Tuesday, January 28, 2020

ಪಾಮನಕಲ್ಲೂರು: ನಿಜ ಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ದೊರೆ ನ್ಯೂಸ್ ಕನ್ನಡ (ಪಾಮನಕಲ್ಲೂರು ಜ.28): ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಮತ್ತು ಸಮುದಾಯ ಭವನ ಉದ್ಘಾಟನಾ ಸಮಾರಂಭ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 
ಗ್ರಾಮದ ಹಳ್ಳಿಕಟ್ಟಿಯಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಗಂಗಾಮತ ಸಮಾಜದ ಸ್ವಾಮೀಜಿ ಮಲ್ಲಿಕಾರ್ಜುನ ಶ್ರೀಗಳು, ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್, ಪತ್ರಕರ್ತ ಅಮರೇಶ್ ಕಲ್ಲೂರು, ಮುಖಂಡರಾದ ಕೆ ಶಾಂತಪ್ಪ, ಕೆ ಶರಣಪ್ಪ, ರಾಘವೇಂದ್ರ ಕಾಜನಗೌಡ, ಹುಸೇನಪ್ಪ ಗೊಬ್ಬಿ ಸೇರಿದಂತೆ ಅನೇಕ ಗಣ್ಯರು ಜ್ಯೋತಿ ಬೆಳಗಿಸಿ, ಚೌಡಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಗಂಗಾಪರಮೇಶ್ವರಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಸೇವಾ ರಕ್ತ ಭಂಡಾರ ಲಿಂಗಸುಗೂರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಗ್ರಾಮದ ಅನೇಕ ಯುವಕರು ರಕ್ತದಾನ ಮಾಡಿದರು.
ಗ್ರಾಮದ ಅಂಬಿಗರ ಚೌಡಯ್ಯ ಭವನದಿಂದ ಆರಂಭವಾದ ಅಂಬಿಗರ ಚೌಡಯ್ಯರ ಭಾವಚಿತ್ರ ಮೆರವಣಿಗೆ ವಿವಿಧ ಬೀದಿಗಳ ಮೂಲಕ ಸಂತೆಕಟ್ಟೆಯವರೆಗೂ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸಮುದಾಯದ ಜನರು, ಮುಖಂಡರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸೌಹಾರ್ದತೆ ತೋರಿದರು. ಅಲ್ಲದೇ ಗ್ರಾಮದಲ್ಲಿನ ಮಹರ್ಷಿ ವಾಲ್ಮೀಕಿ, ಒಳಬಳ್ಳಾರಿ ಚನ್ನಬಸವೇಶ್ವರ ಸ್ವಾಮೀಜಿ, ಡಾ.ಬಿ.ಆರ್ ಅಂಬೇಡ್ಕರ್, ನಿಜ ಶರಣ ಅಂಬಿಗರ ಚೌಡಯ್ಯ, ಕನಕದಾಸ ಸೇರಿದಂತೆ ಎಲ್ಲಾ ಮಹಾತ್ಮರ ನಾಮಫಲಕಗಳಿಗೆ ಪೂಜೆ ಸಲ್ಲಿಸುವ ಮೂಲಕ ಎಂದಿನಂತೆ ಇಂದು ಕೂಡ ವಿಶೇಷತೆ ಮೆರೆಯಲಾಯಿತು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Friday, January 24, 2020

ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ಅಪಮಾನ: ಯುವಪಡೆಯಿಂದ ಸಿಎಂಗೆ ಪತ್ರ, ಕ್ರಮಕ್ಕೆ ಆಗ್ರಹ

ದೊರೆ ನ್ಯೂಸ್ ಕನ್ನಡ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇತೆಮ್ಮಿನಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಮಹರ್ಷಿ ವಾಲ್ಮೀಕಿ ನಾಮಫಲಕಗಳಿಗೆ ಹಾಗೂ ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಮಾನ್ವಿ ತಾಲೂಕು ಘಟಕದ ಮುಖಂಡರು ಆಗ್ರಹಿಸಿದ್ದಾರೆ. 
ಮಾನ್ವಿ ತಹಶಿಲ್ದಾರರ ಕಛೇರಿಗೆ ಭೇಟಿ ನೀಡಿ ತಹಶಿಲ್ದಾರರ ಮೂಲಕ ಸಿಎಂಗೆ ಮನವಿ ಸಲ್ಲಿಸಿದ ಯುವಪಡೆಯ ಮುಖಂಡರು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇತೆಮ್ಮಿನಾಳ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ದಿನಾಂಕ: 23/01/2020ರಂದು ಕಿಡಿಗೇಡಿಗಳು ಸಗಣಿ ಎಸೆದು ಅಪಮಾನ ಮಾಡಿದ್ದಾರೆ. ಇದು ಖಂಡನೀಯ ಘಟನೆಯಾಗಿದೆ. ದೇಶಕ್ಕೆ ಶಾಂತಿ ಸಂದೇಶ ಸಾರಿದ ಮಹಾತ್ಮರ ಭಾವಚಿತ್ರಕ್ಕೆ ಈ ರೀತಿಯ ಅಪಮಾನ ಮಾಡಿರುವುದು ನೋವಿನ ಸಂಗತಿಯಾಗಿದೆ. 
ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆಯ ಸಂದರ್ಭದಲ್ಲಿ ಪ್ರತಿಮೆ ಶೃಂಗಾರಗೊಳಿಸಿ ಸಮಾಜದ ಮುಖಂಡರ ಬಗ್ಗೆ ಗುಣಗಾನ ಮಾಡಿ ಮರೆತು ಬಿಡಲಾಗುತ್ತಿದೆ. ಇದರಿಂದಾಗಿ ಮಹರ್ಷಿ ವಾಲ್ಮೀಕಿ ಪ್ರತಿಮೆ, ನಾಮ ಫಲಕಗಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಈ ರೀತಿಯ ಘಟನೆಗಳು ಜರುಗಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗಲಾದರೂ ಮುಖ್ಯಮಂತ್ರಿಗಳು ಮಹರ್ಷಿ ವಾಲ್ಮೀಕಿ ಭಾವಚಿತ್ರ, ನಾಮ‌ ಫಲಕ, ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಸಂಬಂಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಬೇಕು. 
ಇಂತಹ ಘಟನೆಗಳು ಮರು ಕಳಿಸದಂತೆ ಕ್ರಮ ಕೈಗೊಳ್ಳಬೇಕು. ಹಾಗೂ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಗುರುತಿಸಿ ಗುಂಡಾ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆಗಳನ್ವಯ ಪ್ರಕರಣ ದಾಖಲಿಸಿ ಆರೋಪಿಗಳನ್ನು ತಕ್ಷಣವೇ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಮನವಿ ಪತ್ರದ ಮೂಲಕ ಆಗ್ರಹಿಸಿದರು. ಒಂದು ವೇಳೆ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ  ಅಪಮಾನ ಮಾಡಿದ ಆರೋಪಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದೆಂದು  ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವ ಪಡೆಯ ತಾಲೂಕು ಅಧ್ಯಕ್ಷ ರಾಮಣ್ಣ ನಾಯಕ, ಮುಖಂಡರಾದ ವೆಂಕಟೇಶ ನಾಯಕ, ಅಮರೇಶ ನಾಯಕ ಜಾನೇಕಲ್, ವೆಂಕಟೇಶ ನಾಯಕ ಯರಮಲದೊಡ್ಡಿ, ಚಂದ್ರಶೇಖರ ನಾಯಕ ಚಿಮ್ಲಾಪುರ, ಬ್ರಹ್ಮ ನಾಯಕ, ಬಸವ ನಾಯಕ, ಆಂಜನೇಯ ನಾಯಕ, ತಿಪ್ಪಯ್ಯ ನಾಯಕ, ಯಲ್ಲಪ್ಪ ನಾಯಕ, ಬಾಲಯ್ಯ ನಾಯಕ ಸೇರಿದಂತೆ ಅನೇಕರಿದ್ದರು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Tuesday, January 21, 2020

ಪಾಮನಕಲ್ಲೂರು: ಗ್ರಾಮದ ವಿವಿಧೆಡೆ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ

ಪ್ರಾಥಮಿಕ ಆರೋಗ್ಯ ಕೇಂದ್ರ ಪಾಮನಕಲ್ಲೂರು
ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಿವಿಧೆಡೆ ನಿಜ ಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಗ್ರಾಮ ಪಂಚಾಯತಿ ಕಾರ್ಯಾಲಯ ಪಾಮನಕಲ್ಲೂರು
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಯಂತೋತ್ಸವ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಭಾರ್ಗವಿ ಜಹಗಿರದಾರ, ಕಿರಿಯ ಆರೋಗ್ಯ ಸಹಾಯಕ ಎಮ್.ಡಿ ಜಲಾಲುದ್ಧಿನ್, ಕಿರಿಯ ಪ್ರಯೋಗಶಾಲಾ ತಂತ್ರಜ್ಞ ಅಸ್ಪಕ್, ಪಾರ್ಮಾಸಿಸ್ಟ್ ಚಂದ್ರಕಲಾ, ಸಿಬ್ಬಂದಿಗಳಾದ ಮಲ್ಲಮ್ಮ, ಶಾಂತಾ ಕೆ ಸೇರಿದಂತೆ ಅನೇಕರಿದ್ದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಮನಕಲ್ಲೂರು

ಗ್ರಾಮ ಪಂಚಾಯ್ತಿಯಲ್ಲಿ ಆಚರಿಸಲಾದ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಪರಮಣ್ಣ, ಸುಗಪ್ಪ, ಗ್ರಾಮಸ್ಥರಾದ ಗುಡದಯ್ಯ ಗಡ್ಡಿಮನೆ, ಹುಸೇನಪ್ಪ, ಮಲ್ಲಿಕಾರ್ಜುನ ಸೇರಿದಂತೆ ಅನೇಕರಿದ್ದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಾಲತೇಶ್, ಶಶಿಕಲಾ ಕರಿಗಾರ್, ಪರಿನಾಬಿ, ಲತಾ, ರೇಣುಕಾ, ಎಸ್ಡಿಎಂಸಿ ಅಧ್ಯಕ್ಷ ಅಯ್ಯಪ್ಪ ಕುರುಬರ್, ಮುಖಂಡರಾದ ಗುಡದಯ್ಯ ಗಡ್ಡಿಮನೆ, ಮಲ್ಲಪ್ಪ ಹಿರೆಮನೆ, ಸೇರಿದಂತೆ ಅನೇಕರಿದ್ದರು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Friday, January 17, 2020

ಗೆಜ್ಜಲಗಟ್ಟಾ: ಕುಡಿಯಲು ಚರಂಡಿ ನೀರು ಪೂರೈಕೆ: ಕರವೇ ಆರೋಪ

ಒಡೆದ ಕುಡಿಯುವ ನೀರಿನ ಪೈಪ್
ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪನ್ನು ಚರಂಡಿಯೊಳಗೆ ಹಾಕಲಾಗಿದ್ದು, ಆ ಪೈಪ್ ಒಡೆದು ಕುಡಿಯುವ ನೀರಿನಲ್ಲಿ ಚರಂಡಿ ನೀರು ಸೇರುತ್ತಿವೆ. ಅದೇ ನೀರನ್ನು ಕುಡಿಯಲು ಪೂರೈಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗೆಜ್ಜಲಗಟ್ಟಾ ಗ್ರಾಮ ಘಟಕದ ಮುಖಂಡರು ಆರೋಪಿಸಿದ್ದಾರೆ. 
ಸ್ಥಳದಲ್ಲಿ ಕರವೇ ಮುಖಂಡರು
ಚರಂಡಿಯೊಳಗೆ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದೆ, ಒಡೆದ ಪೈಪನ್ನು ದುರಸ್ತಿ ಮಾಡದೇ ಬೇಕಾಬಿಟ್ಟಿ ಸೈಕಲ್ ಟ್ಯೂಬ್ ಸುತ್ತಿದ್ದಾರೆ. ಒಡೆದ ಪೈಪ್ ನ ಮೂಲಕ ಚರಂಡಿ ನೀರು ಕುಡಿಯುವ ನೀರಿನೊಳಗೆ ಸೇರುತ್ತಿದ್ದು, ಅದೇ ನೀರನ್ನು ಗ್ರಾಮಸ್ಥರು ಕುಡಿಯುತ್ತಿದ್ದೇವೆಂದು ಕರವೇ ಗ್ರಾಮ ಘಟಕದ ಅಧ್ಯಕ್ಷ ಕಿರಣ್ ನಾಯಕ ಗೆಜ್ಜಲಗಟ್ಟಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪಿಡಿಒಗೆ ಕರವೇ ಮನವಿ
ಗ್ರಾಮದಲ್ಲಿನ ನೀರಿನ ಸಮಸ್ಯೆ ಪರಿಹರಿಸುವಂತೆ ಈ ಹಿಂದೆ ಕರವೇ ಮೂಲಕ ಗ್ರಾಮ‌ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದೇವು, ಆದರೆ ಪಿಡಿಒ ಸಮಸ್ಯೆ ಪರಿಹರಿಸುವ ಬದಲಿಗೆ ಚರಂಡಿ ನೀರು ಕುಡಿಯುವಂತೆ ಮಾಡಿದ್ದಾರೆ. ಗ್ರಾಮದಲ್ಲಿನ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಾದ ಪಿಡಿಒ ಗ್ರಾಮಕ್ಕೂ ತಮಗೂ ಸಂಬಂಧವಿಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ. ಪಿಡಿಒ ನಡೆಯಿಂದಾಗಿ ಗ್ರಾಮಸ್ಥರು ಚರಂಡಿ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. 
ಗ್ರಾಮದ ಕರವೇ ಮುಖಂಡರು
ಗ್ರಾಮದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ ಆದರೆ ಅಧಿಕಾರಿಗಳಾಗಲಿ, ಅಧ್ಯಕ್ಷರಾಗಲಿ, ಸದಸ್ಯರಾಗಲಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿಲ್ಲ. ಗೆಜ್ಜಲಗಟ್ಟಾ ಗ್ರಾಮದಲ್ಲೇ ಗ್ರಾಮ ಪಂಚಾಯತಿ ಇದೆ. ಊರಿನ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕಾದ ಸಂಬಂಧಿಸಿದವರು ಕಣ್ಣು ಮುಚ್ಚಿ ಕುಳಿತಿದ್ದಾರೆಂದು ಕರವೇ ಮುಖಂಡರಾದ ಕಿರಣ್ ನಾಯಕ, ಗಫೂರ್,‌ ಸದ್ದಾಂ, ವಸಂತ್ ನಾಯಕ, ಸೋಹಿಲ್, ದಾದಾವಲಿ, ದೌಲ್, ಅಮರೇಶ್ ನಾಯಕ, ಯಲ್ಲಪ್ಪ ಸೇರಿದಂತೆ ಅನೇಕರು ದೂರಿದ್ದಾರೆ.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Monday, January 13, 2020

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಸವರಾಜ ಸ್ವಾಮಿ ಆಯ್ಕೆ

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗುಡದೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಬಸವರಾಜ ಸ್ವಾಮಿ, ಉಪಾಧ್ಯಕ್ಷರಾಗಿ ಚನ್ನಪ್ಪ ಸಾಹುಕಾರ್ ಆಯ್ಕೆಯಾಗಿದ್ದಾರೆ.
ಗೋವಿಂದಪ್ಪ ನಾಯಕ ರಂಗಾಪೂರ, ಗೋನಾಳದ ಪ್ರಥಮ ದರ್ಜೆ ಗುತ್ತೆದಾರ ಚಿನ್ನನಗೌಡ, ಅಮರೇಶ ದುಗನೂರ ಹಸ್ಮಕಲ್ ರವರ ನೇತೃತ್ವದಲ್ಲಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನೂತನ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಬಸವರಾಜ ಸ್ವಾಮಿ ಹಸ್ಮಕಲ್, ಚನ್ನಪ್ಪ ಸಾಹುಕಾರ್ ಆಯ್ಕೆಯಾಗಿರುವುದು ಸಂತಸ ತಂದಿದೆ. ಅವರನ್ನು ಅಭಿನಂದಿಸುತ್ತೇವೆಂದು ರಂಗಾಪೂರ ಗ್ರಾಮ ಪಂಚಾಯತಿ ಸದಸ್ಯೆ ಸುನೀತಾ ಗಂಡ ಬಸವರಾಜ ನಾಯಕ ಹಾಗೂ ಪತಿ ಬಸವರಾಜ ನಾಯಕ ಹರ್ಷ ವ್ಯಕ್ತಪಡಿಸಿದ್ದಾರೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.

ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Thursday, January 9, 2020

ಬಿಜೆಪಿಗೆ ಶಾಕ್ ನೀಡಿದ ಶ್ರೀರಾಮುಲು ಅಭಿಮಾನಿಗಳು..!

ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಇಂದು ನಡೆದ ಸಿಎಎ ಪರ ಬೈಕ್ ರ್ಯಾಲಿ, ಬೃಹತ್ ಬಹಿರಂಗ ಸಭೆ ಹಾಗೂ ಬಿಜೆಪಿ ತಾಲೂಕು ಘಟಕದ ನೂತನ ಕಾರ್ಯಾಲಯ ಉದ್ಘಾಟನೆ ಮತ್ತು ಮಾಜಿ (ಅನರ್ಹ) ಶಾಸಕ ಪ್ರತಾಪಗೌಡ ಪಾಟೀಲ್ ಸೇರಿ ಅನೇಕರು ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಿಗೆ ಶ್ರೀರಾಮುಲು ಅಭಿಮಾನಿಗಳು ಶಾಕ್ ನೀಡಿದರು.
ಹೌದು, ಪಕ್ಷದ ಕಾರ್ಯಕ್ರಮದ ಬ್ಯಾನರ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಿಜೆಪಿಯ ಹಿರಿಯ ನಾಯಕರಾದ ಶ್ರೀರಾಮುಲುರವರ ಪೋಟೋ ಹಾಕದಿದ್ದ ಕಾರಣ ಶ್ರೀರಾಮುಲು ಅಭಿಮಾನಿಗಳು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಹಿರಂಗ ಸಭೆಯ ವೇಳೆಯಲ್ಲಿ ಅನೇಕ ಯುವಕರು ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮಾಜಿ (ಅನರ್ಹ) ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ನಾಯಕ ಬಸನಗೌಡ ತುರುವಿಹಾಳ, ಬಿಜೆಪಿ ಜಿಲ್ಲಾಧ್ಯಕ್ಷರು ಸೇರಿದಂತೆ ಅನೇಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

5ಎ ಕಾಲುವೆ ಶೀಘ್ರ ಜಾರಿಗೊಳಿಸಿ: ಕರ್ನಾಟಕ ನೀರಾವರಿ ಸಂಘದಿಂದ ಆಗ್ರಹ

ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆಯಲ್ಲಿ ಎನ್.ಆರ್.ಬಿ.ಸಿ 5ಎ ಕಾಲುವೆ ಯೋಜನೆ ಶೀಘ್ರವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಗೆ ಕರ್ನಾಟಕ ನೀರಾವರಿ ಸಂಘದ ಮಸ್ಕಿ ತಾಲೂಕು ಘಟಕದ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಮಸ್ಕಿಯಲ್ಲಿ ಪ್ರತಿಭಟನೆ ನಡೆಸಿ  ಮನವಿ ಸಲ್ಲಿಸಿದ ಮುಖಂಡರು, ಕಳೆದೊಂದು ದಶಕದಿಂದ ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದಲ್ಲಿ  ವರ್ಷದಿಂದ ವರ್ಷಕ್ಕೆ ಬರಗಾಲ ಹೆಚ್ಚುತ್ತಿದೆ. ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಬರದ ತೀವ್ರತೆ ಜಾಸ್ತಿಯಾಗಿದೆ. ಇದರಿಂದ ಕೃಷಿ ಕ್ಷೇತ್ರದಲ್ಲಿನ ಉತ್ಪಾದನಾ ಪ್ರಮಾಣ ಗಣನೀಯವಾಗಿ ಕುಗ್ಗಿದ್ದು, ರೈತ ಕುಟುಂಬಗಳು ಹೊಟ್ಟೆಪಾಡಿಗಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ಮಳೆಯಿಲ್ಲದೇ ಜೀವನ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಸರ್ಕಾರ ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದಲ್ಲಿ ಕೃಷಿ ಕ್ಷೇತ್ರ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮಸ್ಕಿ ಕ್ಷೇತ್ರಕ್ಕೆ ವರದಾನವಾಗುವ ಎನ್.ಆರ್.ಬಿ.ಸಿ 5ಎ ಕಾಲುವೆ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಈ ಭಾಗದ ರೈತರ ಹಾಗೂ ಜನಸಾಮಾನ್ಯರ ಬಹುದಿನದ ನೀರಾವರಿ ಯೋಜನೆ ಬೇಡಿಕೆಯನ್ನು ಈಡೇರಿಸಬೇಕು.
ಜಿಲ್ಲೆಯನ್ನು ಹಾದುಹೋಗಿರುವ ಕೃಷ್ಣಾ ನದಿಯ ಆಲಮಟ್ಟಿ ಮತ್ತು ನಾರಾಯಣಪುರ ಡ್ಯಾಂನಿಂದ ಪ್ರತಿ ವರ್ಷವೂ ಲಕ್ಷಾಂತರ ಕ್ಯೂಸೆಕ್ಸ್ ನೀರು ಪೋಲಾಗಿ ಆಂಧ್ರದ ಪಾಲಾಗುತ್ತಿದೆ. ಆದರೆ ಅನತಿ ದೂರದಲ್ಲಿರುವ ಜಿಲ್ಲೆಯ ಜನರ ಜಮೀನುಗಳಿಗೆ ಹನಿ ನೀರು ಇಲ್ಲದಾಗಿರುವುದು ನೀರಾವರಿ ಯೋಜನೆ ಜಾರಿಗೊಳಿಸಲು ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲದಿರುವುದನ್ನು ತೋರಿಸುತ್ತದೆ. ಕಳೆದ ಹತ್ತಾರು ವರ್ಷಗಳಿಂದ ಮಸ್ಕಿ ಕ್ಷೇತ್ರದ ಐವತ್ತಕ್ಕೂ ಹೆಚ್ಚು ಹಳ್ಳಿಗಳ ರೈತರು ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಾ ಬಂದರು ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. 
ಪ್ರತಿಯೊಂದು ಸರ್ಕಾರದ ಮುಖ್ಯಮಂತ್ರಿಗಳ ಹಾದಿಯಾಗಿ ಜಲಸಂಪನ್ಮೂಲ ಸಚಿವರು, ಸಂಸದರು, ನೀರಾವರಿ ನಿಗಮದ ಮುಖ್ಯಸ್ಥರು, ಶಾಸಕರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಅನೇಕ ಜನ ಪ್ರತಿನಿಧಿಗಳಿಗೆ ಕಳೆದ ಹತ್ತು ವರ್ಷಗಳಿಂದ ಹೋರಾಟಗಳ ಮೂಲಕ ಮನವಿ ಪತ್ರಗಳನ್ನು ಸಲ್ಲಿಸುತ್ತಾ ಬಂದರು ಯಾವುದೇ ಪ್ರಯೋಜನವಾಗಿಲ್ಲ. ಹಾಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೂ ಈ ಹಿಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 5ಎ ಕಾಲುವೆ ಜಾರಿಗೊಳಿಸುತ್ತೇವೆ ಎಂದಿದ್ದರು ಈಗ ಸುಮ್ನನಾಗಿದ್ದಾರೆ. 
ಇದು ಈ ಭಾಗದ ಸುಮಾರು ಐವತ್ತಕ್ಕೂ ಹೆಚ್ಚು ಹಳ್ಳಿಗಳ ರೈತರಿಗೆ ಸರ್ಕಾರ ಮಾಡುತ್ತಿರುವ ದ್ರೋಹವಾಗಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಿ 5ಎ ಕಾಲುವೆ ನಿರ್ಮಾಣ ಮಾಡಲು ಮುಂದಾಗದಿದ್ದರೆ ಮುಂದೆ ನಡೆಯಲಿರುವ ಉಪಚುನಾವಣೆ ಸೇರಿ ಬರುವ ಚುನಾವಣೆಗಳಲ್ಲಿ ಮತದಾನದಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದಷ್ಟು ಬೇಗ ಸರ್ಕಾರ 5ಎ ಕಾಲುವೆ ಜಾರಿಗೊಳಿಸಬೇಕೆಂದು  ಕರ್ನಾಟಕ ನೀರಾವರಿ ಸಂಘದ ಮಸ್ಕಿ ತಾಲೂಕು ಘಟಕದ ಮುಖಂಡರು ಮತದಾನ ಬಹಿಷ್ಕಾರದ ಮುನ್ನೆಚ್ಚರಿಕೆ ನೀಡಿದರು. ರೈತರ ಮನವಿ ಆಲಿಸಲು ಬಂದಿದ್ದ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ಮುಖಂಡರಾದ ಬಸನಗೌಡ ತುರವಿಹಾಳ ಸೇರಿದಂತೆ ಅನೇಕರನ್ನು ರೈತರು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಬಸವರಾಜಪ್ಪಗೌಡ ಹರ್ವಾಪೂರ, ಎನ್.ಶಿವನಗೌಡ ವಟಗಲ್,  ಬಸನಗೌಡ ಪಾಟೀಲ್ ಮುದಬಾಳ, ವಿಶ್ವನಾಥರೆಡ್ಡಿ ಅಮೀನಗಡ, ತಿಮ್ಮನಗೌಡ ಚಿಲ್ಕರಾಗಿ, ನಾಗರೆಡ್ಡೆಪ್ಪ ದೇವರಮನಿ ಬುದ್ದಿನ್ನಿ, ಕುಶಪ್ಪ ಅಮೀನಗಡ, ಬಸವರಾಜ ಇರಕಲ್ ಸೇರಿದಂತೆ ಅನೇಕರಿದ್ದರು.