Monday, December 4, 2023

ಪಾಮನಕಲ್ಲೂರು ಪಿಡಿಒ ರಾಮಣ್ಣನನ್ನು ಅಮಾನತು ಮಾಡಿ: ಸಿಇಒಗೆ ಕರವೇ ಮನವಿ

ಪಾಮನಕಲ್ಲೂರು ಪಿಡಿಒ ರಾಮಣ್ಣನನ್ನು ಅಮಾನತು ಮಾಡಿ: ಸಿಇಒಗೆ ಕರವೇ ಮನವಿ

ರಾಯಚೂರಿನ ಜಿಲ್ಲಾ ಪಂಚಾಯತಿ ಕಛೇರಿಯಲ್ಲಿ ಕರವೇ ಮುಖಂಡರು ಮನವಿ ಸಲ್ಲಿಸಿದರು.

ರಾಯಚೂರು (ಡಿ.04): ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮಣ್ಣರವರನ್ನು ಅಮಾನತ್ತುಗೊಳಿಸಿ, ಅವರ ಮೇಲಿನ ಆರೋಪಗಳ ಕುರಿತು ತನಿಖೆ ನಡೆಸಿ, ಕಠಿಣ ಶಿಕ್ಷೆ ನೀಡಬೇಕೆಂದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಯ ಮುಖಂಡರು ರಾಯಚೂರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರವೇಯ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹೀರಾ ನೇತೃತ್ವದಲ್ಲಿ ಸೋಮವಾರ ನಗರದ ಜಿಲ್ಲಾ ಪಂಚಾಯತಿ ಕಛೇರಿಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆರವರಿಗೆ ಮನವಿ ಸಲ್ಲಿಸಿದ ಕರವೇ ಮುಖಂಡರು, ಪಿಡಿಒ ರಾಮಣ್ಣರವರನ್ನು ಅಮಾನತು ಮಾಡಲು ಒತ್ತಾಯಿಸಿದರು.

ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ರಾಮಣ್ಣರವರು ಪಿಡಿಒ ಆಗಿ ನೇಮಕಗೊಂಡಾಗಿನಿಂದ ಇಲ್ಲಿಯವರೆಗೂ ಸುಮಾರು 30 ಲಕ್ಷ ರೂ.ಗಳ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ರಾಮಣ್ಣರವರು ನಕಲಿ ಬಿಲ್ ಗಳನ್ನು ಸೃಷ್ಟಿಸಿ ವಿವಿಧ ಹೆಸರುಗಳಲ್ಲಿ ವಿವಿಧ ಅಂಗಡಿಗಳ ಮೂಲಕ ಬೇರೆ ಬೇರೆಯವರಿಗೆ 15ನೇ ಹಣಕಾಸಿನ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. 

ಅಲ್ಲದೇ ವಿವಿಧ ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ರೂ.ಗಳ ಭೋಗಸ್ ಬಿಲ್ ಸೃಷ್ಟಿಯ ಹಿಂದೆ ರಾಮಣ್ಣರವರ ಕೈವಾಡವಿದೆ ಎಂದು ಪಂಚಾಯತಿಗೆ ಸಂಬಂಧಿಸಿದ ಕೆಲವರು ಆರೋಪ ಮಾಡಿದ್ದಾರೆ. ಅಲ್ಲದೇ ರಾಮಣ್ಣರವರು ನಕಲಿ ಬಿಲ್ ಸೃಷ್ಟಿಸಿ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಅನೇಕರು ಸಹಕಾರ ನೀಡಿದ್ದಾರೆ ಎನ್ನಲಾಗಿದೆ. 

ಈಗಾಗಲೇ ಹದಿನೈದನೆಯ ಹಣಕಾಸು ಸೇರಿದಂತೆ ವಿವಿಧ ಯೋಜನೆಗಳ ಹೆಸರಿನಲ್ಲಿ ಖರ್ಚು ಮಾಡಲಾಗಿರುವ ಹಣದ ಕುರಿತು ಲಿಖಿತ ರೂಪದಲ್ಲಿ ಮಾಹಿತಿ ಕೇಳಿದ್ದೇವೆ. ಆದರೇ ಅವರು ಮಾಹಿತಿ ನೀಡುವ ಬದಲಿಗೆ ಅಸಂಬದ್ಧ ಹೇಳಿಕೆ ನೀಡಿ ದಿನದುಡುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಗಟ್ಟುವಂತೆ ನಾವು ಈಗಾಗಲೇ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೌಖಿಕ ಮನವಿಯನ್ನು ಮಾಡಿದ್ದೇವೆ. ಅವರು ಕೂಡ ಇದರ ಮೇಲೆ ಕ್ರಮಕೈಗೊಂಡಿಲ್ಲ. 

ಅಷ್ಟೇ ಅಲ್ಲದೇ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿರುವ ತಮಗೂ ಕೂಡ ಮೌಖಿಕವಾಗಿ ಮಾಹಿತಿ ನೀಡಿದ್ದೇವೆ. ಇಷ್ಟಾದರೂ ಕೂಡ ರಾಮಣ್ಣರವರ ಕರಾಮತ್ತು ಕಡಿಮೆಯಾಗುತ್ತಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸಮಸ್ಯೆ, ರಸ್ತೆ ಸಮಸ್ಯೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ಅವುಗಳ ಬಗ್ಗೆ ಅವರಿಗೆ ಇದುವರೆಗೂ ನಾಲ್ಕೈದು ಬಾರಿ ಮನವಿ ಮಾಡಿದ್ದೇವೆ. ಇಲ್ಲಿಯವರೆಗೂ ಕೂಡ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಾಗಲೊಮ್ಮೆ ಅವರು ಕಾಲಹರಣ ಮಾಡಿಕೊಂಡು ಹೋಗುತ್ತಿದ್ದಾರೆ. 

ಅಲ್ಲದೇ ಸಮಸ್ಯೆಗಳನ್ನು ಪರಿಹರಿಸುವಂತೆ ತಾಕೀತು ಮಾಡಿದರೇ, ರಾಜಿ ಸಂದಾನಕ್ಕೆ ಮುಂದಾಗುತ್ತಾರೆ ಎಂಬ ಅನೇಕ ಆರೋಪಗಳು ಅವರ ಮೇಲೆ ಇವೆ. ಇಷ್ಟೆಲ್ಲಾ ಗಂಭೀರ ಆರೋಪಗಳನ್ನು ಹೊತ್ತುಕೊಂಡಿರುವ ರಾಮಣ್ಣರವನ್ನು ಕೂಡಲೇ ಅಮಾನತ್ತುಗೊಳಿಸಬೇಕು. ಇಲ್ಲವೇ ಬೇರೆಡೆಗೆ ವರ್ಗಾವಣೆ ಮಾಡಬೇಕು ಅಥವಾ ಕಡ್ಡಾಯ ರಜೆಯ ಮೇಲೆ ಕಳಿಸಬೇಕು.

ಅದರೊಂದಿಗೆ ಅವರ ಕಾಲದಲ್ಲಿ ನಮ್ಮ ಪಾಮನಕಲ್ಲೂರು ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆ ನಡೆಸಿ, ರಾಮಣ್ಣರವರ ಮೇಲೆ ಮತ್ತು ಅಕ್ರಮದಲ್ಲಿ ಪಾಲ್ಗೊಂಡ ಪಂಚಾಯತಿ ಸಿಬ್ಬಂದಿಗಳ ಮೇಲೆ ಹಾಗೂ ಅಧ್ಯಕ್ಷರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಕರವೇ ಮುಖಂಡರು ಸಿಇಒರವರಿಗೆ ಬರೆದ ಮನವಿ ಪತ್ರದಲ್ಲಿ  ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇ ಪಾಮನಕಲ್ಲೂರು ಹೋಬಳಿ ಘಟಕದ ಅಧ್ಯಕ್ಷ ರಮೇಶ್ ಗಂಟ್ಲಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚೌಡ್ಲಿ, ಖಜಾಂಚಿ ಮಲ್ಲಪ್ಪ ಹಿರೇಮನೆ, ಮುಖಂಡರಾದ ಅಮರೇಶ್ ಡಿ ಪೂಜಾರಿ ಸೇರಿದಂತೆ ಅನೇಕರಿದ್ದರು.

#Pamanakallur #Pdo #Ramanna #Suspend #Maski #Raichur #ಪಾಮನಕಲ್ಲೂರು #ಪಿಡಿಒ #ಅಮಾನತ್ತು #ಮಸ್ಕಿ #ರಾಯಚೂರು

No comments:

Post a Comment