Tuesday, January 30, 2024

ಚಿತ್ರಕಲಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಗೌಡೂರಿನ ಜಯಶ್ರೀ

ಚಿತ್ರಕಲಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಗೌಡೂರಿನ ಜಯಶ್ರೀ

ಪ್ರಶಸ್ತಿ ಸ್ವೀಕರಿಸಿದ ಜಯಶ್ರೀ

ದೊರೆ ನ್ಯೂಸ್ ಕನ್ನಡ / Dore News Kannada

ರಾಯಚೂರು (ಜ.30): ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಜಯಶ್ರೀ ತಂದೆ ಜಗದೀಶ್ ಎಂಬ ವಿದ್ಯಾರ್ಥಿನಿ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.

2023-24 ನೇ ಸಾಲಿನ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಹಾಗೂ ಸ್ಪರ್ಶ ಟ್ರಸ್ಟ್ ಸಹಯೋಗದೊಂದಿಗೆ ರಾಯಚೂರು ನಗರದಲ್ಲಿ ಸೋಮವಾರ ನಡೆದ ABCD ಯೋಜನೆಯ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಜಯಶ್ರೀಗೆ ತೃತೀಯ ಸ್ಥಾನ ದೊರೆತಿದ್ದು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆರವರು ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ.

ಇನ್ನೂ ವಿದ್ಯಾರ್ಥಿಯ ಸಾಧನೆಗೆ ಮಾಜಿ ತಾ.ಪಂ ಸದಸ್ಯರಾದ ರಾಜಾ ಶೇತುರಾಮ್ ನಾಯಕ,  ಶಾಲೆಯ ಮುಖ್ಯೋಪಾಧ್ಯಾಯರಾದ ವಿದ್ಯಾವತಿ, ಸಹ ಶಿಕ್ಷಕರಾದ ಮೊಹಮ್ಮದ್ ಫರಿದ್ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Saturday, January 27, 2024

ಕಲಬುರಗಿ: ಲಾಹೋಟಿ ಲಾ ಕಾಲೇಜಿನಲ್ಲಿ ಸಡಗರದಿಂದ ನಡೆದ ಸ್ವಾಗತ ಸಮಾರಂಭ

ಕಲಬುರಗಿ: ಲಾಹೋಟಿ ಲಾ ಕಾಲೇಜಿನಲ್ಲಿ ಸಡಗರದಿಂದ ನಡೆದ ಸ್ವಾಗತ ಸಮಾರಂಭ

ಕಾರ್ಯಕ್ರಮವನ್ನುಉದ್ಘಾಟಿಸುತ್ತಿರುವ ಗಣ್ಯರು

ಕಲಬುರಗಿ (ಜ.27): ನಗರದ ಐವಾನ್-ಎ-ಶಾಹಿ ರಸ್ತೆಯಲ್ಲಿರುವ (ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಹತ್ತಿರ) ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೇಠ್ ಶಂಕರಲಾಲ್ ಲಾಹೋಟಿ ಲಾ ಕಾಲೇಜಿನಲ್ಲಿ ಶನಿವಾರ ಮೂರು ವರ್ಷದ ಹಾಗೂ ಐದು ವರ್ಷದ ಕಾನೂನು ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವು ಸಡಗರ ಸಂಭ್ರಮದಿಂದ ನಡೆಯಿತು.

ಕಲಬುರಗಿ ಜಿಲ್ಲೆಯ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಗುಪ್ತಲಿಂಗ ಪಾಟೀಲ್ ರವರು ಹಾಗೂ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಸವಿತಾ ಆರ್ ಗಿರಿರವರು ಸಸಿಗೆ ನೀರೆರೆಯುವ ಮೂಲಕ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗುಪ್ತಲಿಂಗ ಪಾಟೀಲ್ ರವರು, ಎಲ್ಲಾ ವೃತ್ತಿಗಳಲ್ಲಿ ವಕೀಲ ವೃತ್ತಿ ಎಂಬುದು ಶ್ರೇಷ್ಠವಾದ ವೃತ್ತಿಯಾಗಿದೆ. ಈ ವೃತ್ತಿಗೆ ಬರಬೇಕಾದರೆ ಕಷ್ಟ ಪಟ್ಟು ಓದಿ, ಬರೆದು ಉತ್ತೀರ್ಣರಾಗಿ ಬರಬೇಕಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿರುವ
ಗುಪ್ತಲಿಂಗ ಪಾಟೀಲ್ ರವರು

ಕಾನೂನು ಪದವಿ ಎಂಬುದು ಶ್ರೇಷ್ಠ ಪದವಿಯಾಗಿದೆ. ಕಾನೂನು ಪದವಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಉತ್ತಮ ವಕೀಲರಾಗಬೇಕಾದರೆ ಹಿರಿಯ ವಕೀಲರ ಬಳಿ ಸಹಾಯಕರಾಗಿ ಕೆಲಸ ಮಾಡಬೇಕು. ಸೇಠ್ ಶಂಕರ್ ಲಾಲ್ ಲಾಹೋಟಿ ಲಾ ಕಾಲೇಜಿನಲ್ಲಿ ಓದಿದವರು ಅನೇಕ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಬಹುತೇಕರು ವಕೀಲರು, ನ್ಯಾಯಾಧೀಶರು ಆಗಿದ್ದಾರೆ ಎಂದರು.

ಕನ್ನಡಕ್ಕೆ ತನ್ನದೇಯಾದ ಶಕ್ತಿ ಇದೆ:

ಕನ್ನಡ ಭಾಷೆಗೆ ತನ್ನದೇಯಾದ ಶಕ್ತಿಯಿದೆ. ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದೇನೆ. ಕಾನೂನು ಪದವಿ ಕಲೆಯುವುದು ಕಷ್ಟ ಎಂಬ ಮನೋಭಾವದಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹೊರ ಬರಬೇಕು. ಕನ್ನಡದಲ್ಲಿ ಕಲೇತವರು ಕೂಡ ದೊಡ್ಡಮಟ್ಟದ ಸಾಧನೆ ಮಾಡಿದ್ದಾರೆ.

ಕನ್ನಡ ಮಾಧ್ಯಮದವರು ಬಹಳಷ್ಟು ವಿಕ್ ಇರ್ತಾರೆ ಅನ್ನೋದು ಶುದ್ಧ ಸುಳ್ಳು. ಕನ್ನಡ ಮಾಧ್ಯಮದವರು ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ಕೋರ್ಟ್ ಕೂಡ ಕನ್ನಡಕ್ಕೆ ಆದ್ಯತೆ ನೀಡಿದೆ. ಕನ್ನಡ ಮಾಧ್ಯಮದವರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಹಣ ಗಳಿಸುವುದರ ಹಿಂದೆ ಹೋಗುವ ಬದಲಿಗೆ ಉತ್ತಮವಾಗಿ ಕೆಲಸ ಮಾಡಬೇಕು ಎಂದು ಗುಪ್ತಲಿಂಗ ಪಾಟೀಲ್ ರವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಸವಿತಾ ಆರ್ ಗಿರಿರವರು, ಎಲ್ಲಿ ಸಲ್ಲದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿ ಸಲ್ಲುವವರು ಎಲ್ಲಾ ಕಡೆ ಸಲ್ಲುತ್ತಾರೆ ಎಂಬ ಮಾತಿನಂತೆ ಕಾನೂನು ಪದವಿ ಕಲೆತವರು ಕೋರ್ಟ್, ಕಛೇರಿ, ಮಾಧ್ಯಮ ಸೇರಿದಂತೆ ಎಲ್ಲಾ ಕಡೆ ಅವರು ಕೆಲಸ ಮಾಡಬಲ್ಲರು ಎಂದರು.

ಕಾನೂನು ಪದವಿಯಲ್ಲಿ ಯೋಚನಾ ಶಕ್ತಿ ಮುಖ್ಯವಾಗಿರುತ್ತದೆ. ಬ್ಯಾಂಕ್, ಕೋರ್ಟ್, ಮಾಧ್ಯಮ ಸೇರಿದಂತೆ ಕಾನೂನು ಪದವಿಗೆ ಎಲ್ಲಾ ಕ್ಷೇತ್ರದಲ್ಲಿ ಕೂಡ ವಿಶೇಷ ಆದ್ಯತೆ ಇರುತ್ತದೆ. ಪ್ರತಿಯೊಬ್ಬ ನಾಗರೀಕರು ಕೂಡ ಭಾರತ ಸಂವಿಧಾನ ಮತ್ತು ಕಾನೂನಿನ ಪುಸ್ತಕಗಳನ್ನು ಓದುವುದು ಮುಖ್ಯವಾಗಿರುತ್ತದೆ. ಅದರಲ್ಲಿ ಹೆಚ್ಚಾಗಿ ಲಾ ವಿದ್ಯಾರ್ಥಿಯಾದವರಿಗೆ ಕಾನೂನು ಪುಸ್ತಕಗಳ ಓದು ಅತಿಮುಖ್ಯವಾಗಿರುತ್ತದೆ. ಸಂವಿಧಾನ ಮತ್ತು ಕಾನೂನಿನ ಪುಸ್ತಕಗಳನ್ನು ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಇಟ್ಟುಕೊಂಡು ಓದುವುದು ಉತ್ತಮ ಎಂದು ಡಾ. ಸವಿತಾ ಆರ್ ಗಿರಿರವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಶಾಂತೇಶ್ವರಿ ಶಾಂತಗೀರಿ, ಮಹೇಶ್ವರಿ ಹೀರೆಮಠ, ಜ್ಯೋತಿ ಕಡಾಡಿ, ಕರುಣಾ ಪಾಟೀಲ್, ರೇಣುಕಾ ದೇವರಮನಿ, ಜ್ಯೋತಿ ಹಂಗರಗಿರವರು ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿಗಾರರು: ಅಯ್ಯಣ್ಣ ನಾಯಕ ಪಾಮನಕಲ್ಲೂರು

Thursday, January 25, 2024

ಮುಖ್ಯಮಂತ್ರಿಗಳ ಸ್ವರ್ಣ ಪದಕಕ್ಕೆ ಭಾಜನರಾದ ಪಾಮನಕಲ್ಲೂರಿನ ಯಲ್ಲಪ್ಪ ಸಾನಬಾಳ

ಮುಖ್ಯಮಂತ್ರಿಗಳ ಸ್ವರ್ಣ ಪದಕಕ್ಕೆ ಭಾಜನರಾದ ಪಾಮನಕಲ್ಲೂರಿನ ಯಲ್ಲಪ್ಪ ಸಾನಬಾಳ

ಪಾಮನಕಲ್ಲೂರು ಗ್ರಾಮದ ಯಲ್ಲಪ್ಪ ಸಾನಬಾಳ

ರಾಯಚೂರು (ಜ.25): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರೀಯ ವಲಯದ 7ನೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ 45 ವರ್ಷ ವಯಸ್ಸಿನ ಯಲ್ಲಪ್ಪ ಸಾನಬಾಳರವರಿಗೆ ಮುಖ್ಯಮಂತ್ರಿಗಳ ಸ್ವರ್ಣ ಪದಕ ಲಭಿಸಿದೆ.

2007ರಿಂದ ಬೆಂಗಳೂರಿನ ಕೇಂದ್ರೀಯ ವಲಯದ ಏಳನೇ ಘಟಕದಲ್ಲಿ ಹವಾ ನಿಯಂತ್ರಿತ ಬಸ್ ನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯಲ್ಲಪ್ಪ ಸಾನಬಾಳರವರ 7 ವರ್ಷಗಳ ಅಪಘಾತರಹಿತ ಮೋಟಾರು ವಾಹನ ಚಾಲನಾ ಸೇವೆಯನ್ನು ಗುರುತಿಸಿ 2019ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಬುಧವಾರ ಬೆಂಗಳೂರಿನಲ್ಲಿ ನಡೆದ ಚಾಲಕರ ದಿನದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿರವರು ನೀಡಿ ಗೌರವಿಸಿದ್ದಾರೆ.

ಈ ಹಿಂದೆ ಬೆಳ್ಳಿ ಪದಕವನ್ನು ಪಡೆದಿದ್ದರು:

ಅಪಘಾತರಹಿತ ಮೋಟಾರು ವಾಹನ ಚಾಲನಾ ಸೇವೆಗಾಗಿ ಈ ಹಿಂದೆ ಯಲ್ಲಪ್ಪ ಸಾನಬಾಳರವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದರು.

ಲಾರಿ ಕ್ಲೀನರ್ ಆಗಿ ವೃತ್ತಿ ಜೀವನ ಆರಂಭ:

ಪಾಮನಕಲ್ಲೂರು ಗ್ರಾಮದ ಯಲ್ಲಪ್ಪ ಸಾನಬಾಳರವರು 2002ರಲ್ಲಿ ಲಾರಿ ಕ್ಲೀನರ್ ಆಗಿ ವೃತ್ತಿ ಜೀವನ ಆರಂಭಿಸಿ 2005 ರವರೆಗೆ ಕೆಲಸ ಮಾಡಿದರು. ಬಳಿಕ ಡ್ರೈವರ್ ಕೆಲಸಕ್ಕಾಗಿ ಅಲೆದಾಡಿ 2005 ರಲ್ಲಿ ದಿನಕ್ಕೆ75 ರೂಪಾಯಿಗಳ ದಿನಗೂಲಿಯ ಆಧಾರದ ಮೇಲೆ ಕ್ರೂಸರ್ ಗಾಡಿಯ ಚಾಲಕರಾಗಿ ಕೆಲಸ ಆರಂಭಿಸಿ 2007ರವೆರೆಗೆ ಕ್ರೂಸರ್ ನಡೆಸಿದ್ದರು.

2007ರಲ್ಲೇ ಬಿಎಂಟಿಸಿ ಡ್ರೈವರ್ ಹುದ್ದೆಗೆ ಆಯ್ಕೆ:

ಎರಡು ಮೂರು ವರ್ಷಗಳ ಕಾಲ ಕ್ರೂಸರ್ ಚಾಲಕನಾಗಿ ಕರ್ತವ್ಯ ನಿರ್ವಹಿಸಿದ್ದ ಯಲ್ಲಪ್ಪ ಸಾನಬಾಳರವರು ಮಾಸಿಕ 1800 ರೂಪಾಯಿಗಳ ವೇತನದ ಆಧಾರದ ಮೇಲೆ 2007ರಲ್ಲಿ ಬಿಎಂಟಿಸಿಯಲ್ಲಿ ಚಾಲಕರಾಗಿ ಆಯ್ಕೆಯಾಗಿದ್ದರು.

ಬಿಎಂಟಿಸಿಯ ನೌಕರಿ ಬಿಡುವ ನಿರ್ಧಾರ ಮಾಡಿದ್ದರು:

2007ರಲ್ಲಿ ಬಿಎಂಟಿಸಿಯಲ್ಲಿ ಚಾಲಕನಾಗಿ ಕರ್ತವ್ಯ ಆರಂಭಿಸಿದ್ದ ಯಲ್ಲಪ್ಪ ಸಾನಬಾಳರವರು ಬೆಂಗಳೂರಿನಲ್ಲಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು ಚಾಲಕ ವೃತ್ತಿಗೆ ವಿಧಾಯ ಹೇಳುವ ನಿರ್ಧಾರ ಮಾಡಿದ್ದರು. ಆಗ ಅವರ ತಂದೆ ಯಂಕಪ್ಪ ಸಾನಬಾಳರವರು ಹಾಗೂ ಯಲ್ಲಪ್ಪರವರ ಗೆಳೆಯರು ಬುದ್ಧಿ ಮಾತು ಹೇಳಿ ದೈರ್ಯ ತುಂಬಿದ್ದರು.

ತಂದೆಯ ಹಾಗೂ ಸ್ನೇಹಿತರ ಮಾತುಗಳಿಗೆ ಮನ್ನಣೆ ನೀಡಿ ಕೆಲಸ ಮುಂದುವರಿಸಿದ ಯಲ್ಲಪ್ಪರವರು 2009ರ ವೇಳೆಗೆ ಪ್ರೊಬೇಷನರಿ ಅವಧಿ ಕ್ಲಿಯರ್ ಮಾಡಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಉತ್ತಮ ಚಾಲಕರಾಗಿ ಗುರುತಿಸಿಕೊಂಡು ಸಾಗುತ್ತಿದ್ದಾರೆ.

ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು:

ಉತ್ತಮ ಚಾಲಕನಾಗಿ ಗುರುತಿಸಿಕೊಂಡು ಬೆಳ್ಳಿ, ಬಂಗಾರದ ಪದಕಗಳನ್ನು ಪಡೆದುಕೊಳ್ಳುವ ಮೂಲಕ ಯಲ್ಲಪ್ಪ ಸಾನಬಾಳರವರು ಪಾಮನಕಲ್ಲೂರು ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಅವರಿಗೆ ಶುಭವಾಗಲಿ ಇನ್ನೂ ಉನ್ನತಮಟ್ಟದ ಪ್ರಶಸ್ತಿ, ಸನ್ಮಾನ, ಗೌರವಗಳು ಅವರಿಗೆ ಸಿಗಲಿ ಎಂದು ಗ್ರಾಮಸ್ಥರು ಹಾಗೂ ಅವರ ಸ್ನೇಹಿತರಾದ ವಿಶ್ವನಾಥ ಸ್ವಾಮಿ ಜಿನ್ನದ್ ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದು ಕೆಲಸಕ್ಕಾಗಿ ಸುತ್ತಾಡಿ ಬಿಎಂಟಿಸಿ ಚಾಲಕನಾಗಿ ಎಲ್ಲರಂತೆ ನಾನಲ್ಲ. ನಾನು ನನ್ನ ಕೆಲಸದಲ್ಲಿ ಶ್ರದ್ಧೆವಹಿಸಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು, ಕೆಲಸದಲ್ಲೇ ದೇವರನ್ನು ಕಾಣಬೇಕು ಎಂಬ ಅಚಲ ನಂಬಿಕೆಯಿಂದ ಕಾಯಕವೇ ಕೈಲಾಸ ಎಂದುಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಯಲ್ಲಪ್ಪ ಸಾನಬಾಳರವರನ್ನು ಗುರುತಿಸಿ ಅವರಿಗೆ ಬೆಳ್ಳಿ, ಬಂಗಾರದ ಪದಕಗಳನ್ನು ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಅವರಿಗೆ ಇನ್ನಷ್ಟು ಪ್ರಶಸ್ತಿ ಗೌರವಗಳು ಲಭಿಸಿಲಿ ಎಂದು ನಾವು ಕೂಡ ಶುಭ ಹಾರೈಸೋಣ.

ವಿಶೇಷ ಲೇಖನ:

ಅಯ್ಯಣ್ಣ ನಾಯಕ ಪಾಮನಕಲ್ಲೂರು

Sunday, January 21, 2024

ಪಾಮನಕಲ್ಲೂರು: ಗ್ರಾಮದ ವಿವಿಧೆಡೆ ಅಂಬಿಗರ ಚೌಡಯ್ಯ ಜಯಂತೋತ್ಸವ

 

ರಾಯಚೂರು (ಜ.21): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಿವಿಧೆಡೆ ನಿಜ ಶರಣ ಅಂಬಿಗರ ಚೌಡಯ್ಯರವರ 904ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು.

ಗ್ರಾಮದ ರಾಯಚೂರು - ಲಿಂಗಸುಗೂರು ಮುಖ್ಯ ರಸ್ತೆಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯರವರ ನಾಮ ಫಲಕಕ್ಕೆ ಹಾಗೂ ಭಾವಚಿತ್ರಕ್ಕೆ ಭಾನುವಾರ ಬೆಳಗ್ಗೆ ಪೂಜೆ ಸಲ್ಲಿಸುವ ಮೂಲಕ ಜಯಂತೋತ್ಸವ ಕಾರ್ಯಕ್ರಮಕ್ಕೆ ಗ್ರಾಮದಲ್ಲಿರುವ ಅಂಬಿಗ (ಗಂಗಮತ / ಕಬ್ಬಲಿಗ) ಸಮಾಜದ ಮುಖಂಡರು ಹಾಗೂ ಗ್ರಾಮದ ಗುರು ಹಿರಿಯರು ಚಾಲನೆ ನೀಡಿದರು.

ಗ್ರಾಮದಲ್ಲಿರುವ ಮಹಾತ್ಮರ ನಾಮ ಫಲಕಗಳಿಗೆ ಪೂಜೆ:

ನಿಜ ಶರಣ ಅಂಬಿಗರ ಚೌಡಯ್ಯರವರ ಜಯಂತೋತ್ಸವದ ನಿಮಿತ್ತವಾಗಿ ಎಂದಿನಂತೆ ಗ್ರಾಮದಲ್ಲಿರುವ ಒಳಬಳ್ಳಾರಿ ಚನ್ನಬಸವೇಶ್ವರ, ಮಹರ್ಷಿ ವಾಲ್ಮೀಕಿ, ದಾಸ ಶ್ರೇಷ್ಠ ಭಕ್ತ ಕನಕದಾಸ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ರವರ ನಾಮಫಲಕಗಳು ಸೇರಿದಂತೆ ಗ್ರಾಮದಲ್ಲಿರುವ ಅನೇಕ ಜನ ಮಹಾತ್ಮರ ನಾಮಫಲಕಗಳಿಗೆ ಗ್ರಾಮಸ್ಥರ ನೇತೃತ್ವದಲ್ಲಿ ಏಕಕಾಲಕ್ಕೆ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆಯಲಾಯಿತು.

ಗ್ರಾಮ ಪಂಚಾಯತಿ ಕಛೇರಿಯಲ್ಲಿ ಜಯಂತೋತ್ಸವ:

ನಿಜ ಶರಣ ಅಂಬಿಗರ ಚೌಡಯ್ಯರವರ ಜಯಂತೋತ್ಸವದ ನಿಮಿತ್ತವಾಗಿ ಗ್ರಾಮದಲ್ಲಿರುವ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಂಚಾಯತಿ ಸಿಬ್ಬಂದಿ ಸೂಗಪ್ಪ ಮರೆಡ್ಡಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಅಂಬಿಗರ ಚೌಡಯ್ಯರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಗ್ರಾಮದ ವಿವಿಧೆಡೆ ನಡೆದ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾನಂದ ಸ್ವಾಮೀಜಿ, ಹುಸೇನಪ್ಪ ಗೊಬ್ಬಿ, ಶಂಕ್ರಪ್ಪ ಸಾನಬಾಳ, ಪ್ರಭು ಧಣಿ, ಯಲ್ಲಪ್ಪ ಶಾಸ್ತ್ರಿ, ನಾಗಲಿಂಗಪ್ಪ, ಮಲ್ಲಿಕಾರ್ಜುನ ಗೊಬ್ಬಿ, ರಮೇಶ್ ಗಡ್ಡಿಮನಿ, ಲಕ್ಷ್ಮಣ ಚೌಡ್ಲಿ, ಬಸವರಾಜ ಪೋಸ್ಟ್ ಮಾಸ್ಟರ್, ದುರುಗಪ್ಪ ಕಲ್ಲೂರು, ಶ್ರೀನಿವಾಸ್ ಸಾನಬಾಳ, ಕಿಟ್ಟಪ್ಪ ಈಳಿಗೇರ, ಸೈಕಲ್ ಶಾಪ್ ಪಾಷಾ, ವೀರೇಶ ಹೊನ್ನಳ್ಳಿ, ಶರಣಪ್ಪ ಕೊಂಡಾಲ್, ಮರಿಸ್ವಾಮಿ, ನಿಂಗಪ್ಪ ಕುರುಬರು, ರಾಮಚಂದ್ರಪ್ಪ ಕಲ್ಲೂರು, ಮಲ್ಲಪ್ಪ, ಮಲ್ಲಿಕಾರ್ಜುನ ನಾಲ್ವರಕರ್, ಶಿವು ಬಳಿ, ಶಶಿಧರ್, ಲಕ್ಷ್ಮಣ ದೊರೆ, ಮಹಾದೇವಪ್ಪ ಕಲ್ಲೂರು, ದುರ್ಗಸಿಂಗ್ ಸೇರಿದಂತೆ ಅನೇಕರಿದ್ದರು.