Monday, May 23, 2022

ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆರವರನ್ನು ಸನ್ಮಾನಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

 

ಬೀದರ್ (ಮೇ.21): ವಿಧಾನ ಪರಿಷತ್ ನ ಹಂಗಾಮಿ ಸಭಾಪತಿಯಾಗಿ ನೇಮಕಗೊಂಡ ರಘುನಾಥ್ ರಾವ್ ಮಲ್ಕಾಪುರೆರವರನ್ನು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸನ್ಮಾನಿಸಿ ಗೌರವಿಸಿದರು.

ಬೀದರ್ ನಗರದಲ್ಲಿರುವ ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ರವರ ಮನೆಗೆ ಶನಿವಾರ ಭೇಟಿ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ರಘುನಾಥ್ ರಾವ್ ರವರನ್ನು ಸನ್ಮಾನಿಸಿ, ಗೌರವಿಸಿ ಅಭಿನಂದಿಸಿದರು. ಈ ವೇಳೆ ಬೀದರ್ ಉತ್ತರ ಕ್ಷೇತ್ರದ ಶಾಸಕರಾದ ರಹಿಂಖಾನ್ ರವರು, ಮಹೇಶ್ ಚಿಂತಾಮಣಿರವರಿದ್ದರು.

ಬ್ರಿಮ್ಸ್ ಸ್ವಚ್ಚತಾ ಕರ್ಮಿಗಳ ಹೋರಾಟಕ್ಕೆ ಶಾಸಕ ಬಂಡೆಪ್ಪ ಖಾಶೆಂಪುರ್ ಬೆಂಬಲ

 

 

ಬೀದರ್ (ಮೇ.21):  ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂರಕ್ಷಣಾ ವೇದಿಕೆ ಸಹಯೋಗದೊಂದಿಗೆ ಬ್ರಿಮ್ಸ್ ಆಸ್ಪತ್ರೆಯ ಮಹಿಳಾ ಸ್ವಚ್ಚತಾ ಕರ್ಮಿಗಳು ನಡೆಸುತ್ತಿರುವ ಅಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹಕ್ಕೆ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಬೆಂಬಲ ಸೂಚಿಸಿದರು.

ನಗರದ ಬ್ರಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಧರಣಿಯಲ್ಲಿದ್ದ ಮಹಿಳಾ ಸ್ವಚ್ಚತಾ ಕರ್ಮಿಗಳಿಂದ ಧರಣಿಯ ಮಾಹಿತಿ ಪಡೆದರು.

ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಸುಮಾರು 80 ಜನ ಮಹಿಳಾ ಸ್ವಚ್ಚತಾ ಕರ್ಮಿಗಳು ಹಾಗೂ 16 ಜನ ನೈರ್ಮಲ್ಯ ಸ್ವಚ್ಚತಾ ಸಿಬ್ಬಂದಿಗಳಿಗೆ ಹಾಗೂ ಟೆಂಡರ್ ದಾರರಿಗೆ ಯಾವುದೇ ಮುನ್ಸೂಚನೆ ನೀಡದೆ ಟೆಂಡರ್ ರದ್ದುಪಡಿಸಿ ಸ್ವಚ್ಚತಾ ಕರ್ಮಿಗಳನ್ನು ಕೆಲಸದಿಂದ ತೆಗೆದಿದ್ದಾರೆ. ಅದನ್ನು ರೀ ಟೆಂಡರ್ ಮಾಡಬೇಕು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಬೀದರ್ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘದಿಂದ ಬಡ ಸ್ವಚ್ಚತಾ ಕರ್ಮಿಗಳ ಸೇವೆಯನ್ನು ಮುಂದುವರೆಸಬೇಕು ಎಂದು ಧರಣಿ ನಿರತ ಮಹಿಳಾ ಸ್ವಚ್ಚತಾ ಕರ್ಮಿಗಳು ಶಾಸಕ ಬಂಡೆಪ್ಪ ಖಾಶೆಂಪುರ್ ರವರಿಗೆ ಮನವಿ ಮಾಡಿದರು.

ಧರಣಿ ನಿರತ ಸ್ವಚ್ಚತಾ ಕರ್ಮಿಗಳಿಂದ ಮಾಹಿತಿ ಪಡೆದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಸ್ವಚ್ಚತಾ ಕರ್ಮಿಗಳ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ತಿಳಿಸಿದರು. ಕರ್ನಾಟಕ ದಲಿತ ಸಂರಕ್ಷಣಾ ವೇದಿಕೆಯ ಮುಖಂಡರು, ಮಹಿಳಾ ಸ್ವಚ್ಚತಾ ಕರ್ಮಿಗಳು, ನೈರ್ಮಲ್ಯ ಸ್ವಚ್ಚತಾ ಸಿಬ್ಬಂದಿಗಳು ಸೇರಿದಂತೆ ಅನೇಕರಿದ್ದರು.

ಬೊಮ್ಮಗೊಂಡರವರದ್ದು 600 ವರ್ಷಗಳ ಇತಿಹಾಸ: ಬಂಡೆಪ್ಪ ಖಾಶೆಂಪುರ್

 

ಬೀದರ್ (ಮೇ.22): ಬೊಮ್ಮಗೊಂಡರವರದ್ದು 600 ವರ್ಷಗಳ ಇತಿಹಾಸವಿದೆ. ಅವರು ಹೋಗಿ ಆರು ನೂರು ವರ್ಷಗಳಾದ ಮೇಲೂ ಕೂಡ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರೆ ಅವರೇ ನಮ್ಮ ಆದರ್ಶ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಕಪಲಾಪೂರ ಎ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ ಶ್ರೀ ಮಹಾತ್ಮ ಬೊಮ್ಮಗೊಂಡೇಶ್ವರ ಮೂರ್ತಿ ಅನಾವರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ, ಬಸವ, ಬೊಮ್ಮಗೊಂಡೇಶ್ವರ, ಕನಕದಾಸ, ಅಂಬೇಡ್ಕರ್ ಸೇರಿದಂತೆ ಎಲ್ಲಾ ಮಹಾತ್ಮರಿಗೂ ಒಂದೇ ಜನ್ಮವಿತ್ತು. ಅದೊಂದೆ ಜನ್ಮದಲ್ಲಿ ಅವರು ಜಗತ್ತು ಗುರುತಿಸುವಂತ ಕೆಲಸಗಳನ್ನು ಮಾಡಿ ಮಹಾತ್ಮರು ಎನಿಸಿಕೊಂಡಿದ್ದಾರೆಂದರು.

ನಾವು ಕೂಡ ನಮಗೆ ಇರುವ ಒಂದೇ ಜನ್ಮದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕಾಗಿದೆ. ಬುದ್ಧರಿಗೆ 2000 ವರ್ಷಗಳ, ಬಸವಣ್ಣನವರಿಗೆ 800 ವರ್ಷಗಳ, ಬೊಮ್ಮಗೊಂಡರಿಗೆ 600 ವರ್ಷಗಳ, ಕನಕದಾಸರಿಗೆ 500 ವರ್ಷಗಳ, ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ 131 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಮಹಾತ್ಮರು ಯಾರು ಕೂಡ ಯಾವುದೇ ಒಂದು ಜಾತಿ, ಧರ್ಮಕ್ಕೆ ಸಿಮೀತವಾಗಿ ಕೆಲಸ ಮಾಡಲಿಲ್ಲ.

ಬರಗಾಲದ ಸಂದರ್ಭದಲ್ಲಿ ಅಂದಿನ ಜನ ನೀರಿಗಾಗಿ ಪರದಾಡುವಾಗ ಬೊಮ್ಮಗೊಂಡೇಶ್ವರರು ತಮ್ಮ ಪವಾಡದಿಂದ ನೀರು ದೊರಕಿಸಿಕೊಟ್ಟಿದ್ದರು. ಅವರು ಕೇವಲ ಗೊಂಡ ಸಮಾಜದವರಿಗೆ ಮಾತ್ರವೇ ನೀರು ನೀಡುತ್ತೇನೆ ಎಂದಿರಲಿಲ್ಲ. ಬಸವಣ್ಣನವರು ಕೇವಲ ಒಂದು ಜಾತಿಗಾಗಿ ಕ್ರಾಂತಿ ಮಾಡಿರಲಿಲ್ಲ. ಮಾನವ ಸಮಾಜಕ್ಕಾಗಿ, ಮಾನವ ಸಮಾಜದ ಒಳಿತಿಗಾಗಿ ಬಸವಣ್ಣನವರು 12ನೇ ಶತಮಾನದಲ್ಲಿಯೇ ಕ್ರಾಂತಿ ಮಾಡಿದ್ದರು.

ಬಸವಣ್ಣನವರು ಅಂದು ಅನುಭವ ಮಂಟಪದ ಮೂಲಕ ಕ್ರಾಂತಿ ಮಾಡಿದ್ದರು. ಇವತ್ತು ಬಾಬಾ ಸಾಹೇಬರು ಸಂವಿಧಾನದ ಮೂಲಕ ಭಾರತ ದೇಶದ ಜನರಿಗೆ ರಕ್ಷಣೆ ನೀಡುವಂತ ಕೆಲಸ ಮಾಡಿದರು. ಮಾನವ ಸಮಾಜದ ಒಳಿತಿಗಾಗಿ ಶ್ರಮಿಸಿದ ಅವರೆಲ್ಲರು ಮಹಾತ್ಮರಾಗಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಈ ಸಂದರ್ಭದಲ್ಲಿ ಕಪಲಾಪೂರ ಎ ಗ್ರಾಮದ ಸಿದ್ಧರೂಢ ಟ್ರಸ್ಟ್ ನ ಅಧ್ಯಕ್ಷರಾದ ಪೂಜ್ಯ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ, ರುದನೂರಿನ ಕಮರಿಮಠ ಗಣೇಶ್ವರ ಆಶ್ರಮದ ಪೂಜ್ಯ ಶ್ರೀ ದೇವಾನಂದ ಸ್ವಾಮೀಜಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಮೃತರಾವ ಚಿಮಕೋಡೆ, ಮಹೇಶ ಮೈಲಾರೆ, ಡಾ. ಶರಣಪ್ಪಾ ಮಲಗೊಂಡ, ಆನಂದ ಕೆ. ಸಿಕೇನಪೂರೆ, ಈಶ್ವರಿ, ಹಣಮಂತರಾವ ಮೈಲಾರೆ, ಶಿವಕುಮಾರ ಬೀರ್ಗೆ, ಶಿವಕುಮಾರ ಕೋಳಾರೆ, ಸತೀಶ ಸಿಕೇನಪೂರೆ, ಚನ್ನಮ್ಮ ವಿಜಯಕುಮಾರ, ಅನುಷಾಬಾಯಿ, ತಂಗೆಮ್ಮಾ ಅಮೃತ, ಶ್ರೀಪತಿ ತಳಘಟೆ, ಶಿವಶರಣಪ್ಪ ಮೇತ್ರೆ, ಶಿವಾನಂದ ಧನ್ನೂರೆ, ಅನೀಲ ಡಬರೆ, ವಿರೇಶ ತಳಘಟೆ ಸೇರಿದಂತೆ ಅನೇಕರಿದ್ದರು.

ಬರೂರ: ಅದ್ದೂರಿಯಾಗಿ ನಡೆದ ರುದ್ರಾಕ್ಷಿ ಎಲ್ಲಮ್ಮಾ ದೇವಿ ಜಾತ್ರಾ ಮಹೋತ್ಸವ, ಶಾಸಕ ಬಂಡೆಪ್ಪ ಖಾಶೆಂಪುರ್ ಭಾಗಿ

 


 

ಬೀದರ್ (ಮೇ.21): ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಬರೂರ ಗ್ರಾಮದ ಶ್ರೀ ರುದ್ರಾಕ್ಷಿ ಎಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಹಳ್ಳಿ ಸೊಗಡಿನೊಂದಿಗೆ, ನೂರಾರು ವರ್ಷಗಳ ಸಾಂಪ್ರದಾಯಿಕ ಶೈಲಿಯಂತೆ ಶನಿವಾರ ಸಂಜೆ ಸಡಗರ ಸಂಭ್ರಮದಿಂದ ಜರುಗಿತು.

ಅದ್ದೂರಿಯಾಗಿ ನಡೆದ ಶ್ರೀ ಎಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡು, ಎಲ್ಲಮ್ಮಾ ದೇವಿಯ ದರ್ಶನ ಪಡೆದರು. ಬಳಿಕ ಗ್ರಾಮಸ್ಥರೊಂದಿಗೆ ಹೆಜ್ಜೆ ಹಾಕಿದರು. ಇದೇ ವೇಳೆ ಸ್ಥಳೀಯರೊಂದಿಗೆ ಶಾಸಕರು ಸ್ಟೇಪ್ ಹಾಕಿದರು. ಅಭಿಮಾನಿಗಳು ಶಾಸಕರನ್ನು ಭುಜದ ಮೇಲೆ ಕೂಡಿಸಿಕೊಂಡು ಡ್ಯಾನ್ಸ್ ಮಾಡಿದರು.

ಅನೇಕ ವರ್ಷಗಳ ಇತಿಹಾಸ ಹೊಂದಿರುವ ಜಾತ್ರೆ:

ಬರೂರ ಗ್ರಾಮದಲ್ಲಿರುವ ರುದ್ರಾಕ್ಷಿ ಎಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿರಲಿಲ್ಲ. ಈ ವರ್ಷ ನಡೆದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡು ದೇವಿಯ ದರ್ಶನ ಪಡೆದರು.

ಎತ್ತಿನ ಬಂಡಿಯ ಸವಾರಿಯೇ ವಿಶೇಷ:

ಬರೂರ ಗ್ರಾಮದ ಶ್ರೀ ರುದ್ರಾಕ್ಷಿ ಎಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಎತ್ತಿನ ಬಂಡಿಯಲ್ಲಿ ಬಂದಿದ್ದು ಇಲ್ಲಿನ ವಿಶೇಷವಾಗಿತ್ತು. ಇನ್ನೂ ವಿಶೇಷವೆಂದರೇ, ಒಂದೊಂದು ಬಂಡಿಯನ್ನು ನಾಲ್ಕು ಎತ್ತುಗಳಿಂದ ಎಳೆಸಲಾಯಿತು.

ಹೊಸ ಸೀರೆಗಳಿಂದ ಎತ್ತಿನ ಬಂಡಿಯ ಅಲಂಕಾರ:

ಬರೂರ ಗ್ರಾಮದ ಶ್ರೀ ಎಲ್ಲಮ್ಮಾ ದೇವಿಯ ಜಾತ್ರೆಗೆ ಆಗಮಿಸಿದ್ದ ಭಕ್ತರು ತಾವು ಹೂಡಿಕೊಂಡು ಬಂದಿದ್ದ ಎತ್ತಿನ ಬಂಡಿಯನ್ನು ಹೊಸ ಸೀರೆಗಳಿಂದ ಅಲಂಕಾರ ಮಾಡಿದ್ದರು. ಎತ್ತಿನ ಬಂಡಿಗೆ ಅಲಂಕಾರ ಮಾಡಿದ ಸೀರೆಗಳು ಮತ್ತು ಬಂಡಿಯ ಅಲಂಕಾರಕ್ಕಾಗಿಯೇ ಲಕ್ಷಾಂತರ ರೂ. ಖರ್ಚು ಮಾಡಿದ್ದರು ಎಂಬುದು ಇನ್ನೊಂದು ವಿಶೇಷವಾಗಿದೆ.

ದೇವಸ್ಥಾನದ ಸುತ್ತಲೂ ಸಾಗಿದ ಎತ್ತಿನ ಬಂಡಿಗಳು:

ಶ್ರೀ ಎಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಎತ್ತಿನ ಬಂಡಿಗಳು ದೇವಸ್ಥಾನದ ಸುತ್ತಲೂ ಸುತ್ತುವರೆದು ನಿಂತಿದ್ದವು. ಅಷ್ಟೇ ಅಲ್ಲದೇ ಕಣ್ಣಿಗೆ ಕಾಣುವವರೆಗೂ ಎತ್ತಿನ ಬಂಡಿಗಳೇ ಇದ್ದವು.

ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು:

ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭಕ್ತರು ಡೊಳ್ಳು, ಹಲಗೆ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಸಾಗಿ ಬಂದಿದ್ದರು. ದಾರಿಯುದ್ದಕ್ಕೂ ಕಲಾ ತಂಡಗಳಿದ್ದವು.

ಒಟ್ಟಾರೆಯಾಗಿ ಎತ್ತುಗಳು, ಎತ್ತಿನ ಬಂಡಿಗಳು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಕೂಡ ಸಾವಿರಾರು ಸಂಖ್ಯೆಯ ಭಕ್ತರು ಲಕ್ಷಾಂತರ ರೂ. ಖರ್ಚು ಮಾಡಿ ನೂರಾರು ಎತ್ತಿನ ಬಂಡಿಗಳೊಂದಿಗೆ ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿರುವುದು ಈ ಭಾಗದ ಮತ್ತು ಬರೂರ ಗ್ರಾಮದ ಪ್ರಸಿದ್ದಿಗೆ ಸಾಕ್ಷಿ ಎನ್ನಬಹುದಾಗಿದೆ.

ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ವಿತರಣೆ ಮಾಡಿ: ಶಾಸಕ ಬಂಡೆಪ್ಪ ಖಾಶೆಂಪುರ್

ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಖಾಶೆಂಪುರ್ ಸಭೆ

ಬೀದರ್ (ಮಾ.22): 2022-23ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ರೈತರ ಬೇಡಿಕೆಗೆ ತಕ್ಕಂತೆ ವಿತರಣೆ ಮಾಡಬೇಕು. ಬಿತ್ತನೆ ಬೀಜ ವಿತರಣೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಬೀದರ್ ದಕ್ಷಿಣ ಕ್ಷೇತ್ರದ ಖಾಶೆಂಪುರ್ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಬೀದರ್ ಮತ್ತು ಹುಮನಾಬಾದ್ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರೊಂದಿಗೆ ಭಾನುವಾರ ಸಂಜೆ ಸಭೆ ನಡೆಸಿ ಮಾತನಾಡಿದ ಅವರು, ಸರಿಯಾಗಿ ಪರಿಶೀಲನೆ ನಡೆಸಿದ ಬೀಜಗಳನ್ನು ರೈತರಿಗೆ ನೀಡಬೇಕು. ಸರಿಯಾದ ಸಮಯಕ್ಕೆ ಬೀಜ ವಿತರಣೆ  ಮಾಡಬೇಕು. ಬಿತ್ತನೆ ವಿಷಯದಲ್ಲಿ, ಬೀಜಗಳ ವಿಷಯದಲ್ಲಿ ರೈತರಲ್ಲಿ ಗೊಂದಲಗಳು ಉಂಟಾದಲ್ಲಿ ಕೂಡಲೇ ರೈತರ ನೆರವಿಗೆ ನಿಲ್ಲಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ನಮ್ಮ ಭಾಗದಲ್ಲಿ ಹೆಚ್ಚಾಗಿ ಸೋಯಾ, ಉದ್ದು, ಅವರೆ, ಹೆಸರು, ತೊಗರೆಯ ಬಿತ್ತನೆ ಮಾಡಲಾಗುತ್ತದೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸೋಯಾ ಬಿತ್ತನೆ ಮಾಡಲಾಗುತ್ತದೆ. ಬಿತ್ತನೆ ಬೀಜಗಳ ಕೊರತೆಯಾಗದಂತೆ ಸಂಗ್ರಹಿಸಿಟ್ಟುಕೊಳ್ಳಬೇಕು. ರೈತರು ಕೇಳಿದ ಸಮಯಕ್ಕೆ ಬೀಜ ವಿತರಣೆ ಮಾಡಲು ಕ್ರಮಕೈಗೊಳ್ಳಬೇಕು. ದಾಸ್ತಾನು ವ್ಯವಸ್ಥೆಯು ಸರಿಯಾಗಿ ಮಾಡಿಕೊಳ್ಳಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.

2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೀದರ್ ತಾಲೂಕಿನ ಒಟ್ಟು ಬಿತ್ತನೆ ಕ್ಷೇತ್ರವು 51080 ಹೆಕ್ಟೇರ್ ಪ್ರದೇಶವಿದ್ದು, ಅದರಲ್ಲಿ ಮುಖ್ಯವಾಗಿ ಸೋಯಾ, ಅವರೆಯು 22000 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗುವ ಸಾಧ್ಯತೆಯಿದೆ. ಇನ್ನೂಳಿದಂತೆ ಉದ್ದು, ಹೆಸರು, ತೊಗರೆ, ಜೋಳ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬಿತ್ತನೆ ಮಾಡುವ ಸಾಧ್ಯತೆಯಿದೆ ಎಂದು ಬೀದರ್ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಧೂಳಪ್ಪಾ ಹೋಸಾಳೆಯವರು ಶಾಸಕರಿಗೆ ಮಾಹಿತಿ ನೀಡಿದರು.

2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹುಮನಾಬಾದ್ ತಾಲೂಕಿನ ಒಟ್ಟು ಬಿತ್ತನೆ ಕ್ಷೇತ್ರವು 62000 ಹೆಕ್ಟೇರ್ ಪ್ರದೇಶವಾಗಲಿದ್ದು, ಅದರಲ್ಲಿ 22000 ಹೆಕ್ಟೇರ್ ಸೋಯಾ, 19000 ಹೆಕ್ಟೇರ್ ತೊಗರಿ, 10000 ಹೆಕ್ಟೇರ್ ಉದ್ದು, 8000 ಹೆಕ್ಟೇರ್ ಹೆಸರು ಬಿತ್ತನೆಯಾಗುವ ಸಾಧ್ಯತೆಯಿದೆ ಎಂದು ಹುಮನಾಬಾದ್ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಗೌತಮ್ ರವರು ಹುಮನಾಬಾದ್ ತಾಲೂಕಿನ ಬಿತ್ತನೆ ಪ್ರದೇಶದ ಮಾಹಿತಿಯನ್ನು ಶಾಸಕರೊಂದಿಗೆ ಹಂಚಿಕೊಂಡರು.

ಇದೇ ವೇಳೆ ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಬಿತ್ತನೆ ಪ್ರದೇಶ, ಬಿತ್ತನೆಯಾಗುವ ಬೆಳೆಗಳು, ಬೀಜ ವಿತರಣೆ ಕೇಂದ್ರಗಳು ಸೇರಿದಂತೆ ಮುಂಗಾರು ಬಿತ್ತನೆಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಹುಮನಾಬಾದ್ ಮತ್ತು ಬೀದರ್ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಶಾಸಕರೊಂದಿಗೆ ಮಾಹಿತಿ ಹಂಚಿಕೊಂಡರು.

Wednesday, May 18, 2022

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮಹಿಳಾ ವಿವಿಯ ಪ್ರಾದೇಶಿಕ ಕೇಂದ್ರ ಸ್ಥಾಪನೆ: ಶಾಸಕ ಬಂಡೆಪ್ಪ ಖಾಶೆಂಪುರ್

ಶಾಸಕ ಬಂಡೆಪ್ಪ ಖಾಶೆಂಪುರ್

 

ಬೀದರ್ (ಮೇ.18): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಣದೂರು ಹೊರವಲಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪನೆಗೆ ಸರ್ಕಾರ ಮುಂದಾಗಿರುವುದು ಸಂತಸದ ವಿಷಯವಾಗಿದೆ ಎಂದು ವಿವಿಯ ಸಿಂಡಿಕೇಟ್ ಮೆಂಬರ್, ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹರ್ಷ ವ್ಯಕ್ತಪಡಿಸಿದರು.

ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಮಾತನಾಡಿದ ಅವರು, ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪಿಸುವಂತೆ ನಾವು ಈ ಹಿಂದೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವು. ಸರ್ಕಾರ ಈಗ ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪಿಸಲು ಮುಂದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕ್ಷೇತ್ರ ವ್ಯಾಪ್ತಿಯ ಖಾದರನಗರದ ಸರ್ವೆ ನಂಬರ್ 329ರಲ್ಲಿ 6.32 ಎಕರೆ ಜಮೀನು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪನೆಗೆ ಈಗಾಗಲೇ ಮೀಸಲಿಟ್ಟು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪಿಸುವುದರಿಂದ ಈ ಭಾಗದ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ.

ನಮ್ಮ ಮನವಿಗೆ ಸ್ಪಂದಿಸಿ ಪ್ರಾದೇಶಿಕ ಕೇಂದ್ರ, ಪಿ.ಜಿ ಸೆಂಟರ್ ಸ್ಥಾಪನೆಗೆ ಮುಂದಾಗಿರುವ ಸರ್ಕಾರಕ್ಕೆ, ಜಮೀನು ಒದಗಿಸಿಕೊಟ್ಟಿರುವ ಜಿಲ್ಲಾಧಿಕಾರಿಗಳು ಸೇರಿದಂತೆ ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪನೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಕ್ಷೇತ್ರದ ಜನತೆಯ ಪರವಾಗಿ ಮತ್ತು ನನ್ನ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹರ್ಷ ವ್ಯಕ್ತಪಡಿಸಿದರು.

Saturday, May 7, 2022

ಪಿಎಸ್ಐ ನಾಗರಾಜ್ ಭೋವಿರವರ 'ನೆತ್ತರಲಿ ನೆಂದ ಹೂವು' ಕವನ ಸಂಕಲನ ದ.ರಾ ಬೇಂದ್ರೆ ದತ್ತಿ ಪ್ರಶಸ್ತಿಗೆ ಆಯ್ಕೆ

ಸಂತಸ ವ್ಯಕ್ತಪಡಿಸಿದ ಪಾಮನಕಲ್ಲೂರು ಗ್ರಾಮಸ್ಥರು

ನಾಗರಾಜ್ ಭೋವಿ ಪಿಎಸ್ಐ

ದೊರೆ ನ್ಯೂಸ್ ಕನ್ನಡ ವೆಬ್ ಪೋರ್ಟಲ್ Dore News Kannada Web Portal

ರಾಯಚೂರು (ಮೇ.07): ಬಡತನದಲ್ಲಿ ಹುಟ್ಟಿ ಬೆಳೆದು ಕಷ್ಟಪಟ್ಟು ಓದಿ, ಪರೀಕ್ಷೆ ಬರೆದು ಪೊಲೀಸ್ ಪೇದೆಯಾಗಿ ವೃತ್ತಿ ಜೀವನ ಆರಂಭಿಸಿ, ಬಳಿಕ ಪಿಎಸ್ಐ ಹುದ್ದೆಗೆ ಆಯ್ಕೆಯಾಗುವ ಮೂಲಕ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಕಾರವಾರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ನಾಗರಾಜ್ ಭೋವಿ (ನಾಗಪ್ಪ) ರವರು ಬರೆದಿರುವ ಚೊಚ್ಚಲ ಅಪ್ರಕಟಿತ ಕವನ ಸಂಕಲನವಾದ 'ನೆತ್ತರಲಿ ನೆಂದ ಹೂವು' ಕವನ ಸಂಕಲನದ ಹಸ್ತಪ್ರತಿಯೂ  ವಿಧ್ಯಾಧರ ಕನ್ನಡ ಪ್ರತಿಷ್ಠಾನ ಮುಂಬಯಿ - ಧಾರವಾಡರವರು ನೀಡುವ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ 'ದ.ರಾ ಬೇಂದ್ರೆ ನೆನಪಿನ ದತ್ತಿ ಪ್ರಶಸ್ತಿ 2022ರ ಪ್ರೋತ್ಸಾಹಕರ ವಿಭಾಗ'ದ ಪ್ರಶಸ್ತಿಗೆ ಆಯ್ಕೆಯಾಗಿದೆ.

ಫೇಸ್ಬುಕ್ ನಲ್ಲೂ ಸುದ್ದಿ ಓದಿ..

ವಿಧ್ಯಾದರ ಕನ್ನಡ ಪ್ರತಿಷ್ಠಾನ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯಲಿರುವ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಪಿಎಸ್ಐ ನಾಗರಾಜ್ ಭೋವಿರವರಿಗೆ ದ.ರಾ ಬೇಂದ್ರೆ ನೆನಪಿನ ದತ್ತಿ ಪ್ರಶಸ್ತಿ, ಅಭಿನಂದನಾ ಪತ್ರ, ಸ್ಮರಣಿಕೆ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾಗಿರುವ ವಿಧ್ಯಾದರ ಮುತಾಲಿಕ ದೇಸಾಯಿರವರು ತಿಳಿಸಿದ್ದಾರೆ.

ತಮ್ಮೂರಿನ ಯುವಕನೊಬ್ಬ ಪಿಎಸ್ಐ ಹುದ್ದೆಯಲ್ಲಿದ್ದುಕೊಂಡು ಲಾಠಿಯೊಂದಿಗೆ ಲೇಖನಿ ಹಿಡಿದು ಉತ್ತಮ ಕವನ ಸಂಕಲನ ರಚಿಸಿ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಪಾಮನಕಲ್ಲೂರು ಗ್ರಾಮದ ಹಿರಿಯರು, ಯುವ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ. ನಾಗರಾಜ್ ಭೋವಿರವರು ಇನ್ನೂ ಉನ್ನತಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಳ್ಳಲಿ ಅವರ ಸಾಹಿತ್ಯ ಅಭಿರುಚಿ ಇನ್ನೂ ಹೆಚ್ಚಾಗಲಿ ಎಂದು ಶುಭ ಹಾರೈಸಿದ್ದಾರೆ.

ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು