![]() |
ಒಡೆದ ಕುಡಿಯುವ ನೀರಿನ ಪೈಪ್ |
ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪನ್ನು ಚರಂಡಿಯೊಳಗೆ ಹಾಕಲಾಗಿದ್ದು, ಆ ಪೈಪ್ ಒಡೆದು ಕುಡಿಯುವ ನೀರಿನಲ್ಲಿ ಚರಂಡಿ ನೀರು ಸೇರುತ್ತಿವೆ. ಅದೇ ನೀರನ್ನು ಕುಡಿಯಲು ಪೂರೈಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗೆಜ್ಜಲಗಟ್ಟಾ ಗ್ರಾಮ ಘಟಕದ ಮುಖಂಡರು ಆರೋಪಿಸಿದ್ದಾರೆ.
![]() |
ಸ್ಥಳದಲ್ಲಿ ಕರವೇ ಮುಖಂಡರು |
ಚರಂಡಿಯೊಳಗೆ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದೆ, ಒಡೆದ ಪೈಪನ್ನು ದುರಸ್ತಿ ಮಾಡದೇ ಬೇಕಾಬಿಟ್ಟಿ ಸೈಕಲ್ ಟ್ಯೂಬ್ ಸುತ್ತಿದ್ದಾರೆ. ಒಡೆದ ಪೈಪ್ ನ ಮೂಲಕ ಚರಂಡಿ ನೀರು ಕುಡಿಯುವ ನೀರಿನೊಳಗೆ ಸೇರುತ್ತಿದ್ದು, ಅದೇ ನೀರನ್ನು ಗ್ರಾಮಸ್ಥರು ಕುಡಿಯುತ್ತಿದ್ದೇವೆಂದು ಕರವೇ ಗ್ರಾಮ ಘಟಕದ ಅಧ್ಯಕ್ಷ ಕಿರಣ್ ನಾಯಕ ಗೆಜ್ಜಲಗಟ್ಟಾ ಬೇಸರ ವ್ಯಕ್ತಪಡಿಸಿದ್ದಾರೆ.
![]() |
ಈ ಹಿಂದೆ ಪಿಡಿಒಗೆ ಕರವೇ ಮನವಿ |
ಗ್ರಾಮದಲ್ಲಿನ ನೀರಿನ ಸಮಸ್ಯೆ ಪರಿಹರಿಸುವಂತೆ ಈ ಹಿಂದೆ ಕರವೇ ಮೂಲಕ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದೇವು, ಆದರೆ ಪಿಡಿಒ ಸಮಸ್ಯೆ ಪರಿಹರಿಸುವ ಬದಲಿಗೆ ಚರಂಡಿ ನೀರು ಕುಡಿಯುವಂತೆ ಮಾಡಿದ್ದಾರೆ. ಗ್ರಾಮದಲ್ಲಿನ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಾದ ಪಿಡಿಒ ಗ್ರಾಮಕ್ಕೂ ತಮಗೂ ಸಂಬಂಧವಿಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ. ಪಿಡಿಒ ನಡೆಯಿಂದಾಗಿ ಗ್ರಾಮಸ್ಥರು ಚರಂಡಿ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
![]() |
ಗ್ರಾಮದ ಕರವೇ ಮುಖಂಡರು |
ಗ್ರಾಮದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ ಆದರೆ ಅಧಿಕಾರಿಗಳಾಗಲಿ, ಅಧ್ಯಕ್ಷರಾಗಲಿ, ಸದಸ್ಯರಾಗಲಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿಲ್ಲ. ಗೆಜ್ಜಲಗಟ್ಟಾ ಗ್ರಾಮದಲ್ಲೇ ಗ್ರಾಮ ಪಂಚಾಯತಿ ಇದೆ. ಊರಿನ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕಾದ ಸಂಬಂಧಿಸಿದವರು ಕಣ್ಣು ಮುಚ್ಚಿ ಕುಳಿತಿದ್ದಾರೆಂದು ಕರವೇ ಮುಖಂಡರಾದ ಕಿರಣ್ ನಾಯಕ, ಗಫೂರ್, ಸದ್ದಾಂ, ವಸಂತ್ ನಾಯಕ, ಸೋಹಿಲ್, ದಾದಾವಲಿ, ದೌಲ್, ಅಮರೇಶ್ ನಾಯಕ, ಯಲ್ಲಪ್ಪ ಸೇರಿದಂತೆ ಅನೇಕರು ದೂರಿದ್ದಾರೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )
No comments:
Post a Comment