Monday, December 26, 2022

ಕಾರಂಜಾ ಸಂತ್ರಸ್ತ ರೈತರ ಪರ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್

 


ಕಾರಂಜಾ ಸಂತ್ರಸ್ತ ರೈತರ ಪರ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ಡಿ.26): ಸೂಕ್ತ ಪರಿಹಾರಕ್ಕಾಗಿ ಸುಮಾರು 180 ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಬೀದರ್ ಜಿಲ್ಲೆಯ ಕಾರಂಜಾ ಸಂತ್ರಸ್ತ ರೈತರಿಗೆ ಕೂಡಲೇ ನ್ಯಾಯಯುತವಾದ ಪರಿಹಾರ ಒದಗಿಸಿಕೊಡಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಕಾರಂಜಾ ಸಂತ್ರಸ್ತ ರೈತರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಆರನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಕಾರಂಜಾ ಸಂತ್ರಸ್ತ ರೈತರ ವಿಷಯವಾಗಿ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಕಾರಂಜಾ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಬೀದರ್ ಜಿಲ್ಲೆಯಲ್ಲಿರುವ ಒಂದೇ ಒಂದು ನೀರಾವರಿ ಯೋಜನೆ ಕಾರಂಜಾ. ಕಾರಂಜಾ ನೀರಾವರಿ ಯೋಜನೆಗೆ 1964ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿರವರು ಅಡಿಗಲ್ಲು ಹಾಕಿದ್ದರು. ಅಂದಿನಿಂದ ಇಲ್ಲಿಯವರೆಗೂ ರೈತರು ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಿಕೊಂಡು ಬರುತ್ತಿದ್ದಾರೆ. ಕೋರ್ಟ್ ಗೆ ಹೋದವರಿಗೆ ಸ್ಪಲ್ಪಮಟ್ಟಿಗೆ ನ್ಯಾಯ ದೊರೆತಿದೆ. ಆದರೇ ಬಹಳಷ್ಟು ರೈತರು ಕೋರ್ಟ್ ಗೆ ಹೋಗಿಲ್ಲ. ಆಗಾಗಿ ಅವರು ಪರಿಹಾರದಿಂದ ವಂಚಿತರಾಗಿದ್ದಾರೆ.

ಕಾರಂಜಾ ಜಲಾಶಯದಿಂದ 28 ಗ್ರಾಮಗಳು ಮುಳಗಡೆಯಾಗಿವೆ. ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆದರೇ ಪರಿಪೂರ್ಣ ಮೂಲಭೂತ ಸೌಲಭ್ಯಗಳು ಆ ಗ್ರಾಮಗಳಿಗೆ ಸಿಕ್ಕಿಲ್ಲ. ಕಾರಂಜಾದಿಂದ ತೊಂದರೆಗೆ ಸಿಲುಕಿದವುಗಳ ಪೈಕಿ ಹೆಚ್ಚಿನ ಗ್ರಾಮಗಳು ನನ್ನ ಕ್ಷೇತ್ರದಲ್ಲಿ ಬರುತ್ತವೆ. ಮೂರು ನಾಲ್ಕು ವರ್ಷಗಳಿಂದ ಹೆಚ್ಚಿನ ಮಳೆ ಬಂದಿರುವುದರಿಂದ ಕಾರಂಜಾ ಜಲಾಶಯ ಭರ್ತಿಯಾಗುತ್ತಿದ್ದು, ಎಫ್.ಆರ್.ಎಲ್ ಗಿಂತ ಹೆಚ್ಚಿಗೆ ನೀರು ನಿಲ್ಲುತ್ತಿದೆ.

ನಾನು ಈ ಹಿಂದೆ ಎರಡು ಬಾರಿ ಕಾರಂಜಾ ಸಂತ್ರಸ್ತ ರೈತರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಆಗ ನೀರಾವರಿ ಸಚಿವರಾದ ಗೋವಿಂದ ಕಾರಜೋಳರವರು ಕೂಡಲೇ ಪರಿಹಾರ ಕೊಡಿಸ್ತಿನಿ ಅಂತ ಹೇಳಿದ್ದರು. ಇಲ್ಲಿಯವರೆಗೂ ಪರಿಹಾರ ಕೊಡಿಸಿಲ್ಲ. 180 ದಿನಗಳಿಂದ ಬೀದರ್ ನಗರದಲ್ಲಿರುವ ಉಸ್ತುವಾರಿ ಸಚಿವರ ಕಛೇರಿ ಮುಂಭಾಗದಲ್ಲಿ ಕಾರಂಜಾ ಸಂತ್ರಸ್ತ ರೈತರು ಹೋರಾಟ ನಡೆಸುತ್ತಿದ್ದಾರೆ. ಉಸ್ತುವಾರಿ ಸಚಿವರು ಇಲ್ಲಿಯವರೆಗೂ ಅವರ ಮನವಿಯನ್ನು ಸ್ವೀಕರಿಸಿಲ್ಲ.

ಸಂತ್ರಸ್ತ ರೈತರು ಈಗ ಎಲ್ಲಾ ಶಾಸಕರ ಮನೆಗಳ ಮುಂದೆ ಧರಣಿ ಮಾಡುತ್ತಿದ್ದಾರೆ. ಆಗಾಗಿ ಕೂಡಲೇ ಪರಿಹಾರ ಒದಗಿಸಿಕೊಡಬೇಕು. ಈ ಹಿಂದೆ ನಾವು ಸರ್ಕಾರದಲ್ಲಿದ್ದಾಗ ನಾನು ಬೀದರ್ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದೆ. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದರು. ವಿಧಾನಸೌಧದ ಮೂರನೇ ಮಹಡಿಯಲ್ಲಿ ದೊಡ್ಡಮಟ್ಟದ ಸಭೆ ನಡೆಸಿದ್ದೇವು. ರೈತರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದೇವು. ಈಗ ನಿಮ್ಮ ಸರ್ಕಾರವಿದೆ. ರೈತರ ಪರವಾಗಿ ಕಾಳಜಿ ವಹಿಸಿ, ಕಾರಂಜಾ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಒತ್ತಾಯಿಸಿದರು.

ಉತ್ತರ ನೀಡಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿರವರು, ನಾನು ಈ ವಿಷಯದ ಕುರಿತು ನೀರಾವರಿ ಸಚಿವರೊಂದಿಗೆ ಮಾತನಾಡುತ್ತೇನೆ. ಒಂದು ವಾರದೊಳಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮತ್ತು ಹೋರಾಟಗಾರರೊಟ್ಟಿಗೆ ಸಭೆ ನಡೆಸಿ, ತೀರ್ಮಾನ ಕೈಗೊಳ್ಳುತ್ತೇವೆಂದು ತಿಳಿಸಿದರು.

==============================================

ಚಿಟಗುಪ್ಪಾ ತಾಲೂಕು ಅಭಿವೃದ್ಧಿಗೊಳಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

 

ಬೀದರ್ (ಡಿ.26): ಬೀದರ್ ಜಿಲ್ಲೆಯ ಚಿಟಗುಪ್ಪಾ, ಜಗದೀಶ್ ಶೆಟ್ಟರ್ ರವರ ಕಾಲದಲ್ಲಿ ತಾಲೂಕು ಕೇಂದ್ರವೆಂದು ಘೋಷಣೆಯಾಗಿದೆ. ಆದರೆ ಅಭಿವೃದ್ಧಿಗಾಗಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಚಿಟಗುಪ್ಪಾ ತಾಲೂಕು ಕೇಂದ್ರಕ್ಕೆ ಬೇಕಾದ ಸೌಕರ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡಬೇಕೆಂದು ಸದನದಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ 15ನೇ ವಿಧಾನ ಸಭೆಯ 14ನೇ ಅಧಿವೇಶನ (ಚಳಿಗಾಲದ ಅಧಿವೇಶನ)ದ ಆರನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಪ್ರಶ್ನೋತ್ತರದ ವೇಳೆ ಮಾತನಾಡಿದ ಅವರು, ಚಿಟಗುಪ್ಪಾವನ್ನು ಜಗದೀಶ್ ಶೆಟ್ಟರ್ ರವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ತಾಲೂಕು  ಕೇಂದ್ರವೆಂದು ಘೋಷಣೆ ಮಾಡಿದ್ದರು.

ಚಿಟಗುಪ್ಪಾ ತಾಲೂಕು ಕೇಂದ್ರಕ್ಕೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡುವಂತೆ ನಾನು ಈ ಹಿಂದೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೆ. ಇದುವರೆಗೂ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ ಈಗಲಾದರೂ ಅಭಿವೃದ್ಧಿ ಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

No comments:

Post a Comment