Monday, February 13, 2023

ಪರಿಹಾರ ಮೊತ್ತ 50 ಸಾವಿರಕ್ಕೆ ಹೆಚ್ಚಿಸುವಂತೆ ಸದನದಲ್ಲಿ ಆಗ್ರಹಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಪರಿಹಾರ ಮೊತ್ತ 50 ಸಾವಿರಕ್ಕೆ ಹೆಚ್ಚಿಸುವಂತೆ ಸದನದಲ್ಲಿ ಆಗ್ರಹಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

 

MLA Bandeppa Khashempur

ಬೀದರ್ (ಫೆ.13): ಕಾಲುಬಾಯಿ ರೋಗ ಮತ್ತು ಇತರೆ ಕಾಯಿಲೆಗಳಿಂದ ಮೃತಪಟ್ಟ ಜಾನುವಾರುಗಳಿಗೆ ಪ್ರಸ್ತುತ ನೀಡುತ್ತಿರುವ ಪರಿಹಾರಧನದ ಮೊತ್ತ ಬಹಳಷ್ಟು ಕಡಿಮೆಯಿದ್ದು, ಅದನ್ನು 50 ಸಾವಿರ ರೂಪಾಯಿಗಳಿಗೆ ಹೆಚ್ಚಿಸಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಆಗ್ರಹಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಬಜೆಟ್ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಕಾಲುಬಾಯಿ ರೋಗ ಮತ್ತು ಇತರೆ ಕಾಯಿಲೆಗಳಿಂದ ಮೃತಪಟ್ಟ ಜಾನುವಾರುಗಳಿಗೆ ಸಂಬಂಧಿಸಿದ ಚುಕ್ಕೆಗುರುತಿನ ಪ್ರಶ್ನೆ ಕೇಳಿ ಮಾತನಾಡಿದ ಅವರು, ಮೃತ ಜಾನುವಾರುಗಳಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಉತ್ತರವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

Video: ಪರಿಹಾರ ಮೊತ್ತ 50 ಸಾವಿರಕ್ಕೆ ಹೆಚ್ಚಿಸುವಂತೆ ಸದನದಲ್ಲಿ ಆಗ್ರಹಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ ಜಿಲ್ಲೆಯಲ್ಲಿ 108, ಬೀದರ್ ದಕ್ಷಿಣ ಕ್ಷೇತ್ರದಲ್ಲಿ 04 ಜಾನುವಾರುಗಳು ಮೃತಪಟ್ಟಿವೆ ಎಂದು ಸಚಿವರು ಉತ್ತರ ನೀಡಿದ್ದಾರೆ. ವಾಸ್ತವವಾಗಿ ನೋಡುವುದಾದರೇ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಜಾನುವಾರುಗಳು ಮೃತಪಟ್ಟಿವೆ. ಮೃತ ಕರುವಿಗೆ 05 ಸಾವಿರ ರೂ., ದೊಡ್ಡಜಾನುವಾರುಗಳಿಗೆ 20 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಒಂದು ಆಕಳು 1 ಲಕ್ಷ ರೂ.ಗಿಂತ ಕಡಿಮೆ ಮೊತ್ತದಲ್ಲಿ ಸಿಗುವುದಿಲ್ಲ. ರೈತರ ಪರವಾದ ಸರ್ಕಾರ, ಬಡವರ ಪರವಾದ ಸರ್ಕಾರ ಅಂದ್ರೆ ಇದೇನಾ..? ಏನಿದು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆಕ್ರೋಶಗೊಂಡರು.

ಮಧ್ಯಪ್ರವೇಶಿದ ಸಚಿವ ಮಾಧುಸ್ವಾಮಿರವರು, ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಸರ್ಕಾರ ನೀಡುತ್ತಿರುವ ಪರಿಹಾರದ ಮೊತ್ತವನ್ನು ಕನಿಷ್ಟ 50 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಈಗ ನೀಡುತ್ತಿರುವ ಪರಿಹಾರ ನ್ಯಾಯಯುತವಾದದ್ದಲ್ಲ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು. ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡರು ಸೇರಿದಂತೆ ಅನೇಕರು ಬಂಡೆಪ್ಪ ಖಾಶೆಂಪುರ್ ರವರ ಮಾತಿಗೆ ಧ್ವನಿ ಗುಡಿಸಿದರು.

ಉತ್ತರ ನೀಡಿ ಮಾತನಾಡಿದ  ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ರವರು, ಚರ್ಮಗಂಟು ರೋಗಕ್ಕೆ ಬೇರೆ ಯಾವ ರಾಜ್ಯದಲ್ಲೂ ಪರಿಹಾರ ನೀಡುತ್ತಿಲ್ಲ. ಮೊದಲ ಬಾರಿಗೆ ನಾನು ಕರ್ನಾಟಕದಲ್ಲಿ ಆರಂಭಿಸಿದ್ದೇನೆ. 37 ಕೋಟಿ ರೂ. ಪರಿಹಾರ ನೀಡಲಾಗಿದೆ. ಇನ್ನೂಳಿದದ್ದು ನೀಡಬೇಕಿದೆ. ಪರಿಹಾರದ ಮೊತ್ತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಟ್ಟಿಗೆ ಚರ್ಚಿಸುತ್ತೇನೆ ಎಂದರು.

No comments:

Post a Comment