Tuesday, December 20, 2022

ನಮ್ಮ ಪಾಲಿನ ನೀರು ಉಳಿಸಲು ಮುಖ್ಯಮಂತ್ರಿಗಳು ಕ್ರಮಕೈಗೊಳ್ಳಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ಡಿ.20): ನೀರಾವರಿ ವಿಷಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ನಮ್ಮ ಬೀದರ್ ಜಿಲ್ಲೆಯಾಗಿದೆ. ನಮ್ಮ ಕರ್ನಾಟಕದ ಪಾಲಿನ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಒತ್ತಾಯಿಸಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಎರಡನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಬೀದರ್ ಜಿಲ್ಲೆ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಈಶ್ವರ ಖಂಡ್ರೆರವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉಪಪ್ರಶ್ನೆ ಕೇಳಿ ಅವರು ಮಾತನಾಡಿದರು.

ಗೋದಾವರಿ ಬೇಸಿನ್ ನಲ್ಲಿ 22 ಟಿ.ಎಮ್.ಸಿ ನೀರಿನ ಅಲೊಕೇಶನ್ ಇದೆ ಅಂತ ಹೇಳಿದ್ದಾರೆ. ಆದರೆ ಎಲ್ಲಾ ಸೇರಿ 10 ಟಿ.ಎಮ್.ಸಿ ನೀರನ್ನು ಸಹ ನಾವು ಬಳಕೆ ಮಾಡಿಕೊಳ್ಳುತ್ತಿಲ್ಲ. ನಮ್ಮ ಪಾಲಿನ ನೀರು ವ್ಯರ್ಥವಾಗಿ ಪಕ್ಕದ ತೆಲಂಗಾಣ ರಾಜ್ಯಕ್ಕೆ ಹರಿದು ಹೋಗುತ್ತಿದೆ. 2019-20ರಲ್ಲಿ ಬೀದರ್ ಜಿಲ್ಲೆಯ ನೀರಾವರಿ ಯೋಜನೆಗಳಿಗಾಗಿ 375 ಕೋಟಿ ರೂ. ಬಜೆಟ್ ನಲ್ಲಿ ಕೊಟ್ಟು ಸುಮಾರು 33 ಕೆರೆ ತುಂಬಿಸಲು ಅಲೊಕೇಶನ್ ಕೊಡಲಾಗಿತ್ತು. ಆದರೆ ಇದುವರೆಗೂ ಆ ಯೋಜನೆ  ವಿಷಯದಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ನಮ್ಮ ಪಾಲಿನ ನೀರನ್ನು ನಾವು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳಬೇಕು. ಬಚಾವತ್ ಆಯೋಗದ ತೀರ್ಪಿನನ್ವಯ ನೀರಿನ ಹಂಚಿಕೆಯಾಗಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ನಾವು ನೀರನ್ನು ಉಪಯೋಗ ಮಾಡಿಕೊಳ್ಳುತ್ತಿದ್ದೇವೆ. ನಾಲ್ಕು ಬ್ಯಾರೇಜ್ ಗಳಿಗೆ ನೀರು ಹೋಗುತ್ತಿಲ್ಲವೆಂದು ಖಂಡ್ರೆಯವರು ಹೇಳಿದ್ದಾರೆ. ನಾನು ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಲು ತಿಳಿಸುತ್ತೇನೆ. ಅಡೆತಡೆಗಳಿದ್ದಲ್ಲಿ ಪರಿಹರಿಸಲು ಸೂಚಿಸುತ್ತೇನೆ. 22.37 ಟಿ.ಎಮ್.ಸಿ ನೀರನ್ನು ಬಳಕೆ ಮಾಡಿಕೊಳ್ಳುತ್ತಿಲ್ಲವೆಂದು ಖಾಶೆಂಪುರ್ ರವರು ಹೇಳಿದ್ದಾರೆ. ನಾವು ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಪ್ರಾಜೆಕ್ಟ್ ಗಳನ್ನು ಅನುಮೋದನೆ ಮಾಡಿದ್ದಿವಿ. ಕೆಲವು ಪ್ರಾಜೆಕ್ಟ್ ಗಳು ಮುಗಿದಿವೆ. ಕೆಲವು ಪ್ರಗತಿಯಲ್ಲಿವೆ. ಗೋದಾವರಿ ನೀರನ್ನು ಖಂಡಿತವಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳರವರು ಉತ್ತರದಲ್ಲಿ ತಿಳಿಸಿದರು.

ಸದನದಲ್ಲಿ ಯಾವುದೇ ಕಾರಣಕ್ಕೂ ತಪ್ಪು ತಪ್ಪಾದ, ಸುಳ್ಳು ಮಾಹಿತಿಗಳನ್ನು, ಆಶ್ವಾಸನೆಗಳನ್ನು ನೀಡಬೇಡಿ. ಸರಿಯಾದ ಪರಿಹಾರಾತ್ಮಕ ಉತ್ತರ ನೀಡಿ, ಸರ್ಕಾರ ನಿಮ್ಮದಿದೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಚಿವರನ್ನು ಒತ್ತಾಯಿಸಿದರು.

No comments:

Post a Comment