ಮುಖ್ಯಮಂತ್ರಿಗಳ ಸ್ವರ್ಣ ಪದಕಕ್ಕೆ ಭಾಜನರಾದ ಪಾಮನಕಲ್ಲೂರಿನ ಯಲ್ಲಪ್ಪ ಸಾನಬಾಳ
![]() |
ಪಾಮನಕಲ್ಲೂರು ಗ್ರಾಮದ ಯಲ್ಲಪ್ಪ ಸಾನಬಾಳ |
ರಾಯಚೂರು (ಜ.25): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರೀಯ ವಲಯದ 7ನೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ 45 ವರ್ಷ ವಯಸ್ಸಿನ ಯಲ್ಲಪ್ಪ ಸಾನಬಾಳರವರಿಗೆ ಮುಖ್ಯಮಂತ್ರಿಗಳ ಸ್ವರ್ಣ ಪದಕ ಲಭಿಸಿದೆ.
2007ರಿಂದ ಬೆಂಗಳೂರಿನ ಕೇಂದ್ರೀಯ ವಲಯದ ಏಳನೇ ಘಟಕದಲ್ಲಿ ಹವಾ ನಿಯಂತ್ರಿತ ಬಸ್ ನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯಲ್ಲಪ್ಪ ಸಾನಬಾಳರವರ 7 ವರ್ಷಗಳ ಅಪಘಾತರಹಿತ ಮೋಟಾರು ವಾಹನ ಚಾಲನಾ ಸೇವೆಯನ್ನು ಗುರುತಿಸಿ 2019ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಬುಧವಾರ ಬೆಂಗಳೂರಿನಲ್ಲಿ ನಡೆದ ಚಾಲಕರ ದಿನದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿರವರು ನೀಡಿ ಗೌರವಿಸಿದ್ದಾರೆ.
ಈ ಹಿಂದೆ ಬೆಳ್ಳಿ ಪದಕವನ್ನು ಪಡೆದಿದ್ದರು:
ಅಪಘಾತರಹಿತ ಮೋಟಾರು ವಾಹನ ಚಾಲನಾ ಸೇವೆಗಾಗಿ ಈ ಹಿಂದೆ ಯಲ್ಲಪ್ಪ ಸಾನಬಾಳರವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದರು.
ಲಾರಿ ಕ್ಲೀನರ್ ಆಗಿ ವೃತ್ತಿ ಜೀವನ ಆರಂಭ:
ಪಾಮನಕಲ್ಲೂರು ಗ್ರಾಮದ ಯಲ್ಲಪ್ಪ ಸಾನಬಾಳರವರು 2002ರಲ್ಲಿ ಲಾರಿ ಕ್ಲೀನರ್ ಆಗಿ ವೃತ್ತಿ ಜೀವನ ಆರಂಭಿಸಿ 2005 ರವರೆಗೆ ಕೆಲಸ ಮಾಡಿದರು. ಬಳಿಕ ಡ್ರೈವರ್ ಕೆಲಸಕ್ಕಾಗಿ ಅಲೆದಾಡಿ 2005 ರಲ್ಲಿ ದಿನಕ್ಕೆ75 ರೂಪಾಯಿಗಳ ದಿನಗೂಲಿಯ ಆಧಾರದ ಮೇಲೆ ಕ್ರೂಸರ್ ಗಾಡಿಯ ಚಾಲಕರಾಗಿ ಕೆಲಸ ಆರಂಭಿಸಿ 2007ರವೆರೆಗೆ ಕ್ರೂಸರ್ ನಡೆಸಿದ್ದರು.
2007ರಲ್ಲೇ ಬಿಎಂಟಿಸಿ ಡ್ರೈವರ್ ಹುದ್ದೆಗೆ ಆಯ್ಕೆ:
ಎರಡು ಮೂರು ವರ್ಷಗಳ ಕಾಲ ಕ್ರೂಸರ್ ಚಾಲಕನಾಗಿ ಕರ್ತವ್ಯ ನಿರ್ವಹಿಸಿದ್ದ ಯಲ್ಲಪ್ಪ ಸಾನಬಾಳರವರು ಮಾಸಿಕ 1800 ರೂಪಾಯಿಗಳ ವೇತನದ ಆಧಾರದ ಮೇಲೆ 2007ರಲ್ಲಿ ಬಿಎಂಟಿಸಿಯಲ್ಲಿ ಚಾಲಕರಾಗಿ ಆಯ್ಕೆಯಾಗಿದ್ದರು.
ಬಿಎಂಟಿಸಿಯ ನೌಕರಿ ಬಿಡುವ ನಿರ್ಧಾರ ಮಾಡಿದ್ದರು:
2007ರಲ್ಲಿ ಬಿಎಂಟಿಸಿಯಲ್ಲಿ ಚಾಲಕನಾಗಿ ಕರ್ತವ್ಯ ಆರಂಭಿಸಿದ್ದ ಯಲ್ಲಪ್ಪ ಸಾನಬಾಳರವರು ಬೆಂಗಳೂರಿನಲ್ಲಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು ಚಾಲಕ ವೃತ್ತಿಗೆ ವಿಧಾಯ ಹೇಳುವ ನಿರ್ಧಾರ ಮಾಡಿದ್ದರು. ಆಗ ಅವರ ತಂದೆ ಯಂಕಪ್ಪ ಸಾನಬಾಳರವರು ಹಾಗೂ ಯಲ್ಲಪ್ಪರವರ ಗೆಳೆಯರು ಬುದ್ಧಿ ಮಾತು ಹೇಳಿ ದೈರ್ಯ ತುಂಬಿದ್ದರು.
ತಂದೆಯ ಹಾಗೂ ಸ್ನೇಹಿತರ ಮಾತುಗಳಿಗೆ ಮನ್ನಣೆ ನೀಡಿ ಕೆಲಸ ಮುಂದುವರಿಸಿದ ಯಲ್ಲಪ್ಪರವರು 2009ರ ವೇಳೆಗೆ ಪ್ರೊಬೇಷನರಿ ಅವಧಿ ಕ್ಲಿಯರ್ ಮಾಡಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಉತ್ತಮ ಚಾಲಕರಾಗಿ ಗುರುತಿಸಿಕೊಂಡು ಸಾಗುತ್ತಿದ್ದಾರೆ.
ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು:
ಉತ್ತಮ ಚಾಲಕನಾಗಿ ಗುರುತಿಸಿಕೊಂಡು ಬೆಳ್ಳಿ, ಬಂಗಾರದ ಪದಕಗಳನ್ನು ಪಡೆದುಕೊಳ್ಳುವ ಮೂಲಕ ಯಲ್ಲಪ್ಪ ಸಾನಬಾಳರವರು ಪಾಮನಕಲ್ಲೂರು ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಅವರಿಗೆ ಶುಭವಾಗಲಿ ಇನ್ನೂ ಉನ್ನತಮಟ್ಟದ ಪ್ರಶಸ್ತಿ, ಸನ್ಮಾನ, ಗೌರವಗಳು ಅವರಿಗೆ ಸಿಗಲಿ ಎಂದು ಗ್ರಾಮಸ್ಥರು ಹಾಗೂ ಅವರ ಸ್ನೇಹಿತರಾದ ವಿಶ್ವನಾಥ ಸ್ವಾಮಿ ಜಿನ್ನದ್ ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದು ಕೆಲಸಕ್ಕಾಗಿ ಸುತ್ತಾಡಿ ಬಿಎಂಟಿಸಿ ಚಾಲಕನಾಗಿ ಎಲ್ಲರಂತೆ ನಾನಲ್ಲ. ನಾನು ನನ್ನ ಕೆಲಸದಲ್ಲಿ ಶ್ರದ್ಧೆವಹಿಸಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು, ಕೆಲಸದಲ್ಲೇ ದೇವರನ್ನು ಕಾಣಬೇಕು ಎಂಬ ಅಚಲ ನಂಬಿಕೆಯಿಂದ ಕಾಯಕವೇ ಕೈಲಾಸ ಎಂದುಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಯಲ್ಲಪ್ಪ ಸಾನಬಾಳರವರನ್ನು ಗುರುತಿಸಿ ಅವರಿಗೆ ಬೆಳ್ಳಿ, ಬಂಗಾರದ ಪದಕಗಳನ್ನು ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಅವರಿಗೆ ಇನ್ನಷ್ಟು ಪ್ರಶಸ್ತಿ ಗೌರವಗಳು ಲಭಿಸಿಲಿ ಎಂದು ನಾವು ಕೂಡ ಶುಭ ಹಾರೈಸೋಣ.
ವಿಶೇಷ ಲೇಖನ:
ಅಯ್ಯಣ್ಣ ನಾಯಕ ಪಾಮನಕಲ್ಲೂರು
No comments:
Post a Comment