ಬೀದರ್ (ಮೇ.21):
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಬರೂರ ಗ್ರಾಮದ ಶ್ರೀ ರುದ್ರಾಕ್ಷಿ ಎಲ್ಲಮ್ಮಾ ದೇವಿಯ ಜಾತ್ರಾ
ಮಹೋತ್ಸವ ಕಾರ್ಯಕ್ರಮವು ಹಳ್ಳಿ ಸೊಗಡಿನೊಂದಿಗೆ, ನೂರಾರು ವರ್ಷಗಳ ಸಾಂಪ್ರದಾಯಿಕ ಶೈಲಿಯಂತೆ ಶನಿವಾರ
ಸಂಜೆ ಸಡಗರ ಸಂಭ್ರಮದಿಂದ ಜರುಗಿತು.
ಅದ್ದೂರಿಯಾಗಿ
ನಡೆದ ಶ್ರೀ ಎಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ
ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ
ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡು, ಎಲ್ಲಮ್ಮಾ ದೇವಿಯ ದರ್ಶನ ಪಡೆದರು. ಬಳಿಕ ಗ್ರಾಮಸ್ಥರೊಂದಿಗೆ
ಹೆಜ್ಜೆ ಹಾಕಿದರು. ಇದೇ ವೇಳೆ ಸ್ಥಳೀಯರೊಂದಿಗೆ ಶಾಸಕರು ಸ್ಟೇಪ್ ಹಾಕಿದರು. ಅಭಿಮಾನಿಗಳು ಶಾಸಕರನ್ನು
ಭುಜದ ಮೇಲೆ ಕೂಡಿಸಿಕೊಂಡು ಡ್ಯಾನ್ಸ್ ಮಾಡಿದರು.
ಅನೇಕ ವರ್ಷಗಳ ಇತಿಹಾಸ ಹೊಂದಿರುವ ಜಾತ್ರೆ:
ಬರೂರ
ಗ್ರಾಮದಲ್ಲಿರುವ ರುದ್ರಾಕ್ಷಿ ಎಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಅನೇಕ ವರ್ಷಗಳ
ಇತಿಹಾಸವಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ
ನಡೆದಿರಲಿಲ್ಲ. ಈ ವರ್ಷ ನಡೆದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡು ದೇವಿಯ
ದರ್ಶನ ಪಡೆದರು.
ಎತ್ತಿನ ಬಂಡಿಯ ಸವಾರಿಯೇ ವಿಶೇಷ:
ಬರೂರ
ಗ್ರಾಮದ ಶ್ರೀ ರುದ್ರಾಕ್ಷಿ ಎಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಗ್ರಾಮಸ್ಥರು ಮತ್ತು
ಸುತ್ತಮುತ್ತಲಿನ ಗ್ರಾಮಗಳ ಜನರು ಎತ್ತಿನ ಬಂಡಿಯಲ್ಲಿ ಬಂದಿದ್ದು ಇಲ್ಲಿನ ವಿಶೇಷವಾಗಿತ್ತು. ಇನ್ನೂ
ವಿಶೇಷವೆಂದರೇ, ಒಂದೊಂದು ಬಂಡಿಯನ್ನು ನಾಲ್ಕು ಎತ್ತುಗಳಿಂದ ಎಳೆಸಲಾಯಿತು.
ಹೊಸ ಸೀರೆಗಳಿಂದ ಎತ್ತಿನ ಬಂಡಿಯ ಅಲಂಕಾರ:
ಬರೂರ
ಗ್ರಾಮದ ಶ್ರೀ ಎಲ್ಲಮ್ಮಾ ದೇವಿಯ ಜಾತ್ರೆಗೆ ಆಗಮಿಸಿದ್ದ ಭಕ್ತರು ತಾವು ಹೂಡಿಕೊಂಡು ಬಂದಿದ್ದ ಎತ್ತಿನ
ಬಂಡಿಯನ್ನು ಹೊಸ ಸೀರೆಗಳಿಂದ ಅಲಂಕಾರ ಮಾಡಿದ್ದರು. ಎತ್ತಿನ ಬಂಡಿಗೆ ಅಲಂಕಾರ ಮಾಡಿದ ಸೀರೆಗಳು ಮತ್ತು
ಬಂಡಿಯ ಅಲಂಕಾರಕ್ಕಾಗಿಯೇ ಲಕ್ಷಾಂತರ ರೂ. ಖರ್ಚು ಮಾಡಿದ್ದರು ಎಂಬುದು ಇನ್ನೊಂದು ವಿಶೇಷವಾಗಿದೆ.
ದೇವಸ್ಥಾನದ ಸುತ್ತಲೂ ಸಾಗಿದ ಎತ್ತಿನ ಬಂಡಿಗಳು:
ಶ್ರೀ
ಎಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಎತ್ತಿನ ಬಂಡಿಗಳು ದೇವಸ್ಥಾನದ
ಸುತ್ತಲೂ ಸುತ್ತುವರೆದು ನಿಂತಿದ್ದವು. ಅಷ್ಟೇ ಅಲ್ಲದೇ ಕಣ್ಣಿಗೆ ಕಾಣುವವರೆಗೂ ಎತ್ತಿನ ಬಂಡಿಗಳೇ ಇದ್ದವು.
ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು:
ಜಾತ್ರಾ
ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭಕ್ತರು ಡೊಳ್ಳು, ಹಲಗೆ ಸೇರಿದಂತೆ ವಿವಿಧ
ಕಲಾ ತಂಡಗಳೊಂದಿಗೆ ಸಾಗಿ ಬಂದಿದ್ದರು. ದಾರಿಯುದ್ದಕ್ಕೂ ಕಲಾ ತಂಡಗಳಿದ್ದವು.
ಒಟ್ಟಾರೆಯಾಗಿ ಎತ್ತುಗಳು, ಎತ್ತಿನ ಬಂಡಿಗಳು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಕೂಡ ಸಾವಿರಾರು ಸಂಖ್ಯೆಯ ಭಕ್ತರು ಲಕ್ಷಾಂತರ ರೂ. ಖರ್ಚು ಮಾಡಿ ನೂರಾರು ಎತ್ತಿನ ಬಂಡಿಗಳೊಂದಿಗೆ ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿರುವುದು ಈ ಭಾಗದ ಮತ್ತು ಬರೂರ ಗ್ರಾಮದ ಪ್ರಸಿದ್ದಿಗೆ ಸಾಕ್ಷಿ ಎನ್ನಬಹುದಾಗಿದೆ.
No comments:
Post a Comment