Monday, May 23, 2022

ಬೊಮ್ಮಗೊಂಡರವರದ್ದು 600 ವರ್ಷಗಳ ಇತಿಹಾಸ: ಬಂಡೆಪ್ಪ ಖಾಶೆಂಪುರ್

 

ಬೀದರ್ (ಮೇ.22): ಬೊಮ್ಮಗೊಂಡರವರದ್ದು 600 ವರ್ಷಗಳ ಇತಿಹಾಸವಿದೆ. ಅವರು ಹೋಗಿ ಆರು ನೂರು ವರ್ಷಗಳಾದ ಮೇಲೂ ಕೂಡ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರೆ ಅವರೇ ನಮ್ಮ ಆದರ್ಶ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಕಪಲಾಪೂರ ಎ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ ಶ್ರೀ ಮಹಾತ್ಮ ಬೊಮ್ಮಗೊಂಡೇಶ್ವರ ಮೂರ್ತಿ ಅನಾವರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ, ಬಸವ, ಬೊಮ್ಮಗೊಂಡೇಶ್ವರ, ಕನಕದಾಸ, ಅಂಬೇಡ್ಕರ್ ಸೇರಿದಂತೆ ಎಲ್ಲಾ ಮಹಾತ್ಮರಿಗೂ ಒಂದೇ ಜನ್ಮವಿತ್ತು. ಅದೊಂದೆ ಜನ್ಮದಲ್ಲಿ ಅವರು ಜಗತ್ತು ಗುರುತಿಸುವಂತ ಕೆಲಸಗಳನ್ನು ಮಾಡಿ ಮಹಾತ್ಮರು ಎನಿಸಿಕೊಂಡಿದ್ದಾರೆಂದರು.

ನಾವು ಕೂಡ ನಮಗೆ ಇರುವ ಒಂದೇ ಜನ್ಮದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕಾಗಿದೆ. ಬುದ್ಧರಿಗೆ 2000 ವರ್ಷಗಳ, ಬಸವಣ್ಣನವರಿಗೆ 800 ವರ್ಷಗಳ, ಬೊಮ್ಮಗೊಂಡರಿಗೆ 600 ವರ್ಷಗಳ, ಕನಕದಾಸರಿಗೆ 500 ವರ್ಷಗಳ, ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ 131 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಮಹಾತ್ಮರು ಯಾರು ಕೂಡ ಯಾವುದೇ ಒಂದು ಜಾತಿ, ಧರ್ಮಕ್ಕೆ ಸಿಮೀತವಾಗಿ ಕೆಲಸ ಮಾಡಲಿಲ್ಲ.

ಬರಗಾಲದ ಸಂದರ್ಭದಲ್ಲಿ ಅಂದಿನ ಜನ ನೀರಿಗಾಗಿ ಪರದಾಡುವಾಗ ಬೊಮ್ಮಗೊಂಡೇಶ್ವರರು ತಮ್ಮ ಪವಾಡದಿಂದ ನೀರು ದೊರಕಿಸಿಕೊಟ್ಟಿದ್ದರು. ಅವರು ಕೇವಲ ಗೊಂಡ ಸಮಾಜದವರಿಗೆ ಮಾತ್ರವೇ ನೀರು ನೀಡುತ್ತೇನೆ ಎಂದಿರಲಿಲ್ಲ. ಬಸವಣ್ಣನವರು ಕೇವಲ ಒಂದು ಜಾತಿಗಾಗಿ ಕ್ರಾಂತಿ ಮಾಡಿರಲಿಲ್ಲ. ಮಾನವ ಸಮಾಜಕ್ಕಾಗಿ, ಮಾನವ ಸಮಾಜದ ಒಳಿತಿಗಾಗಿ ಬಸವಣ್ಣನವರು 12ನೇ ಶತಮಾನದಲ್ಲಿಯೇ ಕ್ರಾಂತಿ ಮಾಡಿದ್ದರು.

ಬಸವಣ್ಣನವರು ಅಂದು ಅನುಭವ ಮಂಟಪದ ಮೂಲಕ ಕ್ರಾಂತಿ ಮಾಡಿದ್ದರು. ಇವತ್ತು ಬಾಬಾ ಸಾಹೇಬರು ಸಂವಿಧಾನದ ಮೂಲಕ ಭಾರತ ದೇಶದ ಜನರಿಗೆ ರಕ್ಷಣೆ ನೀಡುವಂತ ಕೆಲಸ ಮಾಡಿದರು. ಮಾನವ ಸಮಾಜದ ಒಳಿತಿಗಾಗಿ ಶ್ರಮಿಸಿದ ಅವರೆಲ್ಲರು ಮಹಾತ್ಮರಾಗಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಈ ಸಂದರ್ಭದಲ್ಲಿ ಕಪಲಾಪೂರ ಎ ಗ್ರಾಮದ ಸಿದ್ಧರೂಢ ಟ್ರಸ್ಟ್ ನ ಅಧ್ಯಕ್ಷರಾದ ಪೂಜ್ಯ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ, ರುದನೂರಿನ ಕಮರಿಮಠ ಗಣೇಶ್ವರ ಆಶ್ರಮದ ಪೂಜ್ಯ ಶ್ರೀ ದೇವಾನಂದ ಸ್ವಾಮೀಜಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಮೃತರಾವ ಚಿಮಕೋಡೆ, ಮಹೇಶ ಮೈಲಾರೆ, ಡಾ. ಶರಣಪ್ಪಾ ಮಲಗೊಂಡ, ಆನಂದ ಕೆ. ಸಿಕೇನಪೂರೆ, ಈಶ್ವರಿ, ಹಣಮಂತರಾವ ಮೈಲಾರೆ, ಶಿವಕುಮಾರ ಬೀರ್ಗೆ, ಶಿವಕುಮಾರ ಕೋಳಾರೆ, ಸತೀಶ ಸಿಕೇನಪೂರೆ, ಚನ್ನಮ್ಮ ವಿಜಯಕುಮಾರ, ಅನುಷಾಬಾಯಿ, ತಂಗೆಮ್ಮಾ ಅಮೃತ, ಶ್ರೀಪತಿ ತಳಘಟೆ, ಶಿವಶರಣಪ್ಪ ಮೇತ್ರೆ, ಶಿವಾನಂದ ಧನ್ನೂರೆ, ಅನೀಲ ಡಬರೆ, ವಿರೇಶ ತಳಘಟೆ ಸೇರಿದಂತೆ ಅನೇಕರಿದ್ದರು.

No comments:

Post a Comment