ಕಲಬುರಗಿ:
ಲಾಹೋಟಿ ಲಾ ಕಾಲೇಜಿನಲ್ಲಿ ಸಡಗರದಿಂದ ನಡೆದ ಸ್ವಾಗತ ಸಮಾರಂಭ
ಕಾರ್ಯಕ್ರಮವನ್ನುಉದ್ಘಾಟಿಸುತ್ತಿರುವ ಗಣ್ಯರು
ಕಲಬುರಗಿ (ಜ.27): ನಗರದ ಐವಾನ್-ಎ-ಶಾಹಿ ರಸ್ತೆಯಲ್ಲಿರುವ (ಪಿಡಿಎ
ಇಂಜಿನಿಯರಿಂಗ್ ಕಾಲೇಜಿನ ಹತ್ತಿರ) ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೇಠ್ ಶಂಕರಲಾಲ್
ಲಾಹೋಟಿ ಲಾ ಕಾಲೇಜಿನಲ್ಲಿ ಶನಿವಾರ ಮೂರು ವರ್ಷದ ಹಾಗೂ ಐದು ವರ್ಷದ ಕಾನೂನು ಪದವಿಯ ಪ್ರಥಮ ವರ್ಷದ
ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವು ಸಡಗರ ಸಂಭ್ರಮದಿಂದ ನಡೆಯಿತು.
ಕಲಬುರಗಿ ಜಿಲ್ಲೆಯ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಗುಪ್ತಲಿಂಗ ಪಾಟೀಲ್
ರವರು ಹಾಗೂ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಸವಿತಾ ಆರ್ ಗಿರಿರವರು ಸಸಿಗೆ ನೀರೆರೆಯುವ ಮೂಲಕ
ಸ್ವಾಗತ ಸಮಾರಂಭವನ್ನು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗುಪ್ತಲಿಂಗ ಪಾಟೀಲ್ ರವರು, ಎಲ್ಲಾ
ವೃತ್ತಿಗಳಲ್ಲಿ ವಕೀಲ ವೃತ್ತಿ ಎಂಬುದು ಶ್ರೇಷ್ಠವಾದ ವೃತ್ತಿಯಾಗಿದೆ. ಈ ವೃತ್ತಿಗೆ ಬರಬೇಕಾದರೆ
ಕಷ್ಟ ಪಟ್ಟು ಓದಿ, ಬರೆದು ಉತ್ತೀರ್ಣರಾಗಿ ಬರಬೇಕಾಗುತ್ತದೆ ಎಂದರು.
![]() |
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿರುವ ಗುಪ್ತಲಿಂಗ ಪಾಟೀಲ್ ರವರು |
ಕಾನೂನು ಪದವಿ ಎಂಬುದು ಶ್ರೇಷ್ಠ ಪದವಿಯಾಗಿದೆ. ಕಾನೂನು ಪದವಿ ಅಧ್ಯಯನ ಮಾಡಿದ
ವಿದ್ಯಾರ್ಥಿಗಳು ಉತ್ತಮ ವಕೀಲರಾಗಬೇಕಾದರೆ ಹಿರಿಯ ವಕೀಲರ ಬಳಿ ಸಹಾಯಕರಾಗಿ ಕೆಲಸ ಮಾಡಬೇಕು. ಸೇಠ್
ಶಂಕರ್ ಲಾಲ್ ಲಾಹೋಟಿ ಲಾ ಕಾಲೇಜಿನಲ್ಲಿ ಓದಿದವರು ಅನೇಕ ದೊಡ್ಡ ದೊಡ್ಡ ಹುದ್ದೆಗಳನ್ನು
ಪಡೆದುಕೊಂಡಿದ್ದಾರೆ. ಬಹುತೇಕರು ವಕೀಲರು, ನ್ಯಾಯಾಧೀಶರು ಆಗಿದ್ದಾರೆ ಎಂದರು.
ಕನ್ನಡಕ್ಕೆ ತನ್ನದೇಯಾದ
ಶಕ್ತಿ ಇದೆ:
ಕನ್ನಡ ಭಾಷೆಗೆ ತನ್ನದೇಯಾದ ಶಕ್ತಿಯಿದೆ. ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದೇನೆ.
ಕಾನೂನು ಪದವಿ ಕಲೆಯುವುದು ಕಷ್ಟ ಎಂಬ ಮನೋಭಾವದಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹೊರ
ಬರಬೇಕು. ಕನ್ನಡದಲ್ಲಿ ಕಲೇತವರು ಕೂಡ ದೊಡ್ಡಮಟ್ಟದ ಸಾಧನೆ ಮಾಡಿದ್ದಾರೆ.
ಕನ್ನಡ ಮಾಧ್ಯಮದವರು ಬಹಳಷ್ಟು ವಿಕ್ ಇರ್ತಾರೆ ಅನ್ನೋದು ಶುದ್ಧ ಸುಳ್ಳು.
ಕನ್ನಡ ಮಾಧ್ಯಮದವರು ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ಕೋರ್ಟ್ ಕೂಡ ಕನ್ನಡಕ್ಕೆ ಆದ್ಯತೆ
ನೀಡಿದೆ. ಕನ್ನಡ ಮಾಧ್ಯಮದವರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಹಣ ಗಳಿಸುವುದರ ಹಿಂದೆ ಹೋಗುವ
ಬದಲಿಗೆ ಉತ್ತಮವಾಗಿ ಕೆಲಸ ಮಾಡಬೇಕು ಎಂದು ಗುಪ್ತಲಿಂಗ ಪಾಟೀಲ್ ರವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾಗಿರುವ
ಡಾ. ಸವಿತಾ ಆರ್ ಗಿರಿರವರು, ಎಲ್ಲಿ ಸಲ್ಲದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿ ಸಲ್ಲುವವರು ಎಲ್ಲಾ
ಕಡೆ ಸಲ್ಲುತ್ತಾರೆ ಎಂಬ ಮಾತಿನಂತೆ ಕಾನೂನು ಪದವಿ ಕಲೆತವರು ಕೋರ್ಟ್, ಕಛೇರಿ, ಮಾಧ್ಯಮ ಸೇರಿದಂತೆ
ಎಲ್ಲಾ ಕಡೆ ಅವರು ಕೆಲಸ ಮಾಡಬಲ್ಲರು ಎಂದರು.
ಕಾನೂನು ಪದವಿಯಲ್ಲಿ ಯೋಚನಾ ಶಕ್ತಿ ಮುಖ್ಯವಾಗಿರುತ್ತದೆ. ಬ್ಯಾಂಕ್, ಕೋರ್ಟ್,
ಮಾಧ್ಯಮ ಸೇರಿದಂತೆ ಕಾನೂನು ಪದವಿಗೆ ಎಲ್ಲಾ ಕ್ಷೇತ್ರದಲ್ಲಿ ಕೂಡ ವಿಶೇಷ ಆದ್ಯತೆ ಇರುತ್ತದೆ.
ಪ್ರತಿಯೊಬ್ಬ ನಾಗರೀಕರು ಕೂಡ ಭಾರತ ಸಂವಿಧಾನ ಮತ್ತು ಕಾನೂನಿನ ಪುಸ್ತಕಗಳನ್ನು ಓದುವುದು
ಮುಖ್ಯವಾಗಿರುತ್ತದೆ. ಅದರಲ್ಲಿ ಹೆಚ್ಚಾಗಿ ಲಾ ವಿದ್ಯಾರ್ಥಿಯಾದವರಿಗೆ ಕಾನೂನು ಪುಸ್ತಕಗಳ ಓದು
ಅತಿಮುಖ್ಯವಾಗಿರುತ್ತದೆ. ಸಂವಿಧಾನ ಮತ್ತು ಕಾನೂನಿನ ಪುಸ್ತಕಗಳನ್ನು ಪ್ರತಿಯೊಬ್ಬರು ತಮ್ಮ ತಮ್ಮ
ಮನೆಗಳಲ್ಲಿ ಇಟ್ಟುಕೊಂಡು ಓದುವುದು ಉತ್ತಮ ಎಂದು ಡಾ. ಸವಿತಾ ಆರ್ ಗಿರಿರವರು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಶಾಂತೇಶ್ವರಿ ಶಾಂತಗೀರಿ, ಮಹೇಶ್ವರಿ
ಹೀರೆಮಠ, ಜ್ಯೋತಿ ಕಡಾಡಿ, ಕರುಣಾ ಪಾಟೀಲ್, ರೇಣುಕಾ ದೇವರಮನಿ, ಜ್ಯೋತಿ ಹಂಗರಗಿರವರು ಸೇರಿದಂತೆ
ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿಗಾರರು: ಅಯ್ಯಣ್ಣ ನಾಯಕ ಪಾಮನಕಲ್ಲೂರು
No comments:
Post a Comment