Tuesday, January 28, 2020

ಪಾಮನಕಲ್ಲೂರು: ನಿಜ ಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ


ದೊರೆ ನ್ಯೂಸ್ ಕನ್ನಡ (ಪಾಮನಕಲ್ಲೂರು ಜ.28): ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಮತ್ತು ಸಮುದಾಯ ಭವನ ಉದ್ಘಾಟನಾ ಸಮಾರಂಭ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 
ಗ್ರಾಮದ ಹಳ್ಳಿಕಟ್ಟಿಯಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಗಂಗಾಮತ ಸಮಾಜದ ಸ್ವಾಮೀಜಿ ಮಲ್ಲಿಕಾರ್ಜುನ ಶ್ರೀಗಳು, ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್, ಪತ್ರಕರ್ತ ಅಮರೇಶ್ ಕಲ್ಲೂರು, ಮುಖಂಡರಾದ ಕೆ ಶಾಂತಪ್ಪ, ಕೆ ಶರಣಪ್ಪ, ರಾಘವೇಂದ್ರ ಕಾಜನಗೌಡ, ಹುಸೇನಪ್ಪ ಗೊಬ್ಬಿ ಸೇರಿದಂತೆ ಅನೇಕ ಗಣ್ಯರು ಜ್ಯೋತಿ ಬೆಳಗಿಸಿ, ಚೌಡಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಗಂಗಾಪರಮೇಶ್ವರಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಸೇವಾ ರಕ್ತ ಭಂಡಾರ ಲಿಂಗಸುಗೂರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಗ್ರಾಮದ ಅನೇಕ ಯುವಕರು ರಕ್ತದಾನ ಮಾಡಿದರು.
ಗ್ರಾಮದ ಅಂಬಿಗರ ಚೌಡಯ್ಯ ಭವನದಿಂದ ಆರಂಭವಾದ ಅಂಬಿಗರ ಚೌಡಯ್ಯರ ಭಾವಚಿತ್ರ ಮೆರವಣಿಗೆ ವಿವಿಧ ಬೀದಿಗಳ ಮೂಲಕ ಸಂತೆಕಟ್ಟೆಯವರೆಗೂ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸಮುದಾಯದ ಜನರು, ಮುಖಂಡರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸೌಹಾರ್ದತೆ ತೋರಿದರು. ಅಲ್ಲದೇ ಗ್ರಾಮದಲ್ಲಿನ ಮಹರ್ಷಿ ವಾಲ್ಮೀಕಿ, ಒಳಬಳ್ಳಾರಿ ಚನ್ನಬಸವೇಶ್ವರ ಸ್ವಾಮೀಜಿ, ಡಾ.ಬಿ.ಆರ್ ಅಂಬೇಡ್ಕರ್, ನಿಜ ಶರಣ ಅಂಬಿಗರ ಚೌಡಯ್ಯ, ಕನಕದಾಸ ಸೇರಿದಂತೆ ಎಲ್ಲಾ ಮಹಾತ್ಮರ ನಾಮಫಲಕಗಳಿಗೆ ಪೂಜೆ ಸಲ್ಲಿಸುವ ಮೂಲಕ ಎಂದಿನಂತೆ ಇಂದು ಕೂಡ ವಿಶೇಷತೆ ಮೆರೆಯಲಾಯಿತು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )


1 comment: