Friday, February 10, 2023

ಸದನದಲ್ಲಿ ಸಿದ್ದೇಶ್ವರ ಶ್ರೀಗಳನ್ನು ಸ್ಮರಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

 ಸದನದಲ್ಲಿ ಸಿದ್ದೇಶ್ವರ ಶ್ರೀಗಳನ್ನು ಸ್ಮರಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ ನಲ್ಲಿ ಶ್ರೀಗಳು ನೀಡಿದ್ದ ಪ್ರವಚನ ಮೆಲುಕು ಹಾಕಿದ ಮಾಜಿ ಸಚಿವರು

 

Bandeppa Khashempur ಬಂಡೆಪ್ಪ ಖಾಶೆಂಪುರ್

ಬೀದರ್ (ಫೆ.10): ಇತ್ತೀಚೆಗೆ ಲಿಂಗೈಕ್ಯರಾದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳನ್ನು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬೆಂಗಳೂರಿನಲ್ಲಿ ಸ್ಮರಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಬಜೆಟ್ ಅಧಿವೇಶನದ ಮೊದಲನೇ ದಿನದ ಕಲಾಪದಲ್ಲಿ ಪಾಲ್ಗೊಂಡು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಂಡಿಸಿದ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿ, ಅಗಲಿದ ಗಣ್ಯರಿಗೆ ಸಂತಾಪ ವ್ಯಕ್ತಪಡಿಸಿದ ಅವರು, 2006 ಸಂದರ್ಭದಲ್ಲಿ ತಾವು ಮೊದಲನೇ ಬಾರಿಗೆ ಸಚಿವರಾಗಿದ್ದಾಗ ಬೀದರ್ ನಲ್ಲಿ ಸಿದ್ದೇಶ್ವರ ಶ್ರೀಗಳು ನೀಡಿದ್ದ ಪ್ರವಚನದ ಮೆಲುಕು ಹಾಕಿದರು.

ಸಿದ್ದೇಶ್ವರ ಶ್ರೀಗಳ ಬಗ್ಗೆ ನಾವು ಎಷ್ಟು ಹೇಳಿದರು ಕಡಿಮೆ. ಇಂತಹ ಯುಗದಲ್ಲಿ ಸರಳತೆ ಹಾಗೂ ಸಮಯ ಪಾಲನೆಗೆ ಶ್ರೀಗಳು ಮಹತ್ವ ನೀಡಿದ್ದರು. 2006ರಲ್ಲಿ ನಾನು ಪ್ರಥಮ ಬಾರಿಗೆ ಮಂತ್ರಿಯಾಗಿದ್ದಾಗ ಬೀದರ್ ನಲ್ಲಿ ಶ್ರೀಗಳ ಒಂದು ತಿಂಗಳು ಪ್ರವಚನ ನಡೆದಿತ್ತು. ನಗರದ ಬಿವಿಬಿ ಕಾಲೇಜ್ ಆವರಣದಲ್ಲಿ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪ್ರವಚನ ಆರಂಭವಾಗುತ್ತಿತ್ತು. ಶ್ರೀಗಳು ಒಂದೇ ಒಂದು ನಿಮಿಷ ಹೆಚ್ಚ ಕಡಿಮೆಯಾಗದಂತೆ ಸರಿಯಾದ ಸಮಯಕ್ಕೆ ಪ್ರವಚನ ಆರಂಭಿಸುತ್ತಿದ್ದರು. ಶ್ರೀಗಳ ಪ್ರವಚನ ಕೇಳಲು ಪ್ರತಿನಿತ್ಯ 10 ರಿಂದ 15 ಸಾವಿರ ಜನ ಸೇರುತ್ತಿದ್ದರು ಎಂದು ಹಳೆಯ ದಿನಗಳನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮೆಲುಕು ಹಾಕಿದರು.

ಶ್ರೀಗಳ ಪ್ರವಚನ, ಉಪನ್ಯಾಸಗಳಲ್ಲಿನ ಪ್ರತಿಶತ ಒಂದರಷ್ಟು ಭಾಗವನ್ನಾದರು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದು ನಾನು ಕೂಡ ಅನೇಕ ಕಡೆಗಳಲ್ಲಿ ಹೇಳುತ್ತೇನೆ. ಶ್ರೀಗಳು ಬಹಳಷ್ಟು ಸರಳ ಜೀವಿಯಾಗಿದ್ದರು. ಜೇಬು ಇಲ್ಲದ ಅಂಗಿ ತೊಡುತ್ತಿದ್ದ ಶ್ರೀಗಳು ಮೊಬೈಲ್ ಕೂಡ ಬಳಸುತ್ತಿರಲಿಲ್ಲ. ಭಾರತ ಮಾತ್ರವಲ್ಲ ವಿಶ್ವವೇ ಇಂತಹ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬೇಕಿದೆ. ನಾವೆಲ್ಲರೂ ನಮ್ಮ ಬದುಕಿನಲ್ಲಿ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಾಗಬೇಕಾಗಿದೆ.

ಲಿಂಕ್ ಕ್ಲಿಕ್ ಮಾಡಿ ಯೂಟ್ಯೂಬ್ ವಿಡಿಯೋ ನೋಡಿ

ಶ್ರೀಗಳು ನಮ್ಮನ್ನು ಅಗಲಿಲ್ಲ. ಅವರಿಗೆ ಸಂತಾಪ ಸೂಚಿಸುವುದು ಬೇಡ. ಅವರು ನಮ್ಮೊಟ್ಟಿಗೆ ಇದ್ದಾರೆ. ಅವರ ಪ್ರವಚನ, ತತ್ವಾದರ್ಶಗಳು, ವಿಚಾರಗಳು, ಮಾರ್ಗದರ್ಶನ ಸದಾಕಾಲವೂ ನಮ್ಮ ಜನರೊಟ್ಟಿಗೆ ಇರುತ್ತದೆ. ನಮ್ಮನ್ನು ಸರಿದಾರಿಗೆ ಕರೆದುಕೊಂಡು ಹೋಗುತ್ತದೆ. ಕರುನಾಡಿನಲ್ಲಿ ಜನಿಸಿದ ಅವರು ಅಜರಾಮರವಾಗಿರುತ್ತಾರೆ ಎಂಬ ಭಾವನೆ ನಮಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಇದೇ ವೇಳೆ ಶಾಸಕರು, ಇತ್ತೀಚೆಗೆ ಅಗಲಿದ ಅನೇಕ ಜನ ಗಣ್ಯರ, ಕಳೆದ ನಾಲ್ಕೈದು ದಿನಗಳಿಂದ ವಿದೇಶಗಳಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡಿರುವ ಸಾವಿರಾರು ಜನರ ಆತ್ಮಕ್ಕೆ ಶಾಂತಿ ಕೋರಿದರು.

No comments:

Post a Comment