ಸ್ಪರ್ಧಾತ್ಮಕ ವಿಷಯಗಳ ಮಾಹಿತಿ ಕಣಜ ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್
![]() |
ಅಶೋಕ ನಾಯಕ ದಿದ್ದಿಗಿ |
ಇದು ಆಧುನಿಕ ಯುಗ, ಈಗ ಏನಿದ್ದರೂ ಕಂಪ್ಯೂಟರ್, ಆಂಡ್ರಾಯ್ಡ್ ಮೊಬೈಲ್ ಪೋನ್ ಗಳದ್ದೇ ದರ್ಬಾರ್. ಬಹುತೇಕರು ಮೊಬೈಲ್ ಇಲ್ಲದೇ ಬದುಕೇ ಇಲ್ಲ ಅಂದುಕೊಂಡಿದ್ದಾರೆ. ಇದೇ ಮೊಬೈಲ್ ಅದೆಷ್ಟೋ ಜನರ ಬದುಕು ಹಾಳಾಗುವಂತೆ ಮಾಡಿದೆ. ಮೊಬೈಲ್ ಗಳನ್ನು ಕೆಟ್ಟ ಕೆಲಸಗಳಿಗೆ ಬಳಸಿಕೊಂಡ ಬಹುತೇಕ ಯುವ ಸಮುದಾಯ ಹಾಳಾಗಿದೆ. ಆದರೆ ಕೆಲವರು ಇದೇ ಮೊಬೈಲ್ ಗಳನ್ನು ಬಳಸಿಕೊಂಡು ಜೀವನದಲ್ಲಿ ಅಂದುಕೊಂಡದನ್ನ ಸಾಧಿಸಿದ್ದಾರೆ. ಆಂಡ್ರಾಯ್ಡ್ ಮೊಬೈಲ್ ಇದ್ರೆ ಸಾಲದು ಅದಕ್ಕೆ ಇಂಟರ್ನೆಟ್ & ವಾಟ್ಸಾಪ್, ಫೇಸ್ಬುಕ್ ಗ್ರುಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಅವಶ್ಯಕ. ಸಾಮಾಜಿಕ ಜಾಲತಾಣಗಳನ್ನ ಅದರಲ್ಲೂ ಹೆಚ್ಚಾಗಿ ಫೇಸ್ಬುಕ್, ವಾಟ್ಸಾಪ್ ಗ್ರುಪ್ ಗಳನ್ನು ಮಾಡಿಕೊಂಡು, ಅವುಗಳನ್ನು ಬಳಸಿಕೊಂಡು ಜಾತಿ, ಧರ್ಮದ ಪ್ರಚಾರ ಮಾಡುವವರು ಬಹಳಷ್ಟು ಜನರಿದ್ದಾರೆ.
ಪ್ರಸ್ತುತ ಸಮಾಜದಲ್ಲಿ ಸ್ವಜಾತಿ ಪ್ರೇಮಿಗಳು ಈ ವಾಟ್ಸಾಪ್ ಮತ್ತು ಫೇಸ್ಬುಕ್ ಗ್ರುಪ್ ಗಳನ್ನು ಮಾಡಿಕೊಂಡು ತಮ್ಮ ತಮ್ಮ ಜಾತಿಯ ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ ಅನ್ಯ ಸಮುದಾಯಗಳನ್ನು ಟೀಕಿಸಲು, ಅನ್ಯ ಧರ್ಮದ ವಿರುದ್ಧ ಬರೆಯಲು ಈ ಸಾಮಾಜಿಕ ಜಾಲತಾಣಗಳು ಬಳಕೆಯಾಗುತ್ತಿವೆ.
ಇಂತಹ ಕಾಲಘಟ್ಟದಲ್ಲಿ ಸಮಾಜಕ್ಕೆ ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸ್ಪರ್ಧಾಳುಗಳಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಇಲ್ಲೊಬ್ಬರು ಎಲೆಮರೆಯ ಕಾಯಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ.
ಹೌದು, ಸಮಾಜಮುಖಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತಯಾರಾಗಿರುವ ಯುವ ಸಮುದಾಯಕ್ಕೆ ಸಹಾಯ, ಸಹಕಾರ ನೀಡುವ ಕೆಲಸವನ್ನು ಕಳೆದ ದಶಕದಿಂದ ಮಾಡುತ್ತಿದ್ದಾರೆ ರಾಯಚೂರು ಜಿಲ್ಲೆ ಲಿಂಗಸುಗೂರಿನ ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಮಾಲಿಕ ಅಶೋಕ ನಾಯಕ ದಿದ್ದಿಗಿ. ಅಶೋಕ ನಾಯಕ ದಿದ್ದಿಗಿಯವರು ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದವರಾಗಿದ್ದಾರೆ. ಇವರು ದಶಕಗಳಿಂದ ಲಿಂಗಸುಗೂರಿನಲ್ಲಿ ಶಿಲ್ಪಾಶ್ರೀ ಕಂಪ್ಯೂಟರ್ಸ್ ಎಂಬ ಸಂಸ್ಥೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಬಹುತೇಕರಿಗೆ ನೆರವಾಗುತ್ತಿದ್ದಾರೆ. ಸಾವಿರಾರು ಜನರು ಈ ಸಂಸ್ಥೆಯ ಸಹಾಯ, ಸಹಕಾರದಿಂದ ಈಗಾಗಲೇ ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ನೋಟ್ಸ್, ಮಾಹಿತಿ, ಉದ್ಯೋಗ ಮಾಹಿತಿ, ಶೈಕ್ಷಣಿಕ ಮಾಹಿತಿ ಸೇರಿದಂತೆ ಅನೇಕ ಮಾಹಿತಿಗಳನ್ನು ಶಿಲ್ಪಾಶ್ರೀ ಕಂಪ್ಯೂಟರ್ ಹೆಸರಿನ ವಾಟ್ಸಾಪ್ ಗ್ರುಪ್ ಗಳ ಮೂಲಕ ದಿನನಿತ್ಯ ನೀಡುತ್ತಿದ್ದಾರೆ. ಅಲ್ಲದೇ ಶಿಲ್ಪಾಶ್ರೀ ಕಂಪ್ಯೂಟರ್ ಹೆಸರಿನಲ್ಲಿ ಅನೇಕ ಗ್ರುಪ್ ಗಳನ್ನು ಮಾಡಿದ್ದು, ಪ್ರತಿಯೊಂದು ಗ್ರುಪ್ ನಲ್ಲೂ 256 ಸದಸ್ಯರು ಇದ್ದಾರೆ. ಅನೇಕ ಅಧಿಕಾರಿಗಳು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬಯಸುವವರು, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಹುದ್ದೆಗಳಲ್ಲಿರುವವರು ಈ ಗ್ರುಪ್ ಗಳಲ್ಲಿದ್ದಾರೆ.
2015ರ ಸಾಲಿನಲ್ಲಿ ಕೆಎಎಸ್ ಪರೀಕ್ಷೆ ಬರೆದು ಮೊನ್ನೆಯಷ್ಟೇ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾಗಿರುವ ಲಿಂಗಸುಗೂರು ತಾಲೂಕಿನ ತಿರುಪತಿ ವಿ ಪಾಟೀಲ್, ಶಿವಾನಂದ ಪೂಜಾರಿ, ಸೋಮಶೇಖರ್ ಬಿರಾದಾರ, ಕೂಡ ಇವರದ್ದೇ ಸಂಸ್ಥೆಯ ಮೂಲಕ ಕೆಎಎಸ್ ಅಪ್ಲಿಕೇಶನ್ ಹಾಕಿದ್ದರು ಅಲ್ಲದೇ ಶಿಲ್ಪಾಶ್ರೀ ಕಂಪ್ಯೂಟರ್ ಗ್ರುಪ್ ಗಳಿಂದ ಅನೇಕ ಮಾಹಿತಿಯನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ.
ಅಲ್ಲದೇ ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್ ಗಳು ಜಿಲ್ಲೆಯ ಲಿಂಗಸುಗೂರು, ಮಸ್ಕಿ, ಮಾನ್ವಿ, ಸಿಂಧನೂರು, ದೇವದುರ್ಗ, ರಾಯಚೂರು, ಸಿರವಾರ ತಾಲೂಕು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಯುವ ಸಮುದಾಯವನ್ನು ಒಳಗೊಂಡಿವೆ.
![]() |
ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್ |
ರಾಜ್ಯದ ವಿವಿಧ ಕಡೆಗಳಲ್ಲಿ ಕೆಲಸ ನಿರ್ವಹಿಸುವ ಬಹುತೇಕರು ಯಾವುದೇ ಅಪ್ಲಿಕೇಶನ್ ಹಾಕುವುದಿದ್ದರೇ ತಮ್ಮ ಕೆಲಸಗಳ ನಡುವೆಯೂ ಶಿಲ್ಪಾಶ್ರೀ ಕಂಪ್ಯೂಟರ್ಸ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುತ್ತಿರುತ್ತಾರೆ, ಇದು ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಜನಪ್ರಿಯತೆಗೆ ಸಾಕ್ಷಿ. ಅಲ್ಲದೇ ಅನೇಕ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಅರ್ಜಿ, ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳ ಪ್ರವೇಶಾತಿ ಅರ್ಜಿಗಳನ್ನು ಇದೇ ಕಂಪ್ಯೂಟರ್ಸ್ ನಲ್ಲಿ ಹಾಕುವುದನ್ನು ಕಾಣಬಹುದಾಗಿದೆ.
ಇನ್ನೂ ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಮಾಲಿಕ ಅಶೋಕ ನಾಯಕ ದಿದ್ದಿಗಿಯವರು ಕೂಡ ಪ್ರತಿಯೊಬ್ಬರನ್ನು ಪ್ರೀತಿ ವಿಶ್ವಾಸದಿಂದ ಕಾಣುವುದಲ್ಲದೇ ಅವರ ಕೆಲಸಗಳನ್ನು ಪ್ರಾಮಾಣಿಕವಾಗಿ ಮುಗಿಸಿಕೊಡುತ್ತಾರೆ. ಇದು ಅವರ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ. ಯಾವುದೇ ಅಭ್ಯರ್ಥಿ ತಮ್ಮ ಸಂಸ್ಥೆಗೆ ಬಂದು ಯಾವುದೇ ಮಾಹಿತಿ ಕೇಳಿದರು ನೀಡುವ ಅಶೋಕ, ವಾಟ್ಸಾಪ್ ಗ್ರುಪ್ ಗಳಲ್ಲಿ ಕೂಡ ಪ್ರತಿನಿತ್ಯ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿರುತ್ತಾರೆ.
ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿಕೊಡುವ ಬಹುತೇಕರ ನಡುವೆಯೂ ತಾನೊಬ್ಬ ಉತ್ತಮ ಶಿಕ್ಷಣವಂತನಾಗಿಯೂ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುವ ಕಾರ್ಯವನ್ನು ಮೈಗೂಡಿಸಿಕೊಂಡು ಸಾಗುತ್ತಿರುವ ಅಶೋಕ ನಾಯಕ ದಿದ್ದಿಗಿಯವರ ಕಾರ್ಯಕ್ಕೆ ಅನೇಕ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಿಂದುಳಿದ ಜಿಲ್ಲೆ, ಬಿಸಿಲನಾಡು, ಬರದನಾಡು ಎಂಬ ಹಣೆಪಟ್ಟಿ ಹಾಗೂ ಬಂಗಾರದ ನಾಡು ಎಂಬ ಬಿರುದು ಪಡೆದಿರುವ ಜಿಲ್ಲೆಯಲ್ಲಿ ಇಂತಹ ನಿಸ್ವಾರ್ಥ ಸೇವೆ ಮಾಡುತ್ತಿರುವ ಅಶೋಕ ನಾಯಕರೊಂದಿಗೆ ಚನ್ನಬಸವ ಗುಡೇದ್ ಕೈಜೋಡಿಸಿದ್ದು ಇವರ ಕಾರ್ಯ ಸಮಾಜಕ್ಕೆ ಮಾದರಿಯಾಗಲಿ ಎಂಬುದೇ ನಮ್ಮ ಆಶಯವಾಗಿದೆ.
-------------------------------
ಅಶೋಕ ನಾಯಕರ ಕಾರ್ಯ ಉತ್ತಮವಾಗಿದೆ:
ಅಶೋಕ ನಾಯಕ ದಿದ್ದಿಗಿಯವರು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯ ಉತ್ತಮವಾಗಿದೆ. ಶಿಲ್ಪಾಶ್ರೀ ಕಂಪ್ಯೂಟರ್ಸ್ ಅನೇಕರಿಗೆ ದಾರಿ ದೀಪವಾಗಿದೆ. ನಾನು ಕೂಡ ಅದೇ ಸಂಸ್ಥೆಯ ವಾಟ್ಸಾಪ್ ಗ್ರುಪ್ ಗಳಲ್ಲಿ ಬರುವ ನೋಟ್ಸ್ ಬಳಸಿಕೊಂಡು ಕೆಎಎಸ್ ಪರೀಕ್ಷೆ ಎದುರಿಸಿದ್ದೇನೆ. ನಾನು ಕೆಎಎಸ್ ಪಾಸ್ ಆಗಲು ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್ ಕೂಡ ಸಹಾಯಕವಾಗಿದೆ.
ಶಿವಾನಂದ ಪೂಜಾರಿ, ನೂತನ ಕೆಎಎಸ್ ಅಧಿಕಾರಿ
---------------------------------
ಶಿಲ್ಪಾಶ್ರೀ ಗ್ರುಪ್ ಗಳು ಉತ್ತಮ ಮಾಹಿತಿ ನೀಡುತ್ತವೆ:
ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಅಶೋಕ ನಾಯಕ ದಿದ್ದಿಗಿಯವರು ಮಾಡಿರುವ ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್ ಗಳು ಉತ್ತಮ ಮಾಹಿತಿ ನೀಡುತ್ತವೆ. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಂಡವರು ಕೆಎಎಸ್ ನಲ್ಲಿ ಯಶಸ್ಸು ಕಾಣಬಹುದಾಗಿದೆ. ಇಂತಹ ಅವಕಾಶಗಳನ್ನು ಯುವಕರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ತಿರುಪತಿ ವಿ ಪಾಟೀಲ್, ನೂತನ ಕೆಎಎಸ್ ಅಧಿಕಾರಿ
----------------------------------
ಶಿಲ್ಪಾಶ್ರೀ ಕಂಪ್ಯೂಟರ್ಸ್ ವಾಟ್ಸಾಪ್ ಗ್ರುಪ್ ನಲ್ಲಿ ಕೆಎಎಸ್, ಐಎಎಸ್, ಪಿಎಸ್ಐ ಸೇರಿದಂತೆ ಪ್ರತಿಯೊಂದು ಸರ್ಕಾರಿ ಹುದ್ದೆಗಳಿಗೆ ಅನುಕೂಲವಾಗುವ ರೀತಿಯ ನೋಟ್ಸ್, ಮಾಹಿತಿಗಳನ್ನು ಅಪ್ಡೇಟ್ ಮಾಡುತ್ತೇವೆ. ಅದು ಪ್ರತಿಯೊಬ್ಬ ವ್ಯಕ್ತಿಗೂ ಅನುಕೂಲವಾಗುವ ರೀತಿಯಲ್ಲಿ ಇರುತ್ತದೆ. ಈ ಸಾರಿ ಈ ಭಾಗದ ಐವರು ಕೆಎಎಸ್ ಪರೀಕ್ಷೆ ಪಾಸಾಗಿದ್ದು, ನನ್ನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಸಂತಸವಾಗುತ್ತದೆ. ನಮ್ಮ ವಾಟ್ಸಾಪ್ ಗ್ರುಪ್ ಸೇರಬಯಸುವವರು ಹೆಸರು, ವಿಳಾಸದೊಂದಿಗೆ ನನ್ನ ವಾಟ್ಸಾಪ್ ಸಂಖ್ಯೆ: 9164075256 ಗೆ ಸಂದೇಶ ಕಳುಹಿಸಬಹುದು.
ಅಶೋಕ ನಾಯಕ ದಿದ್ದಿಗಿ, ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಮಾಲಿಕ
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )
No comments:
Post a Comment