯ ಎಂಬುದು ಶ್ರೇಷ್ಠ ಸಾಹಿತ್ಯವಾಗಿದೆ. ಅದನ್ನು ಇವತ್ತಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಮರೆತು ಹೋಗುತ್ತಿದ್ದೇವೆ. ಅಂದಿನ ದಾಸರು, ವಚನಕಾರರು ರಚಿಸಿದ ಸಾಹಿತ್ಯ ಅರ್ಥಪೂರ್ಣವಾಗಿದೆ. ಅದು ಇಂದಿಗೂ ಜೀವಂತವಾಗಿದೆ. ಐದು ನೂರು ವರ್ಷಗಳ ಹಿಂದೆಯೇ ಶ್ರೇಷ್ಠ ಸಾಹಿತ್ಯವನ್ನು ಕನಕದಾಸರು ರಚಿಸಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ರವರು ಸೇರಿದಂತೆ ಅನೇಕ ಜನ ಮಹಾತ್ಮರು, ದಾಸರು, ಶರಣರು ಮಾನವ ಕುಲ ಎಲ್ಲಾ ಒಂದೇ, ಎಲ್ಲರೂ ಒಟ್ಟಾಗಿ ಸಾಗಬೇಕಾಗಿದೆ ಎಂದು ಹೇಳಿದ್ದಾರೆ.
ಈಗ ಅಮರವಾಡಿರವರು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡು, ತಮ್ಮದೇಯಾದ ಛಾಪು ಮೂಡಿಸಿ, ಪ್ರಥಮ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರಿಗೂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಕೂಡ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ದಾಸ ಸಾಹಿತ್ಯ ಸಮೇಳನವನ್ನು ನಾವೆಲ್ಲರೂ ಸೇರಿ ಅರ್ಥಪೂರ್ಣವಾಗಿ ಮಾಡಬೇಕಾಗಿದೆ. ಅನೇಕ ಸಮಾಜದವರು ಉತ್ತಮವಾದ ಸಮೇಳನಗಳನ್ನು ಮಾಡಿದ್ದಾರೆ. ನಾವು ಕೂಡ ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಸಮಾಜದ ಪ್ರಮುಖರಾದ ಪಂಡಿತರಾವ್ ಚಿದ್ರಿರವರು ಹೇಳಿದರು.
ಒಳ್ಳೆಯ ಕೆಲಸ ಮಾಡುವವರನ್ನು ನಾವು ಗುರುತಿಸಿ ಸನ್ಮಾನಿಸಿ, ಗೌರವಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ. ಅದರಂತೆ ಬಿ.ಎಂ ಅಮರವಾಡಿರವರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಮಾಡಿದ್ದೇವೆ ಎಂದು ಸಮಾಜದ ಮುಖಂಡರಾದ ಸಂತೋಷ ಜೋಳದಪಗೆರವರು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.
ಇದೇ ವೇಳೆ ವೇದಿಕೆಯ ಮೇಲಿದ್ದ ಅತಿಥಿಗಳೆಲ್ಲರೂ ಸೇರಿ ಬೀದರ್ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮೇಳನದ ಪೋಸ್ಟರ್ ಬಿಡುಗಡೆ ಮಾಡಿದರು. ಪ್ರಮುಖರಾದ ಗೀತಾ ಪಂಡಿತರಾವ್ ಚಿಂದ್ರಿ, ಬಿ.ಎಂ ಅಮರವಾಡಿ, ಪಂಡಿತರಾವ್ ಚಿದ್ರಿ, ಬಾಬುರಾವ್ ಮಲ್ಕಾಪೂರೆ, ಮಲ್ಲಿಕಾರ್ಜುನ ಬಿರಾದಾರ (ಪರಿಹಾರ), ಲಕ್ಷ್ಮಣ್ ಮೇತ್ರೆ, ಮಾಳಪ್ಪ ಅಡಸಾರೆ, ಎಮ್.ಎಸ್ ಕಟಗಿ, ಬೋಮಗೊಂಡ ಚಿಟ್ಟಾವಾಡಿ, ಸಂತೋಷ್ ಬಗದಲ್, ಸಂತೋಷ ಜೋಳದಪಗೆ, ಲೋಕೇಶ್ ಮರ್ಜಾಪೂರೆ, ಟಿ.ಎಮ್ ಮಚ್ಚೆ, ಬಕ್ಕಪ್ಪ ನಾಗೋರೆ, ಸುಭಾಷ್ ನಾಗೋರೆ, ವಿಜಯಕುಮಾರ್ ಬ್ಯಾಲಳ್ಳಿ, ಸುನೀಲ್ ಚಿಲ್ಲರಗಿ, ವೀರೇಶ್, ವೈಜನಾಥ, ಶರಣಪ್ಪ ಗಂಧುಗೆ, ಸಂಜು ಚಿಲ್ಲರಗಿ, ಪ್ರಕಾಶ್, ಅನಿಲ್ ಚಿಲ್ಲರಗಿ, ಸಾಹೇಬಣ್ಣ, ತುಕ್ಕರಾಮ್ ಸೇರಿದಂತೆ ಅನೇಕರಿದ್ದರು.
#ಬಂಡೆಪ್ಪ #ಖಾಶೆಂಪುರ್ #Bandeppa #Khashempur #BandeppaKashempur #ಬೀದರ್ #Bidar_South

Friday, December 22, 2023

ಸರ್ಕಾರಗಳು ರೈತರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿವೆ: ರಮೇಶ್ ವೀರಾಪೂರ್

ಸರ್ಕಾರಗಳು ರೈತನ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿವೆ: ರಮೇಶ್ ವೀರಾಪೂರ್

ಪಾಮನಕಲ್ಲೂರು (ಡಿ.22): ರೈತ ದೇಶದ ಬೆನ್ನೆಲುಬು, ರೈತನೇ ದೇಶದ ಶಕ್ತಿ ಎಂದು ಹೇಳುವ ಸರ್ಕಾರಗಳು ರೈತನ ಬೆನ್ನು ಮೂಳೆ ಮೂರಿಯುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಸಾಗುತ್ತೀವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್) ದ ಜಿಲ್ಲಾ ಸಮಿತಿ ಸದಸ್ಯ ರಮೇಶ್ ವೀರಾಪೂರ್ ರವರು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ನೂತನವಾಗಿ ರಚನೆಯಾಗಿರುವ ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್)ದ ಗ್ರಾಮ ಘಟಕದ ನಾಮಫಲಕವನ್ನು ಸಸಿಗೆ ನೀರು ಹಾಕುವ ಮೂಲಕ ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿಯವರೆಗೂ ದೇಶ ಮತ್ತು ರಾಜ್ಯವನ್ನಾಳಿದ ಸರ್ಕಾರಗಳು ರೈತ ದೇಶದ ಬೆನ್ನೆಲುಬು ಎಂದು ರಾಜಕೀಯ ಭಾಷಣ ಮಾಡಿ, ರೈತನ ಬೆನ್ನು ಮೂಳೆಯನ್ನು ಮುರಿಯುವ ಕೆಲಸ ಮಾಡಿವೆ. ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ರೈತನನ್ನು ಕೇವಲ ದುಡಿಯುವ ಯಂತ್ರವನ್ನಾಗಿ ಮಾಡಿವೆ. ಸರ್ಕಾರಗಳು ದೇಶದ ರೈತರನ್ನು ಮೂಲೆಗುಂಪು ಮಾಡಿಕೊಂಡು ಸಾಗುತ್ತೀವೆ.
ರಾಜ್ಯದಲ್ಲಿ ಅದರಲ್ಲೂ ನಮ್ಮ ಭಾಗದ ಕೆಲವು ಕಡೆಗಳಲ್ಲಿ ನೀರಾವರಿ ಆಗಿರುವುದರ ಹಿಂದೆ ಕರ್ನಾಟಕ ಪ್ರಾಂತ ರೈತ ಸಂಘದ ಕೊಡುಗೆ ಕೂಡ ಇದೆ. ಚಂದ್ರಶೇಖರ್ ಬಾಳೆ, ಪುರುಷೋತ್ತಮ್ ಕಲಾಲ್ ಬಂಡಿ ಸೇರಿದಂತೆ ಅನೇಕರ ಹೋರಾಟದ ಫಲದಿಂದ ನೀರಾವರಿ ಯೋಜನೆಗಳು ಆಗಿವೆ. ಈ ಹಿಂದೆ ಕೂಡ ಪಾಮನಕಲ್ಲೂರು ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಇತ್ತು. ಈ ಸಂಘಕ್ಕೆ ತನ್ನದೆಯಾದ ಶಕ್ತಿ, ಸಾಮರ್ಥ್ಯ ಇದೆ ಎಂದು ರಮೇಶ್ ವೀರಾಪೂರ್ ರವರು ಹೇಳಿದರು.
ಇದೇ ವೇಳೆ ಮಾತನಾಡಿದ ಸಿಐಟಿಯು ಮುಖಂಡ ಮಹ್ಮದ್ ಹನೀಫ್ ರವರು, ಸಂಘಟನೆ ಎಂದರೇನು, ಸಂಘಟನೆ ಯಾವ ರೀತಿಯಲ್ಲಿ ಇರಬೇಕು. ಹೋರಾಟಗಳು ಹೇಗಿರಬೇಕು ಎಂಬುದರ ಬಗ್ಗೆ ತಿಳಿಸಿದರು. ಕೆ.ಪಿ.ಆರ್.ಎಸ್ ಮುಖಂಡ ನಿಂಗಪ್ಪ ಎಂ.ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೆ.ಪಿ.ಆರ್.ಎಸ್ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಪಾಮನಕಲ್ಲೂರು ಗ್ರಾಮದ ಮಲ್ಲಿಕಾರ್ಜುನ್ ನಾಲ್ವಾರ್ಕರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಆರ್.ಎಸ್ ಮಸ್ಕಿ ತಾಲೂಕು ಮುಖಂಡ ದುರುಗೇಶ ತಲೆಖಾನ್, ಪಾಮನಕಲ್ಲೂರು ಗ್ರಾಮ ಘಟಕದ ಅಧ್ಯಕ್ಷ ಮಲ್ಲಪ್ಪ ಹಿರೇಮನಿ, ಕಾರ್ಯದರ್ಶಿ ಶ್ರೀನಿವಾಸ ಸಾನಬಾಳ (ಚಿನ್ನಪ್ಪ), ಉಪಾಧ್ಯಕ್ಷ ಬಸವರಾಜ ಚಲುವಾದಿ, ಕನಕಪ್ಪ ಎಸ್.ಸಿ, ಪ್ರಮುಖರಾದ ಮಲ್ಲೇಶ, ಅಲ್ಲಾಭಕ್ಷ ಗಿರಿಣಿ, ಅಮರೇಶ ಕಟ್ಟಿಮನಿ, ವಿಶ್ವ ಅಂಗಡಿ, ರಮೇಶ ಗಂಟ್ಲಿ, ಅಮರೇಶ್ ಡಿ ಪೂಜಾರಿ, ಅಮರಯ್ಯ ತಾತ, ರಮೇಶ ಗಂಟ್ಲಿ, ಬಸಣ್ಣ ಕುರುಬರ್, ಅಮೃತ್ ಟೈಲರ್, ಅಮರಪ್ಪ ಕಲ್ಲೂರುರವರು ಸೇರಿದಂತೆ ಗ್ರಾಮಸ್ಥರು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ರೈತರು ಇದ್ದರು.
#ಪಾಮನಕಲ್ಲೂರು #ಪಿಡಿಒ #ಪಿಡಿಓ #ರಾಮಣ್ಣ #ನ್ಯೂಸ್ #ಪಂಚಾಯತಿ #ಗ್ರಾಮ_ಪಂಚಾಯತಿ #Pdo #pamanakallur #News #PDO_News #Ramanna #KPRS #Raita_Sangha #Raita #Sangha #ಕೆಪಿಆರ್ಎಸ್ #ರೈತ #ಸಂಘ #ರೈತ_ಸಂಘ

Monday, December 4, 2023

ಪಾಮನಕಲ್ಲೂರು ಪಿಡಿಒ ರಾಮಣ್ಣನನ್ನು ಅಮಾನತು ಮಾಡಿ: ಸಿಇಒಗೆ ಕರವೇ ಮನವಿ

ಪಾಮನಕಲ್ಲೂರು ಪಿಡಿಒ ರಾಮಣ್ಣನನ್ನು ಅಮಾನತು ಮಾಡಿ: ಸಿಇಒಗೆ ಕರವೇ ಮನವಿ

ರಾಯಚೂರಿನ ಜಿಲ್ಲಾ ಪಂಚಾಯತಿ ಕಛೇರಿಯಲ್ಲಿ ಕರವೇ ಮುಖಂಡರು ಮನವಿ ಸಲ್ಲಿಸಿದರು.

ರಾಯಚೂರು (ಡಿ.04): ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮಣ್ಣರವರನ್ನು ಅಮಾನತ್ತುಗೊಳಿಸಿ, ಅವರ ಮೇಲಿನ ಆರೋಪಗಳ ಕುರಿತು ತನಿಖೆ ನಡೆಸಿ, ಕಠಿಣ ಶಿಕ್ಷೆ ನೀಡಬೇಕೆಂದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಯ ಮುಖಂಡರು ರಾಯಚೂರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರವೇಯ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹೀರಾ ನೇತೃತ್ವದಲ್ಲಿ ಸೋಮವಾರ ನಗರದ ಜಿಲ್ಲಾ ಪಂಚಾಯತಿ ಕಛೇರಿಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆರವರಿಗೆ ಮನವಿ ಸಲ್ಲಿಸಿದ ಕರವೇ ಮುಖಂಡರು, ಪಿಡಿಒ ರಾಮಣ್ಣರವರನ್ನು ಅಮಾನತು ಮಾಡಲು ಒತ್ತಾಯಿಸಿದರು.

ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ರಾಮಣ್ಣರವರು ಪಿಡಿಒ ಆಗಿ ನೇಮಕಗೊಂಡಾಗಿನಿಂದ ಇಲ್ಲಿಯವರೆಗೂ ಸುಮಾರು 30 ಲಕ್ಷ ರೂ.ಗಳ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ರಾಮಣ್ಣರವರು ನಕಲಿ ಬಿಲ್ ಗಳನ್ನು ಸೃಷ್ಟಿಸಿ ವಿವಿಧ ಹೆಸರುಗಳಲ್ಲಿ ವಿವಿಧ ಅಂಗಡಿಗಳ ಮೂಲಕ ಬೇರೆ ಬೇರೆಯವರಿಗೆ 15ನೇ ಹಣಕಾಸಿನ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. 

ಅಲ್ಲದೇ ವಿವಿಧ ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ರೂ.ಗಳ ಭೋಗಸ್ ಬಿಲ್ ಸೃಷ್ಟಿಯ ಹಿಂದೆ ರಾಮಣ್ಣರವರ ಕೈವಾಡವಿದೆ ಎಂದು ಪಂಚಾಯತಿಗೆ ಸಂಬಂಧಿಸಿದ ಕೆಲವರು ಆರೋಪ ಮಾಡಿದ್ದಾರೆ. ಅಲ್ಲದೇ ರಾಮಣ್ಣರವರು ನಕಲಿ ಬಿಲ್ ಸೃಷ್ಟಿಸಿ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಅನೇಕರು ಸಹಕಾರ ನೀಡಿದ್ದಾರೆ ಎನ್ನಲಾಗಿದೆ. 

ಈಗಾಗಲೇ ಹದಿನೈದನೆಯ ಹಣಕಾಸು ಸೇರಿದಂತೆ ವಿವಿಧ ಯೋಜನೆಗಳ ಹೆಸರಿನಲ್ಲಿ ಖರ್ಚು ಮಾಡಲಾಗಿರುವ ಹಣದ ಕುರಿತು ಲಿಖಿತ ರೂಪದಲ್ಲಿ ಮಾಹಿತಿ ಕೇಳಿದ್ದೇವೆ. ಆದರೇ ಅವರು ಮಾಹಿತಿ ನೀಡುವ ಬದಲಿಗೆ ಅಸಂಬದ್ಧ ಹೇಳಿಕೆ ನೀಡಿ ದಿನದುಡುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಗಟ್ಟುವಂತೆ ನಾವು ಈಗಾಗಲೇ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೌಖಿಕ ಮನವಿಯನ್ನು ಮಾಡಿದ್ದೇವೆ. ಅವರು ಕೂಡ ಇದರ ಮೇಲೆ ಕ್ರಮಕೈಗೊಂಡಿಲ್ಲ. 

ಅಷ್ಟೇ ಅಲ್ಲದೇ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿರುವ ತಮಗೂ ಕೂಡ ಮೌಖಿಕವಾಗಿ ಮಾಹಿತಿ ನೀಡಿದ್ದೇವೆ. ಇಷ್ಟಾದರೂ ಕೂಡ ರಾಮಣ್ಣರವರ ಕರಾಮತ್ತು ಕಡಿಮೆಯಾಗುತ್ತಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸಮಸ್ಯೆ, ರಸ್ತೆ ಸಮಸ್ಯೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ಅವುಗಳ ಬಗ್ಗೆ ಅವರಿಗೆ ಇದುವರೆಗೂ ನಾಲ್ಕೈದು ಬಾರಿ ಮನವಿ ಮಾಡಿದ್ದೇವೆ. ಇಲ್ಲಿಯವರೆಗೂ ಕೂಡ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಾಗಲೊಮ್ಮೆ ಅವರು ಕಾಲಹರಣ ಮಾಡಿಕೊಂಡು ಹೋಗುತ್ತಿದ್ದಾರೆ. 

ಅಲ್ಲದೇ ಸಮಸ್ಯೆಗಳನ್ನು ಪರಿಹರಿಸುವಂತೆ ತಾಕೀತು ಮಾಡಿದರೇ, ರಾಜಿ ಸಂದಾನಕ್ಕೆ ಮುಂದಾಗುತ್ತಾರೆ ಎಂಬ ಅನೇಕ ಆರೋಪಗಳು ಅವರ ಮೇಲೆ ಇವೆ. ಇಷ್ಟೆಲ್ಲಾ ಗಂಭೀರ ಆರೋಪಗಳನ್ನು ಹೊತ್ತುಕೊಂಡಿರುವ ರಾಮಣ್ಣರವನ್ನು ಕೂಡಲೇ ಅಮಾನತ್ತುಗೊಳಿಸಬೇಕು. ಇಲ್ಲವೇ ಬೇರೆಡೆಗೆ ವರ್ಗಾವಣೆ ಮಾಡಬೇಕು ಅಥವಾ ಕಡ್ಡಾಯ ರಜೆಯ ಮೇಲೆ ಕಳಿಸಬೇಕು.

ಅದರೊಂದಿಗೆ ಅವರ ಕಾಲದಲ್ಲಿ ನಮ್ಮ ಪಾಮನಕಲ್ಲೂರು ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆ ನಡೆಸಿ, ರಾಮಣ್ಣರವರ ಮೇಲೆ ಮತ್ತು ಅಕ್ರಮದಲ್ಲಿ ಪಾಲ್ಗೊಂಡ ಪಂಚಾಯತಿ ಸಿಬ್ಬಂದಿಗಳ ಮೇಲೆ ಹಾಗೂ ಅಧ್ಯಕ್ಷರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಕರವೇ ಮುಖಂಡರು ಸಿಇಒರವರಿಗೆ ಬರೆದ ಮನವಿ ಪತ್ರದಲ್ಲಿ  ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇ ಪಾಮನಕಲ್ಲೂರು ಹೋಬಳಿ ಘಟಕದ ಅಧ್ಯಕ್ಷ ರಮೇಶ್ ಗಂಟ್ಲಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚೌಡ್ಲಿ, ಖಜಾಂಚಿ ಮಲ್ಲಪ್ಪ ಹಿರೇಮನೆ, ಮುಖಂಡರಾದ ಅಮರೇಶ್ ಡಿ ಪೂಜಾರಿ ಸೇರಿದಂತೆ ಅನೇಕರಿದ್ದರು.

#Pamanakallur #Pdo #Ramanna #Suspend #Maski #Raichur #ಪಾಮನಕಲ್ಲೂರು #ಪಿಡಿಒ #ಅಮಾನತ್ತು #ಮಸ್ಕಿ #ರಾಯಚೂರು