Sunday, January 5, 2020

ಅಂದು ಗಡಿ ಕಾಯುವ ಯೋಧ ಇಂದು ಕೆಎಎಸ್ ಅಧಿಕಾರಿ


ಶಿವಾನಂದ ಪೂಜಾರಿ
ಹುಟ್ಟು ಉಚಿತ ಸಾವು ಖಚಿತ ಸಾಧನೆಯೊಂದೆ ಶಾಶ್ವತ ಅನ್ನೋ ಮಾತು ಹೇಳುವುದು ಸುಲಭ, ಸಾಧಿಸಿ ತೋರಿಸುವುದು ಕಷ್ಟ ಅನ್ನೋ ಜನರ ಮಧ್ಯದಲ್ಲಿ ಅನೇಕರು ಸಾಧಿಸಿ ಗುರುತಿಸಿಕೊಂಡಿದ್ದಾರೆ. ಅವರವರ ಕ್ಷೇತ್ರಗಳಲ್ಲಿ ಮುಗಿಲೆತ್ತರದ ಸಾಧನೆಗೈದಿದ್ದಾರೆ. ಆದರೆ ಬಹುತೇಕ ಜನರು ಅದೇಗೋ ಭೂಮಿಗೆ ಬಂದಿದ್ದಿವಿ, ಅದೇಗೋ ಹೋಗ್ತಿವಿ ಏನ್ ಮಾಡೋದು ಅನ್ನೋ ಮನಸ್ಥಿತಿಯಲ್ಲೇ ಜೀವನ ಸಾಗಿಸ್ತಿದ್ದಾರೆ. ಇಂತವರ ನಡುವೆಯೇ ಅದೆಷ್ಟೋ ಸಮಸ್ಯೆ, ಕಷ್ಟಗಳನ್ನು ಮೆಟ್ಟಿನಿಂತು ಅಂದುಕೊಂಡದನ್ನ ಸಾಧಿಸಿದವರು ಬೆರಳೆಣಿಕೆಯಷ್ಟು ಜನರು ಮಾತ್ರ. 

ಆ ಬೆರಳೆಣಿಕೆಯಷ್ಟು ಜನರಲ್ಲಿ ಗುರುತಿಸಿಕೊಂಡಿದ್ದಾರೆ ಬಿಸಿಲನಾಡು, ಬರದನಾಡು ಅನ್ನೋ ಹಣೆಪಟ್ಟಿ ಹೊಂದಿರುವ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದ ಶಿವಾನಂದ ಪೂಜಾರಿ. ಶಿವಾನಂದ ಪೂಜಾರಿ ಹುಟ್ಟಿದ್ದು 31/01/1981ರಲ್ಲಿ, ತಂದೆ ಹನುಮಂತಪ್ಪ ಪೂಜಾರಿ, ತಾಯಿ ಹನುಮಮ್ಮ.
ಬಡ ದಂಪತಿಗಳ ಏಳನೆಯ ಮಗನಾಗಿ ಜನಿಸಿದ ಶಿವಾನಂದ. ಬೆಟ್ಟದಷ್ಟು ಕಷ್ಟಗಳ ನಡುವೆಯೇ ಒಂದನೇ ತರಗತಿಯಿಂದ ಏಳನೇ ತರಗತಿಯೊರಗಿನ ಶಿಕ್ಷಣವನ್ನು ಹುಟ್ಟೂರಿನ ಸರಕಾರಿ ಶಾಲೆಯಲ್ಲೇ  ಮುಗಿಸಿದ್ದಾರೆ. ಎಂಟನೇ ತರಗತಿಯಿಂದ ಪಿಯುಸಿವರೆಗಿನ ಶಿಕ್ಷಣವನ್ನು ಲಿಂಗಸುಗೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಇಷ್ಟೆಲ್ಲಾ ಶಿಕ್ಷಣ ಪಡೆದುಕೊಂಡಿರುವ ಶಿವಾನಂದ, ದೇಶ ಸೇವೆಗಾಗಿ ಇಂಡಿಯನ್ ಆರ್ಮಿ ಸೇರಿಕೊಂಡು ಸೇನೆಯಿಂದ ನಿವೃತಿಯಾಗಿ ಕೆಎಎಸ್ ಅಧಿಕಾರಿಯಾಗಿದ್ದಾರೆ.

ಶಿವಾನಂದರ ಸೇವೆಗಳು
ಶಿವಾನಂದ ಸೇನೆಗೆ ಸೇರಿ ನಿವೃತ್ತಿಯಾದ ನಂತರ, ರಾಯಚೂರಿನಲ್ಲಿ ಜಿಯೋ ಕಂಪನಿಯ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿದ್ದರು. ನಂತರ ಜಿಪಿಎಸ್ ಗ್ರೇಡ್ ಒನ್, ಪಿಡಿಒ ಹುದ್ದೆಗಳು ಒಲಿದು ಬಂದಿದ್ದವು. ಬಳಿಕ ಬಳ್ಳಾರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆಗೆ ಆಯ್ಕೆಯಾಗಿ ಅದೇ ಸೇವೆಯನ್ನು ಮುಂದುವರೆಸುತ್ತಿದ್ದು, ಇದೀಗ ಕೆಎಎಸ್ ಪರೀಕ್ಷೆ ಬರೆದು ವಾಣಿಜ್ಯ ತೆರಿಗೆ ಅಧಿಕಾರಿ (ಸಿಟಿಒ) ಹುದ್ದೆಗೆ ಆಯ್ಕೆಯಾಗಿದ್ದಾರೆ.
ಪತ್ನಿ ಮಕ್ಕಳೊಂದಿಗೆ ಶಿವಾನಂದ ಪೂಜಾರಿ
ಶಿವಾನಂದ ಬದುಕಿನ ಬುತ್ತಿ ಬಿಚ್ಚಿಟ್ಟದ್ದು ಹೀಗೆ:

ಅಂದು ಚಿಕ್ಕ ವಯಸ್ಸಿನಲ್ಲಿ ಗೋಲಿ ಆಡುತ್ತಿದ್ದ ನಾನು ಮುಂದೊಂದು ದಿನ ಭಾರತ ಮಾತೆಯ ಸೇವೆಯಲ್ಲಿ ನಿಜವಾದ ಆಟ ಆ ಗೋಲಿಗಳಿಂದಲೇ ಆರಂಭಿಸಿದೆ. ಆ ಚಿಕ್ಕ ವಯ‍ಸ್ಸಿನಲ್ಲಿ ದಿಕ್ಕು ತಿಳಿಯದೇ ಹುಚ್ಚನಂತೆ  ಬೀದಿ ಬೀದಿಗಳಲ್ಲಿ ಆಟ ಆಡಿಕೊಂಡಿದ್ದೆ. ನನ್ನ ತಾಯಿ ಶಾಲೆಗೆ ಕಳಿಸಿ ಶಿಕ್ಷಣವನ್ನು ಕೊಡಿಸಿದಳು . ಜೊತೆಗೆ ಒಳ್ಳೆಯ ನೀತಿ ಪಾಠವನ್ನು ಹೇಳಿಕೊಟ್ಟಿದ್ದಾಳೆ. 
ಬಾಲ್ಯ ಜೀವನದಲ್ಲಿ  ನಾನು ತಿಂದ ಏಟುಗಳು ನನ್ನ ವಯಸ್ಸಿನಲ್ಲಿ ಯಾರೂ ತಿಂದಿರಲಿಲ್ಲ.  ಯಾಕೆಂದರೆ, ನಾನು ಚಿಕ್ಕ ವಯಸ್ಸಿನಲ್ಲಿ ಆಟ ಆಡಲು ಗೆಳೆಯರ ಜೊತೆ ಹೊರಗಡೆ ಹೋಗುತ್ತಿದ್ದೆ. ಮನೆಯಲ್ಲಿ ಇರುತ್ತಿರಲಿಲ್ಲ. ಊಟಕ್ಕಾಗಿ ಮನೆಗೆ ಬರುತ್ತಿದ್ದೆ , ಉಳಿದ ಸಮಯ ಶಾಲೆ ಬಿಟ್ಟರೆ ಗೆಳೆಯರ ಮನೆಯ ಮುಂದೆ ಗೋಲಿ, ಕಬಡ್ಡಿ ಸೇರಿದಂತೆ ಇನ್ನಿತರ ಆಟಗಳಲ್ಲಿ ಕಳೆಯುತ್ತಿದ್ದೆ. ಆಗ  ತಾಯಿ ನನ್ನನ್ನು  ಹುಡುಕಿಕೊಂಡು ಬರುತ್ತಿದ್ದಳು. ಊರು ಸುತ್ತಿ ಸುತ್ತಿ ಸುಸ್ತಾದಾಗ ನನ್ನ ತಾಯಿ ನನ್ನ ಮೇಲೆ ಕೋಪಗೊಂಡು ಕಂಬಕ್ಕೆ ಕಟ್ಟಿ ಬಡಿದ ಘಟನೆಗಳು ಸಾಕಷ್ಟಿವೆ. ಆ ಹೊಡೆತಗಳೇ ನಾನು ಇವತ್ತು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿವೆ.
ನನ್ನ ತಾಯಿ ಜೀವನದ ಪ್ರತಿ ಗಳಿಗೆಯನ್ನು ಕಷ್ಟದಲ್ಲಿ ಕಳೆಯುವ ಮೂಲಕ ದುಡಿಮೆಯನ್ನು ನಂಬಿ ಜೀವನ ಸಾಗಿಸಿದ್ದಾಳೆ. ಅಂತೆಯೇ ತಂದೆಯೂ  ಕೂಡ. ನನ್ನ ತಂದೆ 20 ವರ್ಷಗಳ ಹಿಂದೆ ನಾನು ಸೇನೆಗೆ ಸೇರಲು ಹೋಗುವಾಗ ಬೆಳಗಾವಿವರೆಗೂ ಜೊತೆಗೆ ಬಂದ್ದಿದ್ದರು.
ನನ್ನ ಜೀವನದ ಪ್ರಮುಖ ಘಟನೆಗಳಲ್ಲಿ ಒಂದು ಎಂದರೇ, 2006ರ ಅಕ್ಟೋಬರ್ 28 ರಂದು ದೇಶವೆಲ್ಲಾ ದೀಪಾವಳಿ ಹಬ್ಬದ ಖುಷಿಯಲ್ಲಿತ್ತು, ಆ ದಿನ ನಾನು ದೇಶದ ಕಗ್ಗತ್ತಲ ಗಡಿಯಲ್ಲಿ ಪಾಕಿಸ್ತಾನದ ಉಗ್ರವಾದಿಗಳ ಜೊತೆ ಕಾಶ್ಮೀರದ ಗಡಿ ಭಾಗದಲ್ಲಿ ಹೋರಾಡಿ  ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಗಿದ್ದೆ.
ಅಂದು ಸಾವಿನ ಜೊತೆಗೆ ಹೋರಾಡಿ ಬಂದ ನಾನು, ಏನಾದರೂ ಸಾಧಿಸಬೇಕು ಎಂಬ ಛಲದಿಂದ ಕರ್ನಾಟಕದ ಅತ್ಯುನ್ನತ ಪರೀಕ್ಷೆಯಾದ  ಕೆಎಎಸ್‍ ನಲ್ಲಿ ತೇರ್ಗಡೆಯಾಗಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿದ್ದೇನೆ. ಇದು ನನಗೆ ತುಂಬಾ ಖುಷಿ ಕೊಡುತ್ತದೆ.

ಬದುಕು ಬದಲಿಸಿತು ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ವಾಟ್ಸಾಪ್ ಗ್ರುಪ್:
ಇದು ಆಧುನಿಕ ಯುಗ, ಈಗ ಏನಿದ್ದರೂ ಕಂಪ್ಯೂಟರ್, ಆಂಡ್ರಾಯ್ಡ್ ಮೊಬೈಲ್ ಪೋನ್ ಗಳದ್ದೇ ದರ್ಬಾರ್. ಬಹುತೇಕರು ಮೊಬೈಲ್ ಇಲ್ಲದೇ ಬದುಕೇ ಇಲ್ಲ ಅಂದುಕೊಂಡಿದ್ದಾರೆ. ಇದೇ ಮೊಬೈಲ್ ಅದೆಷ್ಟೋ ಜನರ ಬದುಕು ಹಾಳಾಗುವಂತೆ ಮಾಡಿದ. ಮೊಬೈಲ್ ಗಳನ್ನು ಕೆಟ್ಟ ಕೆಲಸಗಳಿಗೆ ಬಳಸಿಕೊಂಡ ಬಹುತೇಕ ಯುವ ಸಮುದಾಯ ಹಾಳಾಗಿದೆ. ಆದರೆ ಕೆಲವರು ಇದೇ ಮೊಬೈಲ್ ಗಳನ್ನು ಬಳಸಿಕೊಂಡು ಜೀವನದಲ್ಲಿ ಅಂದುಕೊಂಡದನ್ನ ಸಾಧಿಸಿದ್ದಾರೆ. ಆಂಡ್ರಾಯ್ಡ್ ಮೊಬೈಲ್ ಇದ್ರೆ ಸಾಲದು ಅದಕ್ಕೆ ಇಂಟರ್ನೆಟ್ & ವಾಟ್ಸಾಪ್, ಫೇಸ್ಬುಕ್ ಗ್ರುಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಅವಶ್ಯಕ. ಇದನ್ನ ಅರಿತುಕೊಂಡ ರಾಯಚೂರು ಜಿಲ್ಲೆ ಲಿಂಗಸುಗೂರಿನ ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಮಾಲಿಕ ಅಶೋಕ ನಾಯಕ ದಿದ್ದಿಗಿಯವರು ತಮ್ಮ ಸಂಸ್ಥೆಯ ಹೆಸರಿನಲ್ಲಿ ಶಿಲ್ಪಾಶ್ರೀ ಕಂಪ್ಯೂಟರ್ ಎಂಬ ವಾಟ್ಸಾಪ್ ಗ್ರುಪ್ ಮಾಡಿದ್ದಾರೆ. ಆ ಗ್ರುಪ್ ಗಳು ಬಹುತೇಕರಿಗೆ ನೆರವಾಗಿವೆ ಎನ್ನುತ್ತಾರೆ ಶಿವಾನಂದ ಪೂಜಾರಿ. 
ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್
ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್ ನಲ್ಲಿ ಕೆಎಎಸ್, ಐಎಎಸ್, ಪಿಎಸ್ಐ, ಪಿಡಿಒ ಸೇರಿದಂತೆ ಪ್ರತಿಯೊಂದು ಸರ್ಕಾರಿ ಹುದ್ದೆಗಳಿಗೆ ಅನುಕೂಲವಾಗುವ ರೀತಿಯ ನೋಟ್ಸ್, ಮಾಹಿತಿಗಳನ್ನು ಅಪ್ಡೇಟ್ ಮಾಡುತ್ತಾರೆ. ಅದು ಪ್ರತಿಯೊಬ್ಬ ವ್ಯಕ್ತಿಗೂ ಅನುಕೂಲವಾಗುತ್ತದೆ. ಈ ಸಾರಿ ಈ ಭಾಗದ ಐವರು ಕೆಎಎಸ್ ಪರೀಕ್ಷೆ ಪಾಸಾಗಿದ್ದು ಶಿಲ್ಪಾಶ್ರೀ ಕಂಪ್ಯೂಟರ್ ಗ್ರುಪ್ ನೆರವಾಗಿವೆ. ಅಲ್ಲದೇ ಮಾಲಿಕ ಅಶೋಕ ನಾಯಕ ದಿದ್ದಗಿಯವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಬೇಕಾದ ಮಾಹಿತಿಯನ್ನು ನೀಡುತ್ತಾರೆ. ಇದೆಲ್ಲವೂ ಉಚಿತವಾಗಿದೆ ಎಂದಿದ್ದಾರೆ ಶಿವಾನಂದ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

No comments:

Post a Comment