ಬೀದರ್ (ಆ.06): ಸ್ತ್ರೀ ಶಕ್ತಿ ಸಂಘಗಳು, ಮಹಿಳಾ ಸ್ವಸಹಾಯ ಸಂಘಗಳು ಸರ್ಕಾರದಿಂದ ದೊರೆಯುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವ ಮೂಲಕ ಅಭಿವೃದ್ಧಿ ಸಾಧಿಸಬಹುದಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಜಿಲ್ಲಾ ಪಂಚಾಯತಿ ಬೀದರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ್, ತಾಲೂಕು ಪಂಚಾಯತಿ ಹಾಗೂ ಶಿಶು ಅಭಿವೃದ್ಧಿ ಯೋಜನೆ ಬೀದರ್ ಮತ್ತು ಹುಮನಾಬಾದ್ ಗಳ ಸಂಯುಕ್ತಾಶ್ರಯದಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಶನಿವಾರ ನಡೆದ 'ಅಮೃತ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಗೆ ಬೀಜಧನ ಚೆಕ್ ವಿತರಣಾ ಕಾರ್ಯಕ್ರಮ'ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ತ್ರೀ ಶಕ್ತಿ ಸಂಘಗಳು, ಸರ್ಕಾರದಿಂದ ದೊರೆಯುವ ಸಾಲಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಸಣ್ಣಪುಟ್ಟ ಕಾರ್ಖಾನೆ, ಕೈಗಾರಿಕೆಗಳನ್ನು ಆರಂಭಿಸಬೇಕು ಎಂದರು.
ಮಹಿಳೆಯರು ಸ್ತ್ರೀ ಶಕ್ತಿ ಸಂಘಗಳನ್ನು, ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಬೇಕು. ಆ ಮೂಲಕ ಎಲ್ಲರೂ ಒಗ್ಗಟ್ಟಾಗಿ ಉಳಿತಾಯ ಯೋಜನೆಗಳನ್ನು ಆರಂಭಿಸಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು, ಸಾಲಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಆ ಮೂಲಕ ಸಣ್ಣಪುಟ್ಟ ಉದ್ಯಮಗಳನ್ನು ಆರಂಭಿಸಿ ಅಭಿವೃದ್ಧಿ ಸಾಧಿಸಬೇಕು. ಮಹಿಳೆಯರು ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಸ್ತ್ರೀ ಶಕ್ತಿ ಸಂಘಗಳಿಗೆ ಸರ್ಕಾರ ನೀಡುವ ಸಾಲಸೌಲಭ್ಯಗಳನ್ನು ವೈಯಕ್ತಿಕ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬಾರದು. ಸಾಮೂಹಿಕವಾಗಿ ಸಂಘದಲ್ಲಿರುವ ಎಲ್ಲರೂ ಸೇರಿಕೊಂಡು ಸಣ್ಣಪುಟ್ಟ ಉದ್ಯಮ ಆರಂಭಿಸಬೇಕು ಆ ಮೂಲಕ ಅಭಿವೃದ್ಧಿ ಸಾಧಿಸಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕರೆ ನೀಡಿದರು.
ಸ್ತ್ರೀ ಶಕ್ತಿ ಸಂಘಗಳಿಗೆ 25 ಲಕ್ಷ ರೂ. ಮೌಲ್ಯದ ಚೆಕ್ ವಿತರಣೆ:
ಒಂದು ಸಂಘಕ್ಕೆ ಒಂದು ಲಕ್ಷ ರೂ.ಗಳಂತೆ ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೀದರ್ ತಾಲೂಕಿನ 14 ಸ್ತ್ರೀ ಶಕ್ತಿ ಸಂಘಗಳಿಗೆ ಮತ್ತು ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹುಮನಾಬಾದ್ ತಾಲೂಕಿನ 11 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ ಒಂದು ಲಕ್ಷ ರೂ.ನಂತೆ 25 ಸ್ತ್ರೀ ಶಕ್ತಿ ಸಂಘಗಳಿಗೆ 25 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು.
ಇದೇ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸ್ತ್ರೀ ಶಕ್ತಿ ಸಂಘಗಳಿಗೆ ತಲಾ ಒಂದು ಲಕ್ಷ ರೂ.ನಂತೆ ಚೆಕ್ ವಿತರಣೆ ಮಾಡಲಾಗುತ್ತಿದೆ. ಸಂಘಗಳು ತಮಗೆ ನೀಡಿದ ಒಂದು ಲಕ್ಷ ರೂ. ಚೆಕ್ ಅನ್ನು ಸದುಪಯೋಗ ಪಡೆದುಕೊಳ್ಳಬೇಕು. ಆ ಹಣದಿಂದ ಸಣ್ಣಪುಟ್ಟ ಕೈಗಾರಿಕೆಗಳನ್ನು, ಉದ್ಯಮಗಳನ್ನು ಸ್ಥಾಪಿಸಿಕೊಂಡು ಸಾಮೂಹಿಕವಾಗಿ ಅಭಿವೃದ್ಧಿ ಸಾಧಿಸಬೇಕು. ನೀಡಿರುವ ಹಣವನ್ನು ವೈಯಕ್ತಿಕ ಖರ್ಚಿಗಾಗಿ ಬಳಸಿಕೊಳ್ಳಬಾರದು ಎಂದು ಸಂಘಗಳಿಗೆ ತಿಳಿಸಿದರು.
ವಿವಿಧ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಮಾತನಾಡಿ, ನಾವು ಉದ್ಯಮಗಳನ್ನು ಆರಂಭಿಸುವ ಯೋಚನೆಯಲ್ಲಿದ್ದೇವೆ. ಸರ್ಕಾರದಿಂದ ಈಗ ನೀಡಿರುವ ಒಂದು ಲಕ್ಷ ರೂ. ಹಣ ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ಸಹಾಯಧನ, ಸಾಲಸೌಲಭ್ಯ ಒದಗಿಸಿಕೊಡಬೇಕು. ಬಡ್ಡಿರಹಿತವಾಗಿ ಹೆಚ್ಚಿನ ಸಾಲ ನೀಡಬೇಕು ಎಂದು ಮನವಿ ಮಾಡಿದರು.
ಅಭಿವೃದ್ಧಿ ಸಾಧಿಸಿದರೆ ಐವತ್ತು ಸಾವಿರ ರೂ. ವೈಯಕ್ತಿಕ ನೆರವು:
ಸರ್ಕಾರದಿಂದ ಈಗ ನೀಡಲಾಗಿರುವ ಸಹಾಯಧನವನ್ನು ಸದುಪಯೋಗ ಪಡೆದುಕೊಂಡು, ಮುಂಬರುವ ಕೆಲ ತಿಂಗಳಲ್ಲಿ ಅಭಿವೃದ್ಧಿ ಸಾಧಿಸುವ ಸ್ತ್ರೀ ಶಕ್ತಿ ಸಂಘಗಳಿಗೆ ನಾನು ವೈಯಕ್ತಿಕವಾಗಿ ಐವತ್ತು ಸಾವಿರ ರೂ. ನೆರವು ನೀಡಲು ಸಿದ್ದನಿದ್ದೇನೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಷ್ಟು ಸ್ತ್ರೀ ಶಕ್ತಿ ಸಂಘಗಳು ಅಭಿವೃದ್ಧಿ ಸಾಧಿಸುತ್ತವೆ ಅಷ್ಟು ಸಂಘಗಳಿಗೆ ಐವತ್ತು ಸಾವಿರ ರೂ. ವೈಯಕ್ತಿಕ ಧನಸಹಾಯ ಮಾಡುತ್ತೇನೆ. ಮಹಿಳಾ ಸಂಘಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತುಂಬಿದ ಸಭೆಯಲ್ಲಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ರವೀಂದ್ರ ರತ್ನಾಕರ್, ಬೀದರ್ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕ್ ಪಾಟೀಲ್, ಹುಮನಾಬಾದ್ ಸಿಡಿಪಿಒ ಶಿವಪ್ರಕಾಶ್ ಹಿರೇಮಠ, ಬೀದರ್ ಸಿಡಿಪಿಒ ಮಹಾಂತೇಶ್ ಬಜೇಂತ್ರಿ, ಮಹಿಳಾ ಸ್ವಸಹಾಯ ಸಂಘ, ಸ್ತ್ರೀ ಸಂಘಗಳ ಮುಖಂಡರು, ಸದಸ್ಯರು ಸೇರಿದಂತೆ ಅನೇಕರಿದ್ದರು.
#bandeppa_khashempur #bidar_south_mla #bidar #news #updates
No comments:
Post a Comment