Wednesday, February 22, 2023

ಸೊಳ್ಳೆ ಔಷಧಿ ಸಿಂಪಡಿಸಿ: ದೇವಿಕಾ ನಾಯಕ ದೊರೆ

ದೇವಿಕಾ ನಾಯಕ ದೊರೆ

ರಾಯಚೂರು (ಫೆ.23): ಗ್ರಾಮೀಣ ಭಾಗದಲ್ಲಿ ನೈರ್ಮಲ್ಯದ ಕೊರತೆಯಿಂದಾಗಿ ಸೊಳ್ಳೆಗಳು ಹೆಚ್ಚಾಗಿದ್ದು, ಸೊಳ್ಳೆ ಕಡೆತದಿಂದ ಮಲೇರಿಯಾ ಕಾಯಿಲೆ ಹೆಚ್ಚುವ ಭೀತಿ ಉಂಟಾಗಿದ್ದು ಸಂಬಂಧಿಸಿದವರು ಕೂಡಲೇ ಸೊಳ್ಳೆ ಔಷದಿ ಸಿಂಪಡಿಸುವ ಕೆಲಸ ಮಾಡಬೇಕೆಂದು ರಾಯಚೂರು ಜಿಲ್ಲೆ ದೇವದುರ್ಗ ಮೂಲದ ವಾಲ್ಮೀಕಿ ನಾಯಕ ಸಮಾಜದ ಯುವತಿ ದೇವಿಕಾ ನಾಯಕ ದೊರೆ ಒತ್ತಾಯಿಸಿದ್ದಾಳೆ.

ಈ ಕುರಿತು ಮಾತನಾಡಿದ ದೇವಿಕಾ, ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ಕಸ ಹಾಕಲಾಗಿರುತ್ತದೆ‌‌. ಎಲ್ಲೆಂದರಲ್ಲಿ ನೀರು ನಿಂತಿರುತ್ತವೆ. ಹಾಗಾಗಿ ಸೊಳ್ಳೆಗಳು ಹುಟ್ಟಿಕೊಂಡು ಮಲೇರಿಯಾದಂತ ಕಾಯಿಲೆಗಳನ್ನು ಹರಡುತ್ತವೆ. ಆಗಾಗಿ ಸಂಬಂಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಸ ವಿಲೇವಾರಿ ಮಾಡಿಸಬೇಕು. ಎಲ್ಲೆಂದರಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಸರಾಗವಾಗಿ ನೀರು ಹೋಗುವ ವ್ಯವಸ್ಥೆ ಮಾಡಿಸಬೇಕು.

ವಾರಕ್ಕೆ ಎರಡು ಮೂರು ಬಾರಿಯಾದರೂ ಸೊಳ್ಳೆ ಔಷದಿ ಸಿಂಪಡಿಸಬೇಕು. ಆ ಮೂಲಕ ಮುಂದೆ ಆಗಬಹುದಾದ ಕಾಯಿಲೆ ಉಲ್ಬಣವನ್ನು ತಪ್ಪಿಸಬೇಕೆಂದು ದೇವಿಕಾ ನಾಯಕ ದೊರೆ ಮನವಿ ಮಾಡಿದ್ದಾಳೆ.

Wednesday, February 15, 2023

ಡಬಲ್ ಇಂಜಿನ್ ಸರ್ಕಾರದ ಕಿವಿ ಹಿಂಡಿದ ಶಾಸಕ ಬಂಡೆಪ್ಪ ಖಾಶೆಂಪುರ್

Bidar South MLA Bandeppa Khashempur

ಬೀದರ್ (ಫೆ.15): ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯವ್ರು ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಮಾತಿಗೆ ನೂರು ಬಾರಿ ಹೇಳ್ತಾರೆ ಅವರು ರಾಜ್ಯದ ಜನತೆಗಾಗಿ ಏನು ಒಳಿತು ಮಾಡಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿಯೇ ಡಬಲ್ ಇಂಜಿನ್ ಸರ್ಕಾರದ ಕಿವಿ ಹಿಂಡಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ನಡೆದ ಬಜೆಟ್ ಅಧಿವೇಶನದ ನಾಲ್ಕನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತುತ ಯಾವ ರೀತಿಯ ಯೋಜನೆಗಳಿವೆ ಎಂಬುದನ್ನು ತಿಳಿಸಲಾಗಿದೆ. ಆದರೇ ಮುಂದೆ ಏನು ಮಾಡುತ್ತೇವೆ ಎಂಬುದರ ಬಗ್ಗೆ ಹೇಳಿಲ್ಲ ಎನ್ನುವ ಮೂಲಕ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ವಿರುದ್ಧ ತಮ್ಮ ಭಾಷಣದೂದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದರು.

ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರದ ವಿರುದ್ಧ ನಡೆಸಿದ ವಾಗ್ದಾಳಿ ವಿಡಿಯೋ...

ಸಿಟಿ ರವಿಗೆ ಅಧಿಕಾರದ ಮದವೇ:

ಅಧಿಕಾರದ ಮದದಲ್ಲಿ ಸಿಟಿ ರವಿಯವರು ಜೆಡಿಎಸ್ ಬಗ್ಗೆ ಕೆಟ್ಟದ್ದಾಗಿ ಮಾತನ್ನಾಡಿದ್ದಾರೆ. ಅವರಿಗೆ ಸರ್ಕಾರ ಮಾಡುವ ಭರಾಟೆನೊ ಏನೋ, ನಮ್ಮ ಪಕ್ಷವನ್ನು ಅಂಗವಿಕಲರಿಗೆ ಒಲಿಕೆ ಮಾಡಿದ್ದಾರೆ. ವಿಶ್ವದಲ್ಲಿರುವ ಅಂಗವಿಕಲರಿಗೆ ಬಹಳಷ್ಟು ನೋವಾಗಿದೆ. ಅಂಗವಿಕಲತೆ ಎಂಬುದನು ಶಾಪವಲ್ಲ. ಅದು ದೇವರು ನೀಡಿದ ವರಧಾನವಾಗಿದೆ ಎಂದರು.


ನೀತಿ ಸಂಹಿತೆ ಬರುವವರೆಗೂ ಮಾತ್ರ ನಿಮ್ಮ ಆಟ:

ಬಿಜೆಪಿಯ ದೊಡ್ಡದೊಡ್ಡ ನಾಯಕರು ಭಾಷಣ ಮಾಡುತ್ತಿದ್ದಾರೆ. ನಿಮ್ಮ ಆಟ ನೀತಿ ಸಂಹಿತೆ ಜಾರಿಗೆ ಬರುವವರೆಗೂ ಮಾತ್ರ. ಆ ನಂತರ ನಿಮ್ಮ ಆಟ ನಡೆಯಲ್ಲ. ಅಲ್ಲಿಯವರೆಗಾದರೂ ಜನತೆಗೆ ಒಳಿತಾಗುವ ಕೆಲಸ ಮಾಡಿ ಎಂದು ಬಿಜೆಪಿಗೆ ಕಿವಿ ಮಾತು ಹೇಳಿದರು.


ಬೀದರ್ ಪಿಡಿಒ ಉದಾಹರಣೆ ನೀಡಿದ ಖಾಶೆಂಪುರ್:

ಅಂಗವೀಕಲರು ನಮಗಿಂತ ಬುದ್ಧಿವಂತರೂ ಇರುತ್ತಾರೆ. ನಮ್ಮಲ್ಲಿ ಒಬ್ಬ ಪಿಡಿಒ ಇದ್ದಾನೆ. ಆತನಿಗೆ ಕಣ್ಣಿಲ್ಲ. ಆದರೇ ಅವನಷ್ಟು ನಾವ್ಯಾರು ಚನ್ನಾಗಿ ಕೆಲಸ ಮಾಡಲಾಗುವುದಿಲ್ಲ. ಅಂತವರ ಮೇಲೆ ಯಾವುದೋ ಉದಾಹರಣೆ ನೀಡುವುದು ಎಷ್ಟು ಸರಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆಕ್ರೋಶ ವ್ಯಕ್ತಪಡಿಸಿದರು.


ಡಿಜೆಲ್ ಇಲ್ಲದ ಡಬಲ್ ಇಂಜಿನ್:

ಸಿಟಿ ರವಿಯವರು ಡಬಲ್ ಇಂಜಿನ್ ಎಂಬ ಪದವನ್ನು ನೂರಾರು ಬಾರಿ ಬಳಸಿದ್ದಾರೆ. ಈ ಡಬಲ್ ಇಂಜಿನ್ ಓಡುವ ಇಂಜಿನ್ ನಾ ಅಥವಾ ದಿಲ್ಲಿಯಲ್ಲಿನ ರೈಲ್ವೆ ಭವನದ ಬಳಿ ನಿಲ್ಲಿಸಲಾದ   ರೀತಿಯ ಓಡದ ಇಂಜಿನ್ ಆ.? ಆ ಇಂಜಿನ್ ನಲ್ಲಿ ಒಳಗಡೆ ಡಿಸೇಲ್ ಇಲ್ಲ. ಅದರಂತೆ ಈ ಡಬಲ್ ಇಂಜಿನ್ ಸರ್ಕಾರದಲ್ಲೂ ಡಿಸೆಲ್ ಇಲ್ವಾ ಎಂದು ಶಾಸಕರು ಪ್ರಶ್ನಿಸಿದರು.

ದೇಶದಲ್ಲಿ ಶೇಕಡ 70% ರಷ್ಟು ಜನ ರೈತರಿದ್ದಾರೆ. ಈ ಸರ್ಕಾರ ರೈತರಿಗೆ ಏನು ಮಾಡಿದೆ. ಕುಮಾರಸ್ವಾಮಿಯವರ ಸರ್ಕಾರ 24 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿ ರೈತರಿಗೆ ಶಕ್ತಿ ನೀಡಿತ್ತು. ನಾವು ಸಾಲಮನ್ನಾ ಮಾಡಿದಷ್ಟು  ಈ ಸರ್ಕಾರದಲ್ಲಿ ಸಾಲ ಕೊಡಲಾಗ್ತಿಲ್ಲ. ರೈತರ ಆದಾಯ ಡಬಲ್ ಮಾಡಿದ್ದಿರಾ.? ಹೋಗಿ ರೈತರನ್ನು ಕೇಳಿ ಅವರ ಆದಾಯ ಡಬಲ್ ಆಗಿದೆಯಾ ಅಂತ. ರೈತರಿಗೆ ಬೆಳೆ ನಷ್ಟದ ಪರಿಹಾರವನ್ನು ಇವ್ರು ಸರಿಯಾಗಿ ಕೊಟ್ಟಿಲ್ಲ. ನೆಟೆ ರೋಗದಿಂದ ಕಲ್ಯಾಣ ಕರ್ನಾಟಕ ಭಾಗದ ರೈತರ 90% ತೊಗರಿ ಬೆಳೆ ಹಾನಿಯಾಗಿದೆ. ಸರ್ಕಾರ ನೀಡಿರುವ ಪರಿಹಾರ ಸೂಕ್ತವಾಗಿದೆಯಾ? ಡಬಜ್ ಇಂಜಿನ್ ಅಂದ್ರೆ ಇದೇನಾ.

ಜಿಲ್ಲೆಗೊಂದು ಗೋ ಶಾಲೆ ಮಾಡುತ್ತಿವಿ ಎಂದಿದ್ದರು. ನಿಮ್ಮ ಬಜೆಟ್ ನಲ್ಲಿ ಹೇಳಿದ ಯೋಜನೆ ಕಾರ್ಯರೂಪಕ್ಕೆ ಬಂದಿದೆಯಾ? ಜೆಜೆಎಮ್ ಯೋಜನೆಯ ಕಥೆ ಏನಾಗಿದೆ. ಕ್ಷೇತ್ರಕ್ಕೆ ಒಂದೇ ಒಂದು ಸ್ವಯಂ ಉದ್ಯೋಗ ನೀಡ್ತಿದ್ದಿರಿ. ನಾವು ಜನರಿಗೆ ಏನು ಹೇಳ್ಬೇಕು. ಎಸ್ಸಿ, ಎಸ್ಟಿ ಜನರಿಗೆ ಹೇಗೆ ನ್ಯಾಯ ಕೊಡಲು ಸಾಧ್ಯವಾಗುತ್ತದೆ. ಎಲ್ಲಾ ನಿಗಮಗಳಲ್ಲಿ ಇದೇ ಪರಿಸ್ಥಿತಿ ಇದೆ. ಸುಮ್ನೆ ಯಾಕೆ ನಮ್ಮನ್ನ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡ್ತಿದ್ದಿರಿ.

ನೀರುದ್ಯೋಗ ನಿವಾರಣೆಯಲ್ಲಿ ಮೇಲಿನ ಇಂಜಿನ್ ಮತ್ತು ಕೆಳಗಿನ ಇಂಜಿನ್ ಗಳು ಫೇಲ್ ಆಗಿವೆ. ವರ್ಷಕ್ಕೆ 2 ಕೋಟಿ ಜನರಿಗೆ ನೌಕರಿ ನೀಡ್ತಿವಿ ಅಂತ ಮೇಲಿನ ಇಂಜಿನ್ ಪ್ರಣಾಳಿಕೆಯಲ್ಲಿ ಹೇಳಿತ್ತು. ಅದು ಆಗ್ಲಿಲ್ಲ. ನೀವು ಏನ್ ಮಾಡಿದ್ದಿರಾ ಹೇಳಿ. ಬೆಳಕು ಯೋಜನೆ ಕಥೆ ಏನಾಯ್ತು. ನನ್ನ ಕ್ಷೇತ್ರಕ್ಕೆ  ಈ ಸರ್ಕಾರ ಮೂರುವರೆ ವರ್ಷದಲ್ಲಿ ಕೇವಲ 800 ಮನೆಗಳನ್ನು ನೀಡಿದೆ. ಪಕ್ಕದ ತೆಲಗಾಂಣದಲ್ಲಿ ಸಿಂಗಲ್ ಇಂಜಿನ್ ಸರ್ಕಾರವಿದೆ. ಅವರು ರೈತರಿಗೆ ಎಕರೆಗೆ 10 ಸಾವಿರ ರೂ. ಬಿತ್ತನೆಯ ಖರ್ಚು ವೆಚ್ಚಕ್ಕಾಗಿ ನೀಡ್ತಿದ್ದಾರೆ. ನೀವು ಏನ್ ಮಾಡ್ತಿದ್ದಿರಿ. ಈ ಹಿಂದೆ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ರಾಜ್ಯದ ನೀರಾವರಿಗೆ ಬಹಳಷ್ಟು ಅನುದಾನ ನೀಡಿದ್ದಾರೆ. ಈ ಸರ್ಕಾರ ಏನ್ ಮಾಡ್ತಿದೆ ಎಂದು ಖಾಶೆಂಪುರ್ ಪ್ರಶ್ನಿಸಿದರು.


ಮೀಸಲಾತಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ:

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿರುವುದು ಸಂತಸದ ವಿಷಯವಾಗಿದೆ. ನಾವು ಅದನ್ನು ಸ್ವಾಗತಿಸುತ್ತೇವೆ. ಬೀದರ್, ಗುಲ್ಬರ್ಗಾ, ಯಾದಗಿರಿಯಲ್ಲಿ ಗೊಂಡ, ಟೋಕರಿ ಕೋಳಿ ಎರಡು ಜಾತಿಗಳು ಎಸ್ಟಿಯಲ್ಲಿ ಬರುತ್ತದೆ. ಗೊಂಡ ಕುರುಬ, ಕುರುಬ ಗೊಂಡ, ಟೋಕರಿ ಕೋಳಿ ಮತ್ತು ಕೋಳಿ ಇವು ಎರಡು ಒಂದೇ ಎಂದು ಈ ಹಿಂದಿನ ಸರ್ಕಾರ ಕೇಂದ್ರಕ್ಕೆ ವರದಿ ಕಳಿಸಿದೆ. ನಿಮ್ಮ ಡಬಲ್ ಇಂಜಿನ್ ಸರ್ಕಾರದಿಂದ ಈ ಎರಡು ಒಂದೇ ಎಂದು ಡಿಕ್ಲರ್ ಮಾಡಿಸಿ. ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಿ ಎಂದು ಕುರುಬ ಸಮಾಜದ ಜಗದ್ಗುರುಗಳು ಬೆಂಗಳೂರಿನ ತನಕ ಹೋರಾಟ ಮಾಡಿದ್ದಾರೆ ಅದನ್ನು ಮಾಡ್ಸಿ ಕೊಡಿ ಎಂದರು.


ಬೀದರ್ ಸುಗರ್ ಪ್ಯಾಕ್ಟರಿ ಪುನಃ ಪ್ರಾರಂಭಿಸಿ:

ಬೀದರ್ ಸುಗರ್ ಪ್ಯಾಕ್ಟರಿಗೆ ನಾನು 20 ಕೋಟಿ ರೂ. ಗ್ರ್ಯಾಂಟ್ ಕೊಡ್ಸಿದ್ದೆ. ಪ್ಯಾಕ್ಟರಿ ಚಾಲೂ ಆಗಿತ್ತು. ಬಳಿಕ ಬಂದ್ ಆಗಿದೆ. ಅದಕ್ಕೆ ಈಗ ಅಧ್ಯಕ್ಷರು, ಉಪಾಧ್ಯಕ್ಷರು ಎಲ್ಲರೂ ನಿಮ್ಮ ಪಕ್ಷದವರೇ ಇದ್ದಾರೆ. ಇದಾಗಿಯೂ ಅದನ್ನು ಬಂದ್ ಮಾಡಲಾಗಿದೆ. ಅದನ್ನು ಪುನಃ ಚಾಲೂ ಮಾಡ್ಸಿ. ಕೆಕೆಆರ್ಡಿಬಿ ಅನುದಾನದಲ್ಲಿ ಶಿಕ್ಷಣ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಬೇಕಾಗಿದೆ. ನಮ್ಮ ಭಾಗಕ್ಕೆ ಇಷ್ಟೆ ಅಂತ ಅನುದಾನ ನಿಗಧಿ ಮಾಡಬೇಡಿ. ಬೀದರ್ ಗೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನೀಡಿ. ಬಂದ್ ಆಗಿರುವ ಕ್ಯಾತ್ ಲ್ಯಾಬ್ ಪುನಃ ಚಾಲೂ ಮಾಡ್ಸಿ. ಅಲ್ಲಿ ಸಾಕಷ್ಟು ಅನುದಾನವಿದೆ. ಅದನ್ನು ಸದ್ಬಳಕೆ ಮಾಡ್ಸಿ. ಬೀದರ್ ನಲ್ಲಿರುವ ಚಿಟಗುಪ್ಪಾ ತಾಲೂಕಿಗೆ ಸೌಕರ್ಯಗಳನ್ನು ಒದಗಿಸಿಕೊಡಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸುದೀಘ್ರ ಭಾಷಣದಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು.

Monday, February 13, 2023

ಪರಿಹಾರ ಮೊತ್ತ 50 ಸಾವಿರಕ್ಕೆ ಹೆಚ್ಚಿಸುವಂತೆ ಸದನದಲ್ಲಿ ಆಗ್ರಹಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಪರಿಹಾರ ಮೊತ್ತ 50 ಸಾವಿರಕ್ಕೆ ಹೆಚ್ಚಿಸುವಂತೆ ಸದನದಲ್ಲಿ ಆಗ್ರಹಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

 

MLA Bandeppa Khashempur

ಬೀದರ್ (ಫೆ.13): ಕಾಲುಬಾಯಿ ರೋಗ ಮತ್ತು ಇತರೆ ಕಾಯಿಲೆಗಳಿಂದ ಮೃತಪಟ್ಟ ಜಾನುವಾರುಗಳಿಗೆ ಪ್ರಸ್ತುತ ನೀಡುತ್ತಿರುವ ಪರಿಹಾರಧನದ ಮೊತ್ತ ಬಹಳಷ್ಟು ಕಡಿಮೆಯಿದ್ದು, ಅದನ್ನು 50 ಸಾವಿರ ರೂಪಾಯಿಗಳಿಗೆ ಹೆಚ್ಚಿಸಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಆಗ್ರಹಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಬಜೆಟ್ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಕಾಲುಬಾಯಿ ರೋಗ ಮತ್ತು ಇತರೆ ಕಾಯಿಲೆಗಳಿಂದ ಮೃತಪಟ್ಟ ಜಾನುವಾರುಗಳಿಗೆ ಸಂಬಂಧಿಸಿದ ಚುಕ್ಕೆಗುರುತಿನ ಪ್ರಶ್ನೆ ಕೇಳಿ ಮಾತನಾಡಿದ ಅವರು, ಮೃತ ಜಾನುವಾರುಗಳಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಉತ್ತರವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

Video: ಪರಿಹಾರ ಮೊತ್ತ 50 ಸಾವಿರಕ್ಕೆ ಹೆಚ್ಚಿಸುವಂತೆ ಸದನದಲ್ಲಿ ಆಗ್ರಹಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ ಜಿಲ್ಲೆಯಲ್ಲಿ 108, ಬೀದರ್ ದಕ್ಷಿಣ ಕ್ಷೇತ್ರದಲ್ಲಿ 04 ಜಾನುವಾರುಗಳು ಮೃತಪಟ್ಟಿವೆ ಎಂದು ಸಚಿವರು ಉತ್ತರ ನೀಡಿದ್ದಾರೆ. ವಾಸ್ತವವಾಗಿ ನೋಡುವುದಾದರೇ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಜಾನುವಾರುಗಳು ಮೃತಪಟ್ಟಿವೆ. ಮೃತ ಕರುವಿಗೆ 05 ಸಾವಿರ ರೂ., ದೊಡ್ಡಜಾನುವಾರುಗಳಿಗೆ 20 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಒಂದು ಆಕಳು 1 ಲಕ್ಷ ರೂ.ಗಿಂತ ಕಡಿಮೆ ಮೊತ್ತದಲ್ಲಿ ಸಿಗುವುದಿಲ್ಲ. ರೈತರ ಪರವಾದ ಸರ್ಕಾರ, ಬಡವರ ಪರವಾದ ಸರ್ಕಾರ ಅಂದ್ರೆ ಇದೇನಾ..? ಏನಿದು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆಕ್ರೋಶಗೊಂಡರು.

ಮಧ್ಯಪ್ರವೇಶಿದ ಸಚಿವ ಮಾಧುಸ್ವಾಮಿರವರು, ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಸರ್ಕಾರ ನೀಡುತ್ತಿರುವ ಪರಿಹಾರದ ಮೊತ್ತವನ್ನು ಕನಿಷ್ಟ 50 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಈಗ ನೀಡುತ್ತಿರುವ ಪರಿಹಾರ ನ್ಯಾಯಯುತವಾದದ್ದಲ್ಲ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು. ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡರು ಸೇರಿದಂತೆ ಅನೇಕರು ಬಂಡೆಪ್ಪ ಖಾಶೆಂಪುರ್ ರವರ ಮಾತಿಗೆ ಧ್ವನಿ ಗುಡಿಸಿದರು.

ಉತ್ತರ ನೀಡಿ ಮಾತನಾಡಿದ  ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ರವರು, ಚರ್ಮಗಂಟು ರೋಗಕ್ಕೆ ಬೇರೆ ಯಾವ ರಾಜ್ಯದಲ್ಲೂ ಪರಿಹಾರ ನೀಡುತ್ತಿಲ್ಲ. ಮೊದಲ ಬಾರಿಗೆ ನಾನು ಕರ್ನಾಟಕದಲ್ಲಿ ಆರಂಭಿಸಿದ್ದೇನೆ. 37 ಕೋಟಿ ರೂ. ಪರಿಹಾರ ನೀಡಲಾಗಿದೆ. ಇನ್ನೂಳಿದದ್ದು ನೀಡಬೇಕಿದೆ. ಪರಿಹಾರದ ಮೊತ್ತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಟ್ಟಿಗೆ ಚರ್ಚಿಸುತ್ತೇನೆ ಎಂದರು.

Friday, February 10, 2023

ಸದನದಲ್ಲಿ ಸಿದ್ದೇಶ್ವರ ಶ್ರೀಗಳನ್ನು ಸ್ಮರಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

 ಸದನದಲ್ಲಿ ಸಿದ್ದೇಶ್ವರ ಶ್ರೀಗಳನ್ನು ಸ್ಮರಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ ನಲ್ಲಿ ಶ್ರೀಗಳು ನೀಡಿದ್ದ ಪ್ರವಚನ ಮೆಲುಕು ಹಾಕಿದ ಮಾಜಿ ಸಚಿವರು

 

Bandeppa Khashempur ಬಂಡೆಪ್ಪ ಖಾಶೆಂಪುರ್

ಬೀದರ್ (ಫೆ.10): ಇತ್ತೀಚೆಗೆ ಲಿಂಗೈಕ್ಯರಾದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳನ್ನು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬೆಂಗಳೂರಿನಲ್ಲಿ ಸ್ಮರಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಬಜೆಟ್ ಅಧಿವೇಶನದ ಮೊದಲನೇ ದಿನದ ಕಲಾಪದಲ್ಲಿ ಪಾಲ್ಗೊಂಡು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಂಡಿಸಿದ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿ, ಅಗಲಿದ ಗಣ್ಯರಿಗೆ ಸಂತಾಪ ವ್ಯಕ್ತಪಡಿಸಿದ ಅವರು, 2006 ಸಂದರ್ಭದಲ್ಲಿ ತಾವು ಮೊದಲನೇ ಬಾರಿಗೆ ಸಚಿವರಾಗಿದ್ದಾಗ ಬೀದರ್ ನಲ್ಲಿ ಸಿದ್ದೇಶ್ವರ ಶ್ರೀಗಳು ನೀಡಿದ್ದ ಪ್ರವಚನದ ಮೆಲುಕು ಹಾಕಿದರು.

ಸಿದ್ದೇಶ್ವರ ಶ್ರೀಗಳ ಬಗ್ಗೆ ನಾವು ಎಷ್ಟು ಹೇಳಿದರು ಕಡಿಮೆ. ಇಂತಹ ಯುಗದಲ್ಲಿ ಸರಳತೆ ಹಾಗೂ ಸಮಯ ಪಾಲನೆಗೆ ಶ್ರೀಗಳು ಮಹತ್ವ ನೀಡಿದ್ದರು. 2006ರಲ್ಲಿ ನಾನು ಪ್ರಥಮ ಬಾರಿಗೆ ಮಂತ್ರಿಯಾಗಿದ್ದಾಗ ಬೀದರ್ ನಲ್ಲಿ ಶ್ರೀಗಳ ಒಂದು ತಿಂಗಳು ಪ್ರವಚನ ನಡೆದಿತ್ತು. ನಗರದ ಬಿವಿಬಿ ಕಾಲೇಜ್ ಆವರಣದಲ್ಲಿ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪ್ರವಚನ ಆರಂಭವಾಗುತ್ತಿತ್ತು. ಶ್ರೀಗಳು ಒಂದೇ ಒಂದು ನಿಮಿಷ ಹೆಚ್ಚ ಕಡಿಮೆಯಾಗದಂತೆ ಸರಿಯಾದ ಸಮಯಕ್ಕೆ ಪ್ರವಚನ ಆರಂಭಿಸುತ್ತಿದ್ದರು. ಶ್ರೀಗಳ ಪ್ರವಚನ ಕೇಳಲು ಪ್ರತಿನಿತ್ಯ 10 ರಿಂದ 15 ಸಾವಿರ ಜನ ಸೇರುತ್ತಿದ್ದರು ಎಂದು ಹಳೆಯ ದಿನಗಳನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮೆಲುಕು ಹಾಕಿದರು.

ಶ್ರೀಗಳ ಪ್ರವಚನ, ಉಪನ್ಯಾಸಗಳಲ್ಲಿನ ಪ್ರತಿಶತ ಒಂದರಷ್ಟು ಭಾಗವನ್ನಾದರು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದು ನಾನು ಕೂಡ ಅನೇಕ ಕಡೆಗಳಲ್ಲಿ ಹೇಳುತ್ತೇನೆ. ಶ್ರೀಗಳು ಬಹಳಷ್ಟು ಸರಳ ಜೀವಿಯಾಗಿದ್ದರು. ಜೇಬು ಇಲ್ಲದ ಅಂಗಿ ತೊಡುತ್ತಿದ್ದ ಶ್ರೀಗಳು ಮೊಬೈಲ್ ಕೂಡ ಬಳಸುತ್ತಿರಲಿಲ್ಲ. ಭಾರತ ಮಾತ್ರವಲ್ಲ ವಿಶ್ವವೇ ಇಂತಹ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬೇಕಿದೆ. ನಾವೆಲ್ಲರೂ ನಮ್ಮ ಬದುಕಿನಲ್ಲಿ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಾಗಬೇಕಾಗಿದೆ.

ಲಿಂಕ್ ಕ್ಲಿಕ್ ಮಾಡಿ ಯೂಟ್ಯೂಬ್ ವಿಡಿಯೋ ನೋಡಿ

ಶ್ರೀಗಳು ನಮ್ಮನ್ನು ಅಗಲಿಲ್ಲ. ಅವರಿಗೆ ಸಂತಾಪ ಸೂಚಿಸುವುದು ಬೇಡ. ಅವರು ನಮ್ಮೊಟ್ಟಿಗೆ ಇದ್ದಾರೆ. ಅವರ ಪ್ರವಚನ, ತತ್ವಾದರ್ಶಗಳು, ವಿಚಾರಗಳು, ಮಾರ್ಗದರ್ಶನ ಸದಾಕಾಲವೂ ನಮ್ಮ ಜನರೊಟ್ಟಿಗೆ ಇರುತ್ತದೆ. ನಮ್ಮನ್ನು ಸರಿದಾರಿಗೆ ಕರೆದುಕೊಂಡು ಹೋಗುತ್ತದೆ. ಕರುನಾಡಿನಲ್ಲಿ ಜನಿಸಿದ ಅವರು ಅಜರಾಮರವಾಗಿರುತ್ತಾರೆ ಎಂಬ ಭಾವನೆ ನಮಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಇದೇ ವೇಳೆ ಶಾಸಕರು, ಇತ್ತೀಚೆಗೆ ಅಗಲಿದ ಅನೇಕ ಜನ ಗಣ್ಯರ, ಕಳೆದ ನಾಲ್ಕೈದು ದಿನಗಳಿಂದ ವಿದೇಶಗಳಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡಿರುವ ಸಾವಿರಾರು ಜನರ ಆತ್ಮಕ್ಕೆ ಶಾಂತಿ ಕೋರಿದರು.