Wednesday, May 18, 2022

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮಹಿಳಾ ವಿವಿಯ ಪ್ರಾದೇಶಿಕ ಕೇಂದ್ರ ಸ್ಥಾಪನೆ: ಶಾಸಕ ಬಂಡೆಪ್ಪ ಖಾಶೆಂಪುರ್

ಶಾಸಕ ಬಂಡೆಪ್ಪ ಖಾಶೆಂಪುರ್

 

ಬೀದರ್ (ಮೇ.18): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಣದೂರು ಹೊರವಲಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪನೆಗೆ ಸರ್ಕಾರ ಮುಂದಾಗಿರುವುದು ಸಂತಸದ ವಿಷಯವಾಗಿದೆ ಎಂದು ವಿವಿಯ ಸಿಂಡಿಕೇಟ್ ಮೆಂಬರ್, ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹರ್ಷ ವ್ಯಕ್ತಪಡಿಸಿದರು.

ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಮಾತನಾಡಿದ ಅವರು, ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪಿಸುವಂತೆ ನಾವು ಈ ಹಿಂದೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವು. ಸರ್ಕಾರ ಈಗ ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪಿಸಲು ಮುಂದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕ್ಷೇತ್ರ ವ್ಯಾಪ್ತಿಯ ಖಾದರನಗರದ ಸರ್ವೆ ನಂಬರ್ 329ರಲ್ಲಿ 6.32 ಎಕರೆ ಜಮೀನು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪನೆಗೆ ಈಗಾಗಲೇ ಮೀಸಲಿಟ್ಟು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪಿಸುವುದರಿಂದ ಈ ಭಾಗದ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ.

ನಮ್ಮ ಮನವಿಗೆ ಸ್ಪಂದಿಸಿ ಪ್ರಾದೇಶಿಕ ಕೇಂದ್ರ, ಪಿ.ಜಿ ಸೆಂಟರ್ ಸ್ಥಾಪನೆಗೆ ಮುಂದಾಗಿರುವ ಸರ್ಕಾರಕ್ಕೆ, ಜಮೀನು ಒದಗಿಸಿಕೊಟ್ಟಿರುವ ಜಿಲ್ಲಾಧಿಕಾರಿಗಳು ಸೇರಿದಂತೆ ಪ್ರಾದೇಶಿಕ ಕೇಂದ್ರ, ಮಹಿಳಾ ಪಿ.ಜಿ ಸೆಂಟರ್ ಸ್ಥಾಪನೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಕ್ಷೇತ್ರದ ಜನತೆಯ ಪರವಾಗಿ ಮತ್ತು ನನ್ನ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹರ್ಷ ವ್ಯಕ್ತಪಡಿಸಿದರು.

No comments:

Post a Comment