Monday, May 23, 2022

ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ವಿತರಣೆ ಮಾಡಿ: ಶಾಸಕ ಬಂಡೆಪ್ಪ ಖಾಶೆಂಪುರ್

ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಖಾಶೆಂಪುರ್ ಸಭೆ

ಬೀದರ್ (ಮಾ.22): 2022-23ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ರೈತರ ಬೇಡಿಕೆಗೆ ತಕ್ಕಂತೆ ವಿತರಣೆ ಮಾಡಬೇಕು. ಬಿತ್ತನೆ ಬೀಜ ವಿತರಣೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಬೀದರ್ ದಕ್ಷಿಣ ಕ್ಷೇತ್ರದ ಖಾಶೆಂಪುರ್ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಬೀದರ್ ಮತ್ತು ಹುಮನಾಬಾದ್ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರೊಂದಿಗೆ ಭಾನುವಾರ ಸಂಜೆ ಸಭೆ ನಡೆಸಿ ಮಾತನಾಡಿದ ಅವರು, ಸರಿಯಾಗಿ ಪರಿಶೀಲನೆ ನಡೆಸಿದ ಬೀಜಗಳನ್ನು ರೈತರಿಗೆ ನೀಡಬೇಕು. ಸರಿಯಾದ ಸಮಯಕ್ಕೆ ಬೀಜ ವಿತರಣೆ  ಮಾಡಬೇಕು. ಬಿತ್ತನೆ ವಿಷಯದಲ್ಲಿ, ಬೀಜಗಳ ವಿಷಯದಲ್ಲಿ ರೈತರಲ್ಲಿ ಗೊಂದಲಗಳು ಉಂಟಾದಲ್ಲಿ ಕೂಡಲೇ ರೈತರ ನೆರವಿಗೆ ನಿಲ್ಲಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ನಮ್ಮ ಭಾಗದಲ್ಲಿ ಹೆಚ್ಚಾಗಿ ಸೋಯಾ, ಉದ್ದು, ಅವರೆ, ಹೆಸರು, ತೊಗರೆಯ ಬಿತ್ತನೆ ಮಾಡಲಾಗುತ್ತದೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸೋಯಾ ಬಿತ್ತನೆ ಮಾಡಲಾಗುತ್ತದೆ. ಬಿತ್ತನೆ ಬೀಜಗಳ ಕೊರತೆಯಾಗದಂತೆ ಸಂಗ್ರಹಿಸಿಟ್ಟುಕೊಳ್ಳಬೇಕು. ರೈತರು ಕೇಳಿದ ಸಮಯಕ್ಕೆ ಬೀಜ ವಿತರಣೆ ಮಾಡಲು ಕ್ರಮಕೈಗೊಳ್ಳಬೇಕು. ದಾಸ್ತಾನು ವ್ಯವಸ್ಥೆಯು ಸರಿಯಾಗಿ ಮಾಡಿಕೊಳ್ಳಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.

2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೀದರ್ ತಾಲೂಕಿನ ಒಟ್ಟು ಬಿತ್ತನೆ ಕ್ಷೇತ್ರವು 51080 ಹೆಕ್ಟೇರ್ ಪ್ರದೇಶವಿದ್ದು, ಅದರಲ್ಲಿ ಮುಖ್ಯವಾಗಿ ಸೋಯಾ, ಅವರೆಯು 22000 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗುವ ಸಾಧ್ಯತೆಯಿದೆ. ಇನ್ನೂಳಿದಂತೆ ಉದ್ದು, ಹೆಸರು, ತೊಗರೆ, ಜೋಳ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬಿತ್ತನೆ ಮಾಡುವ ಸಾಧ್ಯತೆಯಿದೆ ಎಂದು ಬೀದರ್ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಧೂಳಪ್ಪಾ ಹೋಸಾಳೆಯವರು ಶಾಸಕರಿಗೆ ಮಾಹಿತಿ ನೀಡಿದರು.

2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹುಮನಾಬಾದ್ ತಾಲೂಕಿನ ಒಟ್ಟು ಬಿತ್ತನೆ ಕ್ಷೇತ್ರವು 62000 ಹೆಕ್ಟೇರ್ ಪ್ರದೇಶವಾಗಲಿದ್ದು, ಅದರಲ್ಲಿ 22000 ಹೆಕ್ಟೇರ್ ಸೋಯಾ, 19000 ಹೆಕ್ಟೇರ್ ತೊಗರಿ, 10000 ಹೆಕ್ಟೇರ್ ಉದ್ದು, 8000 ಹೆಕ್ಟೇರ್ ಹೆಸರು ಬಿತ್ತನೆಯಾಗುವ ಸಾಧ್ಯತೆಯಿದೆ ಎಂದು ಹುಮನಾಬಾದ್ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಗೌತಮ್ ರವರು ಹುಮನಾಬಾದ್ ತಾಲೂಕಿನ ಬಿತ್ತನೆ ಪ್ರದೇಶದ ಮಾಹಿತಿಯನ್ನು ಶಾಸಕರೊಂದಿಗೆ ಹಂಚಿಕೊಂಡರು.

ಇದೇ ವೇಳೆ ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಬಿತ್ತನೆ ಪ್ರದೇಶ, ಬಿತ್ತನೆಯಾಗುವ ಬೆಳೆಗಳು, ಬೀಜ ವಿತರಣೆ ಕೇಂದ್ರಗಳು ಸೇರಿದಂತೆ ಮುಂಗಾರು ಬಿತ್ತನೆಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಹುಮನಾಬಾದ್ ಮತ್ತು ಬೀದರ್ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಶಾಸಕರೊಂದಿಗೆ ಮಾಹಿತಿ ಹಂಚಿಕೊಂಡರು.

No comments:

Post a Comment