(ಪಾಮನಕಲ್ಲೂರು: ಐವತ್ತು ಲಕ್ಷ ರೂ.ಗಳ ವೆಚ್ಚದ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಕಳಪೆ..!? ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು)
ದೊರೆ ನ್ಯೂಸ್ ಕನ್ನಡ, ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಕಳಪೆ ಗುಣಮಟ್ಟದ ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು, ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಟ್ಟಡಕ್ಕೆ ಬಳಸಲಾದ ಸಿಮೆಂಟ್ ಎಳ್ಳೆಗಳು (ಹಾಲೋ ಬ್ಲಾಕ್ಗಳು) ಅದಕ್ಕೆ ಸಾಕ್ಷಿ ಎಂಬಂತೆ ಕಂಡುಬಂದಿವೆ.
ಪಾಮನಕಲ್ಲೂರಿನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಮಾಹಿತಿ:
ರಾಜ್ಯ ಸರ್ಕಾರದ ಅನುದಾನದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಕಟ್ಟಡವನ್ನು ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿ (ಆದಿ ಬಸವೇಶ್ವರ ದೇವಸ್ಥಾನದ ಹತ್ತಿರ) ನಿರ್ಮಾಣ ಮಾಡಲಾಗುತ್ತಿದ್ದು, ಅಂದಾಜು ಐವತ್ತು ಲಕ್ಷ ರೂ.ಗಳ ವೆಚ್ಚದ ಕಾಮಗಾರಿ ಇದಾಗಿದೆ. ಕಟ್ಟಡ ಕಾಮಗಾರಿಯನ್ನು ಲ್ಯಾಂಡ್ ಆರ್ಮಿಯವರ ನೇತೃತ್ವದಲ್ಲಿ ಮಾಡಲಾಗುತ್ತಿದ್ದು, ಮಸ್ಕಿಯ ಶರವತಿ ಎಂಟರ್ ಪ್ರೈಸಸ್ ನ ಅಮರೇಶ್ ಎಂಬುವವರು ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಪ್ರಸಾದ್ ಎಂಬುವವರು ಕಟ್ಟಡ ಕೆಲಸ ಮಾಡುತ್ತಿದ್ದಾರೆ. ವಿನಾಯಕ್ ಎಂಬುವವರು ಸೈಟ್ ಇಂಜಿನಿಯರ್, ಅನಿಲ್ ಕುಮಾರ್ ಗೋಕುಲೆ ಎಂಬುವವರು ಇಇ ಇದ್ದಾರೆ.
ಕಳಪೆ ಮಟ್ಟದ ಕಾಮಗಾರಿ, ಸಾಕ್ಷಿ ನೀಡಿದ ಗ್ರಾಮಸ್ಥರು:
ಐವತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರೈತ ಸಂಪರ್ಕ ಕೇಂದ್ರದ ಕಟ್ಟಡ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಿಲ್ಡಿಂಗ್ ಅನ್ನು ಬೇಕಾಬಿಟ್ಟಿಯಾಗಿ ಕಟ್ಟಲಾಗಿದೆ. ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ತಳದಲ್ಲೇ ಅನೇಕ ತಪ್ಪುಗಳಾಗಿವೆ. ಅಲ್ಲದೇ ಕಟ್ಟಡಕ್ಕೆ ಬಳಕೆ ಮಾಡಲಾಗಿರುವ ಸಿಮೆಂಟ್ ಎಳ್ಳೆಗಳು ಸಂಪೂರ್ಣ ಕಳಪೆ ಮಟ್ಟದ ಹಾಲೋ ಬ್ಲಾಕ್ ಗಳಾಗಿವೆ. ಅವುಗಳನ್ನು ಕೈಯಿಂದ ಮುರಿದು ಹಾಕಬಹುದಾಗಿದೆ. ತಿನ್ನೊ ಸ್ವೀಟ್ ಐಟೈಮ್ಸ್ ಗಳಂತೆ ಸಿಮೆಂಟ್ ಎಳ್ಳೆಗಳು ಸ್ಮೂತ್ ಆಗಿವೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಎಳ್ಳೆಗಳು ಕಳಪೆ ಗುಣಮಟ್ಟದವುಗಳು ಎಂಬುದನ್ನು ಗ್ರಾಮಸ್ಥರು ವಿಡಿಯೋ, ಪೋಟೋಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಅಲ್ಲದೇ ಆ ಕಟ್ಟಡಕ್ಕೆ ಅವೇ ಎಳ್ಳೆಗಳನ್ನು ಹೆಚ್ಚಾಗಿ ಬಳಸಲಾಗಿದೆ. ಕಟ್ಟಡವನ್ನು ಒಡೆದು ಹಾಕಿ ಹೊಸದಾಗಿ ನಿರ್ಮಿಸಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.
ಪೋನ್ ಮಾಡಿದ್ರು ಕೇರ್ ಮಾಡ್ತಿಲ್ಲ ಸಚಿವರು, ಅಧಿಕಾರಿಗಳು:
ನಮ್ಮೂರಿನಲ್ಲಿ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿರುವ ಬಗ್ಗೆ ನಾವು ಉಸ್ತುವಾರಿ ಸಚಿವ ಡಿಸಿಎಂ ಲಕ್ಷ್ಮಣ ಸವದಿ, ಕೃಷಿ ಸಚಿವ ಬಿ.ಸಿ ಪಾಟೀಲ್, ಕೊಪ್ಪಳ ಸಂಸದ ಸಂಗಣ್ಣ ಕರಡಿಯವರ ಆಪ್ತ ಸಹಾಯಕರ ಗಮನಕ್ಕೆ ತಂದಿದ್ದೇವೆ. ಅಲ್ಲದೇ ಮಸ್ಕಿಯ ಮಾಜಿ (ಅನರ್ಹ) ಶಾಸಕ ಪ್ರತಾಪಗೌಡ ಪಾಟೀಲ್ ರವರ ಗಮನಕ್ಕೆ ತಂದಿದ್ದೇವೆ. ಹಾಗೂ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿ, ಸೈಟ್ ಇಂಜಿನಿಯರ್ ವಿನಾಯಕ, ಇಇ ಅನಿಲ್ ಕುಮಾರ್ ಗೋಕುಲೆಯವರ ಗಮನಕ್ಕೆ ತಂದಿದ್ದೇವೆ ಇಷ್ಟೆಲ್ಲಾ ಆದರೂ ಕಳಪೆ ಮಟ್ಟದ ಕಾಮಗಾರಿ ತಡೆಗಟ್ಟಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲು ಯಾರೊಬ್ಬರೂ ಮುಂದಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ.
ಎಸ್ಟಿಮೆಂಟ್ ಕಾಪಿ ಕೊಡಲು ಹಿಂದೇಟು:
ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಎಸ್ಟಿಮೆಂಟ್ ಕಾಪಿ ಕೊಡುವಂತೆ ಇಂಜಿನಿಯರ್, ಕಾಂಟ್ಯ್ರಾಕ್ಟರ್, ಮೇಸ್ತ್ರಿಗಳಿಗೆ ನಾವು ಅನೇಕ ಸಾರಿ ಮನವಿ ಮಾಡಿದ್ದೇವೆ. ಎಸ್ಟಿಮೆಂಟ್ ಕಾಪಿ ಇಲ್ಲದೆ ಕೆಲಸ ಮಾಡಬೇಡಿ ಎಂದು ಒತ್ತಾಯ ಕೂಡ ಮಾಡಿದ್ದೇವೆ. ಇದುವರೆಗೂ ಎಸ್ಟಿಮೆಂಟ್ ಕಾಪಿ ತೋರಿಸಿಲ್ಲ. ಇದರಲ್ಲಿ ಏನೇನೂ ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಗ್ರಾಮಸ್ಥರು ಕಾಮಗಾರಿಯ ಬಗ್ಗೆ ಹಾಗೂ ಸಂಬಂಧಿಸಿದವರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಟ್ಟಡ ನೆಲ ಸಮ ಮಾಡಿ ಹೊಸದಾಗಿ ನಿರ್ಮಿಸಿ ಅನಾಹುತ ತಪ್ಪಿಸಿ:
ರೈತ ಸಂಪರ್ಕ ಕೇಂದ್ರದ ಬಿಲ್ಡಿಂಗ್ ಸಂಪೂರ್ಣವಾಗಿ ಕಳಪೆ ಗುಣಮಟ್ಟದ್ದಾಗಿದ್ದು ಈಗಾಗಲೇ ಅರ್ಧದಷ್ಟು ಕಟ್ಟಲಾಗಿರುವ ಕಟ್ಟಡವನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಅದನ್ನು ನೆಲ ಸಮಗೊಳಿಸಿ, ಕಳಪೆ ಮಟ್ಟದ ಕಟ್ಟಡ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರ ಮೇಲೆ ಕಠಿಣ ಕ್ರಮಕೈಗೊಂಡು ಹೊಸದಾಗಿ ಕಾಮಗಾರಿ ಆರಂಭಿಸುವ ಮೂಲಕ ಉತ್ತಮ ದರ್ಜೆಯ ಕಟ್ಟಡ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.
ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಸ್ವಲ್ಪ ಕಟ್ಟಡ ಕೆಡವಿ ಕಟ್ಟಲು ಮುಂದಾದ ಗುತ್ತಿಗೆದಾರರು:
ಕಳಪೆ ಗುಣಮಟ್ಟದ ಕಟ್ಟಡ ಕಾಮಗಾರಿಯನ್ನು ಕಂಡ ಗ್ರಾಮಸ್ಥರು ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮಣಿದ ಗುತ್ತಿಗೆದಾರರು ಮೇಲಿನ ಸ್ವಲ್ಪ ಕಟ್ಟಡವನ್ನು ಕೆಡವಿ ಮತ್ತೆ ಕಟ್ಟಲು ಮುಂದಾಗಿದ್ದಾರೆ. ಒಟ್ಟು ಕಟ್ಟಡವನ್ನು ನೆಲ ಸಮಗೊಳಿಸಿ ಗುಣಮಟ್ಟದ ಕಟ್ಟಡ ನಿರ್ಮಿಸಬೇಕು. ಆ ಮೂಲಕ ಈ ಕಳಪೆ ಗುಣಮಟ್ಟದ ಕಟ್ಟಡದಿಂದ ಮುಂದೆ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..
H
ReplyDelete