Thursday, January 9, 2020

5ಎ ಕಾಲುವೆ ಶೀಘ್ರ ಜಾರಿಗೊಳಿಸಿ: ಕರ್ನಾಟಕ ನೀರಾವರಿ ಸಂಘದಿಂದ ಆಗ್ರಹ

ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆಯಲ್ಲಿ ಎನ್.ಆರ್.ಬಿ.ಸಿ 5ಎ ಕಾಲುವೆ ಯೋಜನೆ ಶೀಘ್ರವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಗೆ ಕರ್ನಾಟಕ ನೀರಾವರಿ ಸಂಘದ ಮಸ್ಕಿ ತಾಲೂಕು ಘಟಕದ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಮಸ್ಕಿಯಲ್ಲಿ ಪ್ರತಿಭಟನೆ ನಡೆಸಿ  ಮನವಿ ಸಲ್ಲಿಸಿದ ಮುಖಂಡರು, ಕಳೆದೊಂದು ದಶಕದಿಂದ ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದಲ್ಲಿ  ವರ್ಷದಿಂದ ವರ್ಷಕ್ಕೆ ಬರಗಾಲ ಹೆಚ್ಚುತ್ತಿದೆ. ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಬರದ ತೀವ್ರತೆ ಜಾಸ್ತಿಯಾಗಿದೆ. ಇದರಿಂದ ಕೃಷಿ ಕ್ಷೇತ್ರದಲ್ಲಿನ ಉತ್ಪಾದನಾ ಪ್ರಮಾಣ ಗಣನೀಯವಾಗಿ ಕುಗ್ಗಿದ್ದು, ರೈತ ಕುಟುಂಬಗಳು ಹೊಟ್ಟೆಪಾಡಿಗಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ಮಳೆಯಿಲ್ಲದೇ ಜೀವನ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಸರ್ಕಾರ ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದಲ್ಲಿ ಕೃಷಿ ಕ್ಷೇತ್ರ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮಸ್ಕಿ ಕ್ಷೇತ್ರಕ್ಕೆ ವರದಾನವಾಗುವ ಎನ್.ಆರ್.ಬಿ.ಸಿ 5ಎ ಕಾಲುವೆ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಈ ಭಾಗದ ರೈತರ ಹಾಗೂ ಜನಸಾಮಾನ್ಯರ ಬಹುದಿನದ ನೀರಾವರಿ ಯೋಜನೆ ಬೇಡಿಕೆಯನ್ನು ಈಡೇರಿಸಬೇಕು.
ಜಿಲ್ಲೆಯನ್ನು ಹಾದುಹೋಗಿರುವ ಕೃಷ್ಣಾ ನದಿಯ ಆಲಮಟ್ಟಿ ಮತ್ತು ನಾರಾಯಣಪುರ ಡ್ಯಾಂನಿಂದ ಪ್ರತಿ ವರ್ಷವೂ ಲಕ್ಷಾಂತರ ಕ್ಯೂಸೆಕ್ಸ್ ನೀರು ಪೋಲಾಗಿ ಆಂಧ್ರದ ಪಾಲಾಗುತ್ತಿದೆ. ಆದರೆ ಅನತಿ ದೂರದಲ್ಲಿರುವ ಜಿಲ್ಲೆಯ ಜನರ ಜಮೀನುಗಳಿಗೆ ಹನಿ ನೀರು ಇಲ್ಲದಾಗಿರುವುದು ನೀರಾವರಿ ಯೋಜನೆ ಜಾರಿಗೊಳಿಸಲು ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲದಿರುವುದನ್ನು ತೋರಿಸುತ್ತದೆ. ಕಳೆದ ಹತ್ತಾರು ವರ್ಷಗಳಿಂದ ಮಸ್ಕಿ ಕ್ಷೇತ್ರದ ಐವತ್ತಕ್ಕೂ ಹೆಚ್ಚು ಹಳ್ಳಿಗಳ ರೈತರು ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಾ ಬಂದರು ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. 
ಪ್ರತಿಯೊಂದು ಸರ್ಕಾರದ ಮುಖ್ಯಮಂತ್ರಿಗಳ ಹಾದಿಯಾಗಿ ಜಲಸಂಪನ್ಮೂಲ ಸಚಿವರು, ಸಂಸದರು, ನೀರಾವರಿ ನಿಗಮದ ಮುಖ್ಯಸ್ಥರು, ಶಾಸಕರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಅನೇಕ ಜನ ಪ್ರತಿನಿಧಿಗಳಿಗೆ ಕಳೆದ ಹತ್ತು ವರ್ಷಗಳಿಂದ ಹೋರಾಟಗಳ ಮೂಲಕ ಮನವಿ ಪತ್ರಗಳನ್ನು ಸಲ್ಲಿಸುತ್ತಾ ಬಂದರು ಯಾವುದೇ ಪ್ರಯೋಜನವಾಗಿಲ್ಲ. ಹಾಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೂ ಈ ಹಿಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 5ಎ ಕಾಲುವೆ ಜಾರಿಗೊಳಿಸುತ್ತೇವೆ ಎಂದಿದ್ದರು ಈಗ ಸುಮ್ನನಾಗಿದ್ದಾರೆ. 
ಇದು ಈ ಭಾಗದ ಸುಮಾರು ಐವತ್ತಕ್ಕೂ ಹೆಚ್ಚು ಹಳ್ಳಿಗಳ ರೈತರಿಗೆ ಸರ್ಕಾರ ಮಾಡುತ್ತಿರುವ ದ್ರೋಹವಾಗಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಿ 5ಎ ಕಾಲುವೆ ನಿರ್ಮಾಣ ಮಾಡಲು ಮುಂದಾಗದಿದ್ದರೆ ಮುಂದೆ ನಡೆಯಲಿರುವ ಉಪಚುನಾವಣೆ ಸೇರಿ ಬರುವ ಚುನಾವಣೆಗಳಲ್ಲಿ ಮತದಾನದಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದಷ್ಟು ಬೇಗ ಸರ್ಕಾರ 5ಎ ಕಾಲುವೆ ಜಾರಿಗೊಳಿಸಬೇಕೆಂದು  ಕರ್ನಾಟಕ ನೀರಾವರಿ ಸಂಘದ ಮಸ್ಕಿ ತಾಲೂಕು ಘಟಕದ ಮುಖಂಡರು ಮತದಾನ ಬಹಿಷ್ಕಾರದ ಮುನ್ನೆಚ್ಚರಿಕೆ ನೀಡಿದರು. ರೈತರ ಮನವಿ ಆಲಿಸಲು ಬಂದಿದ್ದ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ಮುಖಂಡರಾದ ಬಸನಗೌಡ ತುರವಿಹಾಳ ಸೇರಿದಂತೆ ಅನೇಕರನ್ನು ರೈತರು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಬಸವರಾಜಪ್ಪಗೌಡ ಹರ್ವಾಪೂರ, ಎನ್.ಶಿವನಗೌಡ ವಟಗಲ್,  ಬಸನಗೌಡ ಪಾಟೀಲ್ ಮುದಬಾಳ, ವಿಶ್ವನಾಥರೆಡ್ಡಿ ಅಮೀನಗಡ, ತಿಮ್ಮನಗೌಡ ಚಿಲ್ಕರಾಗಿ, ನಾಗರೆಡ್ಡೆಪ್ಪ ದೇವರಮನಿ ಬುದ್ದಿನ್ನಿ, ಕುಶಪ್ಪ ಅಮೀನಗಡ, ಬಸವರಾಜ ಇರಕಲ್ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

No comments:

Post a Comment