Sunday, November 6, 2022

ಬೇಮಳಖೇಡ ಅಪಘಾತ ಪ್ರಕರಣ: ಉಡಮನಳ್ಳಿಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್

ಉಡಮನಳ್ಳಿ ಗ್ರಾಮದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ನ.06): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಮಳಖೇಡದ ಸರ್ಕಾರಿ ಪ್ರೌಢ ಶಾಲೆಯ ಬಳಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಉಡಮನಳ್ಳಿಯ ಆರು ಜನ ಮಹಿಳಾ ಕಾರ್ಮಿಕರ ಮನೆಗಳಿಗೆ ಮತ್ತು ಕಾಡವಾದದ ಒಬ್ಬ ಮಹಿಳಾ ಕಾರ್ಮಿಕರ ಮನೆಗೆ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಭೇಟಿ ನೀಡಿ, ಮೃತ ಮಹಿಳಾ ಕಾರ್ಮಿಕರ ಕುಟುಂಬದವರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಡಮನಳ್ಳಿ ಗ್ರಾಮಕ್ಕೆ ಭಾನುವಾರ ಬೆಳಗ್ಗೆ ಭೇಟಿ ನೀಡಿದ ಶಾಸಕರು, ಮೃತರ ಮನೆಗಳಿಗೆ ಭೇಟಿ ನೀಡುವ ಮುಂಚೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ಹಳ್ಳಿಯ ಜನರು ಯಾವ ಕಾರಣಕ್ಕಾಗಿ ಬೇರೆ ಬೇರೆ ಊರುಗಳಿಗೆ ಕೆಲಸಗಳಿಗೆ ಹೋಗ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬ ಕಾರಣಕ್ಕಾಗಿ ಪಂಚಾಯತಿಗೆ ಬಂದಿದ್ದೇನೆ ಎಂದರು.
ಬೇಮಳಖೇಡದ ಬಳಿ ಸಂಭವಿಸಿದ ಅಪಘಾತ ನನಗೆ ನೋವುಂಟು ಮಾಡಿದೆ. ನನ್ನ ಕ್ಷೇತ್ರದ ಏಳು ಜನರು ಈ ಘಟನೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ. ಗ್ರಾಮ ಪಂಚಾಯತಿಯಿಂದ ನೀಡುವ ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸುವ ಕೆಲಸ ಆಗಬೇಕಾಗಿದೆ. ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸುವಂತೆ ನಾನು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ನಡೆಯಬಾರದಿದ್ದ ಘಟನೆ ನಡೆದಿದೆ:
ಬೇಮಳಖೇಡದ ಬಳಿ ನಡೆಯಬಾರದಿದ್ದ ಘಟನೆ ನಡೆದು ಹೋಗಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನಾನು ಸಾಧ್ಯವಾದಷ್ಟು ವೈಯಕ್ತಿಕ ಧನಸಹಾಯ ಮಾಡಿದ್ದೇನೆ. ಸರ್ಕಾರದಿಂದ ಪರಿಹಾರ ಒದಗಿಸಿಕೊಡುವ ಕೆಲಸ ಮಾಡುತ್ತೇನೆ. ಗಾಯಾಳುಗಳಿಗೂ ವೈಯಕ್ತಿಕ ಧನಸಹಾಯ ಮಾಡುತ್ತೇನೆ.
ಮೃತರ ಕುಟುಂಬಕ್ಕೆ ಮತ್ತು ಗಾಯಾಳುಗಳ ಕುಟುಂಬಕ್ಕೆ ಸರ್ಕಾರದಿಂದ ಯಾವ್ಯಾವ ರೀತಿಯ ಸೌಲಭ್ಯ ಒದಗಿಸಿಕೊಡಲು ಸಾಧ್ಯವಾಗುತ್ತದೆಯೋ ಆ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತೇನೆ. ಶಾಸಕನಾಗಿ ನಾನು ಏನೆಲ್ಲಾ ಸಹಾಯ ಮಾಡಲು ಸಾಧ್ಯವೋ ಎಲ್ಲಾ ರೀತಿಯ ಸಹಾಯ ಮಾಡುತ್ತೇನೆ.
ಮೃತರ ಕುಟುಂಬದಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾನು ವೈಯಕ್ತಿಕ ಸಹಾಯ ಮಾಡುತ್ತೇನೆ. ಸರ್ಕಾರದಿಂದ ಕೂಡ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತೇನೆ. ಎಲ್ಲರೂ ಸೇರಿ ಆ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗುತ್ತದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಜಮೀನಿಗೆ 24 ತಾಸು ಕರೆಂಟ್:
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಜಮೀನುಗಳಿಗೆ 24 ಗಂಟೆ ವಿದ್ಯುತ್ ಒದಗಿಸಿಕೊಡುವ ಕೆಲಸ ಮಾಡುತ್ತೇವೆ. ಪಕ್ಕದ ರಾಜ್ಯದಲ್ಲಿ ದಿನಪೂರ್ತಿ ರೈತರ ಜಮೀನುಗಳಿಗೆ ವಿದ್ಯುತ್ ನೀಡ್ತಿದ್ದಾರೆ. ನಾವು ಯಾಕ್ ನೀಡಬಾರದು ಎಂಬುದು ನನ್ನ ಯೋಚನೆಯಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.

ಮೃತರ ಮನೆಗಳಿಗೆ ಭೇಟಿ ವೈಯಕ್ತಿಕ ಧನಸಹಾಯ, ಸಾಂತ್ವನ:
ಬೇಮಳಖೇಡದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಉಡಮನಳ್ಳಿ ಗ್ರಾಮದ ಮಹಿಳಾ ಕಾರ್ಮಿಕರಾದ ಗುಂಡಮ್ಮಾ, ರುಕ್ಕಮ್ಮಾ, ಮಂಜುಳಾ, ಜಗದೇವಿ, ಈಶ್ವರಮ್ಮಾ, ಪಾರ್ವತಿ, ಪ್ರಭಾವತಿರವರ ಮನೆಗಳಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು. ಅಲ್ಲಿಯೇ ಇದ್ದ ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಸುನೀಲ್ ಎಂಬ ಯುವಕನ ಮನೆಗೆ ಕೂಡ ಭೇಟಿ ನೀಡಿ, ಯುವಕನಿಗೆ ಬ್ರಿಮ್ಸ್ ನಲ್ಲಿಯೇ ಚಿಕಿತ್ಸೆ ವ್ಯವಸ್ಥೆ ಮಾಡಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದರು. ಬಳಿಕ ಕಾಡವಾದಕ್ಕೆ ಭೇಟಿ ನೀಡಿ, ಬೇಮಳಖೇಡದ ಅಪಘಾತದಲ್ಲಿ ಮೃತಪಟ್ಟಿದ್ದ ಮಹಿಳೆಯ ಗಂಡನ ಮನೆಯವರನ್ನು ಭೇಟಿಯಾಗಿ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂತೋಷ ಎನ್ ಚೌಕಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ಚಾಂಗಲೇರಾ, ಮುಖಂಡರಾದ ಸಂತೋಷ ರಾಸೂರ, ಮಲ್ಲಪ್ಪಾ ಮನ್ನಾಎಖೇಳ್ಳಿ, ಬಾಬುರಾವ್ ಬೈರೆ, ಗುಂಡಪ್ಪ ಬಂಡಿಕಾರ್, ಸುಧಾಕರ್ ನಿಂಗ್ ನಾಯಕ, ರವಿ, ಶ್ರೀಮಂತ, ರಿಯಾಜ್, ವಿನೋದ್, ಅಶೋಕರೆಡ್ಡಿ ಗಾಳಿ, ಶಿವಕುಮಾರ್, ಅಶೋಕ್ ವಡ್ಡರ್, ಮಾರುತಿ ನಾಟೀಕರ್, ಗುಂಡಪ್ಪ ಕುರುಮಣ್ಣನವರ್, ಅಮೃತ್ ಕುರಕೋಟಿ, ನರಸಿಂಗ್ ಬಂಟ್, ಬೀಮ್ಶಾ ಐನಳ್ಳಿ, ಅನಿಲ್, ಸಂತೋಷ, ಸೂರ್ಯಕಾಂತ್ ದಂಡಿ ಸೇರಿದಂತೆ ಅನೇಕರಿದ್ದರು.

+++++++++++++++++++

ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಹಿಳೆಯರ ಆರೋಗ್ಯ ವಿಚಾರಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ನ.06): ಬೇಮಳಖೇಡದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಉಡಮನಳ್ಳಿಯ ಮಹಿಳಾ ಕೂಲಿ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದ ಬಳಿಕ, ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡು ಬ್ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಕೂಲಿ ಕಾರ್ಮಿಕರಾದ ಮೀನಾಕ್ಷಿ, ಜಯಶೀಲಾ, ಗೋದಾವರಿ, ಶಕುಂತಲಾ, ಶುಬ್ಬಮ್ಮ, ಪಾರ್ವತಿ, ಸರಸ್ವತಿ, ಮಾರತಮ್ಮ, ಬೆಬಿ ಎಂಬುವವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಧೈರ್ಯದಿಂದ ಇರುವಂತೆ ತಿಳಿಸಿದರು.
ಇದೇ ವೇಳೆ ಗಾಯಾಳುಗಳ ಕುಟುಂಬದವರಿಗೆ ವೈಯಕ್ತಿಕ ಧನಸಹಾಯ ಮಾಡಿ, ಸರ್ಕಾರದಿಂದ ಉಚಿತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕಾಗಿದೆ. ಗಾಯಾಳುಗಳು ಕನಿಷ್ಠ ಮೂರು ನಾಲ್ಕು ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿರುವುದರಿಂದ ಸರ್ಕಾರ ಗಾಯಾಳುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಬೇಮಳಖೇಡದ ಅಪಘಾತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಯ ಜೊತೆಗೆ ಸರ್ಕಾರದಿಂದ ಆರ್ಥಿಕ ನೆರವು ನೀಡುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ನಂತರ ಬ್ರಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ವತಿಯಿಂದ ನಡೆಯುತ್ತಿರುವ ಬ್ರಿಮ್ಸ್ ಸ್ವಚ್ಚತಾ ಕರ್ಮಿಗಳ ಅಹೋರಾತ್ರಿ ನಿರಂತರ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಡಿಹೆಚ್ಒ ರತೀಕಾಂತ್ ಸ್ವಾಮಿ, ಶಿವಕುಮಾರ್ ಶೆಟ್ಕರ್, ಡಾ. ಅಂತಪ್ಪ, ಸುರೇಶ ಹಿಪ್ಪಳಗಾವ್, ಡಾ. ಮೇಟಾರೆ, ಸಂತೋಷ ರಾಸೂರ, ಸಂತೋಷ ಎನ್ ಚೌಕಿ, ಮಲ್ಲಪ್ಪ ಮನ್ನಾಎಖೇಳ್ಳಿ, ಅಭಿ ಕಾಳೆ, ಅನಿಲ್ ಬೇಮಳಖೇಡ ಸೇರಿದಂತೆ ಅನೇಕರಿದ್ದರು. ಬಳಿಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ನಗರದ ವಾಲಿಶ್ರೀ ಆಸ್ಪತ್ರೆಗೆ ಭೇಟಿ ನೀಡಿ, ಬೇಮಳಖೇಡ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಟೋ ಚಾಲಕನ ಆರೋಗ್ಯ ವಿಚಾರಿಸಿ, ವೈಯಕ್ತಿಕ ಧನಸಹಾಯ ಮಾಡಿದರು.
Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Youth Brigade -R Bandeppa Kashempur #bandeppa #khashempur #bidar #south #MLA #ಬಂಡೆಪ್ಪ #ಖಾಶೆಂಪುರ್ #ಬೀದರ್ #ದಕ್ಷಿಣ #ಕ್ಷೇತ್ರ #ಶಾಸಕ 

No comments:

Post a Comment