Thursday, January 30, 2020

ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ: ಎನ್.ರಘುವೀರ ನಾಯಕ


ದೊರೆ ನ್ಯೂಸ್ ಕನ್ನಡ (ರಾಯಚೂರು, ಜ.30): ರಾಯಚೂರು ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಯಮ ಉಲ್ಲಂಘಿಸಿ ಸರಕು ಸಾಗಣೆ ವಾಹನ ಫಲಾನುಭವಿಗಳನ್ನು ಅಯ್ಕೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿರುವ ಜಿ.ಕುಮಾರ್ ನಾಯಕ ರಾಯಚೂರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಮನವಿ ಸಲ್ಲಿಸಿದ ರಘುವೀರ ನಾಯಕ, ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸಹಾಯಧನದಲ್ಲಿ ನೀಡುವ ಸರಕು ಸಾಗಣೆ ವಾಹನ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುತ್ತಿರುವದನ್ನು ತಕ್ಷಣ ಕೈಬಿಡಬೇಕು. ಲಾಟರಿ ಅಂದರೆ ಸಿಕ್ಕವರಿಗೆ ಮುಕ್ಕಣ್ಣ ಅನ್ನುವಂತಾಗುತ್ತದೆ. ಇದರಿಂದ ವಯೋಮಾನ ಮೀರುತ್ತಿರುವ ನೈಜ ಫಲಾನುಭವಿಗಳಿಗೆ ಅನ್ಯಾಯಾವಾಗುತ್ತಿದೆ. ಈ ಕುರಿತು  ಅಪರ ಜಿಲ್ಲಾಧಿಕಾರಿಗಳು ರಾಯಚೂರು ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ರಾಯಚೂರುರವರಿಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಜರುಗಿಸದೆ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ.
ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ವಯಸ್ಸು, ವಿದ್ಯಾಬ್ಯಾಸ ಮತ್ತು ಅನುಭವ ಈ ಎಲ್ಲಾ ಮಾನದಂಡಗಳ ಆಧಾರದ ಮೇಲೆ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ. ಆದರೆ ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಈ ಎಲ್ಲಾ ಮಾನದಂಡಗಳನ್ನು ಗಾಳಿಗೆ ತೂರಿ ಕೇವಲ ಲಾಟರಿ ಮೂಲಕ ಆಯ್ಕೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಇಲ್ಲಿಯ ತನಕ ಇದೇ ಇಲಾಖೆಯಿಂದ ಅನೇಕ ಯೋಜನೆಗಳ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಲಾಟರಿ ಮೂಲಕ ಮಾಡಿಲ್ಲ. ಯಾವುದೇ ಯೋಜನೆಗೆ ಅರ್ಜಿ ಕರೆದಾಗ ನೂರಾರು ಅರ್ಜಿ ಬರುವುದು ಸಹಜ. ಅದರಲ್ಲಿ ಅರ್ಹತೆಯನ್ನು ಪರಿಗಣಿಸಬೇಕೆ ವಿನ: ಲಾಟರಿ ಅಲ್ಲ. ವಯೋಮಾನ ಮತ್ತು ವಿದ್ಯಾರ್ಹತೆ ಪರಿಗಣಿಸಬೇಕು. 
ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳನ್ನು ಬಿಟ್ಟು  ಕಾಯ್ದಿರಿಸಿದ ಪಟ್ಟಿ ತಯಾರಿಸಿ ಮುಂದೆ ಟಾರ್ಗೇಟ ಬಂದಾಗ ಈ ಕಾಯ್ದಿರಿಸಿದ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿಗಳು  ಮುಂದಿನ ವರ್ಷ ಅರ್ಜಿ ಕರೆದಾಗ ಪುನಹ ಹೊಸದಾಗಿ ನೂರಾರು ಜನ ಅರ್ಜಿದಾರರು ಅರ್ಜಿ ಹಾಕುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಅವರನ್ನು ಯಾವ ರೀತಿ ಆಯ್ಕೆ ಮಾಡುತ್ತಾರೆ ಮತ್ತು ಕಾಯ್ದಿರಿಸಿದ ಪಟ್ಟಿಯನ್ನು ಏನು ಮಾಡುತ್ತಾರೆ? ಜೊತೆಗೆ  ಕಾಯ್ದಿರಿಸಿದ ಪಟ್ಟಿಯಲ್ಲಿರುವ ಫಲಾನುಭವಿಗಳಿಗೆ ಸೌಲಭ್ಯ ನೀಡಬೇಕು ಎಂದು ಸರಕಾರದ ಸುತ್ತೋಲೆಯಲ್ಲಿ ಇಲ್ಲ. ಅದ್ದರಿಂದ ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸಹಾಯಧನದಲ್ಲಿ ನೀಡುವ ಸರಕು ಸಾಗಣೆ ವಾಹನ ಫಲಾನುಭವಿಗಳನ್ನು ಲಾಟರಿ ಪ್ರಕ್ರಿಯೆಯನ್ನು ಬಿಟ್ಟು ವಯೋಮಾನದ ಆಧಾರದ ಮೇಲೆ ಆಯ್ಕೆ ಮಾಡಬೇಕು ಮತ್ತು ನಿಯಮ ಉಲ್ಲಂಘಿಸಿ ಆಯ್ಕೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ರಘುವೀರ ನಾಯಕ, ಕುಮಾರ್ ನಾಯಕರಿಗೆ  ಮನವಿಯ ಮೂಲಕ ಒತ್ತಾಯಿಸಿದರು. 
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಯಕ, ಮುಖಂಡರಾದ ರಮೇಶ ನಾಯಕ, ವಿರುಪಾಕ್ಷಿ ನಾಯಕ, ವೀರೇಶ ನಾಯಕ, ಹನುಮಂತ ನಾಯಕ, ರಂಗನಾಥ ನಾಯಕ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

No comments:

Post a Comment