Thursday, October 26, 2023

ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಬೀಗ: ಕರವೇ ಎಚ್ಚರಿಕೆ

ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಬೀಗ: ಕರವೇ ಎಚ್ಚರಿಕೆ

ಪಿಡಿಒಗೆ ಮನವಿ ಸಲ್ಲಿಸಿದ ಕರವೇ ಮುಖಂಡರು, ಗ್ರಾಮಸ್ಥರು

ಪಾಮನಕಲ್ಲೂರು (ಅ.26): ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸದಿದ್ದರೇ ಪಾಮನಕಲ್ಲೂರು ಗ್ರಾಮ ಪಂಚಾಯತಿ ಕಛೇರಿಗೆ ಬೀಗ ಹಾಕುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಯ ಹೋಬಳಿ ಘಟಕದ ಮುಖಂಡರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಣ್ಣರವರಿಗೆ ಎಚ್ಚರಿಕೆ ನೀಡಿದರು.
ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಗುರುವಾರ ಮಧ್ಯಾಹ್ನ ಭೇಟಿ ನೀಡಿ ಗ್ರಾಮದಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದ ಅವರು, ನಾವು ಗ್ರಾಮದಲ್ಲಿನ ಚರಂಡಿ, ಕುಡಿಯುವ ನೀರು, ಸಿಸಿ ರಸ್ತೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ ಪಿಡಿಒರವರು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೂರರಿಂದ 150 ದಿನಗಳ ಉದ್ಯೋಗ ಖಾತ್ರಿ ಕೆಲಸ ನೀಡಬೇಕು. ಇರಕಲ್ ಕೆರೆಯ ನೀರು ಗ್ರಾಮಕ್ಕೆ ಸರಿಯಾಗಿ ಬರುವಂತೆ ನೋಡಿಕೊಳ್ಳಬೇಕು. ಅಲ್ಲದೇ ಬೋರ್ವೆಲ್ ನೀರು ಕೂಡ ಒದಗಿಸಬೇಕು. ಗ್ರಾಮದಲ್ಲಿರುವ ಸ್ಮಶಾನದಲ್ಲಿರುವ ಜಾಲಿ ಸ್ವಚ್ಛಗೊಳಿಸಿ, ಸ್ಮಶಾನಕ್ಕೆ ತಡೆಗೋಡೆ (ಮುಳ್ಳು ತಂತಿ) ನೀರ್ಮಿಸಬೇಕು. ಗ್ರಾಮದಲ್ಲಿ ಸಿಸಿ ರಸ್ತೆ ದುರಸ್ತಿ ಮಾಡಬೇಕು. ಬೀದಿ ದೀಪಗಳನ್ನು ದುರಸ್ತಿ ಮಾಡಿಸಬೇಕು ಎಂಬ ಅನೇಕ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಕರವೇ ಮುಖಂಡರು ಪಿಡಿಒ ರಾಮಣ್ಣರವರಿಗೆ ಸಲ್ಲಿಸಿ, ಶೀಘ್ರವಾಗಿ ಪರಿಹರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ಹೋಬಳಿ ಘಟಕದ ಗೌರವಾಧ್ಯಕ್ಷ ಶಿವಾನಂದ ಹೂಗಾರ, ಅಧ್ಯಕ್ಷ ರಮೇಶ್ ಗಂಟ್ಲಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚೌಡ್ಲಿ, ಖಜಾಂಚಿ ಮಲ್ಲಪ್ಪ ಹಿರೇಮನೆ, ಗ್ರಾಮಸ್ಥರಾದ ಅಮರಯ್ಯಸ್ವಾಮಿ ಹೊರಗಿನಮಠ, ಚನ್ನಪ್ಪ ಪಲ್ಲೇದ್, ಮಲ್ಲಯ್ಯ ಸಂಗಮರಣ್ಣ, ರಾಜು ಬೊಂಬಾಯಿ, ದರ್ಮಪ್ಪ ಶಿರಹಟ್ಟಿ, ಹುಸೇನಪ್ಪ ಈಳಗೇರ, ದುರಗಪ್ಪ, ಅಮರೇಶ್ ಡಿ ಪೂಜಾರಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು ಸೇರಿದಂತೆ ಅನೇಕರಿದ್ದರು.
#ಪಾಮನಕಲ್ಲೂರು #ರಾಯಚೂರು #ಮಸ್ಕಿ #ಗ್ರಾಮ #ಪಂಚಾಯತಿ #ನ್ಯೂಸ್ #Pamanakallur #Maski #Raichur #Gram_Panchayat #News #Kannada

Tuesday, October 17, 2023

ಕೆ.ಪಿ.ಆರ್.ಎಸ್ ಪಾಮನಕಲ್ಲೂರು ಗ್ರಾಮ ಘಟಕ ರಚನೆ


ರಾಯಚೂರು (ಅ.17): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘ (ಕೆಪಿಆರ್ಎಸ್) ದ ಗ್ರಾಮ ಘಟಕವನ್ನು ಸೋಮವಾರ ರಾತ್ರಿ ರಚಿಸಿ, ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಪಾಮನಕಲ್ಲೂರು ಗ್ರಾಮದ ಮಲ್ಲಪ್ಪ ಹಿರೇಮನಿ, ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀನಿವಾಸ ಸಾನಬಾಳ, ಉಪಾಧ್ಯಕ್ಷರುಗಳನ್ನಾಗಿ ಬಸವರಾಜ ಛಲವಾದಿ, ಕನಕಪ್ಪ ಹರಿಜನ, ಸಹ ಕಾರ್ಯದರ್ಶಿಗಳನ್ನಾಗಿ ಯಮನಪ್ಪ ಯದ್ದಲದೊಡ್ಡಿ, ಹನುಮಂತ ಕಲ್ಲೂರು, ಖಜಾಂಚಿಯನ್ನಾಗಿ ರಾಜೇಶ ಬಾಂಬೆ, ಸದಸ್ಯರನ್ನಾಗಿ ನಾಗೇಶ ಟೂಬಾಕಿ, ರಮೇಶ್ ಕಲ್ಲೂರು, ಹುಲಗಪ್ಪ ಗಡ್ಡಿಮನಿ, ದೇವಪ್ಪ ಹೂನೂರು, ಪಿಡ್ಡಪ್ಪ ಶಿರಹಟ್ಟಿ, ಕರೆಪ್ಪ ಗಂಟ್ಲಿ, ದುರ್ಗಾಸಿಂಗ್ ರಜಪೂತ್, ರಂಗಪ್ಪ ಹರಕೇರಿ, ದುರುಗಪ್ಪ ಗಂಟ್ಲಿರವರನ್ನು  ನೇಮಕ ಮಾಡಲಾಗಿದೆ.

ಕೆಪಿಆರ್ಎಸ್ ನ ಜಿಲ್ಲಾ ಸಮಿತಿ ಸದಸ್ಯರಾದ ರಮೇಶ್ ವೀರಾಪೂರ್, ಮುಖಂಡರಾದ ನಿಂಗಪ್ಪ ವೀರಾಪೂರ್ ರವರು ನೂತನ ಘಟಕ ರಚಿಸಿ, ಪದಾಧಿಕಾರಿಗಳನ್ನು ನೇಮಿಸಿದರು.

ಈ ಸಂದರ್ಭದಲ್ಲಿ ರಮೇಶ್ ಗಂಟ್ಲಿ ಪಾಮನಕಲ್ಲೂರು, ಅಮರೇಶ ಡಿ ಪೂಜಾರಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು ಸೇರಿದಂತೆ ಅನೇಕರಿದ್ದರು.

Saturday, September 30, 2023

ಸತತವಾಗಿ ಆರನೇ ಬಾರಿಗೆ ಕೆಎಮ್ಎಫ್ ನಿರ್ದೇಶಕರಾದ ಮಾರುತಿ ಖಾಶೆಂಪುರ್

ಸತತವಾಗಿ ಆರನೇ ಬಾರಿಗೆ ಕೆಎಮ್ಎಫ್ ನಿರ್ದೇಶಕರಾದ ಮಾರುತಿ ಖಾಶೆಂಪುರ್

ಕೆಎಮ್ಎಫ್ ನಿರ್ದೇಶಕರನ್ನು ಸನ್ಮಾನಿಸಿದ ಮುಖಂಡರು

ಬೀದರ್ (ಸೆ.30): ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ಬೀದರ್ ವಿಭಾಗದ ಸಾಮಾನ್ಯ ಚುನಾವಣೆಯಲ್ಲಿ ಗೆದ್ದು ಸತತವಾಗಿ ಆರನೇ ಬಾರಿಗೆ ಕೆಎಮ್ಎಫ್ ನಿರ್ದೇಶಕರಾಗಿ ಆಯ್ಕೆಯಾದ ಮಾರುತಿ ಖಾಶೆಂಪುರ್ ರವರು ತಮ್ಮ ಅಣ್ಣನವರಾದ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ನಿವಾಸದಲ್ಲಿ ಶನಿವಾರ ಬೆಳಗ್ಗೆ ಬಂಡೆಪ್ಪ ಖಾಶೆಂಪುರ್ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಎರಡನೇ ಬಾರಿಗೆ ಕೆಎಮ್ಎಫ್ ನಿರ್ದೇಶಕರಾಗಿ ಆಯ್ಕೆಯಾದ ಭೀಮರಾವ್ ಬಳತೆರವರು ಇದ್ದರು.
ಈ ವೇಳೆ ಮಾತನಾಡಿದ ಬಂಡೆಪ್ಪ ಖಾಶೆಂಪುರ್ ರವರು, ಸಹೋದರ ಮಾರುತಿ ಖಾಶೆಂಪುರ್ ರವರು ಸತತವಾಗಿ ಆರನೇ ಬಾರಿಗೆ ಹಾಗೂ ಭೀಮರಾವ್ ಬಳತೆರವರು ಎರಡನೇ ಬಾರಿಗೆ ಕೆಎಮ್ಎಫ್ ನಿರ್ದೇಶಕರಾಗಿರುವುದು ಸಂತಸದ ವಿಷಯವಾಗಿದೆ ಎಂದರು.
ಬೀದರ್ ಜಿಲ್ಲೆಯಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಸಹೋದರರಿಂದ ಜಿಲ್ಲೆಯಲ್ಲಿ ಹೈನುಗಾರಿಕೆ ಪ್ರಮಾಣ ಹೆಚ್ಚಳವಾಗಲಿ. ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವ ರೈತರಿಗೆ ಹೆಚ್ಚಿನ ಸೌಲಭ್ಯಗಳು ದೊರಕುವಂತಾಗಲಿ. ಹೆಚ್ಚಿನ ಪ್ರಮಾಣದ ಡೈರಿಗಳು ಜಿಲ್ಲೆಯಲ್ಲಿ ಹುಟ್ಟಿಕೊಳ್ಳಲಿ ಎಂದು ಬಂಡೆಪ್ಪ ಖಾಶೆಂಪುರ್ ರವರು ಶುಭ ಹಾರೈಸಿದರು.
ಇದೇ ವೇಳೆ ಜೆಡಿಎಸ್ ಪಕ್ಷದ ವಿವಿಧ ಘಟಕಗಳ ಪ್ರಮುಖರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಅನೇಕರು ಕೆಎಮ್ಎಫ್ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಿದರು.
#Bandeppa #khashempur #Bandeppakhashempur #BandeppaKashempur #MarutiKhashempur #MarutiKashempur #BidarSouth

Monday, September 25, 2023

ಮೈತ್ರಿ ಬಗ್ಗೆ ಮಹತ್ವದ ಮಾಹಿತಿ ನೀಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಮೈತ್ರಿ ವಿಷಯದಲ್ಲಿ ಯಾವುದೇ ಅಸಮಾಧಾನ ಇಲ್ಲ: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಸ್ಪಷ್ಟನೆ

ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಮಾತನಾಡಿದರು.

ಬೀದರ್ (ಸೆ.25): ಲೋಕಸಭಾ ಚುನಾವಣೆ ವಿಷಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ಹೊಂದಾಣಿಕೆ (ಮೈತ್ರಿ) ಮಾಡಿಕೊಳ್ಳುತ್ತಿರುವುದಕ್ಕೆ ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ. ಯಾವುದೇ ಅಸಮಾಧಾನವೂ ಇಲ್ಲ. ನಾವೆಲ್ಲರೂ ಒಂದಾಗಿದ್ದೇವೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸ್ಪಷ್ಟನೆ ನೀಡಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಷಯದಲ್ಲಿ ದೇವೇಗೌಡರು, ಕುಮಾರಸ್ವಾಮಿರವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ. ಈ ಹಿಂದೆ ನಡೆದ ಎರಡು ಸಭೆಗಳಲ್ಲಿ ಮೈತ್ರಿಗೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ ಎಂದರು.
ರಾಜಕೀಯದಲ್ಲಿ ಸಂದರ್ಭಾನುಸಾರ ಪಕ್ಷಗಳು ನಿರ್ಧಾರ ತೆಗೆದುಕೊಳ್ಳುತ್ತವೆ. ಅದರಂತೆ ನಮ್ಮ ಪಕ್ಷ ಕೂಡ ಎನ್ಡಿಎ ಜೊತೆಗಿನ ಮೈತ್ರಿಯ ನಿರ್ಧಾರವನ್ನು ತೆಗೆದುಕೊಂಡಿದೆ. ಅದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದೇವೆ. ದೇವೇಗೌಡರು ಮತ್ತು ಕುಮಾರಸ್ವಾಮಿರವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಪಕ್ಷದಲ್ಲಿ ಒಬ್ಬಿಬ್ಬರು ಅಸಮಾಧಾನ ಹೊಂದಿರುತ್ತಾರೆ, ಅದನ್ನು ಕುಮಾರಸ್ವಾಮಿರವರು ಸರಿಪಡಿಸುತ್ತಾರೆ.
ಕರ್ನಾಟಕದ ಒಳಿತಿಗಾಗಿ ನಾವು ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯದ ಪರವಾಗಿ ನಮ್ಮ ಪಕ್ಷ ಧ್ವನಿ ಎತ್ತುವ ಕೆಲಸ ಮಾಡಿಕೊಂಡು ಬಂದಿದೆ. ಅದರೊಟ್ಟಿಗೆ ನಮ್ಮ ಪಕ್ಷವನ್ನು ಉಳಿಸಿ ಬೆಳಸುವ ಕೆಲಸವನ್ನು ನಾವು ಮಾಡಬೇಕಾಗಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷರು ರಾಜೀನಾಮೆ ನೀಡಿರುವುದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಪಕ್ಷದಲ್ಲಿ ಬಹಳಷ್ಟು ಜನ ಉಪಾಧ್ಯಕ್ಷರಿದ್ದಾರೆ.
ಪೆಂಡ್ರೈವ್ ಟೂಸ್ ಬಾಂಬ್ ಅಲ್ಲ, ಸಮಯ ಬಂದಾಗ ತೋರಿಸ್ತಾರೆ:
ಕುಮಾರಸ್ವಾಮಿರವರು ತೋರಿಸಿರುವ ಪೆಂಡ್ರೈವ್ ಟೂಸ್ ಬಾಂಬ್ ಅಲ್ಲ. ಸಮಯ ಬಂದಾಗ ತೋರಿಸ್ತಾರೆ. ರಾಜಕೀಯದಲ್ಲಿ ಕುಮಾರಸ್ವಾಮಿರವರು ಯಾವತ್ತೂ ಟೂಸ್ ಬಿಟ್ಟಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಪಕ್ಕದ ವರಿಷ್ಠರು ಅದನ್ನು ಸರಿಪಡಿಸುತ್ತಾರೆ.
ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ:
ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ. ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ. ಬೀದರ್ ಲೋಕಸಭಾ ಟಿಕೆಟ್ ವಿಷಯದಲ್ಲಿ ದೇವೇಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಯಾರು ಅಸಮಾಧಾನಿತರಿಲ್ಲ, ಯಾವುದೇ ಸಭೆ ನಡೆಸುವುದಿಲ್ಲ. ಅಸಮಾಧಾನಿತರ ಯಾವುದೇ ಸಭೆಗೆ ನಾನು ಹೋಗುವುದಿಲ್ಲ. ಮೈತ್ರಿ ವಿಷಯದಲ್ಲಿ ದೇವೇಗೌಡರು, ಕುಮಾರಸ್ವಾಮಿರವರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
Bandeppa Khashempur/ಬಂಡೆಪ್ಪ ಖಾಶೆಂಪುರ್ #Bandeppa #Khashempur #Bidar #ಬೀದರ್ #ದಕ್ಷಿಣ #South

Tuesday, September 19, 2023

ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಗೆ ಅಯ್ಯಣ್ಣ ನಾಯಕ ಪಾಮನಕಲ್ಲೂರು ರಾಜೀನಾಮೆ

ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಗೆ ಅಯ್ಯಣ್ಣ ನಾಯಕ ಪಾಮನಕಲ್ಲೂರು ರಾಜೀನಾಮೆ

Ayyanna Nayaka Pamanakallur
ಅಯ್ಯಣ್ಣ ನಾಯಕ ಪಾಮನಕಲ್ಲೂರು

ರಾಯಚೂರು (ಸೆ.19): ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಯ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಸ್ಥಾನಕ್ಕೆ ಯುವ ಪತ್ರಕರ್ತ (ಬರಹಗಾರ) ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಮೂಲದ ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ರಾಜೀನಾಮೆ ನೀಡಿದ್ದಾರೆ.

ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾಗಿರುವ ರಾಜೇಶ್ ನಾಯಕರವರಿಗೆ ಸೋಮವಾರ ಸಂಜೆ ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ಪತ್ರ ಬರೆದಿದ್ದಾರೆ. 

‘ಇತ್ತೀಚಿನ ಕೆಲ ವರ್ಷಗಳ ಹಿಂದೆ ರಚಿಸಲಾಗಿದ್ದ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ (ರಿ) ರಾಜ್ಯ ಘಟಕದಲ್ಲಿ ತಾವು ನನಗೆ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಹುದ್ದೆ (ಸ್ಥಾನ) ನೀಡಿದ್ದಿರಿ. ಕಾರಣಾಂತರಗಳಿಂದ ನಾನು ತಾವು ನೀಡಿದ್ದ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಹುದ್ದೆ (ಸ್ಥಾನ) ಗೆ ಈ ಪತ್ರದ ಮೂಲಕ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ಪತ್ರವನ್ನು ಪರಿಗಣಿಸಿ ನನ್ನ ರಾಜೀನಾಮೆಯನ್ನು ಕೂಡಲೇ ಅಂಗೀಕಾರ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೀದ್ದೇನೆ.

ತಮ್ಮ ಸಮಿತಿಯಲ್ಲಿ ನನಗೆ ಅವಕಾಶ ನೀಡಿದ್ದ ಸಮಿತಿಯ ಸರ್ವ ಸದಸ್ಯರಿಗೂ ಮತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನೊಂದಿಗೆ ಇದ್ದು ಸಹಕರಿಸಿದ ಸರ್ವರಿಗೂ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಇನ್ನೂ ಮುಂದೆ ತಮ್ಮ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ (ರಿ) ಯ ಕಾರ್ಯಚಟುವಟಿಕೆಗಳಿಂದ ದೂರವಿರಲು ಬಯಸಿದ ನನಗೆ ತಾವು ಸಹಕರಿಸುವಿರಿ ಎಂದು ನಂಬಿದ್ದೇನೆ. ಮತ್ತೊಮ್ಮೆ ಸರ್ವರಿಗೂ ಧನ್ಯವಾದಗಳು. ತಮ್ಮ ಕಾರ್ಯಗಳಿಗೆ ಶುಭವಾಗಲಿ. ವಂದನೆಗಳು’ ಎಂದು ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ರಾಜೇಶ್ ನಾಯಕರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Sunday, September 10, 2023

ಜೆಡಿಎಸ್ ಸಮಾವೇಶದಲ್ಲಿ ಗರ್ಜಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಬಂಡೆಪ್ಪ ಖಾಶೆಂಪುರ್ (ಮಾಜಿ ಸಚಿವರು, ಕರ್ನಾಟಕ ಸರ್ಕಾರ)

ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ಪಕ್ಷದ ಮುಖಂಡರ, ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡಿದ ಸಂಪೂರ್ಣ ವಿಡಿಯೋ..

ಭಾಷಣದ ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ...

#ಬಂಡೆಪ್ಪ #ಖಾಶೆಂಪುರ್ #bandeppakashempur #Bandeppa #Khashempur #jds #karnataka #kannada #india #news #jdsnews #bidar #south #mla #minister #hdk #hdkumaraswamy #hdd #hddevegowda 

Friday, June 23, 2023

ಪಟಪಳ್ಳಿಯ ಆನಂದರೆಡ್ಡಿಗೆ ಪಿಹೆಚ್ಡಿ ಪದವಿ ಪ್ರದಾನ

ಪಟಪಳ್ಳಿಯ ಆನಂದರೆಡ್ಡಿಗೆ ಪಿಹೆಚ್ಡಿ ಪ್ರದಾನ

ಆನಂದರೆಡ್ಡಿ ಪಿಹೆಚ್‌ಡಿ ಪದವಿ ಸ್ವೀಕರಿಸಿದ ಕ್ಷಣ...

ದೊರೆ ನ್ಯೂಸ್ ಕನ್ನಡ, ಕಲಬುರಗಿ (ಜೂ.23): ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿಯ ರೈತ ಕುಟುಂಬದ ಆನಂದರೆಡ್ಡಿಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಲಾಗಿದೆ. 

ಪ್ರಾಥಮಿಕ ಶಿಕ್ಷಣವನ್ನು ಪಟಪಳ್ಳಿ, ಕೊಳ್ಳೂರು, ಐನೋಳ್ಳಿಯಲ್ಲಿ, ಪದವಿ ಪೂರ್ವ, ಪದವಿ ಶಿಕ್ಷಣವನ್ನು ಚಿಂಚೋಳಿಯಲ್ಲಿ, ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮುಗಿಸಿದ್ದ ಆನಂದರೆಡ್ಡಿರವರು "ನಮ್ಮ ಚಿಂಚೋಳಿ ತಾಲೂಕಿನ ಐತಿಹಾಸಿಕ ಸ್ಮಾರಕಗಳು - ಶಾತವಾಹನರ ಕಾಲದಿಂದ 1948ರವರೆಗೆ" ಎಂಬ ವಿಷಯದ ಮೇಲೆ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಇತಿಹಾಸ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ಡಾ. ವಿಜಯಕುಮಾರ್ ಸಾಲಿಮನಿರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಇದೀಗ ಆನಂದರೆಡ್ಡಿರವರು ತಮ್ಮ ತಂದೆಯ ಆಸೆಯಂತೆ ಪಿಹೆಚ್‌ಡಿ ಪದವಿ ಪಡೆದುಕೊಂಡಿದ್ದಾರೆ. ರೆಡ್ಡಿರವರಿಗೆ ಪಿಹೆಚ್‌ಡಿ (ಡಾಕ್ಟರೇಟ್) ಪದವಿ ಲಭಿಸಿದ್ದಕ್ಕೆ ಅವರ ಕುಟುಂಬಸ್ಥರು, ಮಾರ್ಗದರ್ಶಕರು, ಗ್ರಾಮಸ್ಥರು ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.

ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು