Tuesday, December 27, 2022

ಕೂಡಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

 


ಕೂಡಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ಡಿ.27): ನಮ್ಮ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಗತ್ಯವಾಗಿದ್ದು,  ಕೂಡಲೇ ಕ್ಷೇತ್ರದೆಲ್ಲಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಏಳನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಪ್ರಶ್ನೋತ್ತರದ ವೇಳೆ ಜಲಜೀವನ್ ಮಿಷನ್‌ ಯೋಜನೆಗೆ ಸಂಬಂಧಿಸಿದ ಪ್ರಶ್ನೆ ಕೇಳಿ ಅವರು ಮಾತನಾಡಿದರು.

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಮಠಾಣಾ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಮಾತ್ರ ಮಲ್ಟಿ ವಿಲೇಜ್ ಸ್ಕೀಮ್ ಜಾರಿಯಿದೆ. ಮನ್ನಾಎಖ್ಖೇಳ್ಳಿ ಭಾಗದ 31 ಹಳ್ಳಿಗಳು, ಬಗದಲ್ ಭಾಗದ 38 ಹಳ್ಳಿಗಳು ಸೇರಿದಂತೆ ಎಲ್ಲಾ ಹಳ್ಳಿಗಳಿಗೂ ಮಲ್ಟಿ ವಿಲೇಜ್ ಸ್ಕೀಮ್ ನಲ್ಲಿ ನೀರಿನ ಸೌಲಭ್ಯ ಒದಗಿಸಿಕೊಡಬೇಕು. ಶೀಘ್ರದಲ್ಲೇ ಕ್ಯಾಬಿನೆಟ್ ನಲ್ಲಿ ಪಾಸ್ ಮಾಡಿ ಯೋಜನೆ ಜಾರಿಗೊಳಿಸಬೇಕು.

ನಮ್ಮ ಭಾಗದಲ್ಲಿ ಬೋರ್ವೆಲ್ ಆಧಾರಿತವಾಗಿ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಬೋರ್ವೆಲ್ ಗಳಲ್ಲಿ ಇವತ್ತು ಇರುವ ನೀರು ನಾಳೆ ಇರುವುದಿಲ್ಲ. ಹಾಗಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೆ ತರಬೇಕಾಗಿದೆ. ಮನ್ನಾಎಖ್ಖೇಳ್ಳಿ, ಬಗದಲ್ ಭಾಗಗಳ ಸುಮಾರು 69 ಹಳ್ಳಿಗಳು ಸೇರಿದಂತೆ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೂ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಜಾರಿಗೊಳಿಸಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

 ಕೂಡಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

ಇದು ಕೇವಲ ನನ್ನ ಕ್ಷೇತ್ರದ ಸಮಸ್ಯೆಯಲ್ಲ, ರಾಜ್ಯದ ಸಮಸ್ಯೆ:

ಜಲಜೀವನ್ ಮಿಷನ್ ಯೋಜನೆ ಕೇವಲ ನನ್ನ ಕ್ಷೇತ್ರದಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಸಮಸ್ಯೆಯಾಗಿದೆ. ನಾವು ಈ ಯೋಜನೆಯನ್ನು ಮೊದಲು ಸ್ವಾಗತಿಸಿದ್ದೇವು. ಕೇಂದ್ರ ಸರ್ಕಾರ ದುಡ್ಡು ಕೊಡ್ತಿದೆ. ಮನೆಮನೆಗೆ ನೀರು ಹೋಗ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದೇವು. ಆದರೆ ಪ್ರಾಯೋಗಿಕವಾಗಿ ನೋಡಿದಾಗ ಸಮಸ್ಯೆಯಿದೆ. ನೀರು ನೀಡುವ ಸಲುವಾಗಿ ನಡುರಸ್ತೆಯನ್ನು  ಅಗೆಯುತ್ತಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬೇಸರ ವ್ಯಕ್ತಪಡಿಸಿದರು.

 

ನಾವು ಕಷ್ಟಪಟ್ಟು ರಸ್ತೆ ಮಾಡಿಸಿರುತ್ತೇವೆ:

ನಾವು ಕಷ್ಟಪಟ್ಟು ಯಾವ್ಯಾವೋದೋ ಯೋಜನೆಗಳಲ್ಲಿ ರಸ್ತೆಗಳನ್ನು ಮಾಡಿಸಿದ್ದೇವೆ. ಹಿಂದೆ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ ಸುವರ್ಣ ಗ್ರಾಮಗಳಲ್ಲಿ ಸಿಸಿ ರಸ್ತೆ ಮಾಡಿಸಿದ್ದೇವೆ. ಜೆಜೆಎಮ್ ನವರು ನಡುರಸ್ತೆಯಲ್ಲಿ 1.50 ಅಡಿ ರಸ್ತೆ ಕಟ್ ಮಾಡಿ, ಎಸ್ಡಿಪಿ ಪೈಪ್ ಹಾಕುತ್ತಿದ್ದಾರೆ. ಯಾವುದಾದರು ಒಂದು ದೊಡ್ಡ ಲಾರಿ ಬಂದರೆ ಪೈಪ್ ಗಳು ಕಂಪ್ಲಿಟ್ ಡ್ಯಾಮೇಜ್ ಹಾಗುತ್ತವೆ. ಅದರಿಂದ ಇದನ್ನು ಮರುಪರಿಶೀಲನೆ ಮಾಡಬೇಕಾಗಿದೆ. ಎಸ್ಡಿಪಿ ಬದಲಿಗೆ ಎಮ್ಎಸ್ ಪೈಪ್ ಹಾಕಿದರೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಲಹೆ ನೀಡಿದರು.

ಉತ್ತರ ನೀಡಿ ಮಾತನಾಡಿದ ಸಚಿವ ಸಿ.ಸಿ ಪಾಟೀಲ್ ರವರು, ಬಂಡೆಪ್ಪ ಖಾಶೆಂಪುರ್ ರವರು ಒಳ್ಳೆಯ ಪ್ರಶ್ನೆ ಕೇಳಿದ್ದಾರೆ. ಇದು ಅವರ ಕ್ಷೇತ್ರಕ್ಕೆ ಮಾತ್ರ ಸಿಮಿತವಾದದ್ದಲ್ಲ. ರಾಜ್ಯಾದ್ಯಂತ  ಇರುವ ಪ್ರಶ್ನೆಯಾಗಿದೆ. ಜೆಜೆಎಮ್ ನವರು ಕಟ್ ಮಾಡಿದ ರಸ್ತೆ ಸರಿಪಡಿಸುತ್ತಾರೆ. ಒಂದು ವೇಳೆ ರಸ್ತೆ ಸರಿ ಪಡಿಸದಿದ್ದಲ್ಲಿ ಅಂತವರ ಬಿಲ್ ನೀಡಬಾರದು ಎಂದು ಜಿಲ್ಲಾ ಪಂಚಾಯತಿ ಸಿಇಒರವರಿಗೆ ಸೂಚನೆ ನೀಡಲಾಗಿದೆ. ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ಮತ್ತೇ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು.

ಮರುಪ್ರಶ್ನೆ ಕೇಳಿ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಕಮಠಾಣಾ ವ್ಯಾಪ್ತಿಯ 18 ಹಳ್ಳಿಗಳಿಗೆ ಮಾತ್ರ ಬಹುಗ್ರಾಮ ಕುಡಿಯುವ ನೀರು ಸಿಗುತ್ತಿವೆ. ಇನ್ನುಳಿದಂತೆ ಮನ್ನಾಎಖ್ಖೇಳ್ಳಿಯ 31 ಹಳ್ಳಿಗಳು, ಬಗದಲ್ 38 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನು ತಾಂತ್ರಿಕ ಹಂತದಲ್ಲಿವೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಸರ್ಕಾರದಲ್ಲಿ ದುಡ್ಡು ಕೊಳೆಯುತ್ತಿದೆ. ಇಲಾಖೆಯ ಎಮ್.ಡಿ ಸೇರಿದಂತೆ ಅನೇಕ ಅಧಿಕಾರಿಗಳಿಗೆ ನಾನು ಸುಮಾರು ಸಲ ಮಾತನಾಡಿದ್ದೇನೆ. ಡಿಪಿಆರ್ ತರೆಸಿಕೊಂಡು 08-10 ದಿನಗಳಲ್ಲಿ ಕ್ಯಾಬಿನೆಟ್ ಗೆ ತಂದು ಕ್ಲಿಯರ್ ಮಾಡಿ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಯಾವುದೇ ರೀತಿಯಲ್ಲಿ ವಿಳಂಭವಾಗದಂತೆ ಆದಷ್ಟು ಬೇಗ ಈ ಯೋಜನೆ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಸಚಿವರು ತಿಳಿಸಿದರು. ಶಾಸಕರಾದ ರಮೇಶ್ ಕುಮಾರ್, ಹೆಚ್.ಕೆ ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡರವರು ಸೇರಿದಂತೆ ಅನೇಕರು ಶಾಸಕ ಬಂಡೆಪ್ಪ ಖಾಶೆಂಪುರ್ ರವರೊಟ್ಟಿಗೆ ಧ್ವನಿಗೂಡಿಸಿದರು.

No comments:

Post a Comment