Monday, March 28, 2022

ರೈತರ, ಬಡವರ ಪರ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್

 

ಸದನದಲ್ಲಿ ಮಾತಾಡುತ್ತಿರುವ ಶಾಸಕ ಬಂಡೆಪ್ಪ ಖಾಶೆಂಪುರ್
ಬೀದರ್ (ಮಾ.23): ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ, ಬೀದರ್ ಜಿಲ್ಲೆಯ 33 ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೊಳಿಸುವಂತೆ, ಕಾರಂಜಾ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಭಾಷಣದ ವಿಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ನಡೆದ ಬಜೆಟ್ ಅಧಿವೇಶನದ ಹದಿನೇಳನೇ ದಿನದ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಲಮನ್ನಾ ಯೋಜನೆಯಿಂದ ಹೊರ ಉಳಿದ 13  ಸಾವಿರಕ್ಕೂ ಹೆಚ್ಚಿನ ರೈತರ ಸಾಲಮನ್ನಾ, ಯಶಸ್ವಿನಿ ಯೋಜನೆ, ರೈತರಿಗೆ ನೀಡುತ್ತಿರುವ ಲೋನ್ ಮೊತ್ತವನ್ನು ಹೆಚ್ಚಿಸುವುದು, ಬಡವರ ಬಂಧು, ಬೀದಿಬದಿ ವ್ಯಾಪಾರಿಗಳ ಸಾಲಮನ್ನಾ, ಎಪಿಎಂಸಿ ವ್ಯವಸ್ಥೆ ಸುಧಾರಣೆ, ರಾಗಿ ಖರೀದಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರು.

ಶಾಶ್ವತ ನೀರಿನ ಸೌಲಭ್ಯ ನೀಡಿ: ಶಾಸಕ ಬಂಡೆಪ್ಪ ಖಾಶೆಂಪುರ್

 

ಅಧಿವೇಶನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತು
ಬೀದರ್ (ಮಾ. 28): ಬೀದರ್ ಜಿಲ್ಲೆಯಲ್ಲಿ ಬಹುತೇಕವಾಗಿ ಬೋರ್ವೆಲ್ ಗಳ ಮೂಲಕವೇ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ. ಬೋರ್ವೆಲ್ ನೀರು ಶಾಶ್ವತವಾದದ್ದಲ್ಲ. ಇವತ್ತು ಇದ್ದ ನೀರು ನಾಳೆ ಇರುವುದಿಲ್ಲ. ಆಗಾಗಿ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಒದಗಿಸಿಕೊಡುವ ಕೆಲಸ ಮಾಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಬಜೆಟ್ ಅಧಿವೇಶನದ ಹದಿನೇಳನೇ ದಿನದ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೆಜೆಎಂ (ಜಲ ಜೀವನ್ ಮಿಷನ್) ಯೋಜನೆ ಚನ್ನಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಸಹಾಯ ಸಿಗ್ತಿದೆ. ಆದರೇ ನೀರಿನ ಮೂಲಗಳ ಬಗ್ಗೆ ಗಮನಹರಿಸಬೇಕಾಗಿದೆ. ನಮ್ಮ ಬೀದರ್ ನಲ್ಲಿ ಶಾಶ್ವತವಾದ ನೀರಿನ ಮೂಲಗಳಿಲ್ಲ. ಕಾರಂಜಾ ಡ್ಯಾಂ ಇದೆ. ಅದರಿಂದ ಕೆಲ ತಾಲೂಕುಗಳಿಗೆ ನೀರಿನ ಸೌಲಭ್ಯ ಸಿಗುತ್ತಿದೆ.

ಪ್ರತಿ ವ್ಯಕ್ತಿಗೆ 55 ಲೀಟರ್ ನೀರು ಒದಗಿಸಬೇಕು ಎಂಬುದು ಜೆಜೆಎಂ ಯೋಜನೆಯ ಉದ್ದೇಶವಾಗಿದೆ. ನನ್ನ ಕ್ಷೇತ್ರದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕನೆಕ್ಷೆನ್ ಬಹುತೇಕ ಮುಗಿದಿದ್ದು ಸಚಿವರು ಅದನ್ನು ಪರಿಶೀಲನೆ ನಡೆಸಬೇಕು. ನಾವು ಬೋರ್ವೆಲ್ ಮೂಲದಿಂದ ನೀರನ್ನು ಒದಗಿಸುತ್ತಿದ್ದೇವೆ. ಇವತ್ತು ಇದ್ದ ನೀರು ನಾಳೇ ಇರಲ್ಲ. ಆಗಾಗಿ ಶಾಶ್ವತವಾದ ನೀರಿನ ಸೌಲಭ್ಯ ಒದಗಿಸಿಕೊಡುವ ಕೆಲಸ ಸರ್ಕಾರದಿಂದ ಆಗಬೇಕಾಗಿರುವುದು ಬಹಳಷ್ಟು ಅಗತ್ಯವಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.


ವಿಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ


ಉದ್ಯೋಗ ಖಾತ್ರಿ ಬಗ್ಗೆ ಸಚಿವರು ಗಮನಹರಿಸಬೇಕು:

ನಾನು ನನ್ನ ಕ್ಷೇತ್ರದಲ್ಲಿ ಬಹಳಷ್ಟು ಕಡೆಗಳಲ್ಲಿ ಜನಸಂಪರ್ಕ ಸಭೆಗಳನ್ನು ಮಾಡ್ತಿದ್ದಿನಿ.  ಸಭೆಗಳಲ್ಲಿ ಇಒಗಳು ಸೇರಿದಂತೆ ಅನೇಕ ಅಧಿಕಾರಿಗಳು ಪಾಲುಗೊಳ್ಳುತ್ತಾರೆ. ಉದ್ಯೋಗ ಖಾತ್ರಿ ವಿಷಯದಲ್ಲಿ ಅಲ್ಲಿನ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಚಿವರು ಯಾರಿಗಾದ್ರು ಜಾಬ್ ಕಾರ್ಡ್ ಸಿಕ್ಕಿಲ್ಲ. ಕೂಲಿ ಸಿಕ್ಕಿಲ್ಲ ಎಂದರೇ ಹೇಳಿ ಎಂದು ಹೇಳ್ತಿದ್ದಾರೆ. ಅಂತ ಪ್ರಕರಣಗಳು ಬಹಳಷ್ಟು ಇವೆ. ಬಹುತೇಕ ಕಡೆಗಳಲ್ಲಿ ಜಾಬ್ ಕಾರ್ಡ್ ಇದ್ದವರಿಗೆ ಕನಿಷ್ಟ 50 ದಿನ ಕೆಲಸ ಸಿಗುತ್ತಿಲ್ಲ.  ಕೆಲಸ ಸಿಕ್ಕಲ್ಲಿ ಕೂಲಿ ಸಿಗುತ್ತಿಲ್ಲ.

ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ ಅಂತಹ ಪ್ರಕರಣಗಳು ಕಂಡುಬಂದಿವೆ. ಸಚಿವರು ಮಾಹಿತಿ ತರಿಸಿಕೊಳ್ಳಬೇಕು. ನಮಗೆ ಉದ್ಯೋಗ ಖಾತ್ರಿಯ ಕೂಲಿ ಸಿಗುತ್ತಿಲ್ಲ ಎಂದು ಅನೇಕರು ಪೋನ್ ಮಾಡಿ ಹೇಳುತ್ತಿದ್ದಾರೆ. ಕೆಳ ಹಂತದ ಆಡಳಿತ ವ್ಯವಸ್ಥೆ ಸುಧಾರಣೆಯಾಗ್ಬೇಕಾಗಿದೆ. ಸಚಿವರು ಈ ಬಗ್ಗೆ ಗಮನಹರಿಸಬೇಕೆಂದು ಸಚಿವ ಕೆ.ಎಸ್ ಈಶ್ವರಪ್ಪರವರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಬೆಂಗಳೂರಿನಲ್ಲಿನ ಟ್ರಾಫಿಕ್ ಸಮಸ್ಯೆ. ಬಜೆಟ್ ಹಂಚಿಕೆಯಲ್ಲಿನ ತಾರತಮ್ಯ, ಬೀದರ್ ನ ಕಾರಂಜಾ ಸಂತ್ರಸ್ತ ರೈತರಿಗೆ ಪರಿಹಾರ ನೀಡುವ ವಿಚಾರ, ಬೀದರ್ ಜಿಲ್ಲೆಯ ಕೆರೆ ತುಂಬಿಸುವ ಯೋಜನೆ, ಸಹಕಾರ ಇಲಾಖೆಯ ಯೋಜನೆಗಳು, ಎಪಿಎಂಸಿ ವ್ಯವಸ್ಥೆಯ ಸುಧಾರಣೆ, ರೈತರ ಸಾಲಮನ್ನಾ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡಿದರು.

Friday, March 25, 2022

ರಟ್ಟೀಹಳ್ಳಿ ಜೆಡಿಎಸ್ ಸಮಾವೇಶದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ಭಾಗಿ: ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ

 

ರಟ್ಟೀಹಳ್ಳಿ ಜೆಡಿಎಸ್ ಸಮಾವೇಶದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ಭಾಗಿ

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಇಂದು ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು ಆಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡು ಮಾತನಾಡಿದರು. 
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ ಕುಮಾರಸ್ವಾಮಿ ರವರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.

ಪಟ್ಟಣ ಪಂಚಾಯತಿಗಳಿಗಾಗಿ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್

ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡುತ್ತಿರುವುದು

ಬೀದರ್ (ಮಾ.25): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಠಾಣಾ ಮತ್ತು ಮನ್ನಾಎಖೇಳ್ಳಿ ಗ್ರಾಮ ಪಂಚಾಯತಿಗಳನ್ನು ಇಂದೇ ಪಟ್ಟಣ ಪಂಚಾಯತಿಗಳನ್ನಾಗಿ ಘೋಷಣೆ ಮಾಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಬಜೆಟ್ ಅಧಿವೇಶನದ ಹದಿನಾರನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಪರಿವರ್ತಿಸುವ ವಿಷಯಕ್ಕೆ ಸಂಬಂಧಿಸಿದಂತೆ ಚುಕ್ಕೆಗುರುತಿನ ಪ್ರಶ್ನೆ ಕೇಳಿ ಅವರು ಮಾತನಾಡಿದರು. 

ಭಾಷಣದ ವಿಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಬೀದರ್ ದಕ್ಷಿಣ ಕ್ಷೇತ್ರ ಹಳ್ಳಿಗಳಿಂದ ಕೂಡಿದ ಕ್ಷೇತ್ರವಾಗಿದೆ. ನನ್ನ ಕ್ಷೇತ್ರದಲ್ಲಿ 120 ಗ್ರಾಮಗಳಿವೆ. ಕ್ಷೇತ್ರದಲ್ಲಿನ ಕಮಠಾಣಾ, ಮನ್ನಾಎಖೇಳ್ಳಿ, ಮನ್ನಳ್ಳಿ, ನಿರ್ಣಾ, ಬಗದಲ್, ಬೇಮಳಖೇಡ ಸೇರಿದಂತೆ 06 ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗುವ ಅರ್ಹತೆಯನ್ನು ಹೊಂದಿವೆ. ನಾನು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ನೀಡಿರುವ ಉತ್ತರದಲ್ಲಿ ಬೀದರ್ ತಾಲೂಕಿನ ಕಮಠಾಣಾ ಮತ್ತು ಚಿಟಗುಪ್ಪಾ ತಾಲೂಕಿನ ಮನ್ನಾಎಖೇಳ್ಳಿ ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗುವ ಅರ್ಹತೆಯೊಂದಿವೆ ಎಂದು ತಿಳಿಸಿದ್ದಾರೆ.

ಸರ್ಕಾರ ನೀಡಿರುವ ಮಾನದಂಡಗಳಂತೆ ನನ್ನ ಕ್ಷೇತ್ರದ 06 ಗ್ರಾಮ ಪಂಚಾಯತಿಗಳು ಕೂಡ ಪಟ್ಟಣ ಪಂಚಾಯತಿಗಳಾಗುವ ಅರ್ಹತೆಯನ್ನು ಹೊಂದಿವೆ. ಕ್ಷೇತ್ರದಲ್ಲಿ ಒಂದೇ ಒಂದು ಪಟ್ಟಣ ಪಂಚಾಯತಿ ಇಲ್ಲ. ತಾಲೂಕು ಕೇಂದ್ರ ಕೂಡ ಇಲ್ಲ. ಆಗಾಗಿ ಕ್ಷೇತ್ರದ ಆರು ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಪರಿವರ್ತನೆ ಮಾಡಿಕೊಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಉತ್ತರ ನೀಡಿ ಮಾತನಾಡಿದ ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್ ನಾಗರಾಜು ಎಂ.ಟಿ.ಬಿ ರವರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 31 ಗ್ರಾಮ ಪಂಚಾಯತಿಗಳು ಬರುತ್ತವೆ. ಅವುಗಳಲ್ಲಿ ಬೀದರ್ ತಾಲೂಕಿನಲ್ಲಿ 22 ಹಾಗೂ ಚಿಟಗುಪ್ಪಾ ತಾಲೂಕಿನಲ್ಲಿ 09 ಗ್ರಾಮ ಪಂಚಾಯತಿಗಳಿರುತ್ತವೆ. ಬೀದರ್ ತಾಲೂಕಿನ ಕಮಠಾಣಾ ಮತ್ತು ಚಿಟಗುಪ್ಪಾ ತಾಲೂಕಿನ ಮನ್ನಾಎಖೇಳ್ಳಿ ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗಿ ಪರಿವರ್ತನೆಯಾಗಲು ಅರ್ಹತೆಯೊಂದಿವೆ.

ಆದರೇ ಇನ್ನೂ ಕೂಡ ಯಾವುದೇ ಪ್ರಸ್ತಾವನೆಗಳು ಜಿಲ್ಲಾಧಿಕಾರಿಗಳಿಂದ ಬಂದಿಲ್ಲ. ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಬಂದ ತಕ್ಷಣ 02, 03, 04 ಎಷ್ಟೇ ಇರಲಿ ಕೂಡಲೇ ಪಟ್ಟಣ ಪಂಚಾಯತಿಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳುತ್ತೇವೆಂದು ಸಚಿವರು ತಿಳಿಸಿದರು.

ಮರುಪ್ರಶ್ನೆ ಕೇಳಿ ಮಾತನಾಡಿದ ಶಾಸಕರು, ಬೀದರ್ ತಾಲೂಕಿನ ಕಮಠಾಣಾ ಮತ್ತು ಚಿಟಗುಪ್ಪಾ ತಾಲೂಕಿನ ಮನ್ನಾಎಖೇಳ್ಳಿ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಪರಿವರ್ತಿಸಬಹುದು ಎಂದು ಸರ್ಕಾರದ ಉತ್ತರದಲ್ಲಿ ತಿಳಿಸಿದ್ದಾರೆ. ಅದರಂತೆ ಆ ಎರಡು ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಸದನದಲ್ಲೇ ಷೋಷಣೆ ಮಾಡಿಬಿಡಿ. ಇನ್ನೂಳಿದಂತೆ ಮನ್ನಳ್ಳಿ, ನಿರ್ಣಾ, ಬಗದಲ್, ಬೇಮಳಖೇಡಗಳನ್ನು ಜೂನ್ 30ರೊಳಗೆ ಜಿಲ್ಲಾಧಿಕಾರಿಗಳಿಂದ ನಾವು ಪ್ರಸ್ತಾವನೆ ಸಲ್ಲಿಸಿದ ನಂತರ ಮಾಡಿಕೊಡಿ ಎಂದು ಒತ್ತಾಯಿಸಿದರು. ಈ ವೇಳೆ ಉತ್ತರ ನೀಡಿದ ಸಚಿವರು, ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಬಂದ ನಂತರ ನಾವು ಅಧಿಸೂಚನೆ ಹೊರಡಿಸಿ ಪಟ್ಟಣ ಪಂಚಾಯತಿಗಳನ್ನಾಗಿ ಮಾಡಲು ಸರ್ಕಾರದಿಂದ ಕ್ರಮಕೈಗೊಳ್ಳುತ್ತೇವೆ ಎಂದರು.

Tuesday, March 22, 2022

ಕಾರಂಜಾ ನೀರಾವರಿ ಯೋಜನೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್

ಅಧಿವೇಶನದ ಹದಿಮೂರನೇ ದಿನದ ಕಲಾಪದಲ್ಲಿ
ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡುತ್ತಿರುವುದು.

 

ಬೀದರ್ (ಮಾ.22): ಕಾರಂಜಾ ಅಣೆಕಟ್ಟಿನ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಅತಿವಾಳ ಏತ ನೀರಾವರಿ ಯೋಜನೆ, ಕಾರಂಜಾ ಲಿಫ್ಟ್ ಇರಿಗೇಶನ್ ಗಳ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಧ್ವನಿ ಎತ್ತಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ನಡೆದ ಬಜೆಟ್ ಅಧಿವೇಶನದ ಹದಿಮೂರನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಅತಿವಾಳ ಏತ ನೀರಾವರಿ ಯೋಜನೆ, ಕಾರಂಜಾ ಲಿಫ್ಟ್ ಇರಿಗೇಶನ್ ಗಳ ಬಗ್ಗೆ ಚುಕ್ಕೆಗುರುತಿನ ಪ್ರಶ್ನೆ ಕೇಳಿ ಮಾತನಾಡಿದ ಅವರು, ಅತಿವಾಳ ಏತ ನೀರಾವರಿ ಯೋಜನೆ ಜೊತೆಜೊತೆಯಲ್ಲಿ ಕಾರಂಜಾ ಲಿಫ್ಟ್ ಇರಿಗೇಶನ್ ಎಂಬ ಯೋಜನೆ ಕೂಡ ಕಾರಂಜಾ ಜಲಾಶಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದರು.

ಅತಿವಾಳ ಏತ ನೀರಾವರಿ ಯೋಜನೆ ಹುಮನಾಬಾದ್ ತಾಲೂಕಿನ ಹುಮನಾಬಾದ್, ಅಮೀರಾಬಾದ್ ವಾಡಿ, ಹಳ್ಳಿಖೇಡ ಬಿ ಸೇರಿದಂತೆ ವಿವಿಧ ಹಳ್ಳಿಗಳ ಜಮೀನುಗಳಿಗೆ ನೀರು ಒದಗಿಸಿಕೊಡುವ ಯೋಜನೆಯಾಗಿದೆ. 4 ಕೋಟಿ ರೂ.  ಅನುದಾನದ ಕಾರಂಜಾ ಲಿಫ್ಟ್ ಇರಿಗೇಶನ್ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ಯೋಜನೆಯಾಗಿದೆ. ಈ ಯೋಜನೆಗೆ ಈಗಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಜಲಸಂಪನ್ಮೂಲ ಸಚಿವರಿದ್ದಾಗಲೇ ಚಾಲನೆ ಕೊಟ್ಟಿದ್ದರು. ಈ ಯೋಜನೆಯಿಂದ ನಮ್ಮ ಕ್ಷೇತ್ರ ವ್ಯಾಪ್ತಿಯ ಸಿರ್ಸಿ, ಬಾವಗಿ ಸೇರಿದಂತೆ ಅನೇಕ ಗ್ರಾಮಗಳ ಜಮೀನುಗಳಿಗೆ ನೀರು ಸಿಗುತ್ತದೆ.

ಶಾಸಕರು ಮಾತನಾಡಿರುವ ಸಂಪೂರ್ಣ ವಿಡಿಯೋಗಾಗಿ ಕ್ಲಿಕ್ ಮಾಡಿ..

ಕಾರಂಜಾ ಲಿಫ್ಟ್ ಇರಿಗೇಶನ್ ಯೋಜನೆ ಯಾವ ಹಂತದಲ್ಲಿದೆ. ಎಷ್ಟು ಜಮೀನುಗಳಿಗೆ ಈ ಯೋಜನೆಯಿಂದ ನೀರು ಒದಗಿಸಿಕೊಡಲು ಸಾಧ್ಯವಾಗುತ್ತದೆ ಎಂಬುದರ ಮಾಹಿತಿಯನ್ನು ಸರ್ಕಾರ ನೀಡಬೇಕು. ಅಧಿಕಾರಿಗಳು ಮತ್ತು ನನ್ನ ನೇತೃತ್ವದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಚಿವರಿಗೆ ಮನವಿ ಮಾಡಿದರು.

ಈ ವೇಳೆ ಉತ್ತರ ನೀಡಿ ಮಾತನಾಡಿದ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವ ಜೆ.ಸಿ ಮಾಧುಸ್ವಾಮಿಯವರು, ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. 3873 ಹೆಕ್ಟರ್ ಜಮೀನಿಗೆ ನೀರು ಒದಗಿಸುವ ಕಾರ್ಯಕ್ರಮ ಇದಾಗಿದೆ. ಜೂನ್ ತಿಂಗಳೊಳಗೆ ಈ ಯೋಜನೆ ಪೂರ್ಣಗೊಳಿಸಲಾಗುತ್ತದೆ ಎಂದು ಅತಿವಾಳ ಏತ ನೀರಾವರಿ ಯೋಜನೆಯ ಮಾಹಿತಿ ನೀಡಿದರು.

ಮರುಪ್ರಶ್ನೆ ಕೇಳಿ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಉತ್ತರದಲ್ಲಿ ಅತಿವಾಳ ಏತ ನೀರಾವರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಿರಿ. ಕಾರಂಜಾ ಲಿಫ್ಟ್ ಇರಿಗೇಶನ್ ಯೋಜನೆಯ ಬಗ್ಗೆ ಕೂಡ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರೊಟ್ಟಿಗೆ ಸಭೆ ನಡೆಸುವಂತೆ ಸಚಿವರಾದ ಗೋವಿಂದ ಕಾರಜೋಳರವರಿಗೆ ತಿಳಿಸುತ್ತೇನೆಂದು ಸಚಿವ ಮಾಧುಸ್ವಾಮಿರವರು ಮರುಉತ್ತರದಲ್ಲಿ ತಿಳಿಸಿದರು.

Friday, March 18, 2022

2019-20ರ ಬಜೆಟ್ ಅನ್ನು ಸಹಕಾರ ಸಚಿವರು ಓದ್ಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್

ಹನ್ನೊಂದನೇ ದಿನದ ಕಲಾಪದಲ್ಲಿ ಶಾಸಕರಾದ ಖಾಶೆಂಪುರ್  ರವರು ಮಾತನಾಡುತ್ತಿರುವುದು.

ಬೀದರ್ (ಮಾ.18): 2019-20ರ ಬಜೆಟ್ ಮಂಡನೆ ವೇಳೆ ಕುಮಾರಸ್ವಾಮಿರವರ ಸರ್ಕಾರದಲ್ಲಿ ನಾನು ಸಹಕಾರ ಸಚಿವನಾಗಿದ್ದೆ. ಆಗ ನಾವು ಸಹಕಾರ ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂತ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವು. ಈಗಿನ ಸಹಕಾರ ಸಚಿವರಿಗೆ ಟೈಮ್ ಸಿಕ್ಕರೆ 2019-20ರ ಬಜೆಟ್ ಅನ್ನು ಓದಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಲಹೆ ನೀಡಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಬಜೆಟ್ ಅಧಿವೇಶನದ ಹನ್ನೊಂದನೇ ದಿನದ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  2019-20ರ ಬಜೆಟ್ ನಲ್ಲಿ ಘೋಷಿಸಿದ ಪ್ರಕಾರ, ರೈತರು ಬೆಳೆದ ಬೆಳೆಗಳ ರಾಶಿ ಮಾಡಿದ ಬಳಿಕ ಉತ್ಪನ್ನಗಳನ್ನು ಗೋಡನ್ ಗಳಿಗೆ ಸಾಗಿಸಲು ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಗೋಡನ್ ಗಳಲ್ಲಿ 08 ತಿಂಗಳುಗಳವರೆಗೂ ರೈತರು ತಮ್ಮ ಉತ್ಪನ್ನಗಳನ್ನು ಯಾವುದೇ ಶುಲ್ಕವಿಲ್ಲದೆ ಸಂಗ್ರಹಿಸಿಡಬಹುದಿತ್ತು ಎಂದರು.

ಸಂಪೂರ್ಣ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಸ್ತುತ ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನು ಕೇವಲ ಒಂದೆರಡು ತಿಂಗಳುಗಳಿಗೆ ಸೀಮಿತಗೊಳಿಸಲಾಗಿದೆ. ನಾವು ಮಂಡಿಸಿದ ಬಜೆಟ್ ನಲ್ಲಿ 08 ತಿಂಗಳುಗಳವರೆಗೂ ಖರೀದಿ ಕೇಂದ್ರಗಳನ್ನು ತೆರೆದಿಡುವ ಯೋಜನೆ ರೂಪಿಸಲಾಗಿತ್ತು. ರೈತ ಮನಸ್ಸು ಬಂದಾಗ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಿತ್ತು. ರೈತನಿಗೆ ಸಹಕಾರಿ ಬ್ಯಾಂಕ್, ನ್ಯಾಷನಲ್ ಬ್ಯಾಂಕ್ ಗಳಿಂದ ಇಂಟ್ರಸ್ಟಡ್ ಸಬ್ಸಿಡಿ ಮೇಲೆ ಪ್ರೀ ಲೋನ್ ಕೊಡ್ಬೇಕು ಎಂಬ ಯೋಜನೆಯನ್ನು 2019-20ರ ಬಜೆಟ್ ನಲ್ಲಿ ತಂದಿದ್ದೇವು.

2019-20ರ ಬಜೆಟ್ ನಲ್ಲಿ ರೈತರಿಗೆ ಅನುಕೂಲವಾಗುವಂತ ಅನೇಕ ಯೋಜನೆಗಳನ್ನು ಘೋಷಿಸಲಾಗಿತ್ತು. ಸಹಕಾರ ಇಲಾಖೆಯನ್ನು ರೈತ ಸ್ನೇಹಿಯನ್ನಾಗಿ ಮಾಡುವ ಯೋಜನೆಗಳು ಆ ಬಜೆಟ್ ನಲ್ಲಿದ್ದವು. ಸಹಕಾರ ಸಚಿವರು, ಇಲಾಖೆಯವರು, ಸಂಬಂಧಿಸಿದವರು 2019-20ರ ಬಜೆಟ್ ಅನ್ನು ಓದಬೇಕು. ಅಲ್ಲಿ ಘೋಷಿಸಿದ್ದ ಯೋಜನೆಗಳನ್ನು ಮತ್ತು ಅದಕ್ಕೂ ಉತ್ತಮವಾದ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ರೈತರಿಗೆ ನೀಡುತ್ತಿರುವ ವಿದ್ಯುತ್ ಸಮಯ ಹೆಚ್ಚಿಸಲು ಏನು ಸಮಸ್ಯೆ:

2006ರಲ್ಲಿನ ಸಮಿಶ್ರ ಸರ್ಕಾರದ ಸಂದರ್ಭದಲ್ಲಿ ಅತಿ ಹೆಚ್ಚಿನ ಕೆಇಬಿ ಸಬ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡಲಾಗಿತ್ತು. ಈಗಿರುವ ಪ್ರಶ್ನೆಯೆಂದರೆ, ಈಗ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಮುಂಚೆ ಯೂನಿಟ್ ವಿದ್ಯುತ್ ಅನ್ನು 08 ರೂ. ಗೆ ಖರೀದಿ ಮಾಡಲಾಗುತ್ತಿತ್ತು. ಈಗ 2 ರೂ. 50 ಪೈಸೆಗೆ ಖರೀದಿ ಮಾಡಲಾಗುತ್ತಿದೆ. ಇಷ್ಟಾದ ಮೇಲು ರೈತರ ಪಂಪ್ ಸೆಟ್ ಗಳಿಗೆ ನೀಡುತ್ತಿರುವ ವಿದ್ಯುತ್ ಅನ್ನು 07 ರಿಂದ 14 ತಾಸುಗಳಿಗೆ ಹೆಚ್ಚಿಸುವುದಕ್ಕೆ ಏನು ಸಮಸ್ಯೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಚಿವ ಗೋವಿಂದ ಕಾರಜೋಳರನ್ನು ಪ್ರಶ್ನಿಸಿದರು.

ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ ಅನ್ನು ಹೊರ ರಾಜ್ಯಗಳಿಗೆ ಕಳಿಸೋದು ಯಾಕ್ ಬೇಕು. ನಮ್ಮ ರೈತರಿಗೆ ಹೆಚ್ಚಿನ ಸಮಯ ವಿದ್ಯುತ್ ನೀಡಿ ರೈತರನ್ನು ಕಲ್ಯಾಣ ಮಾಡುವುದು ಮುಖ್ಯವಲ್ಲವೇ.? ರೈತರ ಬೋರ್ ವೆಲ್ ಗಳಿಗೆ ಹೆಚ್ಚಿನ ವಿದ್ಯುತ್ ನೀಡುವ ಕಡೆಗೆ ಮಹತ್ವ ನೀಡಬೇಕು. ಸರಿಯಾಗಿ ವಿದ್ಯುತ್ ಸೌಲಭ್ಯ ನೀಡಿದರೆ ಹೆಚ್ಚಿನ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಉತ್ತಮ ಇಳುವರಿ ಬರುತ್ತದೆ. ರೈತರ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ವೆಂಕಟರಾವ್ ನಾಡಗೌಡ ಸೇರಿದಂತೆ ಅನೇಕರು ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಮಾತಿಗೆ ಧ್ವನಿಗೂಡಿಸಿದರು. ಈ ವೇಳೆ ಮಾತನಾಡಿದ ಸಚಿವ ಗೋವಿಂದ ಕಾರಜೋಳರವರು, ಕೆಇಬಿಯಲ್ಲಿ ಆಗಬೇಕಾಗಿರುವ ಸುಧಾರಣೆಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡಿದರು.

Wednesday, March 16, 2022

ರೈತರಿಗೆ ಕನಿಷ್ಠ 14 ತಾಸು ವಿದ್ಯುತ್ ನೀಡಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್

ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡುತ್ತಿರುವುದು.

ಬೀದರ್ (ಮಾ.16): ರೈತರ ಕೃಷಿ ಪಂಪ್ಸೆಟ್ ಗಳಿಗೆ ಕೇವಲ 07 ತಾಸು ವಿದ್ಯುತ್ ನೀಡಲಾಗುತ್ತಿದೆ. ಅದು ಕೂಡ ಸಮರ್ಪಕವಾಗಿ ಸಿಗುತ್ತಿಲ್ಲ. ರೈತರ ಬೋರ್ವೆಲ್ ಗಳಿಗೆ ನೀಡುತ್ತಿರುವ ವಿದ್ಯುತ್ ಸಮಯವನ್ನು 07 ರಿಂದ 14 ತಾಸುಗಳಿಗೆ ಹೆಚ್ಚಿಸಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ನಡೆದ ಬಜೆಟ್ ಅಧಿವೇಶನದ ಒಂಬತ್ತನೇ ದಿನದ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಮೊದಲು 08 ರೂ.ಗೆ ಯೂನಿಟ್ ನಂತೆ ವಿದ್ಯುತ್ ಖರೀದಿ ಮಾಡಲಾಗ್ತಿತ್ತು. ಈಗ 2 ರೂ. 50 ಪೈಸೆಗೆ ಖರೀದಿ ಮಾಡಲಾಗ್ತಿದೆ. ಉಳಿದ ವಿದ್ಯುತ್ ಅನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡಲಾಗ್ತಿದೆ. ಆದರೆ ರೈತರ ಪಂಪ್ಸೆಟ್ಗಳಿಗೆ ನೀಡುತ್ತಿರುವ ವಿದ್ಯುತ್ ಸಮಯವನ್ನು ಹೆಚ್ಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭಾಷಣದ ಸಂಪೂರ್ಣ ವಿಡಿಯೋಗಾಗಿ ಕ್ಲಿಕ್ ಮಾಡಿ

ಕನಿಷ್ಟ 45 ಲಕ್ಷ ಜನ ರೈತರಿಗೆ ಸಾಲ ನೀಡಬೇಕು:

ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ ಯಾವ ರೀತಿಯಾಗಿ ದ್ವಿಗುಣಗೊಳಿಸುತ್ತಾರೆ ಎಂಬುದನ್ನು ಹೇಳಿಲ್ಲ. ರೈತರು ದೇಶದ ಬೆನ್ನೆಲುಬು. ರಾಜ್ಯದಲ್ಲಿ ಶೇಕಡ 70%ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರೈತರಿದ್ದಾರೆ. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ 24 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿದ್ದರು.

ಸಹಕಾರ ಸಂಸ್ಥೆಗಳಿಂದ 22 ಲಕ್ಷ ರೈತರಿಗೆ ಸುಮಾರು 16 ಸಾವಿರ ಕೋಟಿ ರೂ. ಸಾಲ ಕೊಡಲಾಗ್ತಿತ್ತು. ಅದನ್ನು 33 ಲಕ್ಷ ಜನ ರೈತರಿಗೆ ಹೆಚ್ಚಿಸುತ್ತೇವೆಂದು ಅಧಿಕಾರಕ್ಕೆ ಬಂದಾಗಿನಿಂದಲೂ ಸಹಕಾರ ಸಚಿವರು ಹೇಳುತ್ತಿದ್ದಾರೆ. ರಾಜ್ಯದಲಿ 80 ಲಕ್ಷ ಜನ ರೈತರಿದ್ದಾರೆ. ಈ ಸರ್ಕಾರ ರೈತರ ಸಾಲಮನ್ನಾ ಮಾಡಲ್ಲ ಎಂಬುದು ಗೋತ್ತಿದೆ. ಆದರೆ ಸಹಕಾರ ಸಂಸ್ಥೆಗಳಿಂದ ನೀಡುತ್ತಿರುವ ಸಾಲವನ್ನು ಕನಿಷ್ಟ 45 ಲಕ್ಷ ಜನ ರೈತರಿಗೆ ಹೆಚ್ಚಿಸಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ಕೆಕೆಆರ್ಡಿಬಿ ಅನುದಾನದ ಸಮಸ್ಯೆ ಪರಿಹರಿಸಬೇಕು:

ಕೆಕೆಆರ್ಡಿಬಿ ಅನುದಾನ ಮೊದಲಿಗೆ ವರ್ಷಕ್ಕೆ 1500 ಕೋಟಿ ರೂ. ಬರುತಿತ್ತು ಈಗ 3000 ಕೋಟಿ ಮಾಡಲಾಗಿದೆ. ಅದು ನಂಜುಂಡಪ್ಪ ವರದಿಯ ಪ್ರಕಾರ ಹಂಚಿಕೆ ಮಾಡಲಾಗ್ತಿದೆ. ಇದರಿಂದ ನಮ್ಮ ಬೀದರ್ ದಕ್ಷಿಣ ಕ್ಷೇತ್ರಕ್ಕೆ ಕಡಿಮೆ ಅನುದಾನ ಸಿಗ್ತಿದೆ. ಹುಮನಾಬಾದ್ ಗೆ 30 ಕೋಟಿ ರೂ. ಬಂದರೆ ನಮಗೆ 12 ಕೋಟಿ ರೂ. ಬರ್ತಿದೆ. ನಮ್ಮ ಕ್ಷೇತ್ರದಲ್ಲಿ ಕೂಡ ಹಳ್ಳಿಗಳು ಹೆಚ್ಚಾಗಿವೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಸಮಾನವಾಗಿ ಅನುದಾನ ಒದಗಿಸಿಕೊಡಬೇಕು.

ಬೀದರ್ ನಿಂದ ಪ್ರತಿನಿತ್ಯ ಒಂದು ವಿಮಾನ ಸೇವೆ ಆರಂಭಿಸಬೇಕು:

ಬೀದರ್ ಏರ್ಪೋರ್ಟ್ ನಿಂದ ಪ್ರತಿನಿತ್ಯ ಕನಿಷ್ಠ ಒಂದು ವಿಮಾನ ಸೇವೆ ಆರಂಭಿಸಬೇಕು. ಆ ಮೂಲಕ ಬೀದರ್ ಅಭಿವೃದ್ಧಿಗೆ ಸಹಕಾರವಾಗಲಿದೆ. ಬೀದರ್ ಗೆ ಈ ಮೊದಲು ಒಂದು ವಿಮಾನ ಬರುತ್ತಿತ್ತು. ಅದು ಈಗ ಬಂದ್ ಆಗಿದೆ. ಆ ಬಗ್ಗೆ ಮುಖ್ಯಮಂತ್ರಿಗಳು ಹೆಚ್ಚಿನ ಗಮನಹರಿಸಬೇಕೆಂದು ಶಾಸಕರು ಒತ್ತಾಯಿಸಿದರು.

ನಮ್ಮ ಕಲ್ಯಾಣ ಕರ್ನಾಟಕ ಭಾಗದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಉದ್ಯೋಗ ಸೃಷ್ಟಿಯ ಕಡೆಗೆ ಸರ್ಕಾರ ಗಮನಹರಿಸಬೇಕು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಬೇಕು. ಅರಿವು, ಶಾದಿಭಾಗ್ಯ ಯೋಜನೆಗಳನ್ನು ಮುಂದುವರೆಸಬೇಕು. ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.

Tuesday, March 15, 2022

‘ಕಲ್ಯಾಣ’ವಿಲ್ಲದ ಕರ್ನಾಟಕ ‘ಕಲ್ಯಾಣ ಕರ್ನಾಟಕ’: ಶಾಸಕ ಬಂಡೆಪ್ಪ ಖಾಶೆಂಪುರ್

ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡುತ್ತಿರುವುದು.


ಬೀದರ್ (ಮಾ.15): ನಮ್ಮ ಕಲ್ಯಾಣ ಕರ್ನಾಟಕ ಭಾಗ ‘ಕಲ್ಯಾಣ’ವಿಲ್ಲದ ‘ಕಲ್ಯಾಣ ಕರ್ನಾಟಕ’ ಭಾಗವಾಗಿದೆ. ಈ ಭಾಗದ ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ, ಪ್ರವಾಸೋಧ್ಯಮ ಕ್ಷೇತ್ರಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ನಡೆದ ಬಜೆಟ್ ಅಧಿವೇಶನದ ಎಂಟನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ಸ್ವತಂತ್ರ್ಯ ಭಾರತದಲ್ಲಿ ಬದುಕುತ್ತಿರುವ ನಾವೆಲ್ಲ ಅದೃಷ್ಟವಂತರು, ಈ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವ ಹೆಸರಲ್ಲಿ ಬಜೆಟ್ ಮಂಡನೆ ಮಾಡಿದೆ. ಸ್ವತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಮತ್ತು ದೇಶಕಾಯುವ ಸೈನಿಕರಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿರುವುದು ಅವಶ್ಯಕವಾಗಿದೆ ಎಂದರು.

ಚರ್ಚೆಯ ಸಂಪೂರ್ಣ ವಿಡಿಯೋಗಾಗಿ ಕ್ಲಿಕ್ ಮಾಡಿ

ಯೋಧರ, ಸ್ವತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಜಮೀನು ನೀಡಿ:

ಸ್ವತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಮತ್ತು ಸೈನಿಕರ ಕುಟುಂಬಗಳಿಗೆ ಸರ್ಕಾರದಿಂದ ಗೌರವಧನ ಹಾಗೂ ಆ ಕುಟುಂಬಗಳಿಗೆ ಜಮೀನು ಒದಗಿಸಿಕೊಡುವ ಕೆಲಸವನ್ನು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಬೇಕು. ಅವರಿಗಾಗಿ ಸರ್ಕಾರಗಳಿಂದ ವಿಶೇಷ ಯೋಜನೆ, ಕಾರ್ಯಕ್ರಮಗಳನ್ನು ಮಾಡಬೇಕು.

ಕೃಷಿ, ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು:

ಈ ಸರ್ಕಾರ ಅಮೃತ ಮಹೋತ್ಸವ ಸಂಭ್ರಮದ ವೇಳೆಯಲ್ಲಿ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದೆ. ಆದರೇ ಹೇಗೆ ದ್ವಿಗುಣ ಮಾಡುತ್ತೇವೆಂದು ಹೇಳಿಲ್ಲ. ರೈತರೆಲ್ಲರೂ ನಷ್ಟದಲ್ಲಿ ಜೀವನ ಮಾಡುತ್ತಿದ್ದಾರೆ. ನಾನು ಕೂಡ ರೈತನಾಗಿ ನಷ್ಟದಲ್ಲಿದ್ದೇನೆ. ನಾವು ಸರ್ಕಾರದಿಂದ ರೈತರಿಗೆ ಎಷ್ಟರ ಮಟ್ಟಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂಬುದರ ಕಡೆಗೆ ಹೆಚ್ಚಿನ ಗಮನಹರಿಸಬೇಕು.

ನಾನು ಕೃಷಿ ಸಚಿವನಾಗಿದ್ದಾಗ ಕುಮಾರಸ್ವಾಮಿರವರು ಮಂಡಿಸಿದ ಬಜೆಟ್ ನಲ್ಲಿ ಕೃಷಿಗೆ ಶೇ.70% ಪ್ರಾಮುಖ್ಯತೆ ನೀಡಿದ್ದರು. ಆದರೇ ಈಗ ಶೇ.50% ರಷ್ಟು ಕೂಡ ಕೃಷಿಗೆ ಪ್ರಾಮುಖ್ಯತೆ ನೀಡಿಲ್ಲ. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ರೈತರ ಸಾಲಮನ್ನಾದಷ್ಟು ಈಗ ರೈತರಿಗೆ ಸಾಲ ನೀಡಿಲ್ಲ. ರೈತರು ಬೆಳೆದಿರುವ ಬೆಳೆಗಳಿಗೆ ಸರ್ಕಾರದಿಂದ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ರೈತರಿಗೆ ಉತ್ತಮವಾಗಿರುವ ಇನ್ಸೂರೆನ್ಸ್ ಯೋಜನೆ ತರಬೇಕು. ಕೆಎಮ್ಎಫ್, ಡಿಸಿಸಿ ಬ್ಯಾಂಕ್ ಗಳ ಸುಧಾರಣೆ, ಎಫಿಎಮ್ಸಿ ಸುಧಾರಣೆಗೆ ಹೆಚ್ಚಿನ ಆಧ್ಯತೆ ನೀಡಬೇಕು.

ಕುರಿ, ಮೇಕೆ ಸಾವಿನ ಪರಿಹಾರ ಹೆಚ್ಚಿಸಬೇಕು:

ಪ್ರಸ್ತುತ ಕುರಿ, ಮೇಕೆಗಳ ಸಾವಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತ ವೈಜ್ಞಾನಿಕವಾಗಿಲ್ಲ. ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ಕುರಿ, ಮೇಕೆ ಸಾಕಾಣಿಕೆದಾರರಿಗೆ ಪ್ರೋತ್ಸಾಹ ನೀಡಬೇಕು. ಸರ್ಕಾರದಿಂದ ಕುರಿ, ಮೇಕೆಗಳಿಗೆ ಇನ್ಸೂರೆನ್ಸ್ ಯೋಜನೆಗಳನ್ನು ರೂಪಿಸಬೇಕು. ಅವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಕೆಲಸ ಸರ್ಕಾರದಿಂದ ಆಗಬೇಕು.

09, 10ನೇ ತರಗತಿ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು ನೀಡಬೇಕು:

ಪ್ರಸ್ತುತ 01 ರಿಂದ 08ನೇ ತರಗತಿಯವರೆಗಿನ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುತ್ತಿದೆ. ಆದರೇ ಅದೇ ಶಾಲಾ ಕಾಂಪೌಂಡ್ ಗಳೊಳಗೆ ಇರುವ 09, 10ನೇ ತರಗತಿ ಮಕ್ಕಳಿಗೆ ನೀಡುತ್ತಿಲ್ಲ. ಇದರಿಂದ ಮಕ್ಕಳಲ್ಲಿ ಬಿನ್ನಾಭಿಪ್ರಾಯ ಮೂಡುತ್ತದೆ. 09 ಮತ್ತು 10ನೇ ತರಗತಿಯ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸುವ ಕೆಲಸ ಸರ್ಕಾರ ಮಾಡಬೇಕು.

ಆರೋಗ್ಯ ಕ್ಷೇತ್ರದ ಸುಧಾರಣೆಗೆ ಮಹತ್ವ ನೀಡಬೇಕು:

ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರ ಆದ್ಯತೆ ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಸ್ಪೇಷಲ್, ಸುಪರ್ ಸ್ಪೇಷಲ್ ಆಸ್ಪತ್ರೆಗಳನ್ನು ಸರ್ಕಾರದಿಂದ ನಿರ್ಮಿಸಬೇಕು. ಅವುಗಳ ಸುಧಾರಣೆಗೆ ಆದ್ಯತೆ ನೀಡಬೇಕು. ರಾಜ್ಯದ ರೋಗಿಗಳು ಹೊರರಾಜ್ಯಗಳಿಗೆ ಹೋಗುವ ಪರಿಸ್ಥಿತಿ ಇಲ್ಲದಂತೆ ನೋಡಿಕೊಳ್ಳಬೇಕು.

ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಬೇಕು:

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರಿಗೆ ನೀಡುತ್ತಿರುವ ಗೌರವಧನದಲ್ಲಿ ಅವರು ಬದುಕು ಸಾಗಿಸುವುದು ಕಷ್ಟಕರವಾಗಿದೆ. ಅನೇಕ ವರ್ಷಗಳಿಂದ ಅವರು ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಅವರ ಗೌರವಧನ ಹೆಚ್ಚಿಸಬೇಕು ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡಬೇಕು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು:

ನಮ್ಮ ಕಲ್ಯಾಣ ಕರ್ನಾಟಕ ಭಾಗ ಕಲ್ಯಾಣವಿಲ್ಲದ ಭಾಗವಾಗಿದೆ. ಈ ಭಾಗಕ್ಕೆ ಅನ್ಯಾಯವಾಗುತ್ತಿದೆ. ಕೃಷಿ, ಶಿಕ್ಷಣ, ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮುಖ್ಯಮಂತ್ರಿಗಳು ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿಕೊಡಬೇಕು.

ಕಾರಂಜಾ ಸಂತ್ರಸ್ತರಿಗೆ ಪರಿಹಾರ ಒದಗಿಸಿಕೊಡಬೇಕು:

ಕಾರಂಜಾ ಡ್ಯಾಮ್ನ ಹಿನ್ನಿರಿನಿಂದ ರೈತರ ಹೆಚ್ಚುವರಿ ಭೂಮಿ ಮುಳುಗಡೆಯಾಗುತ್ತಿದೆ. ಕಾರಂಜಾ ಸಂತ್ರಸ್ತ ರೈತರು ಅನೇಕ ವರ್ಷಗಳಿಂದ ಪರಿಹಾರಕ್ಕಾಗಿ ಅನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ನ್ಯಾಯಯುತವಾದ ಪರಿಹಾರ ಸಿಗುತ್ತಿಲ್ಲ. ಕೂಡಲೇ ಅವರಿಗೆ ಪರಿಹಾರ ಒದಗಿಸಿಕೊಡುವ ಕೆಲಸ ಮಾಡಬೇಕು.

ಬೀದರ್ ನ ಬಿಎಸ್ಎಸ್ಕೆಗೆ ಅನುದಾನ ನೀಡಬೇಕು. ಪ್ರವಾಸೋಧ್ಯಮ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅನುಭವ ಮಂಟಪದ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ನೌಕರರ ವೇತನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೆವೆಂತ್ ಪೇ ಕಮಿಷನ್ ಜಾರಿಗೊಳಿಸಬೇಕು. ಶಾಸಕರ ನಿಧಿಯನ್ನು 2 ರಿಂದ ನಾಲ್ಕು ಕೋಟಿ ರೂ.ಗೆ ಹೆಚ್ಚಿಸಬೇಕು.

ಒಟ್ಟಾರೆಯಾಗಿ 2019-20, 2020-21, 2021-22, 2022-23ನೇ ಬಜೆಟ್ ನಲ್ಲಿ ಘೋಷಿಸಿದಂತ ಪ್ರತಿಯೊಂದು ಯೋಜನೆಗಳು ಜಾರಿಗೊಳಿಸಬೇಕು. ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ, ಪ್ರವಾಸೋಧ್ಯಮ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ವಿನೂತನ ಯೋಜನೆ, ಕಾರ್ಯಕ್ರಮಗಳನ್ನು ನೀಡುವ ಮೂಲಕ ಕಲ್ಯಾಣ ಕರ್ನಾಟಕ, ಕರ್ನಾಟಕದ ಅಭಿವೃದ್ಧಿಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬಜೆಟ್ ಮೇಲಿನ ಚರ್ಚೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.   

Wednesday, March 9, 2022

ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ಬಗ್ಗೆ ಪ್ರಶ್ನೆ ಕೇಳಿ ಸದನದ ಗಮನ ಸೆಳೆದ ಶಾಸಕ ಬಂಡೆಪ್ಪ ಖಾಶೆಂಪುರ್



ಬೀದರ್ (ಮಾ.09): ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ಘೋಷಣೆಗೆ ಸಂಬಂಧಿಸಿದಂತೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಸದನದ ಗಮನ ಸೆಳೆದರು.

ವಿಡಿಯೋಗಾಗಿ ಕ್ಲಿಕ್ ಮಾಡಿ

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ನಡೆದ ಬಜೆಟ್ ಅಧಿವೇಶನದ ನಾಲ್ಕನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಿಗೆ ಸಂಬಂಧಿಸಿದಂತೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಮಾತನಾಡಿದ ಅವರು, ಕಳೆದ ಕೆಲ ದಿನಗಳ ಹಿಂದೆ ನಾನು ಜನಸ್ಪಂದನಾ ಕಾರ್ಯಕ್ರಮದ ನಿಮಿತ್ಯವಾಗಿ ನನ್ನ ಕ್ಷೇತ್ರ ವ್ಯಾಪ್ತಿಯ ಮೀನಕೇರಾ ಗ್ರಾಮಕ್ಕೆ ಭೇಟಿ ನೀಡಿದ್ದೆ. ಆ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮವೆಂದು ಬೋರ್ಡ್ ಹಾಕಲಾಗಿತ್ತು. ವಾಸ್ತವವಾಗಿ ನೋಡಿದಾಗ ಆ ಗ್ರಾಮದಲ್ಲಿ ಕೇವಲ 30 ರಿಂದ 40 ಪ್ರತಿಶತದಷ್ಟು ಶೌಚಾಲಯಗಳನ್ನು ಮಾತ್ರ ನಿರ್ಮಾಣ ಮಾಡಲಾಗಿದೆ ಎಂದರು.

ಮೀನಕೇರಾ ಗ್ರಾಮದಲ್ಲಿನ ಶೌಚಾಲಯಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಗ್ರಾಮದಲ್ಲಿ 918 ಕುಟುಂಬಗಳ ಪೈಕಿ 858 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆಯೆಂದು ಸರ್ಕಾರದ ಉತ್ತರದಲ್ಲಿ ತಿಳಿಸಿದ್ದಾರೆ. ಆದರೇ ವಾಸ್ತವವಾಗಿ ನೋಡುವಾಗ ಅಲ್ಲಿ ಅಷ್ಟು ಶೌಚಾಲಯಗಳಿಲ್ಲ. ಅಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಇದು ಚಿಂತಿಸಬೇಕಾದ ವಿಷಯವಾಗಿದೆ. ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಬೋರ್ಡ್ ಹಾಕಲಾಗುತ್ತದೆ. ಆದರೇ ಎಷ್ಟೋ ಕಡೆಗಳಲ್ಲಿ ಶೌಚಾಲಯಗಳಿಲ್ಲ. 

ದಾಖಲಾತಿಗಾಗಿ ಶೌಚಾಲಯ ನಿರ್ಮಿಸಿ ಪೋಟೋ ತೆಗೆದುಕೊಂಡು ಹಣ ಒದಗಿಸಿಕೊಡುವ ಕೆಲಸ ಸರ್ಕಾರದಿಂದ ಮಾಡಲಾಗುತ್ತಿದೆ. ಆದರೇ ನಿರ್ಮಾಣಗೊಂಡ ಶೌಚಾಲಯಗಳು ಸದುಪಯೋಗವಾಗುತ್ತಿಲ್ಲ. ಈ ರೀತಿಯ ಸಮಸ್ಯೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿವೆ. ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಇರುತ್ತೆ. ಎಷ್ಟೊ ಕಡೆಗಳಲ್ಲಿ ಕುಡಿಯುವ ನೀರು ಕೂಡ ಸರಿಯಾಗಿ ಸಿಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶೌಚಾಲಯಗಳ ಸದ್ಬಳಕೆಯಾಗುವುದು ಕಷ್ಟವಾಗುತ್ತದೆ. ಸರ್ಕಾರವೇ ಶೌಚಾಲಯಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪರವರು, ಶಾಸಕ ಬಂಡೆಪ್ಪ ಖಾಶೆಂಪುರ್ ರವರೊಟ್ಟಿಗೆ ನಾನು ಮೀನಕೇರಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಶಾಸಕರು ಹೇಳಿರುವುದು ಸತ್ಯವಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕಠೀಣ ಕ್ರಮಕೈಗೊಳ್ಳುತ್ತೇನೆ. ಇದು ಪ್ರಧಾನಮಂತ್ರಿಗಳು ಬಹಳ ಆಸಕ್ತಿಯಿಂದ ಜಾರಿಗೆ ತಂದಿರುವ ಯೋಜನೆಯಾಗಿದೆ ಎಂದರು.

ಬಳಿಕ ಮರುಪ್ರಶ್ನೆ ಕೇಳಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದು ನಂತರ, ಕೂಡಲೇ ಬೀದರ್ ಸಿಒಇರವರಿಗೆ ಮಾತನಾಡಿ, ವರದಿ ತರಿಸಿಕೊಳ್ಳಬಹುದು. ಇದು ಮೀನಕೇರಾ ಗ್ರಾಮಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ರಾಜ್ಯದ ಬಹಳಷ್ಟು ಕಡೆಗಳಲ್ಲಿ ಇದೇ ರೀತಿಯ ಸಮಸ್ಯೆಗಳಿವೆ  ಹೆಸರಿಗಷ್ಟೆ ಒಂದು ಹಳ್ಳಿಯ ಬಗ್ಗೆ ಹೇಳಿದ್ದೇನೆಂದರು.

ಬಳಿಕ ಮಾತನಾಡಿದ ಸಚಿವರು, ರಾಜ್ಯದ ಹೆಣ್ಣು ಮಕ್ಕಳು ಸ್ವಂತ ನಮ್ಮ ಅಕ್ಕ - ತಂಗಿಯರೆಂದು ಭಾವಿಸಿ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ನಮಗೆ ಬೀದರ್ ಜಿಲ್ಲೆಯ ಮೀನಕೇರಾಕ್ಕೆ ಸಂಬಂಧಿಸಿದ ವರದಿಯನ್ನು ಸಿಒಇರವರು ನೀಡಿದ್ದಾರೆ. ನಾನು ಇವತ್ತೇ ಸಿಇಒರವರೊಂದಿಗೆ ಮಾತನಾಡಿ, ಮತ್ತೊಮ್ಮೆ ರಿಪೋರ್ಟ್ ತರಿಸಿಕೊಳ್ಳುತ್ತೇನೆಂದರು. ಈ ವೇಳೆ ಅನೇಕರು ಮಾತನಾಡಿ, ಎಲ್ಲಾ ಕಡೆಗಳಲ್ಲಿ ಕೂಡ ಇದೇ ರೀತಿಯ ಸಮಸ್ಯೆಯಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಮಾತಿಗೆ ಧ್ವನಿಗೂಡಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತನಾಡಿ, ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ, ವರದಿ ತರಿಸಿಕೊಂಡು ಕ್ರಮಕೈಗೊಳ್ಳಿ ಎಂದು ಸಚಿವರಿಗೆ ತಿಳಿಸಿದರು.