ಬೀದರ್ (ನ.27): ಬೀದರ್ ಕನ್ನಡ ಶ್ರೇಷ್ಠವಾದ ಕನ್ನಡವಾಗಿದೆ. ಪಕ್ಕದಲ್ಲೇ ತೆಲಂಗಾಣ, ಮಹಾರಾಷ್ಟ್ರ ರಾಜ್ಯವಿದ್ದು, ತೆಲಗು, ಮರಾಠಿಗಳ ನಡುವೆ ಕೂಡ ಬೀದರ್ ನಲ್ಲಿರುವ ನಾವು ನಮ್ಮ ತನವನ್ನು ಬಿಟ್ಟುಕೊಡದೆ ನಮ್ಮ ಭಾಷೆಯನ್ನು ಉಳಿಸಿ, ಬೆಳಸಿಕೊಂಡು ಸಾಗುತ್ತಿದ್ದೇವೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ, ಗಂಗನಪಳ್ಳಿ ಪರಿವಾರ, ಸಿಕಿಂದ್ರಾಪೂರ ಪರಿವಾರ ಬೀದರ್ ಗಳ ಸಂಯುಕ್ತಾಶ್ರಯದಲ್ಲಿ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಭಾನುವಾರ ನಡೆದ ಶಿಕ್ಷಕ - ಸಾಹಿತಿ ಡಾ. ಸಂಜುಕುಮಾರ ಅತಿವಾಳೆ ಸಂಪಾದಿಸಿರುವ ಭಾವಗಂಗೆ ಕೃತಿ ಲೋಕಾರ್ಪಣೆ ಹಾಗೂ ಸಾಹಿತಿ - ಕಲಾವಿದರ ಸಂಗಮ ಸಾಂಸ್ಕೃತಿಕ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೀದರ್ ಭಾಷೆಯೇ ದೊಡ್ಡ ಸಾಹಿತ್ಯವಾಗಿದೆ. ಇಲ್ಲಿನ ಕನ್ನಡ ವಿಶೇಷ ಕನ್ನಡವಾಗಿದೆ ಎಂದರು.
ಬೀದರ್ ಭಾಗದ ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಅಭಿಯಾನ ಶುರು ಮಾಡಬೇಕಾಗಿದೆ. ನಮ್ಮ ಕನ್ನಡ ಭಾಷೆಯ ಉಳಿವಿಗಾಗಿ ದೊಡ್ಡಮಟ್ಟದ ಅಭಿಯಾನ ಮಾಡಬೇಕಾಗಿದೆ. ನಾವು ಬೆಂಗಳೂರಿನಂತ ಮಹಾನಗರಗಳ ಕಡೆಗೆ ಹೋಗುತ್ತಿದ್ದೇವೆ. ಆ ಮೂಲಕ ಬೀದರ್ ಭಾಷೆಯನ್ನು ಮರೆಯಿತ್ತಿದ್ದೇವೆ. ಬೀದರ್ ಕನ್ನಡ ದೊಡ್ಡ ಸಾಹಿತ್ಯವಾಗಿದೆ. ಅದನ್ನು ಉಳಿಸಿಕೊಂಡು ಸಾಗಬೇಕಾಗಿದೆ.
ಕನ್ನಡ ಸಾಹಿತ್ಯ, ಕನ್ನಡ ಭಾಷೆ ಉಳಿಸಿದ ಶ್ರೇಯಸ್ಸು ಯಾರಿಗಾದರೂ ಸಿಗುತ್ತದೆ ಎಂದರೇ ಅದು ಬೀದರ್ ನವರಿಗೆ ಸಲ್ಲುತ್ತದೆ. ಸಾಹಿತ್ಯದ ಜೊತೆ ಜೊತೆಗೆ ಬೀದರ್ ಭಾಷೆ ಉಳಿಸುವುದು ಸಹ ನಮ್ಮೆಲ್ಲರ ದೊಡ್ಡಮಟ್ಟದ ಕರ್ತವ್ಯವಾಗಿದೆ. ಭಾಷೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡೋಣ. ಸಾಹಿತಿಗಳು ಬೀದರ್ ಭಾಷೆ ಉಳಿಸುವ ಕೆಲಸ ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ವಿಧಾನ ಪರಿಷತ್ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆರವರು ಮಾತನಾಡಿ, ಸಾಹಿತಿ ಗಂಗನಪಳ್ಳಿರವರು ಸಾಹಿತ್ಯಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ. ಅವರು ಕನ್ನಡ ಸಾಹಿತ್ಯಕ್ಕೆ ದೊಡ್ಡಮಟ್ಟದ ಕೊಡುಗೆ ನೀಡಿದ್ದಾರೆ. ಅವರು ಐವತ್ತು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದಾರೆ. ಅವರ ಸಾಹಿತ್ಯದ ಸೇವೆ ಇವತ್ತು ಪುಸ್ತಕ ರೂಪದಲ್ಲಿ ಹೊರಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಒಬ್ಬ ಹಿರಿಯ ಜೀವಿಯ ಸಾಹಿತ್ಯ ಸೇವೆಯನ್ನು ಗುರುತಿಸುವ ನಿಟ್ಟಿನಲ್ಲಿ ಎಂಬತ್ತೇರಡು ಜನ ಸಾಹಿತಿಗಳು ಮುನ್ನುಡಿ, ಇನ್ನೂಡಿ ಬರೆದಿರುವ ಈ ಪುಸ್ತಕವನ್ನು ಎಲ್ಲರೂ ಖರೀದಿಸಿ ಓದಬೇಕು. ಆ ಮೂಲಕ ಸಾಹಿತಿಗಳಿಗೆ ಶಕ್ತಿ ತುಂಬಬೇಕೆಂದು ವಿಧಾನ ಪರಿಷತ್ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆರವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಗಂದಗೆ, ಭಾವಗಂಗೆ ಕೃತಿಯ ಸಂಪಾದಕ ಸಂಜೀವಕುಮಾರ್ ಅತಿವಾಳೆರವರು ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ, ಹಿರಿಯ ಸಾಹಿತಿ ಎಂ.ಜಿ ಗಂಗನಪಳ್ಳಿ, ಡಾ. ರಾಜಶೇಖರ ಜಮದಂಡಿ, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಗುರಮ್ಮ ಸಿದ್ದಾರೆಡ್ಡಿ, ಪುಣ್ಯವತಿ ವಿಸಾಜಿ, ಅಮೃತರಾವ್ ಚಿಮಕೋಡೆ, ಸುರೇಶ ಚನ್ನಶೆಟ್ಟಿ, ಕವಿತಾ ಸ್ವಾಮಿ, ಡಾ. ಶಾಮರಾವ್ ನೆಲವಾಡೆ, ರೇಣುಕಾ ಮಳ್ಳಿ, ಲಕ್ಷ್ಮಣ ಮೇತ್ರೆ ಸೇರಿದಂತೆ ಅನೇಕರಿದ್ದರು.
No comments:
Post a Comment