Friday, June 19, 2020

ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಎರಡು ಕಿಡ್ನಿ ಕಳೆದುಕೊಂಡು ಅತಿಥಿ ಉಪನ್ಯಾಸಕ

(ತನ್ನ ಎರಡು ಕಿಡ್ನಿಯೂ ಇಲ್ಲ, ತನ್ನನ್ನು ಆರೈಕೆ ಮಾಡ್ತಿದ್ದ ಮಡದಿಯೂ ಇಲ್ಲ, ಚಿಕಿತ್ಸೆಗಾಗಿ ಮಾಡಿದ್ದ 15-20 ಲಕ್ಷ ರೂ. ಸಾಲ, ಮಕ್ಕಳ ಪಾಲನೆಗೆ ಸರ್ಕಾರ ನೆರವಾಗಬೇಕೆಂದು ವಿಡಿಯೋ ಮಾಡುವ ಮೂಲಕ ಸಿ‌‌.ಎಂ ಹಾಗೂ ಡಿ.ಸಿ.ಎಂ ಗಳಿಗೆ ಮನವಿ ಮಾಡಿದ್ದಾರೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅತಿಥಿ ಉಪನ್ಯಾಸಕ ಡಾ.ಅಮರೇಶ್ ಆಲ್ಕೋಡ್)
ರಾಯಚೂರು: ಕಳೆದ ಆರು ವರ್ಷಗಳಿಂದ ಜಿಲ್ಲೆಯ ಲಿಂಗಸುಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದ ಡಾ.ಅಮರೇಶ್ ತಂದೆ ಹನುಮಂತ ಆಲ್ಕೋಡ್ ಕಳೆದ ಮೂರು ವರ್ಷಗಳಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ.
ಅವರು ವಾರಕ್ಕೆ ಎರಡು ಸಾರಿ ಡಯಾಲಿಸಸ್ ಮಾಡಿಸಿಕೊಳ್ಳುತ್ತಿದ್ದು, ಡಯಾಲಿಸಸ್ ಮತ್ತು ಕಿಡ್ನಿಗಳ ಚಿಕಿತ್ಸೆಯ ಸಲುವಾಗಿ ಇದುವರೆಗೂ ಸುಮಾರು 15-20 ಲಕ್ಷ ರೂ.ಗಳನ್ನು ಈಗಾಗಲೇ ಸಾಲಸೂಲ ಮಾಡಿ ಕರ್ಚು ಮಾಡಿಕೊಂಡಿದ್ದಾರೆ. ಅಲ್ಲದೇ ಕಳೆದ ತಿಂಗಳಷ್ಟೇ ಹೃದಯಾಘಾತದಿಂದ ಇವರ ಪತ್ನಿ ಕೂಡ ಮೃತಪಟ್ಟಿದ್ದಾರೆ. ಮನೆಯಲ್ಲಿ ಉಂಟಾದ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಂಡತಿಗೆ ಚಿಕಿತ್ಸೆ ಕೊಡಿಸಲಾಗದೆ ಡಾ.ಅಮರೇಶ್ ಆಲ್ಕೋಡ್ ಹೆಂಡತಿಯನ್ನು ಕಳೆದುಕೊಂಡಿದ್ದಾರೆ. 
ಇನ್ನೂ ತನ್ನ ಮಕ್ಕಳ ಪಾಲನೆಗಾಗಿ ಮತ್ತು ತನ್ನ ಮುಂದಿನ ಜೀವನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿಡಿಯೋವೊಂದನ್ನು ಮಾಡಿರುವ ಇವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್ ಅಶ್ವತ್ ನಾರಾಯಣರವರಿಗೆ ವಿಡಿಯೋ ಮೂಲಕ ತನ್ನ ಕುಟುಂಬದ ನೋವನ್ನು ತಿಳಿಸಿದ್ದಾರೆ. ಅಲ್ಲದೇ ನೆರವು ನೀಡುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇವರ ಆರೋಗ್ಯ ದೃಷ್ಟಿಯಿಂದ ಹಾಗೂ ಇವರ  ಮಕ್ಕಳ ಭವಿಷ್ಯದ ಸಲುವಾಗಿ ಆದರೂ ಸರ್ಕಾರ ಇವರ ನೆರವಿಗೆ ಮುಂದಾಗಲಿ. ಇವರಿಗೆ ಸರ್ಕಾರದ ವತಿಯಿಂದ ಒಳ್ಳೆಯ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿ ಎಂಬುದು ಈ ಭಾಗದ ಜನರ ಮತ್ತು ಇವರ ಕುಟುಂಬದ ಮನವಿಯಾಗಿದೆ. 
ಡಾ.ಅಮರೇಶ್ ಆಲ್ಕೋಡ್ ರವರ ನೋವಿಗೆ ಸ್ಪಂದಿಸುವ ಮನಸ್ಸುಗಳು, ಇವರ ಕುಟುಂಬಕ್ಕೆ ನೆರವಾಗುವ ಹೃದಯವಂತರು ಇವರ ದೂರವಾಣಿ ಸಂಖ್ಯೆ: 6364056438‌ & 8105559685 ಗೆ ಕರೆಮಾಡಿ ಧೈರ್ಯ ಹೇಳಿ, ಬ್ಯಾಂಕ್ ಖಾತೆಯ ವಿವರ: ಡಾ. ಅಮರೇಶ್ ಆಲ್ಕೋಡ್, ಎಸ್.ಬಿ.ಐ ಬ್ಯಾಂಕ್, ಸಿರವಾರ ಶಾಖೆ, ಖಾತೆ ಸಂಖ್ಯೆ 31090846274 ಐ.ಎಫ್.ಎಸ್.ಸಿ ಕೋಡ್: SBIN0011137 ಮೂಲಕ ಕೈಲಾದ ಸಹಾಯ ಮಾಡಬಹುದಾಗಿದೆ.

Tuesday, May 19, 2020

ಪಾಮನಕಲ್ಲೂರು: ತುಂಬಿದ ಚರಂಡಿ, ಬಂದು ನೋಡದ ಅಧಿಕಾರಿಗಳು

ಸಾಂಕ್ರಾಮಿಕ ರೋಗ ಹೆಚ್ಚಳಕ್ಕೆ ಕಾರಣವಾಗ್ತಾರಾ ಪಾಮನಕಲ್ಲೂರು ಪಿಡಿಒ..!?
ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಅನೇಕ ಕಡೆಗಳಲ್ಲಿ ಚರಂಡಿಗಳು ತುಂಬಿದ್ದು, ಅಧಿಕಾರಿಗಳು ಮಾತ್ರ ಡೊಂಟ್ ಕೇರ್ ಅಂತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತ ಪಡಿಸಿದ್ದಾರೆ.  
ಗ್ರಾಮದ ಮುಖ್ಯ ರಸ್ತೆಯಲ್ಲಿ ಬರುವ ಬಂಗಾರದ ಅಂಗಡಿ (ಕುರುಡಿಯವರ ಹೊಲ) ಹತ್ತಿರದ ಚರಂಡಿ ಕೊಳಚೆ ನೀರು, ವಿವಿಧ ಪ್ಲಾಸ್ಟಿಕ್ ವಸ್ತುಗಳಿಂದು ತುಂಬಿದ್ದು ಹತ್ತಿರದ ಮನೆಗಳಲ್ಲಿ ವಾಸಿಸುವ ನಾವು ದುರ್ನಾತದೊಡನೆ  ಜೀವನ ನಡೆಸುವಂತಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸಿದ್ದಾರೆ.
ಈಗಾಗಲೇ ಜಗತ್ತಿನಾದ್ಯಂತ ಕೊರೊನಾ ಸಂಕಷ್ಟ ಎದುರಾಗಿದ್ದು, ಲಾಕ್ ಡೌನ್ ನಿಂದಾಗಿ ಎಲ್ಲೂ ಕೆಲಸವಿಲ್ಲದೆ ಮನೆಯಲ್ಲಿ ಜೀವನ ಕಳೆಯುವ ಪರಿಸ್ಥಿತಿ ಎದುರಾಗಿದೆ. ದಿನವಿಡೀ ಮನೆಯಲ್ಲಿಯೇ ಇರುವ ನಾವು ಚರಂಡಿಯ ಕೆಟ್ಟ ವಾಸನೆ ಸೇವಿಸುತ್ತಿದ್ದೇವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭಯ ಉಂಟಾಗಿದೆ. 
ಚರಂಡಿ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷರು, ಪಿಡಿಒ ಸೇರಿದಂತೆ ಅನೇಕರಿಗೆ ನಾವು ಅನೇಕ ಬಾರಿ ಮನವಿ ಮಾಡಿದ್ದೇವೆ. ಆದ್ರೆ ಇದುವರೆಗೂ ಯಾರೊಬ್ಬರೂ ಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಿಲ್ಲ.
ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು ಪಿಡಿಒ ಮಾತ್ರ ಡೊಂಟ್ ಕೇರ್ ಅಂತಿದ್ದಾರೆ. ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳೇ ಹೀಗೆ ಮಾಡಿದರೆ ನಾವು ಯಾರನ್ನು ಕೇಳ್ಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ. 
ಈ ಹಿಂದೆ ಅನೇಕ ಬಾರಿ ಚರಂಡಿ ಸ್ವಚ್ಛಗೊಳಿಸಿದಾಗ  ಚರಂಡಿಯಿಂದ ತೆಗೆದ ಕಸವನ್ನು ಅಲ್ಲಿಯೇ ಬಿಟ್ಟಿದ್ದಾರೆ. ಆ ಕಸ ಮಳೆ, ಗಾಳಿ, ವಾಹನಗಳ ಓಡಾಟದಿಂದಾಗಿ ಮತ್ತೆ ಚರಂಡಿ ಸೇರಿ ಕೊಂಡಿದೆ. ಇನ್ನುಮುಂದೆ ಚರಂಡಿ ಸ್ವಚ್ಛಗೊಳಿಸಿದ ನಂತರ ಅಲ್ಲಿನ ಕಸವನ್ನು ವಿಲೇವಾರಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Wednesday, April 8, 2020

ಮಸ್ಕಿ: ವರುಣನ ಆರ್ಭಟಕ್ಕೆ ಭತ್ತದ ಬೆಳೆ ನಾಶ, ಸಂಕಷ್ಟದಲ್ಲಿ ಅನ್ನದಾತರು

ರಾಯಚೂರು: ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯ ಮಸ್ಕಿ ತಾಲೂಕಿನ ಉಸ್ಕಿಹಾಳ ಗ್ರಾಮದಲ್ಲಿ ರೈತರು ಬೆಳೆದಿದ್ದ ಭತ್ತ ನೆಲಕ್ಕುರುಳಿದೆ. ಕಟಾವಿಗೆ ಬಂದ ಭತ್ತ ನೆಲಸಮವಾಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಕಣ್ಣೀರಿಡುತ್ತಿದ್ದಾರೆ. 
ಗ್ರಾಮದ ರೈತ ರಂಗನಗೌಡ ತಂದೆ ಹನುಮನಗೌಡ ಎಂಬುವವರು 6 ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಿದ್ದರು, ಭತ್ತದ ನಾಟಿಗೆ ಅವರು 2 ಲಕ್ಷ ರೂ.ಗಳಿಗೂ ಅಧಿಕ ಹಣ ಖರ್ಚು ಮಾಡಿದ್ದರು. ಎಕರೆಗೆ 40 ಚೀಲ ಇಳುವರಿಯ ನಿರೀಕ್ಷೆಯಲ್ಲಿ ರಂಗನಗೌಡ ಇದ್ದರು, ಆದ್ರೆ ವರುಣನ ಆರ್ಭಟಕ್ಕೆ ಸಿಲುಕಿದ ಭತ್ತ ಸಂಪೂರ್ಣವಾಗಿ ನಾಶವಾಗಿದ್ದು ರೈತ ಕಣ್ಣಿರಿಟ್ಟಿದ್ದಾರೆ. ಇದೇ ಗ್ರಾಮದ ರೈತರಾದ ತಿಮ್ಮನಗೌಡ ತಂದೆ ಹನುಮನಗೌಡ 2.5 ಎಕರೆ, ಮಲ್ಲನಗೌಡ ತಂದೆ ಭೀಮನಗೌಡ 4 ಎಕರೆ, ಈರಪ್ಪ ಅಡವಿಬಾವಿ ಎಂಬ ರೈತರ ಭತ್ತ ನಾಶವಾಗಿದ್ದು, ಅನ್ನದಾತರು ಕಣ್ಣೀರಿಟ್ಟಿದ್ದಾರೆ.
ಅಲ್ಲದೇ ತಾಲೂಕಿನ ಪಾಮನಕಲ್ಲೂರು ಹೋಬಳಿಯ ಪಾಮನಕಲ್ಲೂರು, ಕೋಟೆಕಲ್, ಆನಂದಗಲ್, ಹರ್ವಾಪುರ, ತುಪ್ಪದೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು ಬೋರ್ ವೆಲ್ ನೀರಿನಿಂದ ಬೆಳೆದಿದ್ದ ಸಜ್ಜೆ  ನೆಲಕ್ಕುರುಳಿದ್ದು ಈ ಭಾಗದ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಪ್ರಸ್ತುತ ಕೊರೊನಾ ಎಂಬ ಮಹಾಮಾರಿ ಜಗತ್ತನೇ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಭಾಗದ ರೈತರು ತಮ್ಮ ಕುಟುಂಬದ ಕೆಲ ಸದಸ್ಯರನ್ನು ಬೆಂಗಳೂರು, ಮುಂಬೈ, ಪುಣೆ, ಪಣಜಿ ಸೇರಿದಂತೆ ಮಹಾನಗರಗಳಿಗೆ ದುಡಿಯಲು ಕಳುಹಿಸಿ, ಕುಟುಂಬದಲ್ಲಿ ಕೆಲವರು ಕೃಷಿಯಲ್ಲಿ ತೊಡಗಿಕೊಂಡಿರುತ್ತಿದ್ದರು. ಕೃಷಿಯಲ್ಲಿ ಸಂಕಷ್ಟ ಎದುರಾದಾಗ ಮಹಾನಗರದಲ್ಲಿ ಕುಟುಂಬಸ್ಥರು ದುಡಿದು ತರುತ್ತಿದ್ದ ಹಣವನ್ನೇ ಅನ್ನದಾತರು ತಮ್ಮ ಕೃಷಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದರು.
ಆದರೆ ಈಗ ಮಹಾನಗರಗಳಲ್ಲಿರೋ ಅನ್ನದಾತರ ಕುಟುಂಬಸ್ಥರು ಕೊರೊನಾ ಮಹಾಮಾರಿಗೆ ಎದುರಿ, ಕೆಲಸ ಸಿಗದೇ ಊರು ಸೇರಿಕೊಂಡಿದ್ದು ಕೃಷಿಯನ್ನೇ ನಂಬಿಕೊಂಡು ಕುಳಿತಿರುವ ಅನ್ನದಾತರಿಗೆ ಬೇರೆ ದಾರಿ ಕಾಣದಾಗಿದೆ. 
ಬೆಳೆಯೇ ಬದುಕು ಎಂದು ನಂಬಿಕೊಂಡು ಕುಳಿತಿದ್ದ ಅನ್ನದಾತರು ಬೆಳೆ ಕಳೆದುಕೊಂಡಿದ್ದಾರೆ. ಮುಂದಿನ ಬದುಕು ಹೇಗೆ ಎಂದು ತಿಳಿಯದ   ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೇ ಸಂಕಷ್ಟಕ್ಕೆ ಸಿಲುಕಿದ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು ಎಂದು ಅನೇಕ ರೈತರು ಆಗ್ರಹಿಸಿದ್ದಾರೆ. ಈ ಭಾಗದ ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಲಿ ಎಂಬುದೇ ಈ ವರದಿಯ ಆಶಯವಾಗಿದೆ.

Wednesday, March 25, 2020

ರಾಯಚೂರು ಜಿಲ್ಲೆಯಲ್ಲಿ ಮೊದಲ ಕೊರೊನಾ ಹುಚ್ಚು..!?

ಕೊರೊನಾ ವೈರಸ್ ಕೋವಿಡ್ ೧೯ ಜನರಲ್ಲಿ ಎಷ್ಟರ ಮಟ್ಟಿಗೆ ಭಯ, ಆತಂಕ ಹುಟ್ಟಿಸಿದೆ ಎಂಬುದನ್ನು ಪ್ರತಿನಿತ್ಯ ಮಾಧ್ಯಮಗಳು ಜನರಿಗೆ ತಿಳುವಳಿಕೆ ನೀಡುವ ಪ್ರಾಮಾಣಿಕ ಕೆಲಸ ಮಾಡುತ್ತಿವೆ. ಕೊರೊನಾ ವೈರಸ್ ಬಗ್ಗೆ ಭಯ ಬೇಡ ಎಚ್ಚರ ಇರಲಿ ಎಂಬ ಸಂದೇಶಗಳನ್ನು ದೃಶ್ಯ, ಶ್ರವಣ, ಮುದ್ರಣ ಮಾಧ್ಯಮಗಳು ಜಗತ್ತಿಗೆ ಸಾರಿ ಸಾರಿ ಹೇಳುತ್ತಿವೆ.
ಈ ನಡುವೆ ಬರದ ನಾಡು ಚಿನ್ನದ ಬಿಡು ಎಂದು ಕರೆಯುವ ಬಿಸಿಲು ನಾಡು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ಯರಗುಡ್ಡದ ರಂಗಪ್ಪ ದಂಡಪ್ಪ ಎಂಬ ವ್ಯಕ್ತಿಯೋರ್ವ ಕೊರೊನಾ ವೈರಸ್ ಬಗ್ಗೆ ತೀವ್ರವಾಗಿ ತಲೆ ಕೆಡಸಿಕೊಂಡಿದ್ದಾನೆ.
ಪದವಿ ಪೂರ್ವದ ವರೆಗೂ ಶಿಕ್ಷಣ ಪಡೆದ ರಂಗಪ್ಪ ಕುರಿ ಕಾಯುವ ಕೆಲಸ ಮಾಡ್ತಿದ್ದು, ಕಳೆದ ಕೆಲ ದಿನಗಳಿಂದ ದೃಶ್ಯ ಮಾಧ್ಯಮಗಳಲ್ಲಿ ಬರುವ ಕೊರೊನಾ ವೈರಸ್ ಸುದ್ದಿಗಳನ್ನು ನೋಡಿ ಮಾನಸಿಕ ಕಿನತೆಗೆ ಒಳಗಾಗಿದ್ದಾನೆ ಎನ್ನಲಾಗಿದೆ.
ರಂಗಪ್ಪನಿಗೆ ಸ್ಥಳೀಯ ವೈದ್ಯ ಡಾ.ಆರ್.ಎಸ್ ಹುಲಿಮನಿ ಎಂಬುವವರು ಚಿಕಿತ್ಸೆ ನೀಡಿದ್ದು, ಅವರಿಗೆ ವೈರಸ್ ಬಗ್ಗೆ ತಿಳುವಳಿಕೆ ಮೂಡಿಸಿ ಧೈರ್ಯದಿಂದ ಇರುವಂತೆ ತಿಳಿ ಹೇಳಿದ್ದಾರೆ‌. ವೈದ್ಯರ ಸಲಹೆಯ ನಂತರ ರಂಗಪ್ಪ ಕೊರೊನಾ ವೈರಸ್ ಬಗೆಗಿನ ಭಯದಿಂದ ಸ್ವಲ್ಪ ಮಟ್ಟಿಗೆ ಹೊರ ಬಂದಿದ್ದಾರೆ ಎನ್ನಲಾಗಿದೆ. 
ಒಟ್ಟಾರೆಯಾಗಿ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಸಮಾಜದಲ್ಲಿ ಧೈರ್ಯದಿಂದ ಬಾಳಿ ಬದುಕ ಬೇಕಾಗಿರುವ ಜನರು ಕೊರೊನಾ ವೈರಸ್ ಬಗ್ಗೆ ತಲೆ ಕೆಡಸಿಕೊಂಡು ಮಾನಸಿಕ ಅಸ್ವಸ್ಥರಂತೆ ಆಗುತ್ತಿರುವುದು ದುರಂತದ ಸಂಗತಿ ಎನ್ನಬಹುದಾಗಿದೆ.

Thursday, March 19, 2020

ಪಿಡಿಒ ನಿರ್ಲಕ್ಷ್ಯ: ಪುಟ್ಟ ಮಕ್ಕಳೊಂದಿಗೆ ಚರಂಡಿ ಸ್ವಚ್ಛಗೊಳಿಸಿದ ಗ್ರಾ.ಪಂ ಸದಸ್ಯೆ

ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ  ರಂಗಾಪೂರ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರು ತನ್ನ ಪುಟ್ಟ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಚರಂಡಿ ಸ್ವಚ್ಛಗೊಳಿಸಿದ ಘಟನೆಯೊಂದು ನಡೆದಿದೆ.
ಗ್ರಾಮ ಪಂಚಾಯ್ತಿ ಸದಸ್ಯೆ ಸುನೀತಾ ಬಸವರಾಜ  ಚರಂಡಿ ಸ್ವಚ್ಛಗೊಳಿಸಿದವರಾಗಿದ್ದಾರೆ. ಸುನೀತಾ ತಮ್ಮೂರಿನ ಚರಂಡಿ ಸ್ವಚ್ಛಗೊಳಿಸಿ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವಂತೆ ಗುಡದೂರು ಪಿಡಿಒ ಸರಸ್ವತಿಯವರಿಗೆ ಅನೇಕ ಭಾರಿ ಮನವಿ ಸಲ್ಲಿಸಿದ್ದರು. ಸದಸ್ಯೆಯ ಮನವಿಗೆ ಕ್ಯಾರೇ ಅನ್ನದೇ ಪಿಡಿಒ ಸರಸ್ವತಿ ನಿರ್ಲಕ್ಷ್ಯವಹಿಸಿದ್ದರು. ಇತ್ತ ಗ್ರಾಮಸ್ಥರು ಪ್ರತಿನಿತ್ಯ ಸದಸ್ಯೆ ಸುನೀತಾ ಬಸವರಾಜರವರಿಗೆ ಚರಂಡಿ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವಂತೆ ಒತ್ತಡ ಹಾಕುತ್ತಿದ್ದರು. ಪಿಡಿಒ ನಿರ್ಲಕ್ಷ್ಯ, ಗ್ರಾಮಸ್ಥರ ಒತ್ತಡದಿಂದ ಬೇಸತ್ತ ಸದಸ್ಯೆ ಸುನೀತಾ ತನ್ನ ಪುಟ್ಟ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ತಾನೇ ಚರಂಡಿ ಸ್ವಚ್ಛಗೊಳಿಸಿದ್ದಾರೆ.
ಈ ಘಟನೆಯ ಪೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುನೀತಾ ಬಸವರಾಜ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಪಿಡಿಒ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪಿಡಿಒ ಸರಸ್ವತಿಯವರ ನಿರ್ಲಕ್ಷ್ಯ ಪ್ರವೃತ್ತಿಯಿಂದ ಅಧಿಕಾರಿ ವರ್ಗವೇ ತಲೆ ತಗ್ಗಿಸುವಂತಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
----------------------------------
ರಂಗಾಪೂರ ಗ್ರಾಮದ ಚರಂಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ನಮ್ಮ ಸಿಬ್ಬಂದಿ ಜಿಪಿಎಸ್ ಮಾಡಿಕೊಂಡು ಬಂದಿದ್ದಾರೆ. ಆದಷ್ಟೂ ಬೇಗನೆ ಸ್ವಚ್ಚಗೊಳಿಸುತ್ತೇವೆ. ಕಳೆದ ಆರು ತಿಂಗಳುಗಳ ಹಿಂದೆ ಕ್ಲೀನ್ ಮಾಡಿದ್ವಿ. ಈಗ ಮತ್ತೆ ಸ್ವಚ್ಛಗೊಳಿಸುತ್ತೇವೆ. ಅಂತಹ ಸಮಸ್ಯೆ ಏನು ಆಗಿಲ್ಲ. 
ಸರಸ್ವತಿ, ಪಿಡಿಒ, ಗುಡದೂರು ಗ್ರಾಮ ಪಂಚಾಯ್ತಿ

Wednesday, March 4, 2020

ದುರಸ್ತಿಯಾಗದ ಹಟ್ಟಿ - ಪಾಮನಕಲ್ಲೂರು ರಸ್ತೆ, ಮುಂದುವರಿದ ಪ್ರಯಾಣಿಕರ ಪರದಾಟ

ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಹಾಗೂ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿಗೆ ಸಂಪರ್ಕ ಕಲ್ಪಸುವ ರಸ್ತೆ ಪಾಮನಕಲ್ಲೂರು - ಗೆಜ್ಜಲಗಟ್ಟಾ ಹಾಗೂ ವೀರಾಪೂರು - ಹಟ್ಟಿ ನಡುವೆ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 
ಈ ಮಾರ್ಗದಲ್ಲಿ ದಿನನಿತ್ಯ ಬೈಕ್, ಕಾರು, ಜೀಪ್, ಬಸ್ ಸೇರಿದಂತೆ ನೂರಾರು ವಾಹನಗಳು ಸಂಚಾರಿಸುತ್ತವೆ. ಹಟ್ಟಿ ಚಿನ್ನದಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರತಿನಿತ್ಯ ಹಗಲು - ರಾತ್ರಿ ಲೆಕ್ಕಿಸದೆ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಹದಗೆಟ್ಟ ರಸ್ತೆಯಿಂದ ಈಗಾಗಲೇ ಅನೇಕ ಅಪಘಾತಗಳು ಈ ಮಾರ್ಗದಲ್ಲಿ ನಡೆದಿವೆ. ದಿನನಿತ್ಯ ನೂರಾರು ಜನ ಸುತ್ತಾಡುವ ರಸ್ತೆಯ ದುರಸ್ತಿಗೆ ಸಂಬಂಧಿಸಿದ ಜನ ಪ್ರತಿನಿಧಿಗಳು ಕ್ರಮ ಕೈಗೊಳ್ಳದಿರುವುದು ಈ ಭಾಗದ ಜನರ ಹಿಡಿ ಶಾಪಕ್ಕೆ ಕಾರಣವಾಗಿದೆ.
ರಸ್ತೆಯಲ್ಲಿ ತಗ್ಗು ಗುಂಡಿಗಳು ಇವೆಯೋ..? ತಗ್ಗು ಗುಂಡಿಗಳಲ್ಲಿ ರಸ್ತೆ ಇದೆಯೋ..? ಎಂಬುದು ವಾಹನ ಸವಾರರ ಹಾಗೂ ಈ ಭಾಗದ ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನೂ ಈ ರಸ್ತೆ ಮಸ್ಕಿ ಕ್ಷೇತ್ರ ಹಾಗೂ ಲಿಂಗಸುಗೂರು ಕ್ಷೇತ್ರದ ವ್ಯಾಪ್ತಿಯನ್ನು ಒಳಗೊಂಡಿದ್ದು ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್ ಹೂಲಗೇರಿ ಹಾಗೂ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ರ ವಿರುದ್ಧ ಜನರು ಹಿಡಿ ಶಾಪ ಹಾಕುತ್ತಿದ್ದಾರೆ‌. 
ಅನೇಕ ಅಪಘಾತಗಳಿಗೆ ಕಾರಣವಾದ ರಸ್ತೆ ದುರಸ್ತಿ ಮಾಡದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದು, ಈಗಲೇ ರಸ್ತೆ ದುರಸ್ತಿ ಮಾಡಿಸುವ ಮೂಲಕ ಮುಂದೆ ಉಂಟಾಗುವ ಅನಾಹುತಗಳನ್ನು ತಪ್ಪಿಸುವ ಕೆಲಸ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕಾಗಿದೆ ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ‌ಈ ಭಾಗದ ಜನ ಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಮುಂದಾಗುವ ದುರಂತಗಳನ್ನು ತಪ್ಪಿಸಲಿ.

Monday, March 2, 2020

ಪಾಮನಕಲ್ಲೂರು: ಬೆಂಬಲ ಬೆಲೆ‌ ತೊಗರಿ ಖರೀದಿ ಕೇಂದ್ರದಲ್ಲಿ ಗೊಲ್ಮಾಲ್..?


ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ‌ಗ್ರಾಮದ ಬೆಂಬಲ ಬೆಲೆ ತೊಗರಿ ಖರೀದಿ ಕೇಂದ್ರದಲ್ಲಿ ಗೊಲ್ಮಾಲ್‌ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ  ಸೋಮವಾರ ಸಂಜೆ ನಡೆದಿದೆ. 
ರೈತರ ತೊಗರಿ ಖರೀದಿಸಲು ಐದು ನೂರರಿಂದ ಎರಡು ಸಾವಿರ ಲಂಚ ಪಡೆಯುತ್ತಿದ್ದಾರೆಂದು‌ ಗ್ರೇಡರ್ (ತೊಗರಿ ಪರಿಶೀಲನೆ ಅಧಿಕಾರಿ) ಅರುಣ್ ರಾಠೋಡ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ವಿರುದ್ಧ ರೈತರು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕಛೇರಿಗೆ  ದೂರು ನೀಡಿದ್ದರು.
ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಚಿವರ ಕಛೇರಿಯಿಂದ ಮಸ್ಕಿ ತಹಶಿಲ್ದಾರರಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿಗೆ ತಹಶಿಲ್ದಾರ ಬಲರಾಮ ಕಟ್ಟಿಮನಿ ಸೂಚಿಸಿದರು. ಕಂದಾಯ ನಿರೀಕ್ಷಕ ಅಬ್ದುಲ್‌ ರಹೂಪ್, ಗ್ರಾಮ ಲೆಕ್ಕಾಧಿಕಾರಿ ರವಿ ಬೆಳ್ಳೂರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಈ ವೇಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೆಕ್ರೆಟರಿ ಲಾಳೆ ಸಾಬ್, ಪರಿಶೀಲನಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪರಿಶೀಲನಾ ಅಧಿಕಾರಿಗಳ ಮುಂದೆ ರೈತರು ಅಳಲು ತೊಡಿಕೊಂಡು, ಗ್ರೇಡರ್ ಅರುಣ್ ರಾಠೋಡ್ ವಿರುದ್ಧ ದೂರುಗಳ ಸುರಿಮಳೆ ಗೈದರು. ಅರುಣ್, ಸಮಯಕ್ಕೆ ಸರಿಯಾಗಿ ಬರಲ್ಲ, ರೈತರಿಗೆ ಅನಾವಶ್ಯಕ ಕಿರಿಕಿರಿ ಮಾಡ್ತಾನೆ. ಲಂಚ ಕೊಟ್ಟವರ ತೊಗರಿ ಖರೀದಿ ಮಾಡ್ತಾನೆ, ಲಂಚ ಕೊಡದಿದ್ದರೆ ದಿನಗಟ್ಟಲೇ ಕಾಯಿಸ್ತಾನೆ.
ನಿಮ್ಮ ತೊಗರಿ ಸರಿಯಿಲ್ಲ ತೆಗೆದುಕೊಳ್ಳಲ್ಲವೆಂದು ಸತಾಯಿಸ್ತಾನೆ, ಲಂಚ ಕೊಟ್ಟರೆ ಯಾವುದೇ ಪರಿಶೀಲನೆ ಮಾಡಲ್ಲ, ನಮ್ಮೂರಿಗೆ ಕಾಯಂ ಗ್ರೇಡರ್ ಬೇಕು, ಅರುಣ್ ಕುಮಾರ್ ಭೇಡವೆಂದು ರೈತರು ಒತ್ತಾಯಿಸಿದರು. ಮಾತಾಡಿ ಸಮಸ್ಯೆ ಪರಿಹಾರ ಮಾಡ್ತಿವಿ ಎಂದು ಅಧಿಕಾರಿಗಳು ಭರವಸೆ ನೀಡಿದರು.