Friday, January 24, 2020

ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ಅಪಮಾನ: ಯುವಪಡೆಯಿಂದ ಸಿಎಂಗೆ ಪತ್ರ, ಕ್ರಮಕ್ಕೆ ಆಗ್ರಹ

ದೊರೆ ನ್ಯೂಸ್ ಕನ್ನಡ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇತೆಮ್ಮಿನಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಮಹರ್ಷಿ ವಾಲ್ಮೀಕಿ ನಾಮಫಲಕಗಳಿಗೆ ಹಾಗೂ ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಮಾನ್ವಿ ತಾಲೂಕು ಘಟಕದ ಮುಖಂಡರು ಆಗ್ರಹಿಸಿದ್ದಾರೆ. 
ಮಾನ್ವಿ ತಹಶಿಲ್ದಾರರ ಕಛೇರಿಗೆ ಭೇಟಿ ನೀಡಿ ತಹಶಿಲ್ದಾರರ ಮೂಲಕ ಸಿಎಂಗೆ ಮನವಿ ಸಲ್ಲಿಸಿದ ಯುವಪಡೆಯ ಮುಖಂಡರು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇತೆಮ್ಮಿನಾಳ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ದಿನಾಂಕ: 23/01/2020ರಂದು ಕಿಡಿಗೇಡಿಗಳು ಸಗಣಿ ಎಸೆದು ಅಪಮಾನ ಮಾಡಿದ್ದಾರೆ. ಇದು ಖಂಡನೀಯ ಘಟನೆಯಾಗಿದೆ. ದೇಶಕ್ಕೆ ಶಾಂತಿ ಸಂದೇಶ ಸಾರಿದ ಮಹಾತ್ಮರ ಭಾವಚಿತ್ರಕ್ಕೆ ಈ ರೀತಿಯ ಅಪಮಾನ ಮಾಡಿರುವುದು ನೋವಿನ ಸಂಗತಿಯಾಗಿದೆ. 
ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆಯ ಸಂದರ್ಭದಲ್ಲಿ ಪ್ರತಿಮೆ ಶೃಂಗಾರಗೊಳಿಸಿ ಸಮಾಜದ ಮುಖಂಡರ ಬಗ್ಗೆ ಗುಣಗಾನ ಮಾಡಿ ಮರೆತು ಬಿಡಲಾಗುತ್ತಿದೆ. ಇದರಿಂದಾಗಿ ಮಹರ್ಷಿ ವಾಲ್ಮೀಕಿ ಪ್ರತಿಮೆ, ನಾಮ ಫಲಕಗಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಈ ರೀತಿಯ ಘಟನೆಗಳು ಜರುಗಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗಲಾದರೂ ಮುಖ್ಯಮಂತ್ರಿಗಳು ಮಹರ್ಷಿ ವಾಲ್ಮೀಕಿ ಭಾವಚಿತ್ರ, ನಾಮ‌ ಫಲಕ, ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಸಂಬಂಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಬೇಕು. 
ಇಂತಹ ಘಟನೆಗಳು ಮರು ಕಳಿಸದಂತೆ ಕ್ರಮ ಕೈಗೊಳ್ಳಬೇಕು. ಹಾಗೂ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಗುರುತಿಸಿ ಗುಂಡಾ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆಗಳನ್ವಯ ಪ್ರಕರಣ ದಾಖಲಿಸಿ ಆರೋಪಿಗಳನ್ನು ತಕ್ಷಣವೇ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಮನವಿ ಪತ್ರದ ಮೂಲಕ ಆಗ್ರಹಿಸಿದರು. ಒಂದು ವೇಳೆ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ  ಅಪಮಾನ ಮಾಡಿದ ಆರೋಪಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದೆಂದು  ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವ ಪಡೆಯ ತಾಲೂಕು ಅಧ್ಯಕ್ಷ ರಾಮಣ್ಣ ನಾಯಕ, ಮುಖಂಡರಾದ ವೆಂಕಟೇಶ ನಾಯಕ, ಅಮರೇಶ ನಾಯಕ ಜಾನೇಕಲ್, ವೆಂಕಟೇಶ ನಾಯಕ ಯರಮಲದೊಡ್ಡಿ, ಚಂದ್ರಶೇಖರ ನಾಯಕ ಚಿಮ್ಲಾಪುರ, ಬ್ರಹ್ಮ ನಾಯಕ, ಬಸವ ನಾಯಕ, ಆಂಜನೇಯ ನಾಯಕ, ತಿಪ್ಪಯ್ಯ ನಾಯಕ, ಯಲ್ಲಪ್ಪ ನಾಯಕ, ಬಾಲಯ್ಯ ನಾಯಕ ಸೇರಿದಂತೆ ಅನೇಕರಿದ್ದರು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

No comments:

Post a Comment