Wednesday, December 8, 2021

ಸೇನಾ ಹೆಲಿಕಾಪ್ಟರ್ ಪತನದ ಸುದ್ದಿ ಕೇಳಿ ದುಃಖವಾಗುತ್ತಿದೆ: ಶಾಸಕ ಬಂಡೆಪ್ಪ ಖಾಶೆಂಪುರ್










ದೊರೆ ನ್ಯೂಸ್ ಕನ್ನಡ Dore News Kannada

ಬೀದರ್ (ಡಿ.08): ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ರವರು ಮತ್ತು ಅವರ ಪತ್ನಿ ಹಾಗೂ ಹನ್ನೆರಡು ಜನ ಸೈನಿಕರು ಕೊಯಮತ್ತೂರಿನ ಸೇನಾ ಕಾರ್ಯಕ್ರಮಕ್ಕೆ ಸೇನಾ ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡು ಸಿಡಿಎಸ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮತ್ತು ಸೈನಿಕರು ಹುತಾತ್ಮರಾಗಿರುವ ಸುದ್ದಿ ಕೇಳಿ ದುಃಖವಾಗುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದ್ದಾರೆ.

ಸೇನಾ ಹೆಲಿಕಾಪ್ಟರ್ ದುರಂತದ ಬಳಿಕ ಬುಧವಾರ ಸಂಜೆ ವೇಳೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್, ಇನ್ಸ್ಟಾಗ್ರಾಮ್ ಗಳ ಮೂಲಕ ದುಃಖ ವ್ಯಕ್ತಪಡಿಸಿದ ಶಾಸಕರು, ಹಿಂದಿನಿಂದಲೂ ರಾವತ್ ರವರ ಕುಟುಂಬ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿತ್ತು. ಬಿಪಿನ್ ರಾವತ್ ರವರು ಕೂಡ ಸೇನೆಗೆ ಸೇರಿದಾಗಿನಿಂದ ನಿವೃತ್ತಿಯವರೆಗೂ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದರು. ಅವರನ್ನು ಸೇನಾಪಡೆಗಳ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಸಿಡಿಎಸ್ ಆಗಿದ್ದ ಅವರು, ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿರುವುದು ತುಂಬಾ ದುಃಖದ ಸುದ್ದಿಯಾಗಿದೆ. 

ಘಟನೆಯಲ್ಲಿ ರಾವತ್ ರವರ ಪತ್ನಿ ಮಧುಲಿಕಾರವರು ಕೂಡ ಕೊನೆಯುಸಿರೆಳೆದಿದ್ದು, ವೀರ ಯೋಧರು ಹುತಾತ್ಮರಾಗಿದ್ದಾರೆ. ದುರಂತದಲ್ಲಿ ಪ್ರಾಣಬಿಟ್ಟ ಸಿಡಿಎಸ್ ಬಿಪಿನ್ ರಾವತ್, ಪತ್ನಿ ಮಧುಲಿಕಾ ಹಾಗೂ ಹುತಾತ್ಮ ಯೋಧರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಂತಾಪ ವ್ಯಕ್ತಪಡಿಸಿದ್ದಾರೆ.

Saturday, June 12, 2021

ಪಾಮನಕಲ್ಲೂರು ಗ್ರಾಮ ಹಾಗೂ ಗ್ರಾಮದ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಮಹಿಮೆ

ಶ್ರೀ ಆದಿ ಬಸವೇಶ್ವರ ದೇವಸ್ಥಾನ ಪಾಮನಕಲ್ಲೂರು
ಪಾಮನಕಲ್ಲೂರು ಗ್ರಾಮ ಹಾಗೂ ಗ್ರಾಮದ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಮಹಿಮೆ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮವೂ ರಾಯಚೂರಿನಿಂದ ಲಿಂಗಸುಗೂರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಬರುವ ಗ್ರಾಮವಾಗಿದೆ. ಪಾಮನಕಲ್ಲೂರು ಗ್ರಾಮವೂ ಲಿಂಗಸುಗೂರು ನಗರದಿಂದ ರಾಯಚೂರಿಗೆ ಹೋಗುವಾಗ ಸುಮಾರು 18 ಕಿ.ಮೀ ದೂರದಲ್ಲಿ ಬರುತ್ತದೆ. ಈ ಗ್ರಾಮವೂ ಹೋಬಳಿ ಕೇಂದ್ರವಾಗಿದ್ದು. ಇಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೂ ಶಾಲೆಗಳಿವೆ. ಆಂಗ್ಲ ಮಾಧ್ಯಮ ಶಾಲೆಗಳೂ ಇವೆ. ಗ್ರಾಮ ಪಂಚಾಯ್ತಿ, ನಾಡಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಛೇರಿಗಳೂ ಇವೆ.  

ಇಲ್ಲಿ ಪ್ರತಿವರ್ಷವೂ ಬಸವೇಶ್ವರ ಜಯಂತಿಯ ದಿನದಂದು ಶ್ರೀ ಆದಿ ಬಸವೇಶ್ವರ ಜಾತ್ರೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪಾಮನಕಲ್ಲೂರು ಮತ್ತು ಸುತ್ತಮುತ್ತಲಿರುವ ಗ್ರಾಮಗಳಲ್ಲಿ ಇದೊಂದು ದೊಡ್ಡ ಜಾತ್ರೆಯಾಗಿದ್ದು. ಈ ಜಾತ್ರೆಗೆ ಸುಮಾರು ವರ್ಷಗಳ ಇತಿಹಾಸವಿದೆ. ಅಲ್ಲದೇ ಕಳೆದ ಕೆಲವು ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಜಾತ್ರೆಯ ನಿಮಿತ್ಯ ಹಮ್ಮಿಕೊಳ್ಳಲಾಗುತ್ತಿದೆ. ಸುಮಾರು 101 ವಿವಾಹಗಳ ಗರಿಷ್ಠ ಮೀತಿಯವರೆಗೂ ಇಲ್ಲಿ ಸಾಮೂಹಿಕ ವಿವಾಹಗಳು ಪ್ರತಿ ವರ್ಷವೂ ನಡೆಯುತ್ತವೆ.

 

ಆದಿ ಬಸವೇಶ್ವರ ಜಾತ್ರೆಯ ವಿಶೇಷತೆ:

 

ಪಾಮನಕಲ್ಲೂರು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ನಗರವೂ ಅಲ್ಲ. ಇತ್ತ ಕ್ಕುಗ್ರಾಮವೂ ಅಲ್ಲ. ಬೆಳೆಯುತ್ತಿರುವ ಗ್ರಾಮವಾಗಿದ್ದು. ಪಾಮನಕಲ್ಲೂರು ಗ್ರಾಮದಲ್ಲಿ ಅನೇಕ ಜಾತ್ರೆಗಳು ನಡೆದರು ಆದಿ ಬಸವೇಶ್ವರ ಜಾತ್ರೆಯಷ್ಟು ಅದ್ದೂರಿಯಾಗಿ ಇರುವುದಿಲ್ಲ. ಆದಿ ಬಸವೇಶ್ವರ ಜಾತ್ರೆಗೆ ಸುತ್ತ ಮುತ್ತಲಿನ ಗ್ರಾಮಸ್ಥರಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಬಂದು ದರ್ಶನ ಪಡೆದುಕೊಂಡು ಹೋಗುತ್ತಾರೆ. ಇದು ನೋಡುಗರ ಮನ ಸೆಳೆಯುತ್ತದೆ.

ಆದಿ ಬಸವೇಶ್ವರ ಜಾತ್ರೆಯೂ ಸುಮಾರು ವರ್ಷಗಳಿಂದ್ದಲೂ ನಡೆಯುತ್ತಾ ಬಂದಿದ್ದು. ಮೊದಲಿಗೆ ದೇವಸ್ಥಾನ ಚಿಕ್ಕದಾಗಿತ್ತು. ಆದರೇ ಕಳೆದ ಕೆಲ ವರ್ಷಗಳ ಹಿಂದೆ ಗುಡಿ (ದೇವಸ್ಥಾನ)ಯನ್ನು ದೊಡ್ಡದಾಗಿ ಕಟ್ಟಲಾಗಿದೆ. ತುಂಬ ಸುಂದರವಾಗಿದೆ. ಅಲ್ಲದೇ ವಿಶಾಲವಾಗಿದೆ. ಗ್ರಾಮದಿಂದ ಸುಮಾರು 01.05 ಕಿ.ಮೀ ದೂರದಲ್ಲಿರುವ ದೇವಸ್ಥಾನ ಪಾಮನಕಲ್ಲೂರಿನಿಂದ ಚಿಕ್ಕಹೆಸರೂರು ಕಡೆಗೆ ನಡೆದರೆ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದೆ.

 ದೇವಸ್ಥಾನದ ಎದುರುಗಡೆ ಪಾಮನಕಲ್ಲೂರಿನ ಸರ್ಕಾರಿ ಪ್ರೌಡ ಶಾಲೆ ಇದೆ. ಅದರ ಪಕ್ಕದಲ್ಲಿ ಪಾಮನಕಲ್ಲೂರಿನ ಸುಂದರವಾದ ಮಹರ್ಷಿ ವಾಲ್ಮೀಕಿ ಭವನ ಇದೆ. ಅದರ ಹಿಂದುಗಡೆ ವಸತಿ ನಿಲಯವಿದೆ. ಇನ್ನೂ ಸುತ್ತಮುತ್ತ ವಿವಿಧ ಸರ್ಕಾರಿ ಕಟ್ಟಡಗಳು ನಿರ್ಮಾಣಗೊಂಡಿವೆ.

 

ಪಾಮನಕಲ್ಲೂರಿನ ಆದಿ ಬಸವೇಶ್ವರನ ಮಹಿಮೆ:

 

ಪಾಮನಕಲ್ಲೂರಿನ ಆದಿ ಬಸವೇಶ್ವರನು ತುಂಬ ಶಕ್ತಿಶಾಲಿ ದೇವರಾಗಿದ್ದು. ನಂಬಿದ ಭಕ್ತರನ್ನು ಸದಾಕಾಲ ಕಾಪಾಡುತ್ತಾನೆ. ಆದರಿಂದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಾತ್ರೆ ಪ್ರಾರಂಭವಾಗಲು ಸಂತೆಕಲ್ಲೂರು ಮಠದ ಸ್ವಾಮಿಜಿಗಳು ಬಹಳಷ್ಟು ಪ್ರಯತ್ನ ಪಟ್ಟರು, ಬಸವೇಶ್ವರನ ದಯೆಯಿಂದ ಜಾತ್ರೆ ಪ್ರಾರಂಭವಾಗಿದೆ. ಅಂದಿನಿಂದ ಇಲ್ಲಿಯವರೆಗೂ ಪ್ರತಿ ವರ್ಷವೂ ಜಾತ್ರೆ ನಡೆಯುತ್ತಿದೆ. ಅಲ್ಲದೇ ಜಾತ್ರೆಯಲ್ಲಿ ಹುಚ್ಚಯ್ಯ ಎಳೆಯುತ್ತಾರೆ. ಕಳೆದ ಕೆಲ ವರ್ಷಗಳಿಂದ ರಥೋತ್ಸವವೂ ನಡೆಯುತ್ತಿದೆ.

 

ಆದಿ ಬಸವೇಶ್ವರನ ಇನ್ನೊಂದು ವಿಶೇಷ:

 

ಈ ಭಾಗದ ರೈತರು ಕೊಳವೆ ಬಾವಿಗಳನ್ನು ಕೊರೆಯಿಸಿದರೆ ವಿಫಲವಾಗುವುದಿಲ್ಲ. ಮತ್ತು ಈ ಭಾಗದ ರೈತರ ತೋಟಗಳಲ್ಲಿ ದೊರೆಯುವ ನೀರು ಸಿಹಿ ನೀರು. ಇದು ಆದಿ ಬಸವೇಶ್ವರನ ಮಹಿಮೆ ಎನ್ನುತ್ತಾರೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನರು.

 

ಏಳು ಊರುಗಳಿಗೆ ನೀರು ನೀಡಿದ ಗ್ರಾಮವಿದು:

 

ಪಾಮನಕಲ್ಲೂರು ಗ್ರಾಮದ ಸುತ್ತಮುತ್ತಲಿನ ಬಹತೇಕ ಗ್ರಾಮಗಳಲ್ಲಿ ಉಪ್ಪು ನೀರು ದೊರೆಯುತ್ತದೆ. ಆದರೆ ಈ ಪಾಮಕಲ್ಲೂರು ಗ್ರಾಮದಲ್ಲಿ ಸಿಹಿ ನೀರು ದೊರೆಯುತ್ತವೆ. ಕಳೆದ ಕೆಲವ ವರ್ಷಗಳ ಹಿಂದೆ ಪಾಮನಕಲ್ಲೂರು ಗ್ರಾಮದ ನೀರನ್ನೇ ಸುತ್ತಲೂ ಏಳು ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು.

 
ಜಾತ್ರೆಯ ದಿನ ಇಲ್ಲವೇ ಒಂದು ದಿನ ಹಿಂದೆ, ಮುಂದೆ ಮಳೆ ಬಂದೇ ಬರುತ್ತೆ:

 

ಪ್ರತಿ ವರ್ಷವೂ ಆದಿ ಬಸವೇಶ್ವರ ಜಾತ್ರೆಯ ಒಂದು ದಿನ ಮುಂಚೆ ಅಥವಾ ಜಾತ್ರೆಯ ದಿನದಂದು ಮತ್ತು ಜಾತ್ರೆಯ ಮುರುದಿನವಾದರು ಮಳೆ ಬಂದೇ ಬರುತ್ತದೆ. ಇದು ಬಸವೇಶ್ವರನ ಮಹಿಮೆ ಎಂದು ಅನೇಕರು ಹೇಳುತ್ತಾರೆ. ಪಾಮನಕಲ್ಲೂರು ಗ್ರಾಮದ ಜನರಿಗೆ ಮಳೆಗಾಗಿ ಕಾದು ಕಾದು ಸಾಕಾದಾಗ ಜಾತ್ರೆಯ ದಿನದಂದು ಮಳೆ ತರುವ ಮೂಲಕ ಜನರ ಮನ ತಂಪ್ಪಾಗಿಸುತ್ತಾನೆ ಬಸವಣ್ಣ.

 
ಜಾತ್ರೆಯ ದಿನ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಸಾದ ವ್ಯವಸ್ಥೆ:

 

ಪಾಮನಕಲ್ಲೂರು ಗ್ರಾಮದಲ್ಲಿ ಬಸವ ಜಯಂತಿಯ ದಿನದಂದು ನಡೆಯುವ ಆದಿ ಬಸವೇಶ್ವರ ಜಾತ್ರೆಯಲ್ಲಿ ಪ್ರತಿ ವರ್ಷವೂ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿರುತ್ತದೆ. ಅಲ್ಲದೇ ವಿಶೇಷ ಸಂದರ್ಭಗಳಲ್ಲಿ, ಅಮವಾಸೆಯ ದಿನಗಳಂದು ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮಗಳು ನಡೆಯುತ್ತವೆ.

 
ಪ್ರತಿವರ್ಷ ನಡೆಯುತ್ತೆ ಅನ್ನದಾಸೋಹ:

 

ಪ್ರತಿ ವರ್ಷವೂ ಶ್ರೀಶೈಲಕ್ಕೆ ಪಾದ ಯಾತ್ರೆ ಮಾಡುವ ಭಕ್ತಾದಿಗಳಿಗೆ ಇಲ್ಲಿ ಅನ್ನ ದಾಸೋಹವನ್ನು ಸುಮಾರು ಒಂದು ವಾರದವರೆಗೂ ನಡೆಸಿಕೊಂಡು ಬರಲಾಗುತ್ತದೆ. ಪಾಮನಕಲ್ಲೂರು ಗ್ರಾಮವೂ ಕೃಷಿ ಸೇರಿದಂತೆ ಎಲ್ಲಾ ರೀತಿಯಿಂದಲೂ ಉತ್ತಮ ಗ್ರಾಮವಾಗಿದೆ. ಇದಕ್ಕೆಲ್ಲಾ ಆದಿಬಸವೇಶ್ವರನ ಕೃಪೆ ಎನ್ನುತ್ತಾರೆ ಪಾಮನಕಲ್ಲೂರು ಗ್ರಾಮದ ಭಕ್ತಾದಿಗಳು ಮತ್ತು ಶ್ರೀ ಆದಿಬಸವೇಶ್ವರ ದೇವಸ್ಥಾನ ಸಮಿತಿಯ ಯುವಕರು. ಇಂತಹ ಪುಣ್ಯ ಸ್ಥಳಗಳನ್ನು ಗುರುತಿಸಿ ಇನಷ್ಟು ಸೌಕರ್ಯಗಳನ್ನು ದೊರಕಿಸಿಕೊಡುವ ಮೂಲಕ ಐತಿಹಾಸಿಕ ಸ್ಥಳಗಳನ್ನಾಗಿ ಮತ್ತು ಪ್ರವಾಸಿ ತಾಣಗಳನ್ನಾಗಿ ಮಾಡಬೇಕಾಗಿರುವುದು ಸಂಬಂಧಿಸಿದ ಇಲಾಖೆಯ ಕರ್ತವ್ಯವಾಗಿದೆ. (ಮಾಹಿತಿ: ಪಾಮನಕಲ್ಲೂರು ಗ್ರಾಮದ ಹಿರಿಯರಿಂದ ಸಂಗ್ರಹಿಸಿದ್ದು).. (ವಿಶೇಷ ಲೇಖನ ಪತ್ರಕರ್ತ ಅಯ್ಯಣ್ಣ ನಾಯಕ ಪಾಮನಕಲ್ಲೂರು ಅವರು ಬರೆದಿರುವುದು.)

 

ವಿಶೇಷ ಲೇಖನ:
ಪತ್ರಕರ್ತ
ಅಯ್ಯಣ್ಣ ನಾಯಕ ಪಾಮನಕಲ್ಲೂರು

Thursday, February 4, 2021

ವಾಲ್ಮೀಕಿ ನಾಯಕ ಸಮುದಾಯಕ್ಕಾಗಿ ಪ್ರತ್ಯೇಕ ‘ರೆಜಿಮೆಂಟ್’ ಸ್ಥಾಪನೆಗೆ ಆಗ್ರಹಿಸಿ ಮಸ್ಕಿಯಿಂದ ಸುರಪುರದವರೆಗೆ ಪಾದಯಾತ್ರೆ

‘ವಾಲ್ಮೀಕಿ ರೆಜಿಮೆಂಟ್’ ಪಾದಯಾತ್ರೆಗೆ ಬೆಂಬಲಿಸಿ: ಶರಣು ಸುರಪುರಕರ್ ಮನವಿ

ವಾಲ್ಮೀಕಿ ನಾಯಕ ಸಮುದಾಯಕ್ಕಾಗಿ ಭಾರತೀಯ ಸೇನೆಯಲ್ಲಿ ಪ್ರತ್ಯೇಕ ರೆಜಿಮೆಂಟ್ ಸ್ಥಾಪನೆಗೆ ಒತ್ತಾಯಿಸಿ ಇದೇ ಫೆ.05ರಿಂದ 08ರವರೆಗೆ ಪ್ರಪ್ರಥಮವಾಗಿ ರಾಯಚೂರು ಜಿಲ್ಲೆಯ ಮಸ್ಕಿಯ ಮಹರ್ಷಿ ವಾಲ್ಮೀಕಿ ವೃತದಿಂದ ಯಾದಗಿರಿ ಜಿಲ್ಲೆಯ ಸುರಪುರದ ದರ್ಬಾರ್ ವರೆಗೂ ಪಾದಯಾತ್ರೆ ನಡೆಸುತ್ತಿದ್ದು, ಸುರಪುರ ವಿಜಯೋತ್ಸವ ದಿನದಂದು ಪಾದಯಾತ್ರೆ ಕೊನೆಗೊಳ್ಳಲಿದ್ದು, ವಾಲ್ಮೀಕಿ ನಾಯಕ ಸಮುದಾಯದ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ರೆಜಿಮೆಂಟ್ ಹೋರಾಟಕ್ಕೆ ಬೆಂಬಲಿಸಿ, ಯಶಸ್ವಿಗೊಳಿಸಬೇಕೆಂದು ವಾಲ್ಮೀಕಿ ರೆಜಿಮೆಂಟ್ ಹೋರಾಟಗಾರ ಶರಣು ಸುರಪುರಕರ್ ಮನವಿ ಮಾಡಿದ್ದಾರೆ.

ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಕಳೆದ ಅನೇಕ ವರ್ಷಗಳಿಂದ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದೇನೆ. ರೆಜಿಮೆಂಟ್ ಸ್ಥಾಪನೆಯ ವಿಷಯವಾಗಿ ಈ ಹಿಂದೆ ದೆಹಲಿಗೆ ಹೋಗಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಕ್ಷಣಾ ಸಚಿವರು ಸೇರಿದಂತೆ ಸಂಬಂಧಿಸಿದ ಇಲಾಖೆಯವರಿಗೆ ಮನವಿ ಕೊಡಲು ಪ್ರತ್ನಿಸಿದ್ದಿನಿ. ನನ್ನ ಪ್ರಯತ್ನಗಳು ಫಲಕೊಡುತ್ತಿಲ್ಲ. ಆ ಕಾರಣದಿಂದಾಗಿಯೇ ಪಾದಯಾತ್ರೆ ಮಾಡುವ ಮೂಲಕ ವಾಲ್ಮೀಕಿ ನಾಯಕ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದೇನೆ. ನನ್ನ ಹೋರಾಟ ಯಾವುದೇ ಪಕ್ಷ, ಯಾವುದೇ ಜನಪ್ರತಿನಿಧಿಗಳ ವಿರುದ್ಧವಲ್ಲ. 

ವಾಲ್ಮೀಕಿ ನಾಯಕ ಸಮುದಾಯ ಶೌರ್ಯ, ಸಾಹಸಕ್ಕೆ ಹೆಸರಾದ ಸಮುದಾಯವಾಗಿದೆ. ಭಾರತ ಸ್ವಂತಂತ್ರ್ಯಕ್ಕಾಗಿ ಹೋರಾಡಿದ ಸಮುದಾಯವಾಗಿದೆ. ಕೋಟೆ ಕೊತ್ತಲುಗಳನ್ನು ಕಟ್ಟಿ ಜನರ ರಕ್ಷಣೆಗಾಗಿ, ಉತ್ತಮ ಸಾಮ್ರಾಜ್ಯಗಳನ್ನು ಸ್ಥಾಪಿಸಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ. ಸದಕಾಲವೂ ಸರ್ವರ ಒಳಿತನ್ನು ಬಯಸಿಕೊಂಡು ಬಂದಿರುವ ಸಮುದಾಯಕ್ಕಾಗಿ ಪ್ರತ್ಯೇಕ ರೆಜಿಮೆಂಟ್ ಸ್ಥಾಪಿಸುವ ಮೂಲಕ ಭಾರತೀಯ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಸರ್ಕಾರ ಈ ಸಮುದಾಯಕ್ಕೆ ಕಲ್ಪಿಸಿಕೊಡಬೇಕಾಗಿದೆ.

ಈಗಾಗಲೇ ಸಿಖ್ ರೆಜಿಮೆಂಟ್, ಗೋರ್ಖಾ ರೆಜಿಮೆಂಟ್ ಸೇರಿದಂತೆ ಭಾರತೀಯ ಸೇನೆಯಲ್ಲಿ ವಿವಿಧ ಸಮುದಾಯಗಳಿಗಾಗಿಯೇ ಪ್ರತ್ಯೇಕ ರೆಜಿಮೆಂಟ್ ಗಳನ್ನು ಸ್ಥಾಪಿಸಲಾಗಿದೆ. ಅದರಂತೆಯೇ ವಾಲ್ಮೀಕಿ ನಾಯಕ ಸಮುದಾಯಕ್ಕಾಗಿಯೇ ವಾಲ್ಮೀಕಿ ಅಥವಾ ಬೇಡರ ರೆಜಿಮೆಂಟ್ ಹೆಸರಲ್ಲಿ ಪ್ರತ್ಯೇಕ ರೆಜಿಮೆಂಟ್ ಸ್ಥಾಪಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ರೆಜಿಮೆಂಟ್ ಹೋರಾಟಗಾರ ಶರಣು ಸುರಪುರಕರ್ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರಾದ ಗೋವಿಂದ ನಾಯಕ ವೆಂಕಟಾಪೂರ, ಮಲ್ಲಣ್ಣ ನಾಯಕ ಮಲ್ಕಾಪೂರ, ಗ್ವಾಲಪ್ಪ ನಾಯಕ ಉಸ್ಕಿಹಾಳ, ಚಂದ್ರಶೇಖರ ನಾಯಕ ಉದ್ಬಾಳ, ಹೇಮಂತ ನಾಯಕ ಜಿನ್ನಾಪೂರ, ಲಿಂಗರಾಜ ಕಾಟಗಲ್, ಅಮರೇಶ ಅಂತರಗಂಗಿ, ಶ್ರೀನಿವಾಸ ಅಂಕುಶದೊಡ್ಡಿ, ರಮೇಶ ನಾಯಕ ಕಾಟಗಲ್, ಅಯ್ಯಣ್ಣ ನಾಯಕ ಪಾಮನಕಲ್ಲೂರು ಸೇರಿದಂತೆ ಅನೇಕರಿದ್ದರು.

Tuesday, January 26, 2021

ಪಾಮನಕಲ್ಲೂರು: ವಿವಿಧೆಡೆ ಧ್ವಜಾರೋಹಣ; ಅನೇಕರು ಭಾಗಿ



ದೊರೆ ನ್ಯೂಸ್ ಕನ್ನಡ, ರಾಯಚೂರು (ಜ.26): ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ 72ನೇ ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಕನ್ನಡ ಮಾಧ್ಯಮ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಡ ಶಾಲೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ನಾಡ ಕಚೇರಿ, ಗ್ರಾಮ ಪಂಚಾಯತಿ ಕಾರ್ಯಲಯ, ರೈತ ಸಂಪರ್ಕ ಕೇಂದ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಆಡಳಿತ ಅಧಿಕಾರಿ ಹಾಗೂ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಶೈಲ ಭೋವಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಮರೇಶಪ್ಪ, ಸುರೇಶ್, ಪರಮಣ್ಣ, ಸೂಗಪ್ಪ, ನಾಗಲಿಂಗಪ್ಪ ಸೇರಿದಂತೆ ಅನೇಕರಿದ್ದರು‌. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಇದ್ದರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಅಯ್ಯಪ್ಪ ಕುರುಬರ, ಉಪಾಧ್ಯಕ್ಷೆ ಶಾರದಾ ಅಮರೇಶ್, ಸದಸ್ಯರಾದ ಹೂವಪ್ಪ, ಶಿವರಾಜ್, ದುರುಗಪ್ಪ, ಮುಖ್ಯ ಶಿಕ್ಷಕರಾದ ಗಣೇಶ್, ಶಿಕ್ಷಕರಾದ ಮಾಲತೇಶ್, ಶಶಿಕಲಾ, ಪರಿನಾಬಿ ಸೇರಿದಂತೆ ಅನೇಕರಿದ್ದರು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Thursday, January 21, 2021

ಪಾಮನಕಲ್ಲೂರು: ಅಂಬಿಗರ ಚೌಡಯ್ಯ ಜಯಂತಿ ಆಚರಣೆ: ವಿವಿಧ ಸಮುದಾಯಗಳ ಮುಖಂಡರು ಭಾಗಿ

 


ದೊರೆ ನ್ಯೂಸ್ ಕನ್ನಡ, ರಾಯಚೂರು (ಜ.21): ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ ಕಾರ್ಯಕ್ರಮವನ್ನು ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಉಚಿತವಾಗಿ ನೀಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಜಾತಿ, ಮತ, ಪಂಥಗಳ ಭೇದಭಾವ ತೋರೆದ ಗ್ರಾಮಸ್ಥರು ಗ್ರಾಮದ ಮೇನ್ ರೋಡ್ ಸರ್ಕಲ್ (ಪಾಮನಕಲ್ಲೂರು - ಹಟ್ಟಿ ರೋಡ್ ಸರ್ಕಲ್) ಬಳಿ ಇರುವ ನಿಜ ಶರಣ ಅಂಬಿಗರ ಚೌಡಯ್ಯರವರ ನಾಮಫಲಕಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಅಂಬಿಗ ಸಮಾಜದ ಮುಖಂಡರು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿವಿಧ ಸ್ಫರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.

ಇದೇ ವೇಳೆ ಪ್ರತಿಯೊಬ್ಬ ಮಹಾತ್ಮರ ಜಯಂತೋತ್ಸವದ ಸಂದರ್ಭದಲ್ಲಿ ಪೂಜೆ ಸಲ್ಲಿಸುವಂತೆ ಗ್ರಾಮದ ಮೇನ್ ರೋಡ್ ಸರ್ಕಲ್ ನಲ್ಲಿರುವ ಒಳಬಳ್ಳಾರಿ ಚನ್ನಬಸವೇಶ್ವರ, ಮಹರ್ಷಿ ವಾಲ್ಮೀಕಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಕನಕದಾಸ, ಟಿಪ್ಪು ಸುಲ್ತಾನ್ ಸೇರಿದಂತೆ ಅನೇಕ ಮಹಾತ್ಮರ ನಾಮಫಲಕಗಳಿಗೆ ಪೂಜೆ ಸಲ್ಲಿಸಲಾಯಿತು. ಜಯಂತೋತ್ಸವ ಕಾರ್ಯಕ್ರಮದಲ್ಲಿ ಅಂಬಿಗ ಸಮಾಜದ ಮುಖಂಡರು, ಯುವಕರು, ವಿವಿಧ ಸಮುದಾಯಗಳ ಮುಖಂಡರು, ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಅನೇಕರಿದ್ದರು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Monday, January 11, 2021

ಪಾಮನಕಲ್ಲೂರು: ವಾರ್ಡ್ ನಂಬರ್ 1ರಲ್ಲಿ ನೀರಿನ ಸಮಸ್ಯೆ; ಪರಿಹಾರಕ್ಕೆ ಕರವೇ ಆಗ್ರಹ



ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಾರ್ಡ್ ನಂಬರ್: 1ರ ಎಸ್ಸಿ ಹೋಣಿ ಹತ್ತಿರ ಕಳೆದ ಅನೇಕ ತಿಂಗಳುಗಳಿಂದ ಬಳಕೆ ನೀರು, ಕುಡಿಯುವ ನೀರಿನ ಸಮಸ್ಯೆ ಇದ್ದು, ಸಮಸ್ಯೆ ಪರಿಹರಿಸುವ ಕೆಲಸವನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮಾಡುತ್ತಿಲ್ಲವೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಹೋಬಳಿ ಘಟಕದ ಅಧ್ಯಕ್ಷ ರಮೇಶ್ ಗಂಟ್ಲಿ, ಖಜಾಂಚಿ ಮಲ್ಲಪ್ಪ ಹಿರೇಮನಿ ಆರೋಪಿಸಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬಳಕೆ ನೀರಿನ ಸಮಸ್ಯೆ ಇವತ್ತು ನಿನ್ನೆಯದ್ದಲ್ಲ, ಕಳೆದ ಅನೇಕ ತಿಂಗಳುಗಳಿಂದ ಗ್ರಾಮಸ್ಥರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಮರೇಶಪ್ಪರವರಿಗೆ ಈಗಾಗಲೇ ಅನೇಕ ಭಾರಿ ತಿಳಿಸಿದ್ದೇವೆ. ಭೇಟಿಯಾದಾಗ, ಪೋನ್ ಮಾಡಿ ಹೇಳಿದಾಗೊಮ್ಮೆ ಸಮಸ್ಯೆ ಪರಿಹರಿಸುತ್ತೇವೆ ಎಂದು ಹೇಳುವ ಪಿಡಿಒ ಅಮರೇಶಪ್ಪರವರು ಇದುವರೆಗೂ ಗ್ರಾಮಸ್ಥರ ನೀರಿನ ಬವಣೆ ನೀಗಿಸಿಲ್ಲ. ಬರೀ ಮಾತಲ್ಲೇ ಮನೆ ಕಟ್ಟುವ ಕೆಲಸವನ್ನು ಪಿಡಿಒ ಮಾಡುತ್ತಿದ್ದಾರೆ.

ವಾರ್ಡ್ ನಂಬರ್ 1ರ ಎಸ್ಸಿ ಹೋಣಿ ಹತ್ತಿರ, ಗಡ್ಡೆ ಮೇಲಿನ ಮನೆಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಟುಬಾಕಿ ದುರುಗಪ್ಪ ರವರ ಮನೆಯ ಹತ್ತಿರದಿಂದ ಪೂಜಪ್ಪರವರ ಮನೆಯವರಿಗೆ ಪೈಪ್ ಲೈನ್ ಮಾಡಬೇಕಾಗಿದ್ದು, ಈ ಹಿಂದೆಯೇ ಪೈಪ್ ಲೈನ್ ಮಾಡುವ ಸಲುವಾಗಿ ಗ್ರಾಮಸ್ಥರ ನೇತೃತ್ವದಲ್ಲಿ ಹಿಂದಿನ ಪಿಡಿಒ ಕೃಷ್ಣ ಸರ್ವೆ ಕಾರ್ಯ ನಡೆಸಿದ್ದರು. ಪಿಡಿಒ ಬದಲಾದರು ಪೈಪ್ ಲೈನ್ ವ್ಯವಸ್ಥೆ ಮಾಡಿಲ್ಲ ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ರಮೇಶ್ ಗಂಟ್ಲಿ, ಖಜಾಂಚಿ ಮಲ್ಲಪ್ಪ ಹಿರೇಮನಿ ಸೇರಿದಂತೆ ಕರವೇ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.

Wednesday, January 6, 2021

ವಾಣಿಜ್ಯ ಶಾಸ್ತ್ರ ವಿಭಾಗ: ಶಾಂತಕುಮಾರ್ ಗೆ ಪಿಎಚ್ಡಿ



ರಾಯಚೂರು: ಗುಲಬುರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಯಚೂರು ಮೂಲದ ಶಾಂತಕುಮಾರ ಬಜಾರಪ್ಪ ಅವರಿಗೆ ಗುಲಬುರ್ಗಾ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ಪ್ರಕಟಿಸಿದೆ.

ಶಾಂತಕುಮಾರ್ ಅವರು, "ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರಾಕ್ಟೀಸಸ್ ಇನ್ ಸಿಮೆಂಟ್ ಇಂಡಸ್ಟ್ರಿ ಎ ಸ್ಟಡಿ ವಿಥ್ ರೆಫರೆನ್ಸ್ ಟು ರಾಜಶ್ರೀ ಸಿಮೆಂಟ್ ವರ್ಕ್ಸ್ ಮಳಖೇಡ್ ಕಲಬುರಗಿ" ಎಂಬ ಮಹಾಪ್ರಬಂಧ ಮಂಡಿಸಿದ್ದರು.

ಗುಲಬುರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಪ್ರೊ. ವಾಘಮಾರೆ ಶಿವಾಜೀ ಅವರು ಶಾಂತಕುಮಾರ್ ರವರಿಗೆ ಮಾರ್ಗದರ್ಶನ ಮಾಡಿದ್ದಾರೆ.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..