Wednesday, March 16, 2022

ರೈತರಿಗೆ ಕನಿಷ್ಠ 14 ತಾಸು ವಿದ್ಯುತ್ ನೀಡಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್

ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡುತ್ತಿರುವುದು.

ಬೀದರ್ (ಮಾ.16): ರೈತರ ಕೃಷಿ ಪಂಪ್ಸೆಟ್ ಗಳಿಗೆ ಕೇವಲ 07 ತಾಸು ವಿದ್ಯುತ್ ನೀಡಲಾಗುತ್ತಿದೆ. ಅದು ಕೂಡ ಸಮರ್ಪಕವಾಗಿ ಸಿಗುತ್ತಿಲ್ಲ. ರೈತರ ಬೋರ್ವೆಲ್ ಗಳಿಗೆ ನೀಡುತ್ತಿರುವ ವಿದ್ಯುತ್ ಸಮಯವನ್ನು 07 ರಿಂದ 14 ತಾಸುಗಳಿಗೆ ಹೆಚ್ಚಿಸಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ನಡೆದ ಬಜೆಟ್ ಅಧಿವೇಶನದ ಒಂಬತ್ತನೇ ದಿನದ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಮೊದಲು 08 ರೂ.ಗೆ ಯೂನಿಟ್ ನಂತೆ ವಿದ್ಯುತ್ ಖರೀದಿ ಮಾಡಲಾಗ್ತಿತ್ತು. ಈಗ 2 ರೂ. 50 ಪೈಸೆಗೆ ಖರೀದಿ ಮಾಡಲಾಗ್ತಿದೆ. ಉಳಿದ ವಿದ್ಯುತ್ ಅನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡಲಾಗ್ತಿದೆ. ಆದರೆ ರೈತರ ಪಂಪ್ಸೆಟ್ಗಳಿಗೆ ನೀಡುತ್ತಿರುವ ವಿದ್ಯುತ್ ಸಮಯವನ್ನು ಹೆಚ್ಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭಾಷಣದ ಸಂಪೂರ್ಣ ವಿಡಿಯೋಗಾಗಿ ಕ್ಲಿಕ್ ಮಾಡಿ

ಕನಿಷ್ಟ 45 ಲಕ್ಷ ಜನ ರೈತರಿಗೆ ಸಾಲ ನೀಡಬೇಕು:

ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ ಯಾವ ರೀತಿಯಾಗಿ ದ್ವಿಗುಣಗೊಳಿಸುತ್ತಾರೆ ಎಂಬುದನ್ನು ಹೇಳಿಲ್ಲ. ರೈತರು ದೇಶದ ಬೆನ್ನೆಲುಬು. ರಾಜ್ಯದಲ್ಲಿ ಶೇಕಡ 70%ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರೈತರಿದ್ದಾರೆ. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ 24 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿದ್ದರು.

ಸಹಕಾರ ಸಂಸ್ಥೆಗಳಿಂದ 22 ಲಕ್ಷ ರೈತರಿಗೆ ಸುಮಾರು 16 ಸಾವಿರ ಕೋಟಿ ರೂ. ಸಾಲ ಕೊಡಲಾಗ್ತಿತ್ತು. ಅದನ್ನು 33 ಲಕ್ಷ ಜನ ರೈತರಿಗೆ ಹೆಚ್ಚಿಸುತ್ತೇವೆಂದು ಅಧಿಕಾರಕ್ಕೆ ಬಂದಾಗಿನಿಂದಲೂ ಸಹಕಾರ ಸಚಿವರು ಹೇಳುತ್ತಿದ್ದಾರೆ. ರಾಜ್ಯದಲಿ 80 ಲಕ್ಷ ಜನ ರೈತರಿದ್ದಾರೆ. ಈ ಸರ್ಕಾರ ರೈತರ ಸಾಲಮನ್ನಾ ಮಾಡಲ್ಲ ಎಂಬುದು ಗೋತ್ತಿದೆ. ಆದರೆ ಸಹಕಾರ ಸಂಸ್ಥೆಗಳಿಂದ ನೀಡುತ್ತಿರುವ ಸಾಲವನ್ನು ಕನಿಷ್ಟ 45 ಲಕ್ಷ ಜನ ರೈತರಿಗೆ ಹೆಚ್ಚಿಸಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ಕೆಕೆಆರ್ಡಿಬಿ ಅನುದಾನದ ಸಮಸ್ಯೆ ಪರಿಹರಿಸಬೇಕು:

ಕೆಕೆಆರ್ಡಿಬಿ ಅನುದಾನ ಮೊದಲಿಗೆ ವರ್ಷಕ್ಕೆ 1500 ಕೋಟಿ ರೂ. ಬರುತಿತ್ತು ಈಗ 3000 ಕೋಟಿ ಮಾಡಲಾಗಿದೆ. ಅದು ನಂಜುಂಡಪ್ಪ ವರದಿಯ ಪ್ರಕಾರ ಹಂಚಿಕೆ ಮಾಡಲಾಗ್ತಿದೆ. ಇದರಿಂದ ನಮ್ಮ ಬೀದರ್ ದಕ್ಷಿಣ ಕ್ಷೇತ್ರಕ್ಕೆ ಕಡಿಮೆ ಅನುದಾನ ಸಿಗ್ತಿದೆ. ಹುಮನಾಬಾದ್ ಗೆ 30 ಕೋಟಿ ರೂ. ಬಂದರೆ ನಮಗೆ 12 ಕೋಟಿ ರೂ. ಬರ್ತಿದೆ. ನಮ್ಮ ಕ್ಷೇತ್ರದಲ್ಲಿ ಕೂಡ ಹಳ್ಳಿಗಳು ಹೆಚ್ಚಾಗಿವೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಸಮಾನವಾಗಿ ಅನುದಾನ ಒದಗಿಸಿಕೊಡಬೇಕು.

ಬೀದರ್ ನಿಂದ ಪ್ರತಿನಿತ್ಯ ಒಂದು ವಿಮಾನ ಸೇವೆ ಆರಂಭಿಸಬೇಕು:

ಬೀದರ್ ಏರ್ಪೋರ್ಟ್ ನಿಂದ ಪ್ರತಿನಿತ್ಯ ಕನಿಷ್ಠ ಒಂದು ವಿಮಾನ ಸೇವೆ ಆರಂಭಿಸಬೇಕು. ಆ ಮೂಲಕ ಬೀದರ್ ಅಭಿವೃದ್ಧಿಗೆ ಸಹಕಾರವಾಗಲಿದೆ. ಬೀದರ್ ಗೆ ಈ ಮೊದಲು ಒಂದು ವಿಮಾನ ಬರುತ್ತಿತ್ತು. ಅದು ಈಗ ಬಂದ್ ಆಗಿದೆ. ಆ ಬಗ್ಗೆ ಮುಖ್ಯಮಂತ್ರಿಗಳು ಹೆಚ್ಚಿನ ಗಮನಹರಿಸಬೇಕೆಂದು ಶಾಸಕರು ಒತ್ತಾಯಿಸಿದರು.

ನಮ್ಮ ಕಲ್ಯಾಣ ಕರ್ನಾಟಕ ಭಾಗದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಉದ್ಯೋಗ ಸೃಷ್ಟಿಯ ಕಡೆಗೆ ಸರ್ಕಾರ ಗಮನಹರಿಸಬೇಕು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಬೇಕು. ಅರಿವು, ಶಾದಿಭಾಗ್ಯ ಯೋಜನೆಗಳನ್ನು ಮುಂದುವರೆಸಬೇಕು. ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.

No comments:

Post a Comment